ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಬಳಸದಿದ್ದರೆ ಶಿಸ್ತುಕ್ರಮಕ್ಕೆ ಶಿಫಾರಸು

Last Updated 17 ಮೇ 2017, 4:50 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರದ ಅನುದಾನವನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಮರ್ಪಕವಾಗಿ ಬಳಸದಿದ್ದರೆ ಅದಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ ಎಚ್ಚರಿಕೆ ನೀಡಿದರು.

ವಿವಿಧ ಯೋಜನೆಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸುವ ಕುರಿತು ನಗರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಪಂಚಾಯಿತಿಗೆ ಬಂದಿರುವ ಸರ್ಕಾರಿ ಅನುದಾನದ ಬಳಕೆ ಕುರಿತು ಸದಸ್ಯರ ಅಭಿಪ್ರಾಯ ಪಡೆದು ನಂತರ ಕ್ರಿಯಾಯೋಜನೆ ತಯಾರಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಸರ್ಕಾರಿ ವಿದ್ಯಾರ್ಥಿನಿಲಯಗಳ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಮೂಲಸೌಕರ್ಯ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಿಗೆ ದಾಖಲಾಗುತ್ತಿಲ್ಲ. ಮತ್ತೊಂದೆಡೆ ವಿದ್ಯಾರ್ಥಿಗಳು ಹಾಸ್ಟೆಲ್‌ ಬಿಟ್ಟು ಹೋಗುತ್ತಿದ್ದಾರೆ. ಹಾಸ್ಟೆಲ್‌ಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಸಾಕಷ್ಟು ಬಾರಿ ಹೇಳಿದ್ದೇನೆ. ಆದರೆ, ಸ್ಥಿತಿ ಸ್ವಲ್ಪವೂ ಸುಧಾರಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊರತೆ ಇಲ್ಲ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ಸರ್ಕಾರದ ಅನುದಾನಕ್ಕೆ ಕೊರತೆ ಇಲ್ಲ. ಸಾಕಷ್ಟು ಅನುದಾನ ಬಂದಿದ್ದು, ಅದನ್ನು ಯಾವ ಕಾರ್ಯಕ್ರಮಗಳಿಗೆ ಎಷ್ಟು ಪ್ರಮಾಣದಲ್ಲಿ ಮೀಸಲಿಡಬೇಕೆಂಬ ಬಗ್ಗೆ ಸದಸ್ಯರ ಅಭಿಪ್ರಾಯ ಪಡೆದು ಕ್ರಿಯಾಯೋಜನೆ ಸಿದ್ಧಪಡಿಸಿ’ ಎಂದು ಅಧಿಕಾರಿಗಳಿಗೆ ತಿಳಿಸಿದರು.

‘ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಇಲಾಖೆಗೆ ₹ 90 ಲಕ್ಷ ಅನುದಾನ ಬಂದಿದ್ದು, ಈ ಅನುದಾನವನ್ನು ಆರು ಶೈಕ್ಷಣಿಕ ವಲಯಗಳಿಗೆ ಸಮನಾಗಿ ಹಂಚಿಕೆ ಮಾಡಬೇಕು. ಈ ಅನುದಾನವನ್ನು ಸರ್ಕಾರಿ ಪ್ರೌಢ ಶಾಲೆಗಳ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಲು ಅವಕಾಶವಿದೆ’ ಎಂದು ಹೇಳಿದರು.

ಸರ್ಕಾರದ ಜವಾಬ್ದಾರಿಯಲ್ಲ: ಜಿ.ಪಂ ಸದಸ್ಯ ಪ್ರಕಾಶ್ ರಾಮಚಂದ್ರ ಮಾತನಾಡಿ, ‘ಕಳೆದ ಶೈಕ್ಷಣಿಕ ಸಾಲಿನಲ್ಲಿ ಅಭಿವೃದ್ಧಿಪಡಿಸಿರುವ ಶಾಲೆಗೆ ಈ ಬಾರಿಯೂ ಅನುದಾನ ಕಳುಹಿಸಿದರೆ ಹೇಗೆ ಉಪಯೋಗಿಸಲು ಸಾಧ್ಯ. ಅನುದಾನಿತ ಶಾಲೆಗಳ ಅಭಿವೃದ್ಧಿಗೆ ಅಥವಾ ಬೇರೆ ಕಾರ್ಯಕ್ರಮಗಳಿಗೆ ಅನುದಾನ ಬಳಕೆ ಮಾಡಲು ಅವಕಾಶವಿದೆಯಾ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಕಾವೇರಿ, ‘ಒಂದು ಇಲಾಖೆಗೆ ಬಿಡುಗಡೆಯಾದ ಅನುದಾನವನ್ನು ಮತ್ತೊಂದು ಕೆಲಸಕ್ಕೆ ಉಪಯೋಗಿಸಲು ಆಗುವುದಿಲ್ಲ. ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸಮಸ್ಯೆ ಬಗ್ಗೆ ದೂರು ಕೇಳಿಬಂದಿವೆ. ಅಂತಹ ಶಾಲೆಗಳನ್ನು ಪಟ್ಟಿ ಮಾಡಿ ತಲಾ ₹ 45,000 ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲು ಮತ್ತು ಸಾಮಗ್ರಿಗಳನ್ನು ಖರೀದಿಸಲು ಅವಕಾಶ’ ಇದೆ’ ಎಂದರು.

‘ಅನುದಾನಿತ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದು ಸರ್ಕಾರದ ಜವಾಬ್ದಾರಿಯಲ್ಲ. ಆ ಶಾಲೆಗಳಿಗೆ ಖಾಸಗಿ ವ್ಯಕ್ತಿಗಳೇ ಮಾಲೀಕರಾಗಿರುತ್ತಾರೆ. ಅನುದಾನಿತ ಶಾಲೆಯಾದ ಮಾತ್ರಕ್ಕೆ ಸರ್ಕಾರದ ಅನುದಾನ ದೊರೆಯುವುದಿಲ್ಲ. ದುರಸ್ತಿಯಾಗಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಶಾಲೆಗಳ ಪಟ್ಟಿ ಕಳುಹಿಸಿ ಕೊಡಿ. ಆಯಾ ಇಲಾಖಾ ಅಧಿಕಾರಿಗಳ ಜತೆಗೆ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಂಟಿಯಾಗಿ ಪಟ್ಟಿ ಸಿದ್ಧಪಡಿಸಬೇಕು’ ಎಂದು ಸೂಚಿಸಿದರು.

ಜಿ.ಪಂ ಉಪಾಧ್ಯಕ್ಷೆ ಯಶೋಧಾ, ಸದಸ್ಯರಾದ ಕೃಷ್ಣಪ್ಪ, ಅರವಿಂದ್, ಉಪ ಕಾರ್ಯದರ್ಶಿ ಲಕ್ಷ್ಮಿನಾರಾಯಣ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT