ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ಲಭ್ಯವಿಲ್ಲದೆ ಜನರ ಪರದಾಟ

Last Updated 17 ಮೇ 2017, 6:02 IST
ಅಕ್ಷರ ಗಾತ್ರ

ರಾಯಚೂರು: ಎರಡು ದಿನಗಳಿಂದ ಎಟಿಎಂ ಯಂತ್ರಗಳಲ್ಲಿ ನಗದು ದೊರೆಯದ ಕಾರಣ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರ ರಾತ್ರಿಯಿಂದಲೇ ಅನೇಕ ಎಟಿಎಂ ಕೇಂದ್ರಗಳನ್ನು ಮುಚ್ಚಲಾಗಿದೆ.

ಕೆಲವು ತೆರೆದುಕೊಂಡಿದ್ದರೂ ನಗದು ಸೇವೆ ಸ್ಥಗಿತವಾಗಿದೆ. ರಶೀದಿ ಮುದ್ರಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಬ್ಯಾಲೆನ್ಸ್‌ ಚೆಕ್‌ ಮಾಡಿಕೊಳ್ಳುವುದಕ್ಕೂ ಜನರು ಮುಗಿಬೀಳುತ್ತಿದ್ದಾರೆ. ಹಣ ಸಿಗಬಹುದು ಎನ್ನುವ ಆಸೆಯಿಂದ ಪ್ರತಿಯೊಬ್ಬರೂ ಡಿಬಿಟ್‌/ಕ್ರೆಡಿಟ್‌ ಕಾರ್ಡ್‌ ಉಜ್ಜಿಕೊಂಡು ನಿರಾಸೆಯಿಂದ ಮರಳುತ್ತಿದ್ದಾರೆ. ನಗದು ಯಾರಿಗೂ ದೊರೆಯುತ್ತಿಲ್ಲ.

ಬ್ಯಾಂಕ್‌ ಶಾಖೆಗಳಲ್ಲಿ ಸೋಮವಾರ ಹಣ ಪಡೆಯುವುದಕ್ಕೆ ಸಾಧ್ಯವಾಯಿತು. ಆದರೂ ಎಟಿಎಂ ಕಾರ್ಡ್‌ ಮೇಲೆ ಅವಲಂಬಿತರಾದವರು ಮತ್ತೆ ಪರದಾಡುವುದು ತಪ್ಪಲಿಲ್ಲ. ಮಂಗಳವಾರ ಕೂಡಾ ಹಣಕ್ಕಾಗಿ ಎಟಿಎಂನಿಂದ ಎಟಿಎಂಗೆ ಜನರು ತಿರುಗಾಡಿ ವಿಚಾರಿಸುತ್ತಿರುವುದು ಸಾಮಾನ್ಯವಾಗಿತ್ತು.

ಸ್ಟೇಷನ್‌ ರೋಡ್‌, ಮಾರ್ಕೆಟ್‌, ಚಂದ್ರಮೌಳೇಶ್ವರ ವೃತ್ತ ಹಾಗೂ ಗೋಶಾಲಾ ರಸ್ತೆಗಳಲ್ಲಿ ಹೆಚ್ಚು ಎಟಿಎಂ ಕೇಂದ್ರಗಳಿವೆ. ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದ ಕಂಪ್ಯೂಟರ್‌ ಪರದೆಗಳಲ್ಲಿ ‘ಸಾರಿ ನೋ ಕ್ಯಾಷ್‌’ ಎನ್ನುವ ಬರಹ ಬಿತ್ತರವಾಗಿತ್ತು. ಸ್ಟೇಟ್‌ ಬ್ಯಾಂಕ್‌ ಇಂಡಿಯಾ (ಎಸ್‌ಬಿಐ) ಶಾಖೆಯ ಎಟಿಎಂ ಕೇಂದ್ರಗಳಲ್ಲಿ ಕಾವಲುಗಾರರೇ ‘ನೋ ಕ್ಯಾಷ್’ ಎಂಬ ಫಲಕವನ್ನು  ಅಂಟಿಸಿದ್ದರು.

‘ಎಟಿಎಂ ಕಾಯುವುದು ನಮ್ಮ ಕೆಲಸ. ಬರುವವರಿಗೆಲ್ಲ ರೊಕ್ಕ ಬರುತ್ತಿಲ್ಲ ಎಂದು ತಿಳಿಸಿ, ಹೇಳಿ ಧ್ವನಿ ಬಿದ್ದು ಹೋಗಿದೆ. ರೊಕ್ಕ ಹಾಕುವ ಗಾಡಿಯೇ ಬರುತ್ತಿಲ್ಲ’ ಎಂದು ಎಟಿಎಂ ಕಾವಲುಗಾರ ಶಂಕರ ಅವರು ಅಳಲು ತೋಡಿಕೊಂಡರು.

ನಗದು ಪಡೆಯುವುದಕ್ಕೆ ಸಾಧ್ಯವಾಗದೆ ಅನೇಕ ಜನರ ಮುಖದಲ್ಲಿ ದುಗುಡ ಆವರಿಸಿತ್ತು. ಕೆಲವು ಎಟಿಎಂ ಎದುರು ಬ್ಯಾಂಕ್‌ ವ್ಯವಸ್ಥೆಯನ್ನು ಜನರು  ಶಪಿಸುತ್ತಾ ನಿಂತುಕೊಂಡಿದ್ದರು.

‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಳ್ಳೆಯದು ಮಾಡುತ್ತಾರೆ ಅಂದುಕೊಂಡು ಸುಮ್ಮನಿದ್ದು, ಈ ಪರಿಸ್ಥಿತಿ ಬಂದಿದೆ. ಬ್ಯಾಂಕ್‌ನವರು ಏನೇನ್‌ ರೂಲ್ಸ್‌ ಮಾಡ್ತಾರೆ ಅನ್ನೋದು ಗೊತ್ತಾಗುತ್ತಿಲ್ಲ. ದಿನಕ್ಕೊಂದು ನಿಯಮ ಬರುತ್ತಿದೆ. ಅದಕ್ಕೆ ಬ್ಯಾಂಕ್‌ಗೆ ಹಣ ಕಟ್ಟದೆ ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು ಅನ್ನಿಸುತ್ತಿದೆ’ ಎಂದು ಹಿರಿಯ ವಯಸ್ಸಿನ ಶ್ಯಾಮಸುಂದರ ಅವರು ಪಕ್ಕದಲ್ಲಿ ನಿಂತುಕೊಂಡಿದ್ದ ಅಪರಿಚಿತರೊಂದಿಗೆ ಆಕ್ರೋಶದಿಂದ ಹೇಳುತ್ತಿರುವುದು ಕೇಳಿಸಿತು.

ಆರ್‌ಬಿಐಗೆ ಪತ್ರ
‘ರಾಯಚೂರಿನಲ್ಲಿ ನಗದು ಲಭ್ಯತೆಯ ಸಮಸ್ಯೆ ಇದೆ. ಈ ಬಗ್ಗೆ ಬ್ಯಾಂಕುಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಿಳಿಸಲಾಗಿದೆ. ಬ್ಯಾಂಕುಗಳ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆರ್‌ಬಿಐ ಬೆಂಗಳೂರು ಪ್ರಾದೇಶಿಕ ನಿರ್ದೇಶಕರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಬರುವ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ದೊರೆಯಬಹುದು ಎನ್ನುವ ನಿರೀಕ್ಷೆ ಇದೆ’ ಎಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಎಸ್‌.ಮುರಳಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

*

ಎಟಿಎಂಗಳಿಗೆ ಅಲೆದಾಡಿ ಸಾಕಾಗಿ ಹೋಗಿದೆ. ಮೂರು ದಿನಗಳಿಂದ ಕಾದರೂ ಹಣ ಸಿಕ್ಕಿಲ್ಲ. ತುರ್ತು ಬೇಕಾದಾಗ ಹಣ ಸಿಗದಿದ್ದರೆ, ಎಟಿಎಂ ಕಾರ್ಡ್‌ ಇದ್ದೂ ಪ್ರಯೋಜನವಿಲ್ಲ 
ರವಿ
ದೂರವಾಣಿ ಇಲಾಖೆ  ಉದ್ಯೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT