ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ ವಿತರಣೆಯಲ್ಲಿ ನಿಧಾನಗತಿ: ಆಕ್ರೋಶ

Last Updated 17 ಮೇ 2017, 5:44 IST
ಅಕ್ಷರ ಗಾತ್ರ

ನಾಗಮಂಗಲ: ತಾಲ್ಲೂಕು ಆಡಳಿತ ರೈತರಿಗೆ ಬರ ಪರಿಹಾರ ಧನ ವಿತರಿಸುವಲ್ಲಿ ನಿಧಾನಗತಿ ಅನುಸರಿಸುತ್ತಿದೆ ಎಂದು ತಾಲ್ಲೂಕು ರೈತ ಸಂಘದ ಜಿಲ್ಲಾ ಪ್ರತಿನಿಧಿ ಹರಳಕೆರೆ ಗೋಪಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ನ್ಯಾಯಾಲಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ರೈತರ ಸಮಸ್ಯೆಗಳ ಕುರಿತು ಸೋಮವಾರ ಕರೆದಿದ್ದ ರೈತ ಮುಖಂಡರ ಸಭೆಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಪರಿಹಾರಧನ ವಿತರಣೆಯಲ್ಲೂ ತಾರತಮ್ಯ ಧೋರಣೆ ತೋರಲಾಗುತ್ತಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ವಿತರಿಸಿಲ್ಲ’ ಎಂದು ದೂರಿದರು.
ಶಾಸಕರು ಬರಿ ಆಶ್ವಾಸನೆ ಕೊಡುವುದನ್ನು ಬಿಟ್ಟು ಸಮರೋಪಾದಿಯಲ್ಲಿ ಅರ್ಜಿಗಳ ಪರಿಶೀಲನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಹೆರಗನಹಳ್ಳಿ ಕಾಂತಣ್ಣ ಮಾತನಾಡಿ, ‘ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಆರ್‌ಟಿಸಿ ವಿತರಣೆಯಾಗುತ್ತಿಲ್ಲ. ವಿದ್ಯುತ್ ವ್ಯತ್ಯಯ ಹಾಗೂ ಅಂತರ್ಜಾಲ ಸಂಪರ್ಕ ಕಡಿತದಿಂದಾಗಿ ತಾಲ್ಲೂಕು ಕೇಂದ್ರದಲ್ಲಿ ಆರ್‌ಟಿಸಿ ವಿತರಣೆಗೆ ತೊಂದರೆಯಾಗುತ್ತಿದೆ. ಮಿನಿವಿಧಾನಸೌಧದ ಆವರಣದಲ್ಲಿ ಮತ್ತೊಂದು ಆರ್‌ಟಿಸಿ ಕೇಂದ್ರವನ್ನು ತೆರೆಯಬೇಕು' ಎಂದು ಒತ್ತಾಯಿಸಿದರು.

ಮುಖಂಡ ತಮ್ಮಣ್ಣಗೌಡ ಮಾತನಾಡಿ, ‘ಅಕ್ರಮ–ಸಕ್ರಮಕ್ಕೆ ಹಣ ಕಟ್ಟಿರುವ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಹೊಸದಾಗಿ ಹಣ ಕಟ್ಟಲು ತಯಾರಿರುವ ರೈತರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಬೇಡಿಕೆಯಿಟ್ಟರು. ‘ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ತಂತಿಗಳು ನೆಲ ಮಟ್ಟದಲ್ಲಿ ಜೋತು ಬಿದ್ದಿವೆ’ ಎಂದು ಅವರು ದೂರಿದರು.

ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ದಡಿಗ ಸತೀಶ ಮಾತನಾಡಿ, ‘ಕೃಷಿ ಇಲಾಖೆ ಮುಂಗಾರು ಹಂಗಾಮಿಗೆ ಅವಶ್ಯವಿರುವ ಬಿತ್ತನೆ, ಸಿರಿಧಾನ್ಯಗಳ ಬೀಜಗಳನ್ನು, ಇಂಡಾಫ್ –8 ರಾಗಿ ತಳಿಯ ಬಿತ್ತನೆ ಬೀಜವನ್ನು ಸಂಗ್ರಹಿಸಿ ವಿತರಿಸಬೇಕು. ತೆಂಗು ವಿಮೆ ಮಾಡಿಸಿರುವ ರೈತರಿಗೆ ವಿಮೆ ಹಣವನ್ನು ತೋಟಗಾರಿಕೆ ಇಲಾಖೆಯವರು ಕೂಡಲೇ ಬಿಡುಗಡೆ ಮಾಡಿಸಬೇಕು’ ಎಂದು ಕೋರಿದರು.

ಮುಖಂಡರಾದ ದೇವಿಹಳ್ಳಿ ತಾಯಮ್ಮ ಮಾತನಾಡಿ, ‘ಕೃಷಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಜಮೀನುಗಳಿಗೆ ಬದು ಹಾಕಲು ಹೆಚ್ಚು ಅವಕಾಶ, ಕೃಷಿ ಹೊಂಡಗಳನ್ನು  ತಮ್ಮ ಜಮೀನಿನಲ್ಲಿಯೇ ನಿರ್ಮಿಸುವವರಿಗೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿಗೌಡ, ಸರ್ಕಲ್ ಇನ್‌ಸ್ಪೆಕ್ಟರ್ ಹರೀಶಬಾಬು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚಿಕ್ಕಪುಟ್ಟೇಗೌಡ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶಾಂತಾ, ಸೆಸ್ಕ್‌ ಎಇಇ ಮರಿಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಧನಂಜಯ, ನೀರಾವರಿ, ರೇಷ್ಮೆ, ಸಮಾಜಕಲ್ಯಾಣ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು.

**

ಅಕ್ರಮ–ಸಕ್ರಮಕ್ಕೆ 14 ಸಾವಿರ ಅರ್ಜಿ

ನಾಗಮಂಗಲ: ತಹಶೀಲ್ದಾರ್ ಸಿ.ಶಿವಣ್ಣ ಮಾತನಾಡಿ, ‘ಅಕ್ರಮ–ಸಕ್ರಮಕ್ಕೆ 14 ಸಾವಿರ ಅರ್ಜಿಗಳು ಬಂದಿದ್ದು ಅದರಲ್ಲಿ 1,492 ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಶಾಸಕರ ಅಧ್ಯಕ್ಷತೆಯಲ್ಲಿ 6 ಸಭೆಗಳನ್ನು ನಡೆಸಲಾಗಿದ್ದು 2,000 ಅರ್ಜಿಗಳನ್ನು ಕೆಲವೇ ದಿನಗಳಲ್ಲಿ ಅಂತಿಮಗೊಳಿಸಲಾಗುವುದು. ಬರ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ರೈತರಿಗೆ ಕೆಲವೇ ದಿನಗಳಲ್ಲಿ ಪರಿಹಾರದ ಹಣ ಬಿಡುಗಡೆಯಾಗುತ್ತದೆ. ಅರ್ಜಿ ಸಲ್ಲಿಸಲು ಸಾಧ್ಯವಾಗದಿರುವವರಿಗೆ  ಮೇ 15 ರಿಂದ 25ರವರೆಗೆ ಮತ್ತೆ ಅವಕಾಶ ನೀಡಲಾಗಿದೆ’ ಎಂದರು. 

ಜಾನುವಾರುಗಳಿಗೆ ಮೇವು ವಿತರಿಸಲು ಆದ್ಯತೆ ನೀಡಲಾಗಿದ್ದು, ಮತ್ತೆ 50 ಟನ್ ಹುಲ್ಲನ್ನು ತರಲು ಜಿಲ್ಲಾಧಿಕಾರಿ ಅನುಮೋದನೆ ನೀಡಿದ್ದಾರೆ. ರೈತರು ತಮ್ಮ ಆಧಾರ್ ಕಾರ್ಡ್‌ ಸಂಖ್ಯೆಯೊಂದಿಗೆ ಅರ್ಜಿ ಸಲ್ಲಿಸಬೇಕು ಎಂದರು. ಪ್ರತಿ ಹಸುವಿಗೆ ಪ್ರತಿ ದಿನವೊಂದಕ್ಕೆ 5 ಕೆ.ಜಿ.ಯಂತೆ ಮೇವು ವಿತರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT