ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ

Last Updated 17 ಮೇ 2017, 6:24 IST
ಅಕ್ಷರ ಗಾತ್ರ

ಯಲಬುರ್ಗಾ: ಪಟ್ಟಣದ ಹೊರವಲಯದಲ್ಲಿ ನಿರ್ಮಾಣಗೊಳ್ಳಲಿರುವ ಆಶ್ರಯ ಮನೆಗಳ ಫಲಾನುಭವಿಗಳಿಗೆ ಈವರೆಗೂ ಹಕ್ಕು ಪತ್ರ ವಿತರಿಸಿಲ್ಲ. ಹಾಗೆಯೇ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಂಡು ಫಲಾನುಭವಿಗಳ ಬಳಕೆಗೆ ಅನುಕೂಲ ಮಾಡಿಕೊಡಬೇಕು ಎಂದು ಸದಸ್ಯ ವಿಜಯಕುಮಾರ ಕರಂಡಿ ಒತ್ತಾಯಿಸಿದರು.

ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಆಯ್ಕೆಯಾಗಿ ಆರೇಳು ತಿಂಗಳಾದರೂ ಹಕ್ಕು ಪತ್ರ ನೀಡದೇ ಇರುವುದು ಅಧಿಕಾರಿಗಳ ಹಾಗೂ ಪಂಚಾಯಿತಿ ಸಿಬ್ಬಂದಿ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ಪಟ್ಟಣ ಪಂಚಾಯಿತಿ ಅಧೀನದಲ್ಲಿರುವ ಬುದ್ಧ ಬಸವ ಅಂಬೇಡ್ಕರ್‌ ಭವನದಲ್ಲಿ ಸ್ವಚ್ಛತೆ ಕಾಣದಾಗಿದೆ. ಬಳಕೆ ಮಾಡುವವರು ಬಾಡಿಗೆ ಕೊಡುತ್ತಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ ಕೊಡುವುದರ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಪಂಚಾಯಿತಿ ಜವಾಬ್ದಾರಿಯಾಗಿದೆ. ಪಕ್ಕದ ಉದ್ಯಾನವು ನಿರ್ವಹಣೆಯ ಕೊರತೆಯಿಂದ ಹಾಳಾಗುತ್ತಿದೆ.

ಪಕ್ಕದ ಶೌಚಾಲಯವು ಸರಿಯಾಗಿ ಬಳಕೆ ಹಾಗೂ ನೀರು ಪೂರೈಸದೇ ಇರುವುದರಿಂದ ಅದು ಕೂಡಾ ಬಳಕೆಗೆ ಯೋಗ್ಯವಿಲ್ಲದಂತಾಗಿದೆ. ಇಂತಹ ಸ್ಥಿತಿಯಲ್ಲಿರುವ ಭವನದ ಬಗ್ಗೆ ವಿಶೇಷ ಕಾಳಜಿ ತೋರಿ ಅಭಿವೃದ್ಧಿಗೊಳಿಸಬೇಕಾಗಿದೆ ಎಂದು ಸದಸ್ಯ ಶರಣಪ್ಪ ಗಾಂಜಿ ಒತ್ತಾಯಿಸಿದರು.

ಆರೋಗ್ಯ ನಿರೀಕ್ಷಕ ದೇವೆಂದ್ರಪ್ಪ ಅವರು ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಬಗ್ಗೆ ಸಾರ್ವಜನಿಕವಾಗಿ ದೂರುಗಳು ಕೇಳಿ ಬರುತ್ತಿವೆ. ಇವರ ಬಗ್ಗೆ ಮೇಲಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಿರಿ? ತಮ್ಮ ತಮ್ಮ ಜವಾಬ್ದಾರಿ ನಿಭಾಯಿಸದೇ ಹೋದರೆ ಹೇಗೆ? ಪಟ್ಟಣದ ಬಹುತೇಕ ಚರಂಡಿಗಳು ಭರ್ತಿಯಾಗಿದ್ದು, ಅವುಗಳನ್ನು ಸ್ವಚ್ಛಗೊಳಿಸಿ ವಿಲೇವಾರಿ ಮಾಡದೇ ಇರುವುದು ಸರಿಯಲ್ಲ ಎಂದು ಅಧ್ಯಕ್ಷೆ ಜಯಶ್ರೀ ಅರಕೇರಿ ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡರು.

ಪಟ್ಟಣದ ವಿವಿಧ ಬೀದಿಗಳಲ್ಲಿ ಸೋಲಾರ್‌ ದೀಪಗಳ ಅಳವಡಿಕೆಗೆ ಸಲಕರಣೆಗಳು ಬಂದಿದ್ದರೂ ಅವುಗಳ ಅಳವಡಿಕೆ ಕಾಮಗಾರಿ ಶುರು ಮಾಡದೇ ವಿಳಂಬ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಯೋಜನೆಗಳನ್ನು ತ್ವರಿತಗತಿಯಲ್ಲಿ ಕೈ ಗೊಂಡು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಯಶ್ರೀ ಅಧಿಕಾರಿಗೆ ಸೂಚಿಸಿದರು.

ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮನೆಗಳ ಮಾಲೀಕರು ನಿವೇಶನ ನೋಂದಣಿ ಮಾಡಿಸಿಕೊಳ್ಳುವಲ್ಲಿ ಉದಾಸೀನ ತೋರುತ್ತಿದ್ದಾರೆ. ನಿಯಮಾನುಸಾರ ಸಿ.ಎ ಸೈಟುಗಳ ಬಿಟ್ಟು ಕೊಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಕೇವಲ 25 ಸೈಟುಗಳು ಮಾತ್ರ ಪಂಚಾಯಿತಿ ವ್ಯಾಪ್ತಿಗೆ ಬಂದಿವೆ.

ಇನ್ನುಳಿದ ಬಡಾವಣೆ ನಿವಾಸಿಗಳು ನಿರ್ಲಕ್ಷ್ಯ ತೋರಿದ್ದಾರೆ. ನಿವೇಶನ ಅಭಿವೃದ್ಧಿಗಾಗಿ ಮಾಲೀಕರೇ ಖರ್ಚು ಮಾಡಬೇಕಾದುದು ನಿಯಮವಿದೆ ಆದರೆ ಮಾಡುತ್ತಿಲ. ಈ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ನಾಗೇಶ ಸಭೆಯ ಗಮನಕ್ಕೆ ತಂದರು.

ಸದಸ್ಯೆ ಶೋಭಾ ಹುಬ್ಬಳ್ಳಿ ಮಾತನಾಡಿ, ಅಂಗನವಾಡಿ ದುರಸ್ತಿಗೆ ಹೆಚ್ಚಿನ ಅನುದಾನ ನೀಡಬೇಕು. ಪಟ್ಟಣದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ, ಯೋಜನೆಗಳ ಅನುಷ್ಠಾನ ತ್ವರಿಗತಿಯಲ್ಲಿ ನಡೆಯಬೇಕು ಎಂದು ಆಗ್ರಹಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷೆ ಶರಣಮ್ಮ ಪೂಜಾರ, ಉಪಾಧ್ಯಕ್ಷ ಮಹಿಬೂಬಸಾಬ ಕನಕಗಿರಿ, ಮಲ್ಲೇಶಗೌಡ ಪಾಟೀಲ, ಡಾ.ನಂದಿತಾ ದಾನರಡ್ಡಿ, ಈರಪ್ಪ ಚಾಕ್ರಿ, ಆಶ್ರಯ ಸಮಿತಿಯ ಶಿವಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT