ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲ್ಟರ್ ಬೆಡ್ ಕೆರೆಯ ನೀರು ಗಣನೀಯ ಕುಸಿತ

Last Updated 16 ಮೇ 2017, 9:09 IST
ಅಕ್ಷರ ಗಾತ್ರ

ಶಹಾಪುರ: ನಗರದ ಹೊರವಲಯದ  ಫಿಲ್ಟರ್ ಬೆಡ್ ಕೆರೆಯಲ್ಲಿ ಕುಡಿಯುವ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ. ನಗರದ ಜನತೆ ಆತಂಕಗೊಳ್ಳುವಂತೆ ಮಾಡಿದೆ.

ಶಹಾಪುರ ಶಾಖಾ ಕಾಲುವೆ ಮೂಲಕ ವಿಶಾಲವಾದ ಕೆರೆಯಲ್ಲಿ ನೀರು ಸಂಗ್ರಹಿಸಿ  ನಗರದ ಜನತೆಗೆ ದಿನಬಿಟ್ಟು ದಿನ ಕುಡಿಯಲು  ಪೂರೈಸಲಾಗುತ್ತಿದೆ. ಮಾರ್ಚ್ 27ಕ್ಕೆ ಕಾಲುವೆ ನೀರು ಸ್ಥಗಿತಗೊಳಿಸಲಾಗಿದೆ. 

‘ಇನ್ನು 15 ದಿನ ಮಾತ್ರ ನೀರು ಲಭ್ಯವಾಗಬಹುದು. ಕಾಲುವೆಗೆ ನೀರು ಹರಿಸಿದರೆ ಮತ್ತೆ ಕೆರೆಯಲ್ಲಿ ನೀರು ಸಂಗ್ರಹಿಸಿಕೊಳ್ಳಲು ಅವಕಾಶವಿದೆ. ಇಲ್ಲದೆ ಹೋದರೆ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಇದೆ’ ಎಂದು ನಗರಸಭೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಸಂಗ್ರಹಿಸಿಟ್ಟ ನೀರನ್ನು ಶುದ್ಧೀಕರಿಸದೆ ನೇರವಾಗಿ ಸರಬರಾಜು ಮಾಡುತ್ತಿದ್ದಾರೆ. ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ’ ಎಂದು ನಗರದ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

‘ಈಗಾಗಲೇ ಬಸವೇಶ್ವರ ನಗರ ಹಾಗೂ ಇನ್ನಿತರ ಕಡೆ ಅಂತರ್ಜಲಮಟ್ಟ ಕುಸಿತವಾಗಿ ಕೊಳವೆಬಾವಿಯಲ್ಲಿ ನೀರು ಬರುತ್ತಿಲ್ಲ. ನಗರದ ಹೃದಯ ಭಾಗದಲ್ಲಿರುವ ಕೆರೆ ಹಾಗೂ ಹಳ್ಳವನ್ನು ಒತ್ತುವರಿ ಮಾಡಿಕೊಂಡಿದ್ದು ಅಂತರ್ಜಲಮಟ್ಟ ಕುಸಿತವಾಗಲು ಕಾರಣವಾಗಿದೆ.

ನಗರದ ಜನತೆಯು ಕೆರೆ ಹಾಗೂ ಹಳ್ಳ ಸಂರಕ್ಷಣೆಗೆ ಹೋರಾಟ ನಡೆಸುವುದು ಈಗ ಅನಿವಾರ್ಯವಾಗಿದೆ’ ಎನ್ನುತ್ತಾರೆ ರೈತ ಮುಖಂಡ ಭಾಸ್ಕರರಾವ ಮುಡಬೂಳ.

‘ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿತ್ತು. ನೀರು ಪೋಲಾಗದಂತೆ ಎಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ.

ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುವ ಮುಂಚೆ  ಕಾಲುವೆ ಮೂಲಕ ಕೆರೆಗೆ ನೀರು ಸಂಗ್ರಹಿಸಿಕೊಳ್ಳುವ ಕಡೆ ಜಿಲ್ಲಾಧಿಕಾರಿ ಹಾಗೂ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಖೂಷ್ಬೂ ಗೋಯಲ್‌ ಚೌಧರಿ ಅವರು ಗಮನ ಹರಿಸಬೇಕು’ ಎಂದು ನಗರಸಭೆಯ ಬಿಜೆಪಿ ಸದಸ್ಯ ವಸಂತ ಸುರಪುರಕರ್ ಮನವಿಮಾಡಿದ್ದಾರೆ.


‘ನಗರಸಭೆ ಹಾಗೂ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ನಗರಕ್ಕೆ ಶಾಶ್ವತವಾದ ಕುಡಿಯುವ ನೀರಿನ ಯೋಜನೆ ರೂಪಿಸಲಿಲ್ಲ.  ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸನ್ನತಿ ಬ್ರಿಜ್ ಕಂ ಬ್ಯಾರೇಜ್ ಮೂಲಕ  ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆ  ಚುನಾವಣೆ ಬಂದಾಗ ಮಾತ್ರ  ಜನಪ್ರತಿನಿಧಿಗಳಿಗೆ ನೆನಪಿಗೆ ಬರುತ್ತದೆ’ ಎಂಬುದು ಶಹಾಪುರ ಹಿತ ರಕ್ಷಣಾ ಸಮಿತಿ ಮುಖಂಡ ಮಲ್ಲಣ್ಣ ಶಿರಡ್ಡಿ ಅವರ ಆರೋಪ.

ಮುಂಗಾರು ಹಂಗಾಮಿನ ಬೆಳೆಗೆ ಕಾಲುವೆಗೆ ನೀರು ಹರಿಸಲು ಇನ್ನೂ ಎರಡು ತಿಂಗಳು ಕಾಯಬೇಕು. ಕಳೆದ ವರ್ಷದಂತೆ ಈ ಬೇಸಿಗೆಯಲ್ಲೂ ಕುಡಿಯುವ ನೀರು ಸಂಗ್ರಹಸಿಕೊಳ್ಳಲು 10 ದಿನದಲ್ಲಿ ಕಾಲುವೆ ನೀರು ಬಿಡಗಡೆಗೊಳಿಸಬೇಕು ಎಂದು ನಾಗರಿಕರು ಮನವಿ ಮಾಡಿದ್ದಾರೆ.

*

ನಗರದಲ್ಲಿ  3 ದಿನಕ್ಕೊಮ್ಮೆ ಕುಡಿಯಲು ನೀರು ಪೂರೈಸ ಲಾಗುತ್ತಿದೆ. ಇನ್ನೂ ಒಂದು ತಿಂಗಳು ನೀರು ಪೂರೈಸುವಷ್ಟು ಸಂಗ್ರಹವಿದೆ. ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ.
ರಮೇಶ ಪಟ್ಟೆದಾರ
ಪೌರಾಯುಕ್ತ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT