ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣನ ಅಬ್ಬರಕ್ಕೆ ರಸ್ತೆಗೆ ಉರುಳಿದ ಮರಗಳು

Last Updated 16 ಮೇ 2017, 9:45 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ:  ಗುಡುಗು, ಸಿಡಿಲು ಸಹಿತ ಭಾನುವಾರ ಸುರಿದ ಭಾರಿ ಮಳೆಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ತಗ್ಗು ಪ್ರದೇಶಗಳಿಗೆ  ನೀರು ನುಗ್ಗಿ ಜನಜೀವನ ಮತ್ತು ವಾಹನ ಸಂಚಾರ ವ್ಯವಸ್ಥೆ ಅಸ್ಥವ್ಯಸ್ತಗೊಂಡಿತು.

ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ಒಂದು ತಾಸು ಸುರಿದು ಜನತೆ ಯಲ್ಲಿ ಹರ್ಷ ಉಂಟು ಮಾಡಿತು. ಮಳೆ ಬರುವ ಪೂರ್ವದಲ್ಲಿ ಬಿಸಿದ ಭಾರಿ ಗಾಳಿಗೆ ಪಟ್ಟಣದ ಶಿಗ್ಲಿ ಕ್ರಾಸ್ ಹತ್ತಿರ ಮರವೊಂದು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದು ವಿದ್ಯುತ್ ಸಂಪರ್ಕ ಕಡಿತವಾಯಿತು.

ಗದಗ-–ಲಕ್ಷ್ಮೇಶ್ವರ ಮುಖ್ಯರಸ್ತೆಯಲ್ಲಿ ದೊಡ್ಡದಾದ ಜಾಲಿಮರ ಉರುಳಿ ಬಿದ್ದಿತು. ಇದರಿಂದ ಈ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿನ ಸೇತುವೆ ಪಕ್ಕ ತಾತ್ಕಾಲಿಕವಾಗಿ ನಿರ್ಮಿಸಿದ್ದ ಕಚ್ಚಾ ರಸ್ತೆ ಮೇಲೆಯೂ ಅಪಾರ ಪ್ರಮಾಣದ ನೀರು ನಿಂತು ಸುಮಾರು 3 ಘಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಸಾವಿರಾರು ಪ್ರಯಾಣಿಕರು ಪರದಾಡಿದರು.

ದೂದಪೀರಾಂ ದರ್ಗಾ ಮಾರ್ಗವಾಗಿ ಗದಗ ರಸ್ತೆಗೆ ಸಂಪರ್ಕ ಕಲ್ಪಿಸುವ ಅಕ್ಕಿಗುಂದ ರಸ್ತೆಯಲ್ಲಿಯೂ ನೀರು ಹರಿದ ಪರಿಣಾಮ ಸಂಚಾರಕ್ಕೆ ತೊಂದರೆಯಾಯಿತು. ಪುರಸಭೆ ವಸತಿ ಗೃಹ, ಕೋರ್ಟ್‌ ಸಮೀಪದ ಪೂಜಾರ ಮನೆ ಹತ್ತಿರ ದೊಡ್ಡ ಬೇವಿನಮರ ಬಿದ್ದಿತು. ಲಂಡಿಹಳ್ಳ, ಆಸಾರ ಹತ್ತಿರದ ಹಳ್ಳ, ಜೋಗಿ ಹಳ್ಳಕ್ಕೆ ನಿರ್ಮಿಸಲಾದ ಸೇತುವೆಗೆ ಅಡ್ಡಲಾಗಿ ಕಸಕಡ್ಡಿ, ಮುಳ್ಳುಕಂಟಿ ಸಿಲುಕಿ ನೀರು ಸರಾಗವಾಗಿ ಹರಿಯದೇ ರಸ್ತೆ ಮೇಲೆ ನೀರು ಹರಿಯಿತು.

ಹುಬ್ಬಳ್ಳಿ-–ಲಕ್ಷ್ಮೇಶ್ವರ ರಸ್ತೆಯ ಕೋಲಕಾರ ಕಟ್ಟಿಗೆ ಅಡ್ಡೆ ಹತ್ತಿರ ಅಪಾರ ಪ್ರಮಾಣದಲ್ಲಿ ನೀರು ಹರಿದ ಕಾರಣ ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತ್ತು. ಪುರಸಭೆಯ ಸಿಬ್ಬಂದಿ ಜೆಸಿಬಿ ಬಳಸಿ ಕಸಿಕಡ್ಡಿ ತೆಗೆಯುವ ಮತ್ತು ರಸ್ತೆ ಮೇಲೆ ಬಿದ್ದ ಮರಗಳನ್ನು ತೆರವುಗಳೊಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ತುಂಬಿದ ಕೃಷಿ ಹೊಂಡ ಮತ್ತು ಬಾಂದಾರ:  ಲಕ್ಷ್ಮೇಶ್ವರ ಹೋಬಳಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಕೃಷಿ ಹೊಂಡಗಳು ಮತ್ತು ಗೊಜನೂರು ಪುಟಗಾಂವ್ ಬಡ್ನಿ ಮಾರ್ಗವಾಗಿ ಹರಿಯುವ ಹಳ್ಳಕ್ಕೆ ನಿರ್ಮಾಣಗೊಂಡ ಸರಣಿ ಬಾಂದಾರಗಳು ತುಂಬಿ ಹರಿದವು.

ಕಿತ್ತುಹೋದ ಬದುವುಗಳು:  ಅನೇಕ ಜಮೀನುಗಳ ಬದುವುಗಳು ಕಿತ್ತು ಹೋಗಿವೆ. ಮಳೆ ಬರುವ ಮುನ್ನ ಭಾರಿ ಗಾಳಿ ಬೀಸಿದ್ದರಿಂದ ರೈತರು  ದನಕರು ಗಳಿಗಾಗಿ ಸಂಗ್ರಹಿಸಿದ ಹೊಟ್ಟು ಮೇವಿನ ಬಣವೆಗಳಿಗೆ ಹೊದಿಸಿದ ತಾಡಪತ್ರಿ, ಪ್ಲಾಸ್ಟಿಕ್ ಹಾಳಿ ಹೋದವು.

ವಿದ್ಯುತ್ ಸಂಪರ್ಕ ಕಡಿತ:  ಗುಡುಗು-, ಸಿಡಿಲು, ಬಿರುಗಾಳಿಗೆ ವಿದ್ಯುತ್ ಕಡಿತಗೊಂಡಿತು. ಸುಮಾರು ಏಳು ಗಂಟೆ ಜನ ಪರದಾಡಿದರು.  ಬೆಚ್ಚಿ ಬೀಳಿಸಿದ ಸಿಡಿಲಿಗೆ ಕೆಲ ಹೊತ್ತು ಮೊಬೈಲ್ ಸಂಪರ್ಕ ಕೂಡ ಕಡಿತಗೊಂಡಿತ್ತು.

ಮನೆಗೆ ನುಗ್ಗಿದ ನೀರು
ನರೇಗಲ್: ಪಟ್ಟಣದ 14ನೇ ವಾರ್ಡಿನ ಜೊಂಡಗೇರಿ ಓಣಿಯಲ್ಲಿ  ಚರಂಡಿ ನೀರು ಹರಿದು ಹೊಗಲು ಸರಿಯಾದ ವ್ಯವಸ್ಥೆ ಇಲ್ಲದೆ ಇರುವುದರಿಂದ ಸೋಮ ವಾರ ರಾತ್ರಿ ಸುರಿದ ಮಳೆಯಿಂದ  ನೀರು ಅಲ್ಲಿರುವ ಮನೆಗಳಿಗೆ ನುಗ್ಗಿದೆ. ಮನೆಯ ತುಂಬ ನೀರು ನಿಂತಿರುವುದರಿಂದ ಮಣ್ಣಿನ ಮನೆಗಳು ಬಿರುಕು ಬಿಟ್ಟಿವೆ ಮತ್ತು ಮನೆಗಳಲ್ಲಿದ್ದ ಅಪಾರವಾದ ದವಸ ದಾನ್ಯಗಳು ಹಾಳಾಗಿವೆ. 

‘ಆದಷ್ಟು ಬೇಗನೆ ನೀರು ಸರಿಯಾಗಿ ಹರಿದು ಹೊಗುವಂತೆ ವ್ಯವಸ್ಥೆಯನ್ನು ಮಾಡಬೇಕು ಎಂದು ಜೊಂಡಗೇರಿ ಓಣಿಯ ನಿವಾಸಿಗಳಾದ ಮುಕ್ತುಂಬಸಾಬ ಕೊಪ್ಪಳ, ಬಸಪ್ಪ ಸೊಮಗೊಂಡ, ಹೆಮಣ್ಣ ಹೆಬ್ಬಾಳ, ವೀರಣ್ಣ ಹೂಗಾರ ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಪ. ಪಂಚಾಯ್ತಿ ಎದುರು ಹೋರಾಟ ಮಾಡ ಲಾಗುವುದು’ ಎಂದು ಎಚ್ಚರಿಸಿದರು.

ಐದು ಕುರಿಗಳು ಸಾವು
ಗದಗ: ಗದಗ–ಬೆಟಗೇರಿ ಅವಳಿ ನಗರ, ಮುಳಗುಂದ, ಮುಂಡರಗಿ, ಡಂಬಳ, ನರಗುಂದ, ಲಕ್ಷ್ಮೇಶ್ವರ, ಶಿರಹಟ್ಟಿ, ರೋಣ, ಗಜೇಂದ್ರಗಡ, ನರೇಗಲ್‌ನಲ್ಲಿ ಸೋಮವಾರ ಬೆಳಗಿನಜಾವ ಮೂರು ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಭಾರಿ ಮಳೆಯಾಗಿದೆ.

ತಾಲ್ಲೂಕಿನ ಹರ್ಲಾಪುರ ಗ್ರಾಮದಲ್ಲಿ 3 ಆಡುಗಳು ಹಾಗೂ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಗ್ರಾಮದಲ್ಲಿ 5 ಕುರಿಗಳು ಸಿಡಿಲು ಬಡಿದು ಮೃತಪಟ್ಟಿವೆ. ನರಗುಂದದಲ್ಲಿ ಕಚ್ಚಾ ಮನೆಯೊಂದಕ್ಕೆ ಹಾನಿಯಾಗಿದೆ. ಗದುಗಿನ ಗಂಗಿಮಡಿ ಪ್ರದೇಶದಲ್ಲಿ ಕೆಲವು ಮನೆಗಳ ತಗಡು ಹಾರಿಹೋಗಿವೆ. ಭರ್ಜರಿ ಮಳೆಯಾಗಿದ್ದ ರಿಂದ ಶಿರಹಟ್ಟಿ, ಮುಂಡರಗಿ, ಗದಗ ತಾಲ್ಲೂಕಿನ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿವೆ.

‘ಗಾಳಿ- ಸಹಿತ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ 204 ವಿದ್ಯುತ್ ಕಂಬಗಳು ಹಾಗೂ 5 ಟ್ರಾನ್ಸ್‌ ಫಾರ್ಮರ್‌ನ ಕಂಬಗಳು ಮುರಿದು ಕೆಳಗೆ ಬಿದ್ದಿವೆ. 17 ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳು ಸುಟ್ಟು ಹೋಗಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಸಿಬ್ಬಂದಿ ಹೊಸ ಕಂಬಗಳನ್ನು ಅಳವಡಿಸಲು ಮುಂದಾಗಿದ್ದಾರೆ’ ಎಂದು ಹೆಸ್ಕಾಂ ಅಧಿಕಾರಿ ಕೃಷ್ಣಪ್ಪ ಹೆಂಡೆಗಾರ ತಿಳಿಸಿದರು.

ಗದುಗಿನ ವಿವಿಧ ಪ್ರದೇಶಗಳಲ್ಲಿರುವ ಚರಂಡಿಗಳು ತುಂಬಿ ಹರಿದವು. ಜವಳಗಲ್ಲಿ, ಖಾನತೋಟ, ಡೋರಗಲ್ಲಿ, ಅಂಬೇಡ್ಕರ್ ನಗರ, ಕಂಬಾರ ಓಣಿ, ಗಂಗಾಪೂರ ಪೇಟೆ, ಡಿ.ಸಿ ಮಿಲ್‌ ರಸ್ತೆ, ಶಹಪೂರ ಪೇಟೆ, ನೇಕಾರ ಕಾಲೊನಿಯಲ್ಲಿ ನೀರು ನಿಂತಿತ್ತು. ವಾಹನ ಸಂಚಾರಕ್ಕೆ ಅಸ್ತವ್ಯಸ್ತ ಉಂಟಾಯಿತು.

ಗದಗ-– 20.7 ಮಿ.ಮೀ, ಮುಂಡ ರಗಿ– 36.5, ನರಗುಂದ– 49.6, ರೋಣ– 21.0, ಶಿರಹಟ್ಟಿ– 63.2 ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 191.0 ಮಿ.ಮೀಟರ್‌ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT