ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯೋಗ ಖಾತರಿ ಪಠಿಸಿದ ಶ್ರಮಯೇವ ಜಯತೇ’

Last Updated 17 ಮೇ 2017, 6:41 IST
ಅಕ್ಷರ ಗಾತ್ರ

ಚಿಂಚೋಳಿ: ಕೈಯಲ್ಲಿ ಸಲಿಕೆ, ಗುದ್ದಲಿ, ಪಿಕಾಸು(ಟಿಕಾವು), ಬುಟ್ಟಿಗಳನ್ನು ಹಿಡಿದುಕೊಂಡು ಜನ ಗುಂಪು ಗುಂಪಾಗಿ ಹೊಲಗಳತ್ತ ಹೆಜ್ಜೆ ಹಾಕುತ್ತಾರೆ. ನಸುಕಿನ 5 ಗಂಟೆ ಸುಮಾರಿಗೆ ಮನೆಯಿಂದ ಹೊರಡುವ ಈ ಕೃಷಿ ಕಾರ್ಮಿಕರು, ಹೆಣ್ಣು ಗಂಡೆಂಬ ಭೇದವಿಲ್ಲದೇ ಬದು ನಿರ್ಮಾಣ ಹಾಗೂ ಕೆರೆ ಹೂಳೆತ್ತುವ ಹಾಗೂ ಕೃಷಿ ಹೊಂಡ ನಿರ್ಮಿಸುವ, ರಸ್ತೆ ಬದಿಯಲ್ಲಿ ಗುಂಡಿ ತೋಡುವ ಕೆಲಸ ಮಾಡುತ್ತಾರೆ.

ಸೂರ್ಯ ಉದಯಿಸಿ ಮಾರುದ್ದದ ಎತ್ತರ ಏರುವ ಮೊದಲೇ ಅಂದಿನ ಕೆಲಸ ಮುಗಿಸಿ ಈ ಜನ ಗೂಡು ಸೇರಿಕೊಳ್ಳುತ್ತಾರೆ. ಬೆಳಗಿನ 8 ಗಂಟೆಯಿಂದಲೇ ನೇಸರ ಕೆಂಡ ಕಾರುತ್ತ ದುಡಿಯುವ ಜನರ ನೆತ್ತಿ ಸುಡುತ್ತಿರುವುದರಿಂದ ನಸುಕಿನಿಂದಲೇ ಈ ಯೋಜನೆ ಅಡಿಯಲ್ಲಿ ಕೆಲಸ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳುವ ಕಾಯಕದಲ್ಲಿ ತಾಲ್ಲೂಕಿನಲ್ಲಿ 3,170 ಮಂದಿ ತೊಡಗಿದ್ದಾರೆ.

ತಾಲ್ಲೂಕಿನ ರುಮ್ಮನಗೂಡ, ರಟಕಲ್‌, ಶಾದಿಪುರ, ಕುಂಚಾವರ. ವೆಂಕಟಾಪುರ, ಮಿರಿಯಾಣ, ಪೋಲಕಪಳ್ಳಿ, ಕನಕಪುರ ಮತ್ತಿತರ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಈ ನೋಟ ನಸುಕಿನಲ್ಲಿ ಸಾಮಾನ್ಯವಾಗಿದೆ.

ಮರಳಿ ಬಂದರು: ರುಮ್ಮನಗೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಸರಗಾಂವ್‌ ತಾಂಡಾದಿಂದ ಎರಡು ತಂಡಗಳಲ್ಲಿ 137 ಕಾರ್ಮಿಕರು ಮುಂಬೈ, ತೆಲಂಗಾಣದ ಖಮ್ಮಂಗೆ ತೆರಳಿದ್ದರು.

ಇದನ್ನು ಅರಿತ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಾಂಡಾದಲ್ಲಿ ಸಭೆ ನಡೆಸಿ, ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸ ಕೊಡಿಸುವ ವಾಗ್ದಾನ ನೀಡಿದರು. ಆಗ ಕುಟುಂಬದ ಸದಸ್ಯರ ಕರೆಯ ಮೇರೆಗೆ ವಲಸೆ ಹೋದವರು ಮರಳಿ ಬಂದರು. ಅವರೆಲ್ಲರಿಗೂ ಸ್ವಂತ ಹೊಲಗಳಲ್ಲಿ ಕ್ಷೇತ್ರ ಬದು ನಿರ್ಮಾಣದ ಕೆಲಸವನ್ನು ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೊಡಿಸುವಲ್ಲಿ ರೈತ ಸಂಘ ಸಫಲವಾಗಿದೆ.

ಮೇ 3ರಿಂದ 137 ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಕಾರ್ಮಿಕರಿಗೆ ದಿನಕ್ಕೆ ₹ 236 ಕೂಲಿ ಹಾಗೂ ಪರಿಕರದ ಮೊತ್ತ ರೂಪದಲ್ಲಿ ದಿನಕ್ಕೆ ₹ 10 ಹೀಗೆ ₹ 246 ಪಾವತಿಸಲಾಗುತ್ತಿದೆ. ಗುಳೆ ಹೋದ ಯಾರ ಬಳಿಯೂ ಉದ್ಯೋಗ ಚೀಟಿ ಇರಲಿಲ್ಲ. ಅವರೆಲ್ಲರಿಗೂ ವಿಶೇಷ ಅಭಿಯಾನದ ಮೂಲಕ ಉದ್ಯೋಗ ಚೀಟಿಯನ್ನು ಗ್ರಾ.ಪಂ ನೀಡಿದೆ.

‘ಹೋದ ಊರುಗಳಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಅನಾರೋಗ್ಯಕ್ಕೆ ತುತ್ತಾಗುವುದು ಸಾಮಾನ್ಯ. ಹೀಗೆ ವಲಸೆ ಹೋದಾಗ ಆರೋಗ್ಯ ಕೈಕೊಟ್ಟಿದ್ದರಿಂದ ತೀವ್ರ ಸಮಸ್ಯೆ ಎದುರಿಸಿದ್ದೇವೆ. ಬೇರೆ ಊರಿನ ಜನ ಅನಾರೋಗ್ಯದಿಂದ ಮೃತಪಟ್ಟಿದ್ದನ್ನು ಕಂಡಿದ್ದೇವೆ. ಕಟ್ಟಡ ನಿರ್ಮಾಣ ಅಪಾಯಕಾರಿ ಕೆಲಸ. ಮೇಲಿಂದ ಬಿದ್ದು ಸತ್ತರೆ ಕಾರ್ಮಿಕರನ್ನು ಕೇಳುವವರೇ ಇಲ್ಲ’ ಎಂದು ಕಮಲಾಬಾಯಿ ಕುಪ್ಪಣ್ಣ ರಾಠೋಡ್‌ ತಿಳಿಸಿದರು.

‘ಕಲಬುರ್ಗಿಯ ವಿಜಯ ವಿದ್ಯಾಲಯದಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿದ್ದೇನೆ. ಕಾಲೇಜಿಗೆ ರಜೆ ಇರುವುದರಿಂದ ನಮ್ಮೂರಿನಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಾಯಕ ಬಂಧುವಾಗಿ ಕೆಲಸ ಮಾಡುತ್ತಿದ್ದೇನೆ. ಖುಷಿಯಾಗುತ್ತಿದೆ’ ಎನ್ನುತ್ತಾರೆ ಈವನ್‌ ಚಿನ್ನಾ ರಾಠೋಡ್‌.

1,968 ಕುಟುಂಬಗಳಿಗೆ ಉದ್ಯೋಗ:
‘ತಾಲ್ಲೂಕಿನಲ್ಲಿ ಈ ಯೋಜನೆ ಅಡಿಯಲ್ಲಿ ಕೃಷಿ ಕಾರ್ಮಿಕರಿಗೆ ದುಡಿಯಲು 1,968 ಕುಟುಂಬಗಳಿಗೆ ಕೆಲಸ ನೀಡಲಾಗಿದೆ. ಇಲ್ಲಿವರೆಗೆ 25,771 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ’ ಎಂದು ತಾ.ಪಂ ಕಾರ್ಯನಿರ್ವಹಕ ಅಧಿಕಾರಿ ಅನಿಲ ರಾಠೋಡ್‌ ತಿಳಿಸಿದರು.

2017–18ನೇ ಸಾಲಿನ ವರ್ಷವನ್ನು ‘ನೀರಿನ ಪ್ರಾಮುಖ್ಯತೆಯ ವರ್ಷ’ವಾಗಿ ಘೋಷಿಸಲಾಗಿದೆ. ಮಳೆ ನೀರು ವ್ಯರ್ಥವಾಗದಂತೆ ತಡೆಯುವ, ಇಂಗಿಸುವ ಮತ್ತು ಕೆರೆ ಕಟ್ಟೆ ಚೆಕ್‌ ಡ್ಯಾಂ, ಗೋಕಟ್ಟಾಗಳಲ್ಲಿ ಸಂಗ್ರಹವಾದ ಹೂಳು ತೆಗೆದು, ಅಲ್ಲಿ ನೀರು ಸಂಗ್ರಹವಾಗುವಂತೆ ಮಾಡುತ್ತಿದ್ದೇವೆ ಎಂದರು.

ತಾಲ್ಲೂಕಿನ ರಟಕಲ್‌, ಮಿರಿಯಾಣ ಮುಂತಾದೆಡೆ ಕೆರೆ ಹೂಳೆತ್ತುವ ಕೆಲಸ ನಡೆಯುತ್ತಿದೆ. ಪೋಲಕಪಳ್ಳಿ, ಸಾಲೇಬೀರನಹಳ್ಳಿ ನಾಲಾ ಹೂಳೆತ್ತುವ, ಕಲಭಾವಿ, ಸಾಸರಗಾಂವ್‌ ತಾಂಡಾ, ಕೋಡ್ಲಿ ಬದು ನಿರ್ಮಿಸುವ ಮತ್ತು ಕುಂಚಾವರಂ, ಒಂಟಿಚಿಂತಾ, ಒಂಟಿಗುಡ್ಸಿ ಟ್ರೆಂಚ್‌ ನಿರ್ಮಿಸುವ ಮತ್ತು ಶೇರಿಭಿಕನಳ್ಳಿ ಕಡೆಗಳಲ್ಲಿ ಚೆಕ್‌ ಡ್ಯಾಂ ಹಾಗೂ ಗೋಕಟ್ಟಾ ಹೂಳೆತ್ತುವ ಕೆಲಸವನ್ನು ಆಯಾ ಗ್ರಾ.ಪಂ ವ್ಯಾಪ್ತಿಯಲ್ಲಿ ನೀಡಲಾಗಿದೆ ಎಂದರು.

40 ಅಂಗವಿಕಲರು: ‘ಈ ಯೋಜನೆ ಅಡಿಯಲ್ಲಿ ದುಡಿಯುತ್ತಿರುವ 3,170 ಜನರಲ್ಲಿ 40 ಮಂದಿ ಅಂಗವಿಕಲರಿದ್ದಾರೆ. ಜತೆಗೆ, 159 ಮಂದಿ ಕಾಯಕ ಬಂಧುಗಳು ಮತ್ತು 16 ಮಂದಿ ಕ್ಷೇತ್ರ ಸಹಾಯಕರ ನೆರವಿನೊಂದಿಗೆ ಜನವಾದಿ ಮಹಿಳಾ ಸಂಘಟನೆ, ಪ್ರಾಂತ ರೈತ ಸಂಘ ಕೈಜೋಡಿಸಿದ್ದರಿಂದ ಈ ಯೋಜನೆ ಅನುಷ್ಠಾನದಲ್ಲಿ ಚಿಂಚೋಳಿ ತಾಲ್ಲೂಕು ಜಿಲ್ಲೆಗೆ ಮೊದಲ ಸ್ಥಾನ ಪಡೆಯುವ ಗುರಿ ಹೊಂದಲಾಗಿದೆ’ ಎಂದು ಸಹಾಯಕ ನಿರ್ದೇಶನ ಸಂತೋಷಕುಮಾರ ಯಾಚೆ ತಿಳಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ವಂದಿತಾ, ತಾಂತ್ರಿಕ ಸಹಾಯಕ ಗುರುರಾಜ್‌ ಇದ್ದರು.

*

ಕೆಲಸ ಇಲ್ಲದ ಕಾರಣ ಅನಿವಾರ್ಯ ವಾಗಿ ಗುಳೆ ಹೋಗುತ್ತಿದ್ದೆವು. ಈ ಬಾರಿ ತೆಲಂಗಾಣದ ಖಮ್ಮಂಗೆ ಗುಳೆ ಹೋಗಿದ್ದ ನಮ್ಮನ್ನು ವಾಪಸ್‌ ಕರೆಸಿ, ಕೆಲಸ ನೀಡಿದ್ದಾರೆ.
ಕಮಲಾಬಾಯಿ ಕುಪ್ಪಣ್ಣ ರಾಠೋಡ್‌
ಸಾಸಾರಗಾಂವ್‌ ತಾಂಡಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT