ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ಮೇಳಕ್ಕೆ ನಿರುತ್ಸಾಹದ ಪ್ರತಿಕ್ರಿಯೆ

Last Updated 17 ಮೇ 2017, 5:42 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದ ಆವರಣಕ್ಕೆ ಕಾಲಿಟ್ಟರೆ ಘಮ್ಮೆ ನ್ನುವ ಪರಿಮಳ ಮೂಗನ್ನು ಆವರಿಸಿ ಕೊಳ್ಳುತ್ತದೆ. ಆ ಪರಿಮಳದಲ್ಲಿ ವಿಶಿಷ್ಟ ಸಿಹಿಯ ಮೋಹಕತೆಯೂ ಇದೆ. ಬಗೆ ಬಗೆ ಬಣ್ಣ, ಗಾತ್ರ, ತಳಿಯ ಮಾವಿನ ಹಣ್ಣುಗಳು ಬಾಯಲ್ಲಿ ನೀರೂರಿಸುತ್ತವೆ. ಮಾವಿನ ಹಣ್ಣಿನಲ್ಲಿ ಇಷ್ಟೊಂದು ಬಗೆ ಗಳಿವೆಯೇ ಎಂದು ಅಚ್ಚರಿ ಪಡುವಷ್ಟು ವೈವಿಧ್ಯ ತಳಿಯ ಹಣ್ಣುಗಳ ರಾಶಿ ಕಣ್ಮನ ಸೆಳೆಯುತ್ತದೆ.

ಆದರೆ, ಮಾವಿನ ಮೇಳದ ಎರಡನೆಯ ದಿನವಾದ ಮಂಗಳವಾರ ಜನರ ನಿರುತ್ಸಾಹ ನೋಡಿ ವ್ಯಾಪಾರಿಗಳು ಕಂಗೆಟ್ಟಿದ್ದಾರೆ. ತಮ್ಮ ತೋಟಗಳಿಂದ ತಂದು ಸ್ವತಃ ಮಾರಾಟ ಮಾಡುತ್ತಿರುವ ರೈತರು, ವಿವಿಧೆಡೆ ನಡೆದ ಮಾವು ಮೇಳ ಗಳಂತೆ ಇಲ್ಲಿಯೂ ಜನ ಮುಗಿಬೀಳು ತ್ತಾರೆ ಎಂಬ ನಿರೀಕ್ಷೆ ಹೊಂದಿದ್ದರು. ಕೊಳ್ಳುವವರಿಲ್ಲದೆ ಮಳಿಗೆಗಳು ಭಣಗುಡುತ್ತಿರುವುದು ಕಂಡುಬಂತು. 

ಜಿಲ್ಲಾಡಳಿತ ಭವನದಲ್ಲಿ ಕೆಲಸ ಕ್ಕೆಂದು ಬಂದವರು ಒಮ್ಮೆ ನೋಡಿ ಬರೋಣ ಎಂದು ಮೇಳದಲ್ಲಿ ಸುತ್ತು ಹಾಕಲು ಬರುತ್ತಿದ್ದರು. ಮಾವಿನ ಹಣ್ಣಿನ ಆಸೆಯಿಂದ ಮಳಿಗೆ ಬಳಿ ಬಂದು ವಿಚಾರಿಸಿದವರು ಬೆಲೆ ಜಾಸ್ತಿ ಆಯ್ತು ಎಂದು ಬರಿಗೈಲಿ ಮರಳುತ್ತಿದ್ದರು. ಹೀಗಾಗಿ ಗ್ರಾಹಕರನ್ನು ನೋಡಿದಾಗಲೇ ವ್ಯಾಪಾರಿಗಳು ‘₹70 ಕೆ.ಜಿ. ಹಣ್ಣು, ₹60ಕ್ಕೆ ಕೊಡುತ್ತೇವೆ ಬನ್ನಿ’ ಎಂದು ತಾವೇ ಚೌಕಾಸಿ ಮಾಡುತ್ತಿದ್ದರು. ಅಲ್ಲಿಯೇ ಹಣ್ಣು ಕತ್ತರಿಸಿ ಕೊಟ್ಟು, ‘ತಗೊಳ್ಳಿ, ರುಚಿ ನೋಡಿ’ ಎಂದು ಆಹ್ವಾನಿಸುತ್ತಿದ್ದರು.

‘ಸೋಮವಾರ 35 ಕೆ.ಜಿ. ರಸಪುರಿ ಹಣ್ಣು ಮಾರಾಟವಾಗಿತ್ತು. ಬಾದಾಮಿ ಹಣ್ಣಿಗೂ ತುಸು ಬೇಡಿಕೆಯಿದೆ. ಆದರೆ ಬೆಳಗ್ಗಿನಿಂದ ವ್ಯಾಪಾರವೇ ಇಲ್ಲ. ಹೊಸ ತಳಿಯ ಮಾವುಗಳನ್ನು ಜನ ನೋಡು ತ್ತಲೂ ಇಲ್ಲ’ ಎನ್ನುತ್ತಾರೆ ಗುಂಡ್ಲು ಪೇಟೆಯ ಮಾವು ಬೆಳೆಗಾರ ಬಣಕಾರ ನಾಯಕ.

‘ಇಲ್ಲಿ ಮೊದಲ ಬಾರಿಗೆ ಮಾವು ಮೇಳ ನಡೆಯುತ್ತಿದೆ. ಹೀಗಾಗಿ ಜನರಿಗೆ ಈ ಪರಿಕಲ್ಪನೆ ಹೊಸತು. ಇಷ್ಟೊಂದು ತರಹೇವಾರಿ ಮಾವುಗಳನ್ನು ಇಲ್ಲಿ ಹೆಚ್ಚಿನವರು ನೋಡಿಲ್ಲ. ಹೊರಗೆ ಮಾರುಕಟ್ಟೆಯಲ್ಲಿ ₹20, ₹30ಕ್ಕೆ ಹಣ್ಣು ಸಿಗುತ್ತದೆ. ಇಷ್ಟು ದುಬಾರಿ ಹಣ ತೆರಬೇಕೆ ಎನ್ನುವುದು ಜನರ ಲೆಕ್ಕಾಚಾರ. ಆದರೆ, ಅವು ರಾಸಾಯನಿಕದಿಂದ ಮಾಗಿದ ಹಣ್ಣುಗಳು. ಇವು ಸಂಪೂರ್ಣ ಸಾವಯವ. ಆರೋಗ್ಯಕ್ಕೆ ಒಳ್ಳೆಯದು ಎಂಬುದು ಅವರಿಗೆ ತಿಳಿದಿಲ್ಲ’ ಎನ್ನುತ್ತಾರೆ ಚನ್ನಪಟ್ಟಣದ ದಶವಾರ ಗ್ರಾಮದ ರೈತ ರಾಜೇಶ್‌.

‘ಬಾದಾಮಿ ಮಾವಿಗೆ ಬೆಂಗಳೂರಿ ನಲ್ಲಿ ಕೆ.ಜಿ. ₹100 ಬೆಲೆ ಇದೆ. ಇಲ್ಲಿ ₹60ಕ್ಕೆ ಕೊಡುತ್ತೇವೆ ಎಂದರೂ ದುಬಾರಿ ಎನ್ನುತ್ತಾರೆ. ಇಲ್ಲಿಯವರು ಸಿಂಧೂರ ತಳಿಯನ್ನು ಇಷ್ಟಪಡುತ್ತಿದ್ದಾರೆ. ಅದನ್ನು ಜ್ಯೂಸ್‌ ತಯಾರಿಸಲು ಹೆಚ್ಚು ಬಯಸು ತ್ತಾರೆ. 10 ಟನ್‌ ಸಿಂಧೂರದಿಂದ ಸಿಗುವ ಆದಾಯ 1 ಟನ್‌ ಬಾದಾಮಿ ತಳಿಯಲ್ಲಿ ಸಿಗುತ್ತದೆ. ಮುಂದಿನ ವರ್ಷದ ಮೇಳಕ್ಕೆ ಸಿಂಧೂರವನ್ನೇ ಹೆಚ್ಚು ತರುತ್ತೇನೆ’ ಎಂದು ಅವರು ಹೇಳಿದರು. 

ಸಿಂಧೂರ ತಳಿಗೆ ಕಸಿ ಮಾಡಿ ಕೇಸರ್‌, ಬಾದಾಮಿ ಮುಂತಾದ 16 ಜಾತಿಯ ಮಾವುಗಳನ್ನು ಬೆಳೆದಿರುವು ದಾಗಿ ಅವರು ತಿಳಿಸಿದರು.

ಸಚಿವ ಯು.ಟಿ.ಖಾದರ್‌ 5 ಪೆಟ್ಟಿಗೆ, ಶಾಸಕ ರಾದ ಸಿ. ಪುಟ್ಟರಂಗಶೆಟ್ಟಿ ಮತ್ತು ನರೇಂದ್ರ ತಲಾ 3 ಪೆಟ್ಟಿಗೆ ಹಣ್ಣು ಖರೀದಿ ಸಿದ್ದನ್ನು ಖುಷಿಯಿಂದ ಹೇಳಿಕೊಂಡರು.

‘ರಾಸಾಯನಿಕಗಳಿಂದ ಮಾಗಿಸಿದ ಹಣ್ಣು ಎರಡು ಮೂರು ದಿನಕ್ಕೇ ಹಾಳಾಗುತ್ತವೆ. ಆದರೆ, ನೈಸರ್ಗಿಕ ಪದ್ಧತಿ ಅನುಸರಿಸಿದ ಮಾವು ಕೊಯ್ದ 15 ದಿನದವರೆಗೂ ಹಾಳಾಗುವುದಿಲ್ಲ. ಇದು ಮಾವಿನ ಋತು. ಈ ವೇಳೆ ಎಷ್ಟು ಹಣ್ಣು ತಿಂದರೂ ಆರೋಗ್ಯದ ಮೇಲೆ ಯಾವ ಅಡ್ಡ ಪರಿಣಾಮವೂ ಆಗುವುದಿಲ್ಲ. ಮೂತ್ರಪಿಂಡದ ಕಲ್ಲು ಮುಂತಾದ ಸಮಸ್ಯೆಗಳಿಗೆ ಮಾವು ಮದ್ದು’ ಎಂದು ಮಾಗಡಿಯ ರೈತ ಸಿದ್ಧರಾಜು ತಿಳಿಸಿದರು.

**

ಮಾರುಕಟ್ಟೆಯಲ್ಲೂ ಹಣ್ಣು ಸಿಗು ತ್ತವೆ. ಆದರೆ ಈ ವಾತಾವರಣ ನಮಗೆ ಹೊಸತು. ಮಾವು  ವರ್ಷಕ್ಕೆ ಒಮ್ಮೆ ಮಾತ್ರ ಸಿಗೋದರಿಂದ ತಿನ್ನೋಕೆ ಹಿಂದೆ ಮುಂದೆ ನೋಡೊಲ್ಲ.
–ಗೀತಾ, ಗ್ರಾಹಕಿ

**

ರಾಮನಗರ, ಬೆಂಗಳೂರು ಇತರೆಡೆ ಮೇಳಗಳಲ್ಲಿ ಚೆನ್ನಾಗಿ ವ್ಯಾಪಾರವಾಗು ತ್ತದೆ. ಇಲ್ಲಿ ಜನರು ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ದಿನಕ್ಕೆ ಕನಿಷ್ಠ ₹10 ಸಾವಿರವಾದರೂ ವ್ಯಾಪಾರವಾಗಬೇಕು.
–ಸಿದ್ಧರಾಜು, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT