ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಇಂಗಿಸಿ, ಬರ ಹೋಗಲಾಡಿಸಿ

Last Updated 17 ಮೇ 2017, 5:36 IST
ಅಕ್ಷರ ಗಾತ್ರ

ಚಿತ್ರದುರ್ಗ: ಬರದ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸಬೇಕಾದರೆ, ಭೂಮಿ ಮೇಲೆ ಬಿದ್ದ ಪ್ರತಿ ಹನಿ ನೀರನ್ನೂ ಇಂಗಿಸಬೇಕು. ಇದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತೇಶ್ ಪಾಟೀಲ್ ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಆಯೋಜಿಸಿದ್ದ ‘ಜಲವೇ ಜೀವನ–ನಬಾರ್ಡ್‌ ಕೃಷಿ ಅಭಿಯಾನ– ಜಿಲ್ಲಾ ಮಟ್ಟದ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

ಜಮೀನಿನಲ್ಲಿ ಜಲಸಂಗ್ರಹಾ ಗಾರಗಳು ಇದ್ದರೆ, ಬರಗಾಲದಲ್ಲೂ ಬೆಳೆ ನಿರ್ವಹಣೆ ಮಾಡಬಹುದು. ಸಾಮೂಹಿಕವಾಗಿ ರೈತರು ಜಮೀನಿನಲ್ಲಿ ಮಳೆ ನೀರು ಇಂಗಿಸುವುದರಿಂದ ಅಂತರ್ಜಲ ಹೆಚ್ಚುತ್ತದೆ. ಕೊಳವೆಬಾವಿಗಳಲ್ಲಿ ಜಲ ಮರುಪೂರಣವಾಗುತ್ತದೆ ಎಂದರು.

ಈ ಹಿನ್ನೆಲೆಯಲ್ಲಿ ಸರ್ಕಾರ ಜಲಸಂರಕ್ಷಣಾ ಯೋಜನೆಗಳಾದ ಚೆಕ್‌ಡ್ಯಾಂ, ಕೃಷಿ ಹೊಂಡ, ಟ್ರಂಚ್ ಕಮ್ ಬಂಡ್ ನಿರ್ಮಿಸಿಕೊಳ್ಳಲು ಸಾಕಷ್ಟು ಅನುದಾನ ನೀಡುತ್ತಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ₹ 22 ಕೋಟಿ ಮೀಸಲಿಡಲಾಗುತ್ತಿದೆ. ಇದಕ್ಕಾಗಿ ಈಗ ನಿಯೋಜಿಸಿರುವ ಜಲಧೂತರು ಜಿಲ್ಲೆಯಾದ್ಯಂತ ಸುತ್ತಾಡಿ ಜನರಲ್ಲಿ ಜಲ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಪ್ರತಿ ಗ್ರಾಮದಲ್ಲಿ ಗ್ರಾಮಸ್ಥರು ದೇವಸ್ಥಾನ, ಸಮುದಾಯ ಭವನಗಳನ್ನು ಕಟ್ಟಲು ಅನುದಾನ ಕೇಳುತ್ತಾರೆ. ಅದರ ಬದಲು ಚೆಕ್‌ ಡ್ಯಾಂ ನಿರ್ಮಿಸಿಕೊಂಡರೆ  ಮುಂದೆ ಎದುರಾಗಬಹುದಾದ ಸಂಕಷ್ಟ  ಎದುರಿಸಬಹುದು. ಸರ್ಕಾರ, ರೈತರಿಗೆ ಹೊಲಗಳಲ್ಲಿ ಬದು, ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಯಾವುದೇ ಮಿತಿ ಹಾಕಿಲ್ಲ. ಹಾಗಾಗಿ, ಜಲ ಸಂರಕ್ಷಣಾ ರಚನೆಗಳನ್ನು ಅಳವಡಿಸಿಕೊಳ್ಳಲು ಜಿಲ್ಲಾ ಪಂಚಾಯ್ತಿಯಿಂದ ಎಷ್ಟು ಹಣವನ್ನು ಕೊಡುತ್ತೇವೆ’ ಎಂದು ಭರವಸೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ‘ಮಣ್ಣು ಮತ್ತು ನೀರು ನಮ್ಮ ಜೀವನಾಡಿಗಳು. ಜೀವಿಸಲು ನೀರು ಮಣ್ಣು ಅವಶ್ಯಕ.  ಹಿಂದೆ ನೀರಿಗಾಗಿ ಯುದ್ಧ ನಡೆದರೂ ಅಚ್ಚರಿಪಡಬೇಕಿಲ್ಲ ಎನ್ನುತ್ತಿದ್ದೆವು. ಈಗ ನೀರಿಗಾಗಿ ಮನೆ, ಬೀದಿ, ಊರುಗಳಲ್ಲಿ ಜಗಳವಾಗುತ್ತಿದೆ. ಹನಿ ನೀರನ್ನು ಹಿಡಿದಿಡುವ ಕೆಲಸ ಪ್ರತಿಯೊಬ್ಬರ ಜವಾಬ್ದಾರಿ ಆದಾಗ ಮಾತ್ರ, ಬರಗಾಲವನ್ನು ಯಶಸ್ವಿಯಾಗಿ ನಿಭಾಯಿಸಬಹುದು’ ಎಂದರು.

ನಬಾರ್ಡ್‌ ಡಿಡಿಎಂ ಮಾಲಿನಿ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಿಲ್ಲೆಯಲ್ಲಿ ಜಲಜಾಗೃತಿ ಮೂಡಿಸು ವುದಕ್ಕಾಗಿ 875 ಗ್ರಾಮಗಳನ್ನು ಗುರುತಿಸಿದ್ದೇವೆ. 70 ಜಲಧೂತರನ್ನು ನಿಯೋಜಿಸಿದ್ದೇವೆ. ಇವರು ಪ್ರತಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಗೆ ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಾರೆ’ ಎಂದು ವಿವರಿಸಿದರು.

ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಳವಳ್ಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಷರೀಫ್, ಸಂಪನ್ಮೂಲ ವ್ಯಕ್ತಿಗಳಾದ  ಮಂಜುನಾಥ್, ಎಸ್.ಆರ್.ಸಂತೋಷ್ ವೇದಿಕೆಯಲ್ಲಿ ಇದ್ದರು. ಸ್ವೀಚ್ ಸಂಸ್ಥೆ ಕಾರ್ಯದರ್ಶಿ ಎಚ್.ಶೇಷಣ್ಣ, ತರಬೇತುದಾರ ಬೈಲಪ್ಪ ಜಲಧೂತರಿಗೆ ಜಲಜಾಗೃತಿ ಮೂಡಿಸುವ ವಿಧಾನಗಳ ತರಬೇತಿ ನೀಡಿದರು.

*

ಕೆರೆ ಒತ್ತುವರಿ ಮಾಡದಂತೆ ಎಚ್ಚರಿಸಿ. ತೂಬು ದುರಸ್ತಿ ಮಾಡಲು ಹೇಳಿ. ಒಬ್ಬರು ಸಾವಿರ ರೈತರಿಗೆ ಜಾಗೃತಿ ಮೂಡಿಸಿದರೆ ಲಕ್ಷ ಜನಕ್ಕೆ ಅನುಕೂಲವಾಗುತ್ತದೆ.
ನಿತೇಶ್ ಪಾಟೀಲ್, ಸಿಇಒ, ಜಿಲ್ಲಾ ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT