ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆಯ ಮಜಾ ಕಾಣದ ಗ್ರಾಮೀಣ ಮಕ್ಕಳು

Last Updated 17 ಮೇ 2017, 5:08 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಈಗ ಶಾಲಾ ಮಕ್ಕಳಿಗೆ ಬೇಸಿಗೆ ರಜೆ. ಪಟ್ಟಣ ಹಾಗೂ ನಗರ ಪ್ರದೇಶದ ಮಕ್ಕಳು ಕಂಪ್ಯೂಟರ್‌ ತರಬೇತಿ, ಬೇಸಿಗೆ ಶಿಬಿರ, ವಿಡಿಯೋ ಗೇಮ್ಸ್‌ ಮುಂತಾದ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಕೆಲವರು ಅಜ್ಜಿ ಊರಿಗೆ ಹೋಗಿ ಆನಂದವಾಗಿದ್ದಾರೆ.

ಆದರೆ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಂಥ ಭಾಗ್ಯವಿಲ್ಲ. ಶ್ರಮಿಕ ಪೋಷಕರೊಂದಿಗೆ ಶ್ರಮವಹಿಸಿ ದುಡಿಯುತ್ತಿದ್ದಾರೆ. ಇಲ್ಲಿ ದುಡಿತ ವಿದ್ಯಾರ್ಥಿ ಬದುಕಿನ ಒಂದು ಭಾಗ. ದುಡಿಯುತ್ತಲೇ ಕಲಿಯುವುದು ಸಾಮಾನ್ಯ. ಹಾಗಾಗಿ ಮಾವಿನ ಮಡಿಲು ಎಂದು ಕರೆಯಲಾಗುವ ಶ್ರೀನಿವಾಸಪುರ ತಾಲ್ಲೂಕಿನ ಮಕ್ಕಳು ಬಿಸಿಲು ಬೇಗೆಯ ನಡುವೆ ದುಡಿಮೆಗೆ ಇಳಿದಿದ್ದಾರೆ.

ಬೆಳಿಗ್ಗೆ ಪೋಷಕರೊಂದಿಗೆ ಏಳುವ ಮಕ್ಕಳು ಹಿರಿಯರೊಂದಿಗೆ ಹುಲ್ಲು ತರಲು ಹೋಗುತ್ತಾರೆ. ಸೌದೆ ತರಲು ಹೋಗುವ ಮಕ್ಕಳ ಸಂಖ್ಯೆ ದೊಡ್ಡದು. ಬೇಸಿಗೆಯಲ್ಲಿ ಸೌದೆ ತಂದು ಹಾಕಿಕೊಂಡರೆ ಸಮಸ್ಯೆ ಇರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಈಗ ಕುಡಿಯುವ ನೀರಿನ ಸಮಸ್ಯೆ ಹೆಡೆಯೆತ್ತಿದೆ. ಕೊಳವೆ ಬಾವಿ ಅಥವಾ ಟ್ಯಾಂಕರ್‌ನಿಂದ ನೀರು ಪಡೆದುಕೊಳ್ಳಬೇಕು. ನೀರಿಗಾಗಿ ಕಾಯುವ ಸರದಿ ರಜೆಯಲ್ಲಿರುವ ಶಾಲಾ ಮಕ್ಕಳದಾಗಿದೆ. ಎಲ್ಲ ವಯೋಮಾನದ ಮಕ್ಕಳೂ ಕೈಯಲ್ಲಿ ಪ್ಲಾಸ್ಟಿಕ್ ಬಿಂದಿಗೆ ಹಿಡಿದು ನೀರು ಸಂಗ್ರಹದಲ್ಲಿ ತೊಡಗಿರುವುದು ಸಾಮಾನ್ಯ ದೃಶ್ಯವಾಗಿದೆ. ಈಗ ಮಾವಿನ ಕಾಯಿ ಕೊಯ್ಲು ಆರಂಭವಾಗಿದ್ದು, ಮಕ್ಕಳು ಕಾಯಿ ಕೀಳುವ ಕಾಯಕದಲ್ಲಿ ತೊಡಗಿದ್ದಾರೆ.

ಶಾಲೆಗೆ ರಜೆ ಬಂದರೆ ದನಗಾಹಿ ಹಿರಿಯರು ದನ, ಕುರಿ, ಮೇಕೆ  ಕಾಯಕವನ್ನು ಮಕ್ಕಳಿಗೆ ವಹಿಸಿ, ತಾವು ಕೃಷಿ ಕೆಲಸದಲ್ಲಿ ನಿರತರಾಗುತ್ತಾರೆ. ದನ ಮೇಯಿಸಲು ಕಾಡಿಗೆ ಹೋಗುವ ಮಕ್ಕಳು, ಅಲ್ಲಿ ದೊರೆಯುವ ನೈಸರ್ಗಿಕ ಹಣ್ಣು, ಕಾಯಿ, ನಾರು ಬೇರು ಕಿತ್ತು ತಿಂದು ಖುಷಿ ಪಡುತ್ತಾರೆ. ಆದರೆ ಈಗ ಮಳೆ ಕೊರತೆಯಿಂದಾಗಿ ಅಂಥ ಪರಿಸ್ಥಿತಿ ಇಲ್ಲ.

ಹೊಂಗೆ ಸುರುಗು ಹಾಗೂ ಹೂವನ್ನು ಗುಡಿಸಿ ತಿಪ್ಪೆಗೆ ಹಾಕುವಲ್ಲಿ ರಜೆ ವಿದ್ಯಾರ್ಥಿಗಳು ಸಹಕರಿಸುತ್ತಾರೆ. ಹಿಂದೆ ಬೇಸಿಗೆ ರಜೆ ಬಂತೆಂದರೆ ಬಹುತೇಕ ಗ್ರಾಮೀಣ ವಿದ್ಯಾರ್ಥಿಗಳು ಮಧ್ಯಾಹ್ನದ ಹೊತ್ತು ತೆರೆದ ಬಾವಿ, ಕೆರೆ, ಕುಂಟೆಗಳಲ್ಲಿ ಈಜಿ ಬಿಸಿಲಿನ ತಾಪ ತಗ್ಗಿಸಿಕೊಳ್ಳುತ್ತಿದ್ದರು. ಈಜು ಬರದವರು ಈಜು ಕಲಿತು ಖುಷಿ ಪಡುತ್ತಿದ್ದರು. ಮಳೆ ಕೊರತೆ ಅದಕ್ಕೆ ಕಡಿವಾಣ ಹಾಕಿದೆ.

ಅಜ್ಜಿ ಊರಿಗೆ ಹೋಗುವ ಕೃಷಿಕ ಸಮುದಾಯದ ವಿದ್ಯಾರ್ಥಿಗಳು ಅಲ್ಲೂ ಅಪ್ಪನ ಮನೆಯ ಕೆಲಸವನ್ನೇ ಮಾಡಬೇಕಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಮನೆಗೆ ಬಂದು ನಾಲ್ಕು ದಿನ ಉಳಿದುಕೊಳ್ಳುವ ನೆಂಟರೂ ಸಹ ಕೃಷಿ ಕೆಲಸದಲ್ಲಿ ಸಹಕರಿಸುವುದು ಸಾಮಾನ್ಯ. ಹಿರಿಯರ ಜೊತೆಯಲ್ಲಿ ದುಡಿದು ಮನೆಗೆ ಬರುವ ಮಕ್ಕಳು ನೆಮ್ಮದಿಯಿಂದ ಮಲಗುವಂತಿಲ್ಲ. ಕಾರಣ ಹೋಂ ವರ್ಕ್‌ ಕಾದಿರುತ್ತದೆ. ಶಾಲೆಗಳು ಮಕ್ಕಳು ಮರೆಯದಿರಲೆಂದು ರಜೆ ಕಾಲದ ಹೋಂ ವರ್ಕ್‌ ಕೊಡುವುದು ರೂಢಿ. ಅದನ್ನು ಮಾಡುವುದರಲ್ಲಿ ರಜೆ ಮುಗಿದಿರುತ್ತದೆ. ಹಾಗಾಗಿ ಹಳ್ಳಿ ಮಕ್ಕಳಿಗೆ ಬಿಡುವು ಎಂಬುದು ಗಗನ ಕುಸುಮ.

ಈಗ ಆಟವೆಂದರೆ ಕ್ರಿಕೆಟ್ ಮಾತ್ರ. ಗ್ರಾಮೀಣ ಪ್ರದೇಶದ ಜನಪದ ಕ್ರೀಡೆಗಳು ನೇಪಥ್ಯಕ್ಕೆ ಸರಿದಿವೆ. ಮಕ್ಕಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಕತೆ ಹೇಳುತ್ತಿದ್ದ ಅಜ್ಜಿ, ಅಜ್ಜ, ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದ ಮಕ್ಕಳು ಜೊತೆಯಾಗಿ ಟಿವಿ ಮುಂದೆ ಕುಳಿತಿದ್ದಾರೆ. ಇಂದು ಗ್ರಾಮೀಣ ಮಕ್ಕಳ ಮನರಂಜನೆ ಟಿವಿ ಮಾತ್ರ. ನಗರ ಪ್ರದೇಶದ ಮಕ್ಕಳ ಮನರಂಜನಾ ಕ್ಷೇತ್ರ ವಿಶಾಲವಾದುದು. ಮನರಂಜನೆಗೆ ಮನಸೋತ ಮಕ್ಕಳು ಓದನ್ನು ನಿರ್ಲಕ್ಷಿಸುವ ಅಪಾಯ ಇಲ್ಲದಿಲ್ಲ.

ಈ ಸಲ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗಾಗಿ ಶಿಕ್ಷಣ ಇಲಾಖೆ ವತಿಯಿಂದ ಬೇಸಿಗೆ ಸಂಭ್ರಮ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಆಯ್ದ ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಅಲ್ಲಿಂದ ಮನೆಗೆ ಬಂದ ಮಕ್ಕಳೂ ಹಿರಿಯರಿಗೆ ನೆರವಾಗುತ್ತಾರೆ.

ಶಾಲೆಗೆ ರಜೆ ಇದ್ದಾಗ ಬೇರೆ ಕಡೆ ದುಡಿದು ವಿದ್ಯಾಭ್ಯಾಸಕ್ಕೆ ಪೂರಕವಾದ ವಸ್ತು ಖರೀದಿಸಲು ಹಣ ಸಂಪಾದಿಸುವ ಹಿರಿಯ ವಿದ್ಯಾರ್ಥಿಗಳೂ ಇದ್ದಾರೆ. ಇದನ್ನು ಕಲಿಕೆಯೊಂದಿಗೆ ಗಳಿಕೆ ಎಂದು ಹೇಳಲಾಗದು. ಬಡತನ ಇಂಥ ಅನಿವಾರ್ಯ ಪರಿಸ್ಥಿತಿಗೆ ದೂಡುತ್ತದೆ ಎಂದು ಹೇಳಬಹುದು. ಒಟ್ಟಾರೆ ಹೇಳುವುದಾದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ರಜೆಯ ಮಜಾ ಎಂಬುದು ಕನಸಿನ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT