ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ನೀರಾವರಿ ಯೋಜನೆಗೆ ಆಗ್ರಹ

Last Updated 17 ಮೇ 2017, 5:26 IST
ಅಕ್ಷರ ಗಾತ್ರ

ಚಿಂತಾಮಣಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ದೂಷಿಸಿ ಕೊಳ್ಳುವುದನ್ನು ನಿಲ್ಲಿಸಿ ರೈತರ ಸಾಲ ಮನ್ನಾ ಮಾಡಬೇಕು. ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ  ನೀರಾವರಿ ಯೋಜನೆ ರೂಪಿಸಬೇಕು’ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಬಿ.ವಿ. ರಾಘವನ್‌ ಒತ್ತಾಯಿಸಿದರು.

ನಗರದ ಅಜಾದ್‌ ಚೌಕದಲ್ಲಿ ಮಂಗಳವಾರ ಸಿಪಿಎಂ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

‘ರಾಜ್ಯದ ಎಲ್ಲೆಡೆ ಭೀಕರ ಬರಗಾಲ ಆವರಿಸಿದೆ. ರೈತರು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ಕೃಷಿಗಾಗಿ ₹ 45 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಬೆಳೆಗಳು ಸಂಪೂರ್ಣ ನಾಶವಾಗಿದ್ದು, ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗೆ ಸ್ಪಂದಿಸುವ ಕನಿಷ್ಠ ಆಸಕ್ತಿಯನ್ನೂ ಸರ್ಕಾರಗಳು ತೋರುತ್ತಿಲ್ಲ. ಆದರೆ ಬಂಡವಾಳಶಾಹಿಗಳಿಗೆ ₹ 1.84 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದೇಟು ಹಾಕುತ್ತಿರುವುದು ವಿಷಾದದ ಸಂಗತಿ’ ಎಂದು ಆರೋಪಿಸಿದರು.

‘ಎಲ್ಲ ಯೋಜನೆಗಳನ್ನೂ ಬೆಂಗಳೂರಿಗೆ ಸೀಮಿತ ಗೊಳಿಸಲಾಗುತ್ತಿದೆ. ಬಯಲು ಸೀಮೆಯ ಜಿಲ್ಲೆಗಳಿಗೆ ಬೆಂಗಳೂರಿನ ಕೊಳಚೆ ನೀರು ಕುಡಿಸುವ ಯೋಜನೆ ಸಿದ್ಧಪಡಿಸಲು ಸರ್ಕಾರ ಮುಂದಾಗಿದೆ. ಕೊಳಚೆ ನೀರನ್ನು ಶುದ್ಧೀಕರಿಸಿಕೊಂಡು ಬೆಂಗಳೂರಿಗೆ ನೀಡಲಿ, ಈ ಪ್ರಾಂತ್ಯಗಳಿಗೆ ಹೊಸ ಯೋಜನೆ ಸಿದ್ಧಪಡಿಸಿ ಶುದ್ಧ ನೀರು ಕೊಡಲಿ’ ಎಂದು ಒತ್ತಾಯಿಸಿದರು.

ದಲಿತ ಮುಖಂಡ ಎನ್‌.ವೆಂಕಟೇಶ್‌ ಮಾತನಾಡಿ, ‘ರೈತರು ಮತ್ತು ದಲಿತರ ಎಲ್ಲ ಸಮಸ್ಯೆಗಳಿಗೆ ಆಡಳಿತ ನಡೆಸಿರುವ ಸರ್ಕಾರಗಳೇ ಕಾರಣವಾಗಿವೆ. ಸುಮಾರು 70 ವರ್ಷಗಳಿಂದ ಆಡಳಿತ ನಡೆಸಿದರೂ ರೈತರ, ಶೋಷಿತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಾಗೂ ಆರ್ಥಿಕ ಭದ್ರತೆಯನ್ನು ನೀಡುವಲ್ಲಿ ವಿಫಲವಾಗಿವೆ’ ಎಂದು ಆರೋಪಿಸಿದರು.

ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಮಾತನಾಡಿ, ‘ರೈತರ ಸಾಲ ಮನ್ನಾ ಮಾಡಬೇಕು, ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದು ಹೋರಾಟದ ಪ್ರಮುಖ ಬೇಡಿಕೆಯಾಗಿದೆ. ಅನೇಕ ಬಾರಿ ಹೋರಾಟ ಮಾಡಿದ್ದರೂ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಸ್ಪಂದಿಸಿಲ್ಲ’ ಎಂದು ಟೀಕಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಗೋಪಿನಾಥ್‌ ಮಾತನಾಡಿದರು.

ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜೆ.ಸಿ.ಬಯ್ಯಾರೆಡ್ಡಿ, ಡಾ.ಅನಿಲ್‌ಕುಮಾರ್‌ ಮಾತನಾಡಿದರು. ಮುಖಂಡರಾದ ಸಿ.ಗೋಪಿನಾಥ್‌, ಸಿದ್ದಲಿಂಗಪ್ಪ, ಎಸ್‌.ಲಕ್ಷ್ಮಯ್ಯ, ಲಕ್ಷ್ಮಣರೆಡ್ಡಿ, ಮುನಿವೆಂಕಟಪ್ಪ ಇದ್ದರು.

**

ತೀವ್ರ ಬರಗಾಲದಿಂದ ರಾಜ್ಯದ ಜನರು ತತ್ತರಿಸಿದ್ದಾರೆ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಆದರೆ ಸರ್ಕಾರದ ಅವರ ಸಮಸ್ಯೆ ಪರಿಹಾರ ನೀಡುವ ಆಸಕ್ತಿಯೇ ಇಲ್ಲ.
-ಬಿ.ವಿ. ರಾಘವನ್‌
ಸಿಪಿಎಂ ಪಾಲಿಟ್‌ ಬ್ಯೂರೊ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT