ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯವ್ಯಸನ ಮುಕ್ತಿಗೆ ನೆರವು

Last Updated 17 ಮೇ 2017, 6:37 IST
ಅಕ್ಷರ ಗಾತ್ರ

ಕಲಬುರ್ಗಿ: ‘ನಿಮ್ಮ ಮಕ್ಕಳು ಅಥವಾ ಮನೆಯಲ್ಲಿ ಯಾರಾದರೂ ಮದ್ಯವ್ಯಸನಿಗಳಾಗಿದ್ದರೆ ಅವರನ್ನು ಅದರಿಂದ ಮುಕ್ತಗೊಳಿಸಲು ನಾವು ಸಹಕಾರ ನೀಡುತ್ತೇವೆ. ಅಂತಹವರು ನಮ್ಮನ್ನು ಸಂಪರ್ಕಿಸಬಹುದು’ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಎಚ್‌.ಸಿ. ರುದ್ರಪ್ಪ ಹೇಳಿದರು.

‘ಮದ್ಯ ವ್ಯಸನಿಗಳಿಗೆ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಧರ್ಮಸ್ಥಳ  ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷರಾಗಿರುವ ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಸಹಯೋಗದಲ್ಲಿ ಮದ್ಯವ್ಯಸನಿಗಳಿಗೆ ಚಿಕಿತ್ಸೆ ಮತ್ತು ಮನಪರಿವರ್ತನೆ ಶಿಬಿರ ನಡೆಸಲಾಗುತ್ತಿದೆ’ ಎಂದು ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಸಂಸ್ಥೆಯವರು ಈವರೆಗೆ ರಾಜ್ಯದ ವಿವಿಧೆಡೆ 1,056 ಶಿಬಿರಗಳನ್ನು ನಡೆಸಿದ್ದಾರೆ. ರಾಯಚೂರಿನಲ್ಲಿಯೂ ಈಗ ಶಿಬಿರ ನಡೆಯುತ್ತಿದ್ದು, ಕಲಬುರ್ಗಿ ಜಿಲ್ಲೆಯಲ್ಲೂ ನಡೆಸಲಾಗುವುದು. ಮದ್ಯವ್ಯಸನ ಮುಕ್ತಿಗಾಗಿ ಮಂಡಳಿಯ ದೂರವಾಣಿ: 080 22863230, ವೆಬ್‌ಸೈಟ್‌ www.kar. temperence.org ಸಂಪರ್ಕಿಸಬಹುದು’ ಎಂದು ಅವರು ಹೇಳಿದರು.

‘ಮಂಡಳಿಗೆ ಸರ್ಕಾರ ಹಿಂದಿನ ವರ್ಷ ₹1.60 ಕೋಟಿ ಅನುದಾನ ನೀಡಿತ್ತು. ಈ ವರ್ಷ ₹10 ಕೋಟಿ ಅನುದಾನಕ್ಕೆ ಕೋರಿಕೆ ಸಲ್ಲಿಸಿದ್ದೆ. ಹಿಂದಿನ ನಾಲ್ಕು ವರ್ಷ ಕೊಟ್ಟ ಅನುದಾನವೇ ಪೂರ್ಣಪ್ರಮಾಣದಲ್ಲಿ ಖರ್ಚಾಗಿಲ್ಲ ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿಗಳು ಈ ವರ್ಷ ₹1.90 ಕೋಟಿ ಅನುದಾನ ನೀಡಿದ್ದಾರೆ’ ಎಂದರು.

‘ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು ಪ್ರತಿ ಜಿಲ್ಲೆಯಲ್ಲಿ 20 ಬೀದಿ ನಾಟಕ ಪ್ರದರ್ಶಿಸಲಾಗುವುದು. 20 ನಿಮಿಷ ಅವಧಿಯ ಈ ಬೀದಿ ನಾಟಕ ಪ್ರದರ್ಶಿಸುವ ಕಲಾ ತಂಡಗಳಿಗೆ ₹3 ಸಾವಿರ ಸಂಭಾವನೆ ನೀಡಲಾಗುವುದು. ಶಾಲಾ–ಕಾಲೇಜುಗಳಲ್ಲಿ ವಿಚಾರ ಸಂಕಿರಣ, ಹೆದ್ದಾರಿಗಳಲ್ಲಿ ಜಾಗೃತಿ ಸಂದೇಶ ಪ್ರದರ್ಶನ, ಜಾತ್ರೆಗಳಲ್ಲಿ ಅರಿವು ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.

‘ಅಬಕಾರಿ ಮತ್ತು ಪೊಲೀಸ್‌ ಇಲಾಖೆಯವರು ನಮ್ಮೊಂದಿಗೆ ಕೈಜೋಡಿಸಿದರೆ ಮದ್ಯಮುಕ್ತ ಗ್ರಾಮ ಪರಿಕಲ್ಪನೆ ಸಾಕಾರಗೊಳ್ಳಬಹುದು. ಆದರೆ, ನಮ್ಮದು ತಿಳಿವಳಿಕೆ ನೀಡಲು ಮಾತ್ರ ಇರುವ ಮಂಡಳಿ. ಮದ್ಯ ಮುಕ್ತಗೊಳಿಸುವ ಅಥವಾ ನಿಷೇಧಿಸುವ ಅಧಿಕಾರ ನಮಗಿಲ್ಲ’ ಎಂದು ಅವರು ಹೇಳಿದರು.

ಅಧಿಕಾರಿಗಳ ಸಭೆ: ರುದ್ರಪ್ಪ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಇಲಿಯಾಸ ಅಹ್ಮದ್‌, ಶಿಷ್ಟಾಚಾರ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ ಇದ್ದರು.

ಸದಸ್ಯರು ಬರಲೇ ಇಲ್ಲ!

‘ಮಂಡಳಿಯ ಕಾರ್ಯಚಟುವಟಿಕೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಒಬ್ಬರು ನಿರ್ದೇಶಕರನ್ನು ಸರ್ಕಾರ ಈ ವರ್ಷ ನೇಮಿಸಿತ್ತು. ಕಲಬುರ್ಗಿ ಜಿಲ್ಲೆಯಲ್ಲಿ ಚಿತ್ತಾಪುರ ತಾಲ್ಲೂಕಿನ ಲಿಂಗಾರೆಡ್ಡಿ ಗುರನಗೌಡ ಅವರನ್ನು ನೇಮಿಸಲಾಗಿತ್ತು. ಆದರೆ, ಅವರು ಮಂಡಳಿಯ ಸದಸ್ಯತ್ವ ಸ್ವೀಕರಿಸಲೇ ಇಲ್ಲ’ ಎಂದು ರುದ್ರಪ್ಪ ಹೇಳಿದರು.

‘ಬಹಳಷ್ಟು ಜಿಲ್ಲೆಗಳಿಂದ ಇಂತಹ ನಿರ್ದೇಶಕರು ಬಂದಿಲ್ಲ. ನೇಮಕಗೊಂಡ ಕೆಲ ಸದಸ್ಯರೇ ಸ್ವತಃ ಮದ್ಯದ ಅಂಗಡಿಗಳನ್ನು ಹೊಂದಿದ್ದರಿಂದ ಮನಸ್ಸು ಒಪ್ಪದೆ ಅವರು ಬರಲಿಲ್ಲ. ಸತತ 3 ಸಭೆಗಳಿಗೆ ಗೈರು ಉಳಿದರೆ ಸದಸ್ಯತ್ವ ರದ್ದಾಗುತ್ತದೆ. ಹೀಗಾಗಿ ಅಂತಹವರ ಸದಸ್ಯತ್ವ ರದ್ದಾಗಿದ್ದು, ಆ ಜಿಲ್ಲೆಗಳಲ್ಲಿ ಹೊಸಬರ ನೇಮಕವಾಗಬೇಕಿದೆ’ ಎಂದು ಅವರು ತಿಳಿಸಿದರು.

197 ಮದ್ಯದ ಅಂಗಡಿಗಳಿಗೆ ನೋಟಿಸ್‌

ಕಲಬುರ್ಗಿ: ‘ಜಿಲ್ಲೆಯಲ್ಲಿ ಹೆದ್ದಾರಿಗಳ 220 ಮೀಟರ್ ವ್ಯಾಪ್ತಿಯಲ್ಲಿ 197 ಮದ್ಯದಂಗಡಿಗಳಿದ್ದು, ಅವುಗಳಿಗೆ ಈಗಾಗಲೇ ನೋಟೀಸ್ ಜಾರಿ ಮಾಡಲಾಗಿದೆ’ ಎಂದು  ಅಬಕಾರಿ ಉಪ ಅಧೀಕ್ಷಕಿ ಇಂದುಬಾಯಿ ಸಭೆಯಲ್ಲಿ ತಿಳಿಸಿದರು.

‘ಈ ಅಂಗಡಿಗಳ ನವೀಕರಣ ಜೂನ್ ತಿಂಗಳಲ್ಲಿ ಇದೆ. ಸುಪ್ರೀಂ ಕೋರ್ಟ್ ಆದೇಶದಂತೆ ಹೆದ್ದಾರಿಯಿಂದ 220 ಮೀಟರ್‌ ದೂರ ಪ್ರದೇಶಕ್ಕೆ ಮದ್ಯದಂಗಡಿ ಸ್ಥಳಾಂತರಿಸಿದವರಿಗೆ ಮಾತ್ರ ನವೀಕರಣ ಮಾಡಲಾಗುವುದು’ ಎಂದು ಅವರು ಹೇಳಿದರು.

‘ಜಿಲ್ಲೆಯಲ್ಲಿ ಕುಡಿತದ ಚಟದಿಂದ ಮುಕ್ತರನ್ನಾಗಿಸಲು ಭಾಗ್ಯ ಮದ್ಯ ವರ್ಜ್ಯ ಮತ್ತು ಪುನರ್ವಸತಿ ಕೇಂದ್ರ ಕೆಲಸ ಮಾಡುತ್ತಿದೆ. 15 ಹಾಸಿಗೆಯ ಆಸ್ಪತ್ರೆ ಇದ್ದು, 4 ವರ್ಷಗಳಿಂದ 400ಕ್ಕೂ ಹೆಚ್ಚು ಮದ್ಯವ್ಯಸನಿಗಳಿಗೆ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ 29 ಜನ ಕುಡಿತದ ಚಟದಿಂದ ಸಂಪೂರ್ಣವಾಗಿ ಮುಕ್ತರಾಗಿದ್ದಾರೆ’ ಎಂದು ಯೋಜನಾ ನಿರ್ದೇಶಕಿ ರೇಣುಕಾ ಹೇಳಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿಯೂ ಸಹ ಮದ್ಯ ಮತ್ತು ಮಾದಕವಸ್ತುಗಳ ವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕಾಗಿ ಮನೋರೋಗಿಗಳಿದ್ದು, ಜಿಲ್ಲೆಯಲ್ಲಿ ನೂತನವಾಗಿ 115 ಪುರುಷ ಮತ್ತು 17 ಮಹಿಳೆಯರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಸೀಮೆಎಣ್ಣೆ ವಾಸನೆ ತೆಗೆದುಕೊಳ್ಳುವುದು ಮತ್ತು ಮಕ್ಕಳು ವೈಟ್ನರ್ ಬಳಸುವ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಗಾಂಜಾ ವ್ಯಸನಿಗಳು ಸಹ ಇದ್ದು, ತಂಬಾಕಿನಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ.ಜೋಶಿ ತಿಳಿಸಿದರು.‘ಕಳೆದ ವರ್ಷ ಜಿಲ್ಲೆಯಲ್ಲಿ 24 ಕ್ವಿಂಟಲ್ ಗಾಂಜಾ ಜಪ್ತು ಮಾಡಲಾಗಿದೆ’ ಎಂದು ಅಬಕಾರಿ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT