ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ವಿ.ವಿ ಕಾರ್ಯಾರಂಭ

Last Updated 17 ಮೇ 2017, 5:10 IST
ಅಕ್ಷರ ಗಾತ್ರ

ಕೋಲಾರ: ‘ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ನಗರದ ಹೊರವಲಯದ ಟಮಕ ಬಳಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಜಾಗದಲ್ಲಿ ಜುಲೈ 1ರಿಂದ ತಾತ್ಕಾಲಿಕವಾಗಿ ಆರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿ.ವಿ ಉದ್ಘಾಟಿಸುತ್ತಾರೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು.

ವಿ.ವಿ ಆರಂಭಕ್ಕೆ ಗುರುತಿಸಿರುವ ಕಟ್ಟಡವನ್ನು ಪರಿಶೀಲಿಸಿ ಮಾತನಾಡಿದ ಅವರು, ‘ಬೆಂಗಳೂರು ವಿ.ವಿ ವಿಭಜಿಸಿ ಅಧಿಕೃತವಾಗಿ ಬೆಂಗಳೂರು ಉತ್ತರ ವಿ.ವಿ ಆರಂಭಿಸಲಾಗುತ್ತಿದೆ. ವಿ.ವಿಗೆ ಸದ್ಯಕ್ಕೆ ಕೆಎಸ್‌ಒಯು ಕಟ್ಟಡದಲ್ಲಿ ಜಾಗ ನೀಡಲಾಗಿದೆ’ ಎಂದು ಹೇಳಿದರು.

‘ಕೆಎಸ್‌ಒಯು ಕಟ್ಟಡ ನೂತನ ವಿ.ವಿ ಆಡಳಿತ ಕಚೇರಿಗೆ ಸೂಕ್ತವಾಗಿದೆ. ಹೊಸ ಕಟ್ಟಡ ನಿರ್ಮಾಣ ಆಗುವವರೆಗೂ ಆಡಳಿತ ಕಚೇರಿಯನ್ನು ಇಲ್ಲೇ ನಡೆಸಲು ಸಿದ್ಧತೆ ಮಾಡಿಕೊಳ್ಳಿ. ವಿ.ವಿ ಜುಲೈ 1ರಿಂದ ಕಾರ್ಯಾರಂಭ ಮಾಡಬೇಕು. ಕಟ್ಟಡದಲ್ಲಿನ ನೀರಿನ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕು’ ಎಂದು ಜಿಲ್ಲಾಧಿಕಾರಿಗೆ ಡಾ.ಕೆ.ವಿ.ತ್ರಿಲೋಕಚಂದ್ರ ಅವರಿಗೆ ಸೂಚಿಸಿದರು.

‘ಕೋಲಾರ ಜಿಲ್ಲೆಯು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಇಲ್ಲಿ ಉತ್ತರ ವಿ.ವಿ ಕಾರ್ಯಾರಂಭ ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಶೈಕ್ಷಣಿಕ ಸುಧಾರಣೆಯಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿ.ವಿಯಲ್ಲಿ 4 ಕೋರ್ಸ್‌ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ವಿ.ವಿಗೆ ಅಗತ್ಯವಿದ್ದರೆ ಕೋಲಾರ ನಗರದಲ್ಲಿನ ಮಿನಿ ವಿಧಾನಸೌಧ ಕಟ್ಟಡವನ್ನು ಬಳಕೆ ಮಾಡಿಕೊಳ್ಳಲಾಗುವುದು. ವಿ.ವಿ ಕಟ್ಟಡ ಸೇರಿದಂತೆ ಎಲ್ಲಾ ಕಾರ್ಯ ಚಟುವಟಿಕೆಗಳು 2-3 ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಆವರೆಗೆ ತಾತ್ಕಾಲಿಕವಾಗಿ ಬೇರೆ ಕಟ್ಟಡಗಳಲ್ಲೇ ವಿ.ವಿ ನಡೆಸಬೇಕಿದೆ’ ಎಂದು ವಿವರಿಸಿದರು.

₹ 13 ಕೋಟಿ: ‘ಸ್ನಾತಕೋತ್ತರ ಕೇಂದ್ರದ ಕಟ್ಟಡಕ್ಕೆ ಸರ್ಕಾರ ₹ 13 ಕೋಟಿ ಬಿಡುಗಡೆ ಮಾಡಿದ್ದು, ಆದಷ್ಟು ಬೇಗ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಬೇಕು. ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಡವನ್ನು ಉದ್ಘಾಟಿಸುವರು. ಕಟ್ಟಡದಲ್ಲಿ ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ದರೆ ಬೇಗ ಮುಗಿಸಿ’ ಎಂದು ಗುತ್ತಿಗೆದಾರರಿಗೆ ತಿಳಿಸಿದರು.

‘ಸ್ನಾತಕೋತ್ತರ ಕೇಂದ್ರಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಪಟ್ಟಿ ಮಾಡಿ ಕೊಡಿ. ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತದೆ’ ಎಂದು ಕೇಂದ್ರದ ನಿರ್ದೇಶಕ ನಾಗಭೂಷಣ್ ಅವರಿಗೆ ಸೂಚಿಸಿದರು.

ಸಮಗ್ರ ಕಾಯಿದೆ: ‘ವಿ.ವಿಗಳ ಆಡಳಿತದಲ್ಲಿ ಪಾರದರ್ಶಕತೆ ತರಬೇಕು. ಪ್ರಾಧ್ಯಾಪಕರ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ. ವಿ.ವಿಗಳಿಗೆ ಸಂಬಂಧಪಟ್ಟಂತೆ ಜುಲೈನಲ್ಲಿ ವಿ.ವಿ ಸಮಗ್ರ ಕಾಯಿದೆ ಜಾರಿಗೆ ತರಲಾಗುತ್ತಿದೆ. ಪಾರದರ್ಶಕತೆ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕಾಯಿದೆಯು ಅವಕಾಶ ಕಲ್ಪಿಸಲಿದೆ’ ಎಂದರು.

‘ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೋಲಾರ ಸೇರಿದಂತೆ ರಾಜ್ಯದ 10 ಕಡೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾದರಿಯ ವಸತಿ ಕಾಲೇಜುಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈ ವಸತಿ ಕಾಲೇಜುಗಳಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ ಪದವಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು. 600 ವಿದ್ಯಾರ್ಥಿಗಳ ಸಾಮರ್ಥ್ಯದ ವಸತಿ ಕಾಲೇಜುಗಳಲ್ಲಿ ಶೇ 65ರಷ್ಟು ಬಾಲಕರಿಗೆ ಮತ್ತು ಶೇ 35ರಷ್ಟು ಬಾಲಕಿಯರಿಗೆ ಪ್ರವೇಶಾವಕಾಶ ನೀಡಿ ವಿ.ವಿಗಳನ್ನು ರಾಜಕೀಯ ಮುಕ್ತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಮುಂದುವರಿಸುತ್ತೇವೆ: ‘ಈಗಾಗಲೇ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಮುಂದುವರಿಸುತ್ತೇವೆ. ಅಗತ್ಯವಿರುವ ಕಡೆ ಹೆಚ್ಚುವರಿಯಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುತ್ತೇವೆ. ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆದರೆ ಅವರು ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು ಕೆಲಸದಿಂದ ತೆಗೆಯುವುದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ತ್ರಿಲೋಕಚಂದ್ರ, ತಹಶೀಲ್ದಾರ್‌ ಎಂ.ವಿಜಯಣ್ಣ, ಕೆಎಸ್‌ಒಯು ಕುಲಪತಿ ಶಿವಲಿಂಗಯ್ಯ, ನೂತನ ವಿ.ವಿ ವಿಶೇಷಾಧಿಕಾರಿ ಕೆಂಪರಾಜ್, ಕುಲಸಚಿವ ಬಿ.ಕೆ.ರವಿ ಹಾಜರಿದ್ದರು.

**

ಬೆಂಗಳೂರು ಉತ್ತರ ವಿ.ವಿ ವ್ಯಾಪ್ತಿಗೆ 250 ಕಾಲೇಜುಗಳು ಒಳಪಡಲಿದ್ದು, ವಿ.ವಿಗೆ ನೂತನ ಕಟ್ಟಡ ನಿರ್ಮಿಸಲು ಈಗಾಗಲೇ 200 ಎಕರೆ ಜಮೀನು ಗುರುತಿಸಲಾಗಿದೆ.

-ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT