ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಸಹಕಾರ ನೆನೆದು ಕಣ್ಣೀರಿಟ್ಟ ತಹಶೀಲ್ದಾರ್

Last Updated 17 ಮೇ 2017, 6:31 IST
ಅಕ್ಷರ ಗಾತ್ರ

ಚಿಂಚೋಳಿ: ‘ತಾಲ್ಲೂಕಿನ ಜನರು ಅತ್ಯಂತ ಮುಗ್ಧರಿದ್ದಾರೆ. ಅವರಿಗೆ ನನ್ನಿಂದ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನನಗೆ ಜನರೂ ಅಷ್ಟೆ ಸಹಕಾರ ನೀಡಿದ್ದಾರೆ. ಇದರಲ್ಲಿ ಅತಿ ಹೆಚ್ಚಿನ ಸಹಕಾರ ಕಂದಾಯ ಇಲಾಖೆ ಸಿಬ್ಬಂದಿ  ನೀಡಿದ್ದಾರೆ’ ಎಂದು ತಹಶೀಲ್ದಾರ್ ಪ್ರಕಾಶ ಕುದರಿ ಕಣ್ಣೀರು ಹಾಕಿದರು.

ಮಂಗಳವಾರ ಮಿನಿ ವಿಧಾನಸೌಧದಲ್ಲಿ ಧಾರವಾಡಕ್ಕೆ ವರ್ಗವಾಗಿರುವ ಪ್ರಯುಕ್ತ ಕಂದಾಯ ಇಲಾಖೆ ಸಿಬ್ಬಂದಿ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಿಮ್ಮ ಸಹಕಾರ ಇಲ್ಲದಿದ್ದರೆ ನಾನು ಏನು ಸಾಧನೆ ಮಾಡಲು ಆಗುತ್ತಿರಲಿಲ್ಲ. ಜನರು ತಮ್ಮ ಮೇಲೆ ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವರ್ಗವಾದ ಸುದ್ದಿ ಕೇಳಿ ಹಲವು ರೀತಿಯಲ್ಲಿ ಚರ್ಚಿಸಿದ್ದಾರೆ. 10 ತಿಂಗಳ ಅವಧಿಯಲ್ಲಿ ನಾನು ಪ್ರವಾಹ ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. 35 ಸಾವಿರ ರೈತರ ಸಮೀಕ್ಷೆ ಹಾಗೂ ಬ್ಯಾಂಕ್‌ ಖಾತೆ ಹಾಗೂ ಆಧಾರ ಜೋಡಣೆ ಮಾಡುವಲ್ಲಿ ನಿಮ್ಮ ಸಹಕಾರ ಜಿಲ್ಲೆಗೆ ಮಾದರಿಯಾಗಿದೆ’ ಎಂದರು.

‘ಇಂದ್ರಪಾಡ ಹೊಸಳ್ಳಿಯಲ್ಲಿ ಭೂಕಂಪದ ಅನುಭವವಾದಾಗ ನಾನು ಜನರೊಂದಿಗೆ ಹೆಚ್ಚಾಗಿ ಬೆರೆತುಕೊಂಡೆ. ಹೈಕೋರ್ಟ್‌ ಇಂದ್ರಪಾಡ ಹೊಸಳ್ಳಿಯ ಪರಿಸ್ಥಿತಿ ಅರಿಯಲು ಬಂದ ನ್ಯಾಯಮೂರ್ತಿ ಎದುರು ಗ್ರಾಮಸ್ಥರು ನಮ್ಮ ಜೀವನದಲ್ಲಿ ಇಂತಹ ತಹಶೀಲ್ದಾರರನ್ನು ನೋಡಿಯೇ ಇಲ್ಲ. ಅವರು ಹಗಲಿರುಳು ನಮ್ಮೊಂದಿಗಿದ್ದು ಸಹಾಯ ಮಾಡಿದ್ದಾರೆ ಎಂದು ವಿವರಿಸುತ್ತಲೇ ಉಮ್ಮಳಿಸಿ ಬಂದ ದುಃಖ ತಡೆಯಲಾಗದೇ ಕಣ್ಣೀರಿಟ್ಟರು.

ಆಗ ಆಧೀನ ಸಿಬ್ಬಂದಿಗಳಲ್ಲಿ ಹಲವು ಜನರ ಕಣ್ಣುಗಳು ತೇವಗೊಂಡಿದ್ದವು. ತಾಲ್ಲೂಕಿನಲ್ಲಿ 98 ತಾಂಡಾಗಳಿವೆ. ಇದರಲ್ಲಿ 55 ತಾಂಡಾಗಳನ್ನು ಕಂದಾಯ ಗ್ರಾಮವಾಗಿಸಲು ಸರ್ಕಾರಕ್ಕೆ ಮೊಟ್ಟಮೊದಲ ವರದಿ ನೀಡಿದ್ದು ಚಿಂಚೋಳಿ ತಾಲ್ಲೂಕು. ಈ ಕುರಿತು ಶಾಸಕ ಡಾ.ಉಮೇಶ ಜಾಧವ್‌ ಅವರು ಕಂದಾಯ ಸಚಿವರ ಮತ್ತು ಜಿಲ್ಲಾಧಿಕಾರಿ ಎದುರೇ ನಮ್ಮ ಸೇವೆ ಶ್ಲಾಘಿಸಿದರು’ ಎಂದು ನೆನಪು ಮಾಡಿಕೊಂಡರು.

ಅಕ್ರಮ ಸಕ್ರಮದ 2,300 ಅರ್ಜಿಗಳು 30 ವರ್ಷಗಳಿಂದ ಬಾಕಿ ಉಳಿದಿದ್ದವು. ಅವುಗಳನ್ನು ಪತ್ತೆ ಹಚ್ಚಿ ಸುಲೇಪೇಟ ಕಂದಾಯ ಹೋಬಳಿ ವಲಯದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅಕ್ರಮ ಜಮೀನು ಸಕ್ರಮಕ್ಕೆ ಕ್ರಮ ಕೈಗೊಂಡಿದ್ದೇವೆ. ಈ ಕೆಲಸ ಒಂದಿಷ್ಟು ಬಾಕಿಯಿದೆ ಎಂದರು.

‘ಮಿನಿ ವಿಧಾನಸೌಧ 30 ವರ್ಷದ ಕಟ್ಟಡವಾಗಿದ್ದರೂ, ಅದು ಅರ್ಧ ಶತಮಾನ ಹಳೆತಾದಂತೆ ಕಾಣುತ್ತಿತ್ತು. ಇದಕ್ಕೆ ಕಾಯಕಲ್ಪ ನೀಡಿ, ಅದರ ಮುಂದಿನ ಆವರಣ, ಭೂಮಾಪನ ಶಾಖೆ, ಆಹಾರ ಶಾಖೆ ಪ್ರತ್ಯೇಕ ವ್ಯವಸ್ಥೆ ಮತ್ತು ಗ್ರೇಡ್‌ ತಹಶೀಲ್ದಾರರಿಗೆ ಪ್ರತ್ಯೇಕ ಚೇಂಬರ್‌ ಅವಕಾಶ ಮಾಡಿದ್ದೇವೆ’ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ನೂತನ ತಹಶೀಲ್ದಾರ್ ದಯಾನಂದ ಪಾಟೀಲ ಮಾತನಾಡಿ, ‘ನಾವು ನೀವು ಸೇರಿ ಜನರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡೋಣ ನಮಗೆ ಸಿಕ್ಕ ಅವಕಾಶವನ್ನು ಜನ ಕಲ್ಯಾಣಕ್ಕೆ ಬಳಸೋಣ’ ಎಂದು ತಿಳಿಸಿದರು.

ಗ್ರೇಡ್‌ ತಹಶೀಲ್ದಾರ್ ವೆಂಕಟೇಶ ದುಗ್ಗನ್‌, ಭೂಮಾಪಾನ ಶಾಖೆಯ ವಿಜಯಲಕ್ಷ್ಮೀ, ಶಿರಸ್ತೇದಾರ ಖಾಲಿದ್‌ ಹುಸೇನ್‌, ಪ್ರಥಮದರ್ಜೆ ಗುತ್ತಿಗೆದಾರ ಬಸವರಾಜ ಸಜ್ಜನ್‌, ರಾಘವೇಂದ್ರರೆಡ್ಡಿ, ಚಾಂದಪಾಶ ಮೋಮಿನ್‌, ಮಾಣಿಕ್‌, ಸೋಮನಗೌಡ, ನಾಗೇಂದ್ರ, ಕೇಶವ, ರವಿಗೌಡ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT