ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯಪಾನದ ದುಷ್ಪರಿಣಾಮಗಳ ಅರಿವು ಮೂಡಿಸಿ

Last Updated 17 ಮೇ 2017, 6:47 IST
ಅಕ್ಷರ ಗಾತ್ರ

ಯಾದಗಿರಿ: ‘ಮದ್ಯಪಾನ ಮತ್ತು ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕು’ ಎಂದು ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಎಚ್.ಸಿ.ರುದ್ರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮದ್ಯ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಿದರು.

‘ದುಷ್ಪರಿಣಾಮಗಳ ಬಗ್ಗೆ ವಿವಿಧ ಇಲಾಖೆಗಳು ಜಾಗೃತಿ ಮೂಡಿಸಲು ಶ್ರಮಿಸಬೇಕು. ಈ ಕಾರ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸ್ತ್ರೀಶಕ್ತಿ ಸಂಘಗಳ ಸಹಕಾರ ಪಡೆದು ಗ್ರಾಮೀಣ ಭಾಗದಲ್ಲಿ ಹೆಚ್ಚು ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಈ ಹಿಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕೆಲ ಕಾಲೇಜು ವಸತಿ ನಿಲಯದ ಸುತ್ತಮುತ್ತ ಖಾಲಿ ಮದ್ಯದ ಬಾಟಲಿಗಳು ಕಂಡುಬಂದಿದ್ದವು. ವಿದ್ಯಾರ್ಥಿಗಳ ಕೌನ್ಸೆಲಿಂಗ್ ಮಾಡಲಾಗಿದ್ದು, ಇತ್ತೀಚೆಗೆ ಅಂತಹ ಪ್ರಕರಣಗಳು ನಡೆದಿಲ್ಲ’ ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಮಾರುತಿ ಹುಜರತಿ ಸಭೆಗೆ ಮಾಹಿತಿ ನೀಡಿದರು.

‘ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲ ಮಂದಿರದಲ್ಲಿ ಅಂತಹ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ’ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದರು.

‘ಹೆದ್ದಾರಿಗೆ ಹೊಂದಿಕೊಂಡಿರುವ 77 ವೈನ್‌ಶಾಪ್‌ಗಳಿಗೆ ನೋಟಿಸ್, ಜುಲೈನಲ್ಲಿ ಪರವಾನಗಿ ರದ್ದು, ಸುಪ್ರೀಂಕೋರ್ಟ್ ನಿರ್ದೇಶನದನ್ವಯ ಹೆದ್ದಾರಿಯ 500 ಮೀಟರ್ ವ್ಯಾಪ್ತಿಯಲ್ಲಿ ಬರುವ ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ಸ್ಥಳಾಂತರಿಸಬೇಕಿದೆ. ಇಲ್ಲದಿದ್ದರೆ ಜಿಲ್ಲೆಯಲ್ಲಿರುವ 92 ವೈನ್‌ಶಾಪ್‌ಗಳ ಪೈಕಿ ಹೆದ್ದಾರಿಗೆ ಹೊಂದಿಕೊಂಡಿರುವ 77  ವೈನ್‌ಶಾಪ್ ಪರವಾನಗಿಯನ್ನು ರದ್ದುಪಡಿಸಲಾಗುವುದು’ ಎಂದು ಯಾದಗಿರಿಯ ಅಬಕಾರಿ ಡಿವೈಎಸ್‌ಪಿ ಶ್ಯಾಮ್ ಸಾವಳಗಿ ಸಭೆಗೆ ವಿವರಿಸಿದರು.

‘ಜಿಲ್ಲೆಯಲ್ಲಿ 92 ಪರವಾನಗಿ ಹೊಂದಿರುವ ಮದ್ಯದ ಅಂಗಡಿಗಳಿವೆ. ಕಳೆದ ಜೂನ್‌ನಿಂದ ಏಪ್ರಿಲ್ ತಿಂಗಳಿನ ವರೆಗೆ ಅಬಕಾರಿ ಇಲಾಖೆಯಿಂದ 192 ಪ್ರಕರಣಗಳನ್ನು ದಾಖಲಿಸಿ ₹ 28 ಲಕ್ಷ ದಂಡ ಹಾಕಲಾಗಿದೆ. ಅಲ್ಲದೇ, ಚಿಲ್ಲರೆ ಮದ್ಯ ಮಾರಾಟ ಮಾಡುವವರ ವಿರುದ್ಧ 372 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು. ಅಬಕಾರಿ ಇಲಾಖೆಯ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ₹ 5 ಸಾವಿರದಿಂದ ₹ 50 ಸಾವಿರದ ವರೆಗೆ ಅಬಕಾರಿ ಕಾಯ್ದೆ ನಿಯಮ 45ರ ಅಡಿ ದಂಡ ವಿಧಿಸಲಾಗುತ್ತದೆ’ ಎಂದು ಹೇಳಿದರು.

ಅಕ್ರಮ ಮದ್ಯ ಮಾರಾಟ ದೂರು: ಜಿಲ್ಲೆಯಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ಪೊಲೀಸ್ ಮತ್ತು ಅಬಕಾರಿ ಇಲಾಖೆ ದೌರ್ಜನ್ಯ ಎಸಗುತ್ತಿರುವ ದೂರುಗಳು ಬರುತ್ತಿವೆಯಲ್ಲ ಎಂದು ಅಧಿಕಾರಿಗಳನ್ನು ಮಂಡಳಿಯ ಅಧ್ಯಕ್ಷರು ಪ್ರಶ್ನಿಸಿದರು. ಆದರೆ, ಯಾವುದೇ ದೌರ್ಜನ್ಯ ಎಸಗುತ್ತಿಲ್ಲ. ಬದಲಾಗಿ ಪ್ರಕರಣಗಳನ್ನಷ್ಟೆ ದಾಖಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ಕೇವಲ ಚಿಲ್ಲರೆ ಮಾರಾಟದ ಅಂಗಡಿಯವರ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಅವಮಾನಕ್ಕೀಡು ಮಾಡುತ್ತೀರಿ. ಆದರೆ, ಗ್ರಾಮೀಣ ಪ್ರದೇಶಕ್ಕೆ ಹೋಗಿ ಮದ್ಯ ಪೂರೈಕೆ ಮಾಡಿ ಅಕ್ರಮ ಮಾರಾಟಕ್ಕೆ ಪ್ರೇರೇಪಿಸುವವರ ವಿರುದ್ಧ ಏಕೆ ಪ್ರಕರಣ ದಾಖಲಿಸಲ್ಲ ಎಂದು ಪ್ರಶ್ನಿಸಿದರು. ಅವರ ಮೇಲೂ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮದ್ಯಪಾನ ಸಂಯಮ ಮಂಡಳಿಯ ನಿರ್ದೇಶಕ ಬಸವರಾಜ ಸೊನ್ನದ್, ಜಿಲ್ಲಾಧಿಕಾರಿ ಖುಷ್ಬೂ ಗೋಯಲ್ ಚೌಧರಿ, ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಶಹಾಪುರ ಅಬಕಾರಿ ಡಿವೈಎಸ್ಪಿ ಮೊಹ್ಮದ್ ಇಸ್ಮಾಯಿಲ್ ಇನಾಮದಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನರಸಿಂಹಲು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಂದೇನವಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶರಣಪ್ಪ ಪಾಟೀಲ, ಜಿಲ್ಲಾ ಮನೊರೋಗ ತಜ್ಞ ಡಾ.ಭಗವಂತ ಅನವರ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಇದ್ದರು.

ಅಂಕಿಅಂಶ:

727 ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ವಿರುದ್ಧ ನಡೆದ ಒಟ್ಟು ದಾಳಿ

192 ಒಟ್ಟು ಪ್ರಕರಣ ದಾಖಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT