ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಬ್ಯಾಂಕ್‌ಗಳು ಜನರ ಜೀವನಾಡಿಯಾಗಬೇಕು

Last Updated 17 ಮೇ 2017, 5:06 IST
ಅಕ್ಷರ ಗಾತ್ರ

ಕೋಲಾರ: ‘ಸಹಕಾರಿ ಬ್ಯಾಂಕ್‌ಗಳು ಜನರ ಜೀವನಾಡಿಯಾಗಬೇಕು ಮತ್ತು ಬಡವರ ಶಕ್ತಿ ಕೇಂದ್ರಗಳಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್‌ ಸಲಹೆ ನೀಡಿದರು.

ಸುಗಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘವು (ಎಸ್‌ಎಫ್‌ಸಿಎಸ್‌) ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ಆರಂಭಿಸಿರುವ ನೂತನ ಬ್ಯಾಂಕ್ ಕೌಂಟರನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಸಹಕಾರಿ ಸಂಘಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಲ ನೀಡುವಂತಾಗಬೇಕು. ವಾಣಿಜ್ಯ ಬ್ಯಾಂಕ್‌ಗಳತ್ತ ಜನ ತಿರುಗಿಯೂ ನೋಡದಂತಹ ಸ್ಥಿತಿಯನ್ನು ಸಹಕಾರಿ ಬ್ಯಾಂಕ್‌ಗಳು ನಿರ್ಮಾಣ ಮಾಡಬೇಕು’ ಎಂದರು.

‘ರಾಜ್ಯ ಸರ್ಕಾರ ಸಹಕಾರ ಸಂಘಗಳ ಮೂಲಕ ರೈತರಿಗೆ ಮಾತ್ರ ಶೂನ್ಯ ಬಡ್ಡಿ ಸಾಲ ನೀಡುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮನವಿಗೆ ಸ್ಪಂದಿಸಿ ಮಹಿಳಾ ಸ್ವಸಹಾಯ ಸಂಘಗಳಿಗೂ ಶೂನ್ಯ ಬಡ್ಡಿ ಸಾಲ ನೀಡಲು ಆದೇಶ ಹೊರಡಿಸಿದ್ದಾರೆ. ವಾಣಿಜ್ಯ ಬ್ಯಾಂಕ್‌ಗಳು ದೊಡ್ಡ ಉದ್ಯಮಿಗಳಿಗೆ ಸಾವಿರಾರು ಕೋಟಿ ಸಾಲ ನೀಡುತ್ತವೆ. ಆದರೆ, ಅವರಿಂದ ಭದ್ರತೆ ಕೇಳುವುದಿಲ್ಲ. ಸಮಯ ಬಂದರೆ ಸಾಲ ಮನ್ನಾ ಮಾಡುತ್ತವೆ’ ಎಂದು ಹೇಳಿದರು.

ಗಿರಾಕಿಗಳಿಗೆ ಕಷ್ಟ: ‘ಸಹಕಾರಿ ಸಂಸ್ಥೆಗಳ ಮೂಲಕ ಶೂನ್ಯ ಬಡ್ಡಿ ಸಾಲ ವಿತರಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಬಡ್ಡಿ ಗಿರಾಕಿಗಳಿಗೆ ಕಷ್ಟವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಹಿಳಾ ಸಂಘಗಳಿಗೆ ಸಾಲ ವಿತರಿಸಲಾಗುತ್ತದೆ. ಮಹಿಳೆಯರು ಸಾಲವನ್ನು ಶೇ 100 ಮರುಪಾವತಿ ಮಾಡುವ ಮೂಲಕ ಪ್ರಾಮಾಣಿಕತೆ ಮೆರೆಯುತ್ತಿದ್ದಾರೆ. ಈ ಪ್ರಾಮಾಣಿಕತೆ ಸಾವಿರಾರು ಕೋಟಿ ಸಾಲ ಪಡೆಯುವ ಉದ್ಯಮಿಗಳಲ್ಲಿ ಇರಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ‘ಸರ್ಕಾರ ಸಹಕಾರಿ ಸಂಘಗಳ ಬಲವರ್ಧನೆಗೆ ಹೆಚ್ಚು ಒತ್ತು ಕೊಡಬೇಕು. ಕೇವಲ ಪಡಿತರ ಮಾರಾಟಕ್ಕೆ ಸೀಮಿತವಾಗದೆ ಆದಾಯ ತರುವ ಚಟುವಟಿಕೆಗಳತ್ತ ಗಮನ ಹರಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಆದಾಯ ಕೆಲಸ: ‘ಸೊಸೈಟಿಯು ಈ ಹಿಂದೆ ಅಕ್ಕಿ, ಸಕ್ಕರೆಯಂತಹ ಪಡಿತರ ಮಾರಾಟಕ್ಕೆ ಸೀಮಿತವಾಗಿತ್ತು. ಆದರೆ, ಇದೀಗ ಸುಗಟೂರು, ಮದನಹಳ್ಳಿ, ಚಿಟ್ನಹಳ್ಳಿ ಹಾಗೂ ಸುತ್ತಮುತ್ತಲ ರೈತರಿಗೆ ಬೇಕಾದ ರಾಸಾಯನಿಕ ಗೊಬ್ಬರ ಮತ್ತು ಜಾನುವಾರುಗಳಿಗೆ ಅಗತ್ಯವಿರುವ ಪಶು ಆಹಾರ ಮಾರಾಟ ಮಾಡುವ ಮೂಲಕ ಆದಾಯ ತರುವ ಕೆಲಸ ಆರಂಭಿಸಿದೆ’ ಎಂದು ಸುಗಟೂರು ಎಸ್‌ಎಫ್‌ಸಿಎಸ್‌ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ ಹೇಳಿದರು.

‘ಸೊಸೈಟಿಯಿಂದ ಈಗಾಗಲೇ ರೈತರಿಗೆ ₹ 2.50 ಕೋಟಿ ಶೂನ್ಯ ಬಡ್ಡಿ ಬೆಳೆ ಸಾಲ, ಮಹಿಳಾ ಸಂಘಗಳಿಗೆ ₹ 12.24 ಕೋಟಿ ಶೂನ್ಯ ಬಡ್ಡಿ ಸಾಲ ವಿತರಿಸಲಾಗಿದೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಉಳಿತಾಯ ಮಾಡುತ್ತಿದ್ದ ಮಹಿಳೆಯರು ಇದೀಗ ಎಸ್‌ಎಫ್‌ಸಿಎಸ್‌ ಕಡೆ ಮುಖ ಮಾಡಿದ್ದು, ಸೊಸೈಟಿಯಲ್ಲಿ ಈಗಾಗಲೇ ₹ 1.16 ಕೋಟಿ ಉಳಿತಾಯ ಮಾಡಿದ್ದಾರೆ. ಹೊಸದಾಗಿ 100 ಸಂಘಗಳು ಖಾತೆ ತೆರೆದು ಉಳಿತಾಯ ಆರಂಭಿಸಿವೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ, ಎಂಎಸ್ಐಎಲ್ ಮಾಜಿ ಅಧ್ಯಕ್ಷ ಎಂ.ಎಲ್‌.ಅನಿಲ್‌ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೆ.ವಿ.ದಯಾನಂದ್, ಸುಗಟೂರು ಎಸ್‌ಎಫ್‌ಸಿಎಸ್‌ ಉಪಾಧ್ಯಕ್ಷ ಅಮರ ನಾರಾಯಣಸ್ವಾಮಿ, ನಿರ್ದೇಶಕರಾದ ವೆಂಕಟರಾಮರೆಡ್ಡಿ, ಎ.ಸಿ.ಭಾಸ್ಕರ್, ವೆಂಕಟರಮಣಪ್ಪ, ಗೋಪಾಲಪ್ಪ, ರಮಣರೆಡ್ಡಿ, ರುಕ್ಕಮ್ಮ, ಸವಿತಾ, ವೆಂಕಟಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

**

ಹತ್ತಿಪ್ಪತ್ತು ಸಾವಿರ ಸಾಲ ಪಡೆಯಲು ಹೋದರೆ ವಾಣಿಜ್ಯ ಬ್ಯಾಂಕ್‌ಗಳ ಅಧಿಕಾರಿಗಳು ಭದ್ರತೆ ಕೇಳುತ್ತಾರೆ. ಸಾಲ ತೀರಿಸದಿದ್ದರೆ ಮನೆ ಮುಂದೆ ಹೋಗಿ ಡಂಗುರ ಬಾರಿಸಿ ಮಾನ ಹರಾಜು ಹಾಕುತ್ತಾರೆ.
-ಕೆ.ಆರ್‌.ರಮೇಶ್‌ಕುಮಾರ್‌
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT