ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಮ್ ಇಂಡಸ್‌ ಚಂದ್ರನಿಗೆ ಲಗ್ಗೆ ಯತ್ನ

Last Updated 16 ಮೇ 2017, 19:30 IST
ಅಕ್ಷರ ಗಾತ್ರ

ಭೂಮಿಯ ಉಪಗ್ರಹ ಚಂದ್ರನು ಕವಿಗಳಿಗೆ ಸ್ಪೂರ್ತಿಯ ಸೆಲೆಯಾಗಿರುವುದರ ಜತೆಗೆ ವಿಜ್ಞಾನಿಗಳ ಪಾಲಿಗೆ ಕೌತುಕದ ಆಕಾಶ ಕಾಯವೂ ಆಗಿದೆ. ಚಂದ್ರನ ಬಗ್ಗೆ ತಿಳಿದುಕೊಳ್ಳಲು ಮನುಕುಲ ನಿರಂತರವಾಗಿ ಪ್ರಯತ್ನಿಸುತ್ತಲೇ ಇದೆ. ದಶಕಗಳ ಹಿಂದೆಯೇ ಮಾನವ ಅಲ್ಲಿಗೆ ಹೋಗಿ ಬಂದಾಗಿದೆ. ಇದುವರೆಗೆ ಚಂದ್ರನಲ್ಲಿಗೆ ತೆರಳಿದ ಮೂರು ಪ್ರಯತ್ನಗಳು ಯಶಕಂಡಿವೆ.

ಆದರೂ ವಿಜ್ಞಾನಿಗಳ ಕುತೂಹಲ ತಣಿದಿಲ್ಲ. ಬಾಹ್ಯಾಕಾಶ ಯೋಜನೆಗಳ ಪೈಕಿ,ಮಾನವ ಈಗ ಮಂಗಳ ಗ್ರಹದತ್ತ ತನ್ನ ಗಮನ ಕೇಂದ್ರೀಕರಿಸಿದ್ದರೂ ಚಂದ್ರ ಇನ್ನೂ ಹಲವಾರು ಗುಟ್ಟುಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದ್ದಾನೆ. ಇದುವರೆಗೆ ಸರ್ಕಾರಿ  ಒಡೆತನದ ಸಂಸ್ಥೆಗಳು ಮಾತ್ರ ಚಂದ್ರನ ಬಗ್ಗೆ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದವು. ಈಗ ಖಾಸಗಿ ಸಂಸ್ಥೆಗಳೂ ಅಂತಹ ಪ್ರಯತ್ನಕ್ಕೆ ಕೈ ಹಾಕಿವೆ.

ಖಾಸಗಿ ಸಂಸ್ಥೆಗಳಿಗಾಗಿಯೇ ಏರ್ಪಡಿಸಿದ್ದ ಚಂದ್ರನಲ್ಲಿ  ರೋವರ್‌ಇಳಿಸುವ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಬೆಂಗಳೂರಿನ ಟೀಮ್‌್ ಇಂಡಸ್‌ ಸಂಸ್ಥೆಯು ಉತ್ತೀರ್ಣಗೊಂಡು ಈ ಯೋಜನೆ ಕಾರ್ಯಗತಗೊಳಿಸಲು ಮುಂದಾಗಿದೆ. ಯಾವುದೇ ಸ್ವರೂಪದಲ್ಲಿ ಸರ್ಕಾರದ ನೆರವು ಪಡೆಯದ ಸಂಪೂರ್ಣ ಖಾಸಗಿ ಪ್ರಯತ್ನ ಆಗಿರುವುದು ಈ ಯೋಜನೆಯ ವಿಶೇಷತೆಯಾಗಿದೆ. ಚಂದ್ರನಲ್ಲಿಗೆ ಮೊದಲ ಬಾರಿಗೆ ಮಾನವ ಕಾಲೂರಿದ 45 ವರ್ಷಗಳ ನಂತರ ನಡೆಯುತ್ತಿರುವ ವಿಶಿಷ್ಟ ಪ್ರಯತ್ನ ಇದಾಗಿದೆ.

ಮಾಹಿತಿ ರವಾನೆ ಸ್ಪರ್ಧೆ
ಚಂದ್ರನ ಕಕ್ಷೆಗೆ ಬಾಹ್ಯಾಕಾಶ ನೌಕೆ ಕಳಿಸಿ, ಅದರ ನೆಲದ ಮೇಲೆ ರೋವರ್‌ ಇಳಿಸಿ ಅದು 500 ಮೀಟರ್‌ವರೆಗೆ ಚಲಿಸಿ ಮಾಹಿತಿ ರವಾನಿಸುವುದು ಈ ಸ್ಪರ್ಧೆಯ ಮುಖ್ಯ ನಿಯಮವಾಗಿದೆ. ಆರಂಭದಲ್ಲಿ ವಿಶ್ವದ 30 ಖಾಸಗಿ ಸಂಸ್ಥೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ನಂತರ ಈ ಸಂಖ್ಯೆ 16ಕ್ಕೆ ಇಳಿಯಿತು. ಅಂತಿಮ ಸುತ್ತಿನಲ್ಲಿ ಅಮೆರಿಕದ ಎರಡು, ಫ್ರಾನ್ಸ್‌, ಜಪಾನ್‌ ಮತ್ತು ಭಾರತದ ತಲಾ ಒಂದು ಸಂಸ್ಥೆ ಉಳಿದುಕೊಂಡಿವೆ.

ಬಾಹ್ಯಾಕಾಶದ ಬಹುತೇಕ ಯೋಜನೆಗಳು ಸದ್ಯಕ್ಕೆ ಸರ್ಕಾರಿ ಸಂಸ್ಥೆಗಳ ನಿಯಂತ್ರಣ ಮತ್ತು ಉಸ್ತುವಾರಿಯಲ್ಲಿ ಇವೆ. ಖಾಸಗಿ ಸಂಸ್ಥೆಗಳೂ ಈ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಸಾಬೀತುಪಡಿಸಲು ಇದೊಂದು ಸುವರ್ಣ ಅವಕಾಶವಾಗಿದೆ.

‘ಒಂದೂವರೆ ದಶಕದ ಹಿಂದೆ ಸರ್ಕಾರಿ ಸ್ವಾಮ್ಯದ ನಿಯಂತ್ರಣದಲ್ಲಿ ಇದ್ದ ಇಂಟರ್‌ನೆಟ್‌ ಸಂಪರ್ಕದ ಡಯಲ್‌ ಅಪ್‌ ವ್ಯವಸ್ಥೆಯಲ್ಲಿ ಅಂತರ್ಜಾಲ ಸಂಪರ್ಕ ಸಿಗಲು ಹಲವು ನಿಮಿಷಗಳ ಕಾಲ ಸಹನೆಯಿಂದ ಕಾಯಬೇಕಾಗುತ್ತಿತ್ತು. ದೂರಸಂಪರ್ಕ ವಲಯದಲ್ಲಿ ಖಾಸಗಿ ಸಂಸ್ಥೆಗಳ ಪ್ರವೇಶ ಆದ ನಂತರ ಈಗ ಕ್ಷಣ ಮಾತ್ರದಲ್ಲಿ ಇಂಟರ್‌ನೆಟ್‌ ಸಂಪರ್ಕ ದೊರೆಯುತ್ತಿದೆ.

ಹೀಗಾಗಿ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯೇ ನಡೆದಿದೆ. ಅದೇ ಬಗೆಯಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಇಂತಹ ಪ್ರಯತ್ನಗಳು ಮುಂಬರುವ ದಿನಗಳಲ್ಲಿ ಭಾರಿ ಬದಲಾವಣೆ ತರಲಿವೆ’ ಎಂದು ಟೀಮ್‌ ಇಂಡಸ್‌ನ ಸಹ ಸ್ಥಾಪಕದಲ್ಲಿ ಒಬ್ಬರಾಗಿರುವ  ಶಿಲಿಕಾ ರವಿಶಂಕರ್‌ ಅವರು ಹೇಳುತ್ತಾರೆ.

‘ಹೊಸ ತಲೆಮಾರಿನವರ ನವ, ನವೀನ ಕನಸುಗಳೆಲ್ಲ ನನಸಾಗಲು ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯಬೇಕಾದ ಅಗತ್ಯ ಇದೆ. ಇದುವರೆಗೆ ಚಂದ್ರನಲ್ಲಿಗೆ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಬಾಹ್ಯಾಕಾಶ ನೌಕೆ ಕಳಿಸಿವೆ. ಈಗ ಖಾಸಗಿ ಸಂಸ್ಥೆಯೊಂದು ಅಂತಹ ಪ್ರಯತ್ನ ನಡೆಸುತ್ತಿದೆ. ಚಂದ್ರನಲ್ಲಿ ನೌಕೆ ಇಳಿಸುವ ನಾಲ್ಕನೇ ದೇಶ ಭಾರತವಾಗಿರಲಿದೆ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

6 ವರ್ಷಗಳಿಂದ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಸಂಸ್ಥೆ ಈಗ ಕೊನೆಯ ಹಂತದ ಸಿದ್ಧತೆಗಳಲ್ಲಿ ತೊಡಗಿದೆ.  ಕೆಲ ಅಂತರರಾಷ್ಟ್ರೀಯ ವಿಶ್ವ ಸಂಸ್ಥೆಯ ನಿಯಮಗಳ ಅನುಗುಣವಾಗಿಯೇ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.

ಚಂದ್ರನ ‘ಮಾರೆ ಇಂಬ್ರಿಯಮ್‌’ ಎಂಬಲ್ಲಿ ಇರುವ ಒಣಗಿರುವ ಸಮುದ್ರದ  ಮೇಲೆ ಈ ರೋವರ್‌ಇಳಿಯಲಿದೆ.  ಇದು ಚೀನಾದ ನೌಕೆ ಇಳಿದ ಸ್ಥಳದಿಂದ  200 ಕಿ. ಮೀ  ದೂರದಲ್ಲಿ ಇರಲಿದೆ. 85 ಯುವ ತಂತ್ರಜ್ಞರು ಮತ್ತು ‘ಇಸ್ರೊ’ದ 24 ನಿವೃತ್ತ ವಿಜ್ಞಾನಿಗಳು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಇಸ್ರೊ’ದ ಮಾಜಿ  ಅಧ್ಯಕ್ಷ ಕಸ್ತೂರಿ ರಂಗನ್‌  ಅವರು  ಈ ಯೋಜನೆಯ ಮುಖ್ಯ ಸಲಹೆಗಾರರಾಗಿದ್ದಾರೆ. ಶ್ರೀನಿವಾಸ್‌ ಹೆಗ್ಡೆ ಅವರು ಈ  ಯೋಜನೆಯ ಮುಖ್ಯಸ್ಥರಾಗಿದ್ದಾರೆ.

‘ಇಸ್’ರೊ ಹಮ್ಮಿಕೊಂಡಿದ್ದ ‘ಚಂದ್ರಾಯನ’ದ ಮುಖ್ಯಸ್ಥರಾಗಿಯೂ ಇವರು ಕಾರ್ಯನಿರ್ವಹಿಸಿದ್ದರು. ಯೋಜನೆ ಸಾಕಾರಗೊಳಿಸಲು ಜಕ್ಕೂರ್‌ನಲ್ಲಿನ ಕೇಂದ್ರದಲ್ಲಿ ಪರಿಣತ ತಂತ್ರಜ್ಞರ ತಂಡ ಕೆಲಸ ಮಾಡುತ್ತಿದೆ. ನಿವೃತ್ತ ವಿಜ್ಞಾನಿಗಳ ಉತ್ಸಾಹವು ಯುವ ತಂತ್ರಜ್ಞರನ್ನೂ ಮೀರಿಸುವಂತಿದೆ.

ಕಾರ್ಯಾಚರಣೆ ವಿವರ
ರೋವರ್‌ಒಳಗೊಂಡ ಬಾಹ್ಯಾಕಾಶ ನೌಕೆಯನ್ನು ‘ಪಿಎಸ್‌ಎಲ್‌ವಿ’ಯ  ತುದಿಯಲ್ಲಿ ಜೋಡಿಸಲಾಗುತ್ತಿದೆ.    ಉಡಾವಣೆಗೊಂಡ ನಂತರ ಬಾಹ್ಯಾಕಾಶದತ್ತ 15 ನಿಮಿಷಗಳವರೆಗೆ ಸಾಗಿದ ನಂತರ ‘ಪಿಎಸ್‌ಎಲ್‌ವಿ’ನಿಂದ ನೌಕೆಯು ಬೇರ್ಪಡಲಿದೆ. ಭೂಮಿಗೆ ಎರಡು ಸುತ್ತು ಹಾಕಿ ಚಂದ್ರನತ್ತ ಪಯಣ ಬೆಳೆಸಲಿದೆ. ಚಂದ್ರನ ಕಕ್ಷೆಗೆ ತಲುಪಲು 3 ರಿಂದ ನಾಲ್ಕು ವಾರ ತೆಗೆದುಕೊಳ್ಳುತ್ತದೆ.

ಚಂದ್ರನ ಕಕ್ಷೆಗೆ ಸೇರಿದ ನಂತರ ಚಂದ್ರನಲ್ಲಿ ನೌಕೆ ಇಳಿಯುವ ಪ್ರಕ್ರಿಯೆ ಮಾತ್ರ ಭಾರಿ ಸವಾಲಿನಿಂದ ಕೂಡಿದೆ. ಈ ಅಂತಿಮ ಘಟ್ಟ ತುಂಬ ಸೂಕ್ಷ್ಮವಾಗಿದೆ.
ಪ್ರತಿ ಸೆಕೆಂಡ್‌ಗೆ 1.3 ಕಿ. ಮೀಟರ್‌ ವೇಗದಲ್ಲಿ ಸಾಗುವ ನೌಕೆ ಶೂನ್ಯ ವೇಗಕ್ಕೆ ತಲುಪಿ ಚಂದ್ರನ ಮೇಲ್ಮೈ ಸ್ಪರ್ಶಿಸುವ  ಹಂತವೇ ಅತ್ಯಂತ ಸೂಕ್ಷ್ಮ ಹಂತವಾಗಿದೆ. ಕೊನೆಯ ಹಂತದ ಈ 900 ಸೆಕೆಂಡುಗಳ ಪಯಣವೇ ಈ ಯೋಜನೆಯ ಮುಖ್ಯ ಜೀವಾಳ. ಈ ಹಂತದಲ್ಲಿ ನೌಕೆಯ ಮೇಲೆ ವಿಜ್ಞಾನಿಗಳ, ನಿಯಂತ್ರಣ ಕೇಂದ್ರದ ಯಾವುದೇ ಹತೋಟಿ ಇರುವುದಿಲ್ಲ.

ನೌಕೆ ಇಳಿಯಲು ಎದುರಾಗುವ 5 ರಿಂದ 10 ಸಾವಿರದಷ್ಟು  ಪ್ರತಿಕೂಲತೆಗಳನ್ನು ಜಕ್ಕೂರ್‌ನಲ್ಲಿನ ಕೇಂದ್ರದಲ್ಲಿ ವಿಜ್ಞಾನಿಗಳು ಪರೀಕ್ಷೆಗೆ ಒಳಪಡಿಸಲಿದ್ದಾರೆ. ಇದರಲ್ಲಿ ಕನಿಷ್ಠ 5 ಸಾವಿರದಷ್ಟು ಸಾಧ್ಯತೆಗಳ ಪರೀಕ್ಷೆ ನಡೆಯಲಿವೆ. ಇಂತಹ ನೂರಾರು ತಾಲೀಮುಗಳ ಫಲಿತಾಂಶ ಆಧರಿಸಿ ವಿಜ್ಞಾನಿಗಳು ನೌಕೆಯು ಸುರಕ್ಷಿತವಾಗಿ ಇಳಿಯುವ ಬಗ್ಗೆ ಖಚಿತ ತೀರ್ಮಾನಕ್ಕೆ ಬರಲಿದ್ದಾರೆ.

ಉದ್ಯಮಿಗಳ ಆಸಕ್ತಿ
ಉದ್ಯಮಿಗಳಾದ ರತನ್‌ ಟಾಟಾ, ನಂದನ್‌ ನಿಲೇಕಣಿ, ಕಿರಣ್‌ ಮಜುಂದಾರ್‌ ಶಾ ಅವರು ಈ ಯೋಜನೆಯಲ್ಲಿ ಕೈಜೋಡಿಸಿದ್ದಾರೆ. ‘ಹರ್‌ ಇಂಡಿಯನ್‌ ಕಾ ಮೂನ್‌ ಶಾಟ್‌’ ಎನ್ನುವುದು ಈ ಯೋಜನೆಯ ಘೋಷವಾಕ್ಯ ಆಗಿದೆ. ‘ಈ ಯೋಜನೆ  ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಲು ಸಂಸ್ಥೆಯು ಸುಸಜ್ಜಿತ ಬಸ್‌ (ಮೂನ್‌ ಶಾಟ್ಸ್‌ ವ್ಹೀಲ್ಸ್‌)  ರೂಪಿಸಿದೆ. ಇದು ದೇಶದಾದ್ಯಂತ ಸಂಚರಿಸಿ ಸರ್ಕಾರ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ತಿಳಿವಳಿಕೆ ಮೂಡಿಸಲಿದೆ.

‘ಹೊಸ ಪೀಳಿಗೆಯಲ್ಲಿ ಬಾಹ್ಯಾಕಾಶ ಯೋಜನೆಗಳ ಬಗ್ಗೆ ಹೊಸ ಕನಸು ಬಿತ್ತುವ ಖಾಸಗಿ ಪ್ರಯತ್ನ ಇದಾಗಿದೆ. ಹೊಸ ತಲೆಮಾರಿನವರಲ್ಲಿ ಹೊಸ ಕನಸು ಬಿತ್ತಲು ಈ ಯೋಜನೆ ನೆರವಾಗಲಿದೆ. ಭಾರತವು, ಚಂದ್ರನಲ್ಲಿ ರೋವರ್‌ಇಳಿಸಿದ ವಿಶ್ವದ 4ನೇ ದೇಶ ಆಗಲಿದೆ. ಯೋಜನೆಯಿಂದಾಗಿ ಇಡೀ ವಿಶ್ವ ನಮ್ಮೆಡೆಗೆ ನೋಡುವ ದೃಷ್ಟಿಕೋನವೂ ಬದಲಾಗಲಿದೆ.

‘ಈ ಯೋಜನೆಯ ಯಶಸ್ಸು ದೇಶಿ ತಂತ್ರಜ್ಞಾನ ರಂಗದ ಮೇಲೆ ದೀರ್ಘಾವಧಿಯಲ್ಲಿ ವ್ಯಾಪಕ ಪರಿಣಾಮ ಬೀರಲಿದೆ.  ಸಂಗ್ರಹವಾಗುವ ವೈಜ್ಞಾನಿಕ ದತ್ತಾಂಶವು ಇಡೀ ಮನುಕುಲದ ಒಳಿತಿಗೆ ನೆರವಾಗಲಿದೆ’  ಎಂದು ಶಿಲಿಕಾ ರವಿಶಂಕರ್‌ ಹೇಳುತ್ತಾರೆ.
****
45- ವರ್ಷಗಳ ನಂತರ ಎರಡು ರೋವರ್‌ ಹೊತ್ತ ಬಾಹ್ಯಾಕಾಶ ನೌಕೆ ಚಂದ್ರನತ್ತ
1972 - ಚಂದ್ರನಲ್ಲಿ ಮಾನವನನ್ನು ಇಳಿಸಿದ  ಅಮೆರಿಕದ ಪ್ರಯತ್ನ
1976 - ರಷ್ಯಾ ಯತ್ನ
2013 - ಚೀನಾ ಕಾರ್ಯಕ್ರಮ
2017–18- ಖಾಸಗಿ ಸಂಸ್ಥೆಯ ಮೊದಲ  ಪ್ರಯತ್ನ

₹ 485 ಕೋಟಿ ಟೀಮ್‌ ಇಂಡಸ್‌ನ ಯೋಜನೆಯ ಒಟ್ಟು ವೆಚ್ಚ

****
ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್‌ಅಪ್‌

ಟೀಮ್‌ ಇಂಡಸ್‌, ಬಾಹ್ಯಾಕಾಶ ತಂತ್ರಜ್ಞಾನ ರಂಗದ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ಆಗಿದೆ. ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆ ಕಳಿಸುವ ಖಾಸಗಿ ಪ್ರಯತ್ನದ ‘ಗೂಗಲ್‌ ಲೂನಾರ್‌ ಎಕ್ಸ್‌ಪ್ರೆಸ್‌’ ಸ್ಪರ್ಧೆಯಲ್ಲಿ  ಭಾಗವಹಿಸಿದ್ದ ಭಾರತದ ಏಕೈಕ ತಂಡ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT