ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಮಳಿಗೆ ಬಾಡಿಗೆಗೆ ಕೇಳುವವರಿಲ್ಲ!

Last Updated 17 ಮೇ 2017, 5:24 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೀದಿ ವ್ಯಾಪಾರಕ್ಕೆ ಕಡಿವಾಣ ಹಾಕದ ನಗರಸಭೆ ಸಂತೆ ಮೈದಾನ ಮತ್ತು ಭುವನೇಶ್ವರ ವೃತ್ತದಲ್ಲಿರುವ ಮಾರುಕಟ್ಟೆ ಸಂಕೀರ್ಣಗಳ ಮಳಿಗೆಗಳನ್ನು ಪದೇ ಪದೇ ಹರಾಜು ಹಾಕಲು ಪ್ರಯತ್ನಿಸುತ್ತಲೇ ಇದೆ. ಬಾಡಿಗೆದಾರರು ಮಾತ್ರ ಮುಂದೆ ಬರುತ್ತಿಲ್ಲ. ನಗರಸಭೆ ಮಳಿಗೆಗಳ ಹರಾಜಿನ ಸದ್ಯದ ಸ್ಥಿತಿ ‘ಹುಚ್ಚು ಬಿಡದೆ ಮದುವೆಯಾಗದು, ಮದುವೆಯಾಗದೆ ಹುಚ್ಚು ಬಿಡದು’ ಎಂಬಂತಾಗಿದೆ.

‘ರಾಜ್ಯ ಹಣಕಾಸು ನಿಗಮ’ (ಎಸ್ಎಫ್‌ಸಿ) ಮತ್ತು ‘ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆ’ (ಸಿಎಂಎಸ್‌ಎಂಟಿಡಿಪಿ) ಅನುದಾನಗಳಡಿ ನಗರಸಭೆ 2012ರಲ್ಲಿ ಸಂತೆ ಮೈದಾನ ಮತ್ತು ಭುವನೇಶ್ವರ ವೃತ್ತದಲ್ಲಿ ಮಾರುಕಟ್ಟೆ ಸಂಕೀರ್ಣಗಳನ್ನು ನಿರ್ಮಿಸಿದೆ. ಈ ಎರಡು ಸಂಕೀರ್ಣಗಳಲ್ಲಿ ಸೇರಿ 125 ಮಳಿಗೆಗಳಿವೆ.

ಒಂದೂ ಮಳಿಗೆ ಹರಾಜಾಗಲಿಲ್ಲ!
ಈ ಮಳಿಗೆಗಳನ್ನು ಹರಾಜು ಹಾಕಲು ನಗರಸಭೆ 2012ರ ಡಿಸೆಂಬರ್ 18 ರಿಂದ ಕಳೆದ ಏಪ್ರಿಲ್ 17ರ ವರೆಗೆ 10 ಬಾರಿ ಹರಾಜು ಪ್ರಕ್ರಿಯೆ ನಡೆಸಿದರೂ ಕೇವಲ 56 ಮಳಿಗೆಗಳಿಗೆ ಮಾತ್ರ ಬಾಡಿಗೆದಾರರು ಬಂದಿದ್ದಾರೆ. ಸದ್ಯ ಎರಡು ಸಂಕೀರ್ಣಗಳ ಪೈಕಿ 69 ಮಳಿಗೆಗಳು ದೂಳು ತಿನ್ನುತ್ತಿವೆ. ಮಂಗಳವಾರ ನಗರಸಭೆಯ ಕಂದಾಯ ವಿಭಾಗದ ಸಿಬ್ಬಂದಿ 11ನೇ ಬಾರಿ ಹರಾಜು ಪ್ರಕ್ರಿಯೆ ನಡೆಸಿದರೂ ಅತ್ತ ಒಬ್ಬ ವರ್ತಕರೂ ಸುಳಿಯಲಿಲ್ಲ. ನಗರಸಭೆಯವರು ದಿನವಿಡೀ ಕಾಯ್ದು ಕುಳಿತರೂ ಒಂದೇ ಒಂದು ಮಳಿಗೆ ಹರಾಜಾಗಲಿಲ್ಲ.

‘ನಗರದಲ್ಲಿ ಮಿತಿ ಮೀರಿ ಬೆಳೆಯುತ್ತಿರುವ ರಸ್ತೆ ಬದಿ ವ್ಯಾಪಾರವೇ ನಗರಸಭೆಯ ಬಾಡಿಗೆ ಮಳಿಗೆಗಳಿಗೆ ಕಂಟಕವಾಗುತ್ತಿದೆ. ಇದನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಮಳಿಗೆಗಳಲ್ಲಿಯೇ ವ್ಯಾಪಾರ ಮಾಡಬೇಕು ಎನ್ನುವಂತಹ ಅನಿವಾರ್ಯತೆ ಸೃಷ್ಟಿಸುವವರೆಗೂ ನಗರಸಭೆ ಮಳಿಗೆಗಳಿಗೆ ಬೇಡಿಕೆ ಬರುವುದಿಲ್ಲ’ ಎನ್ನುವುದು ನಗರದ ಅನುಭವಸ್ಥ ವರ್ತಕರ ಅಭಿಪ್ರಾಯ.

ಬೀದಿ ವ್ಯಾಪಾರಕ್ಕೆ ಬೀಳುತ್ತಾ ತಡೆ?
ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರು ಬೀದಿ ವ್ಯಾಪಾರಕ್ಕೆ ಕಡಿವಾಣ ಹಾಕಿ, ವರ್ತಕರನ್ನು ನಗರಸಭೆ ಮಳಿಗೆಗಳತ್ತ ಸೆಳೆಯುವ ಅನಿವಾರ್ಯತೆ ಉಂಟು ಮಾಡಲು ಉದ್ದೇಶಿಸಿದ್ದಾರೆ. ಈ ವಿಚಾರವನ್ನು ದೂರದೃಷ್ಟಿಯಲ್ಲಿ ಇಟ್ಟುಕೊಂಡೇ ಅವರು ಮಾರ್ಚ್‌ 16ರಂದು ನಡೆದ ಸಾಮಾನ್ಯ ಸಭೆಯಲ್ಲಿ ಆರ್ಥಿಕ ವರ್ಷದಲ್ಲಿ ನಗರದ ಮಾರುಕಟ್ಟೆಯಲ್ಲಿ ರಸ್ತೆ ಮತ್ತು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಂದ ನೆಲ ಸುಂಕ ಸಂಗ್ರಹಿಸುವುದನ್ನು ಕೈಬಿಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಖಾಲಿ ಬಿದ್ದಿರುವ ಮಳಿಗೆಗಳನ್ನು ಭರ್ತಿ ಮಾಡುವ ಯೋಜನೆಯ ಮೊದಲ ಹಂತವಾಗಿ ನಗರಸಭೆಯು ಇತ್ತೀಚೆಗೆ ನಗರದಾದ್ಯಂತ ಇರುವ ಕೋಳಿ, ಮಾಂಸ ಮತ್ತು ಮೀನು ಮಾರಾಟ ಮಳಿಗೆಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ, ಸಂತೆ ಮಾರುಕಟ್ಟೆಯಲ್ಲಿರುವ ಮಾಂಸದ ಮಾರುಕಟ್ಟೆ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳುವಂತೆ ತಿಳಿಸಿದೆ.

ಬೆಳೆಯುತ್ತಿರುವ ನಗರಕ್ಕೆ ತಕ್ಕಂತೆ ಮಾರುಕಟ್ಟೆಯನ್ನು ವಿಕೇಂದ್ರೀಕರಿಸಲು ನಿರ್ಧರಿಸಿರುವ ಆಡಳಿತಾಧಿಕಾರಿ, ನಗರದ ವಿವಿಧ ವಾರ್ಡ್‌ಗಳಲ್ಲಿ ಖಾಲಿ ಇರುವ ನಗರಸಭೆಯ ನಿವೇಶನಗಳಲ್ಲಿ ಶೆಡ್‌ಗಳನ್ನು ನಿರ್ಮಿಸಿ ವ್ಯಾಪಾರಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ ಕೊಡಲು ನಿರ್ಧರಿಸಿದ್ದಾರೆ.

‘ಫುಟ್‌ಪಾತ್‌ ವ್ಯಾಪಾರಕ್ಕೆ ಈ ಹಿಂದೆಯೇ ತಡೆಹಾಕಬೇಕಿತ್ತು. ಆದರೆ ಇಲ್ಲಿ ಆ ಕೆಲಸ ಮಾಡಿಲ್ಲ. ಬೀದಿ ವ್ಯಾಪಾರಿಗಳಿಂದ ನೆಲ ಸುಂಕ ಪಡೆದರೆ ನಮಗೆ ಅವರನ್ನು ಸ್ಥಳಾಂತರಿಸುವ ನೈತಿಕ ಹಕ್ಕಿರುವುದಿಲ್ಲ ಎನ್ನುವ ಉದ್ದೇಶದಿಂದ ಈ ವರ್ಷದಿಂದ ನೆಲ ಸುಂಕ ವಸೂಲಿ ಮಾಡಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಮಾನವೀಯತೆ ದೃಷ್ಟಿಯಿಂದ ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ವಿವಿಧ ವಾರ್ಡ್‌ಗಳಲ್ಲಿ ಶೆಡ್‌ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿರುವೆ’ ಎಂದು ಆಡಳಿತ ಅಧಿಕಾರಿ ದೀಪ್ತಿ ಕಾನಡೆ ತಿಳಿಸಿದರು.

‘ನೆಲ ಸುಂಕ ಕೈಬಿಟ್ಟಿರುವುದರಿಂದ ವ್ಯಾಪಾರಿಗಳು ಬೀದಿಯಲ್ಲೇ ವ್ಯಾಪಾರ ಮಾಡುತ್ತೇವೆ ಎಂದು ಹೇಳಲಾಗದು. ಪಾದಚಾರಿ ಮಾರ್ಗಗಳಲ್ಲಿ ಯಾವತ್ತಿಗೂ ಪಾದಚಾರಿಗಳಿಗೆ ಆದ್ಯತೆ. ಹೀಗಾಗಿ ಯಾವುದೇ ಕಾರಣಕ್ಕೂ ಬೀದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ನಗರದಾದ್ಯಂತ ಇರುವ ಮಾಂಸದ ಮಳಿಗೆಗಳನ್ನು ಶೀಘ್ರದಲ್ಲಿಯೇ ಮಾರುಕಟ್ಟೆ ಸಂಕೀರ್ಣಕ್ಕೆ ಸ್ಥಳಾಂತರಿಸಲು ಕ್ರಮತೆಗೆದುಕೊಳ್ಳುತ್ತೇವೆ. ಬಳಿಕ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುತ್ತೇವೆ’ ಎಂದು ಹೇಳಿದರು.

**

ತಿಂಗಳಿಗೆ ₹2 ಲಕ್ಷ ನಷ್ಟದ ಹೊರೆ
ಸಂತೆ ಮೈದಾನ ಮತ್ತು ಭುವನೇಶ್ವರ ವೃತ್ತದ ಮಾರುಕಟ್ಟೆ ಸಂಕೀರ್ಣಗಳಲ್ಲಿರುವ ಮಳಿಗೆಗಳತ್ತ ನಗರದ ವರ್ತಕರು ಆಸಕ್ತಿ ತೋರದ ಕಾರಣ 5 ವರ್ಷಗಳಲ್ಲಿ ಎರಡು ಸಂಕೀರ್ಣಗಳಿಂದ ನಗರಸಭೆಗೆ ಬಾಡಿಗೆ ರೂಪದಲ್ಲಿ ಬರಬೇಕಿದ್ದ ₹ 1.50 ಕೋಟಿಗೂ ಅಧಿಕ ಆದಾಯ ಖೋತಾ ಆಗಿದೆ. ಸದ್ಯ ದೂಳು ಹಿಡಿಯುತ್ತಿರುವ 69 ಮಳಿಗೆಗಳಿಂದ ನಗರಸಭೆಗೆ ಪ್ರತಿ ತಿಂಗಳು ₹ 2 ಲಕ್ಷ ಆದಾಯ ನಷ್ಟವಾಗುತ್ತಿದೆ.

**

ಮೊದಲ ಹಂತದಲ್ಲಿ ಮಾಂಸದ ಮಳಿಗೆ ಸ್ಥಳಾಂತರಿಸುತ್ತೇವೆ. ಎರಡನೇ ಹಂತದಲ್ಲಿ ಬೀದಿ ವ್ಯಾಪಾರ ನಿರ್ಬಂಧಿಸಿ, ಆ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ.
-ದೀಪ್ತಿ ಕಾನಡೆ, ನಗರಸಭೆ ಆಡಳಿತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT