ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಬ್ಬೆದ್ದ ಮಿನಿ ವಿಧಾನಸೌಧ!

Last Updated 17 ಮೇ 2017, 6:47 IST
ಅಕ್ಷರ ಗಾತ್ರ

ರಾಮನಗರ: ಪಹಣಿ ಪಡೆಯಲೆಂದು ಬಂದವರು, ಖಾತೆ ಬದಲಾವಣೆಗಾಗಿ ಅರ್ಜಿ ಸಲ್ಲಿಸಲು ಸಾಲಿನಲ್ಲಿ ನಿಂತ ರೈತರ ತಲೆಯ ಮೇಲೆ ಆಗಾಗ್ಗೆ ದೂಳಿನ ಪ್ರೋಕ್ಷಣೆ ಆಗುತ್ತಲೇ ಇರುತ್ತದೆ. ಕತ್ತೆತ್ತಿ ನೋಡಿದರೆ ಸೂರಿನ ಸುತ್ತ ಕಪ್ಪನೆಯ ದೂಳು ತುಂಬಿ ನೇತಾಡತೊಡಗಿರುತ್ತದೆ.

ನಗರದಲ್ಲಿರುವ ಮಿನಿ ವಿಧಾನ ಸೌಧದ ಕಚೇರಿಗೆಂದು ಬಂದ ಸಾಕಷ್ಟು ಮಂದಿಗೆ ಈ ಅನುಭವ ಆಗಿರುತ್ತದೆ. ಇಲ್ಲಿನ ಕೊಳಕು, ಅಶುಚಿತ್ವ ಕಂಡು ಶಪಿಸುತ್ತಲೇ ಜನ ತಮ್ಮ ಕೆಲಸ ಮುಗಿಸಿ ಹೊರಡುತ್ತಾರೆ. ಅಧಿಕಾರಿ, ಸರ್ಕಾರಿ ನೌಕರರು ತಾವೇನು ಕಂಡೇ ಇಲ್ಲ ಎಂಬಂತೆ ಮುಂದೆ ಸಾಗುತ್ತಾರೆ. ಇಡೀ ಕಟ್ಟಡವೇ ಗಬ್ಬೆದ್ದು ನಾರುತ್ತಿದ್ದರೂ ಅದನ್ನು ಶುಚಿಗೊಳಿಸುವ ಕಾರ್ಯಕ್ಕೆ ಯಾರೂ ಮುಂದಾಗುತ್ತಿಲ್ಲ.

ತಳ ಮಹಡಿ ಹಾಗೂ ಮೂರು ಅಂತಸ್ತು ಒಳಗೊಂಡ ಈ ಕಟ್ಟಡದಲ್ಲಿ ನೂರಾರು ಮಂದಿ ಸರ್ಕಾರಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಪಂಚಾಯಿತಿ ಕಚೇರಿ, ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ, ಜಿಲ್ಲಾ ಖಜಾನೆ ಮೊದಲಾದ ಕಚೇರಿಗಳು ಇಲ್ಲಿವೆ. ಆದಾಗ್ಯೂ ಕಟ್ಟಡದ ಸ್ವಚ್ಛತೆಗೆ ಮಾತ್ರ ಯಾರೂ ಗಮನ ಹರಿಸುತ್ತಿಲ್ಲ ಎನ್ನುವುದು ಇಲ್ಲಿಗೆ ಬರುವವರ ದೂರು.

ಭವನದ ಸ್ವಾಗತ ದ್ವಾರದಲ್ಲಿಯೇ ರಾಶಿ ದೂಳು ಮೆತ್ತಿಕೊಂಡಿದ್ದು, ಒಳಗೆ ಹೋದಂತೆ ವಿವಿಧ ಮಹಡಿಗಳಲ್ಲಿ ಗೋಡೆಗಳ ಮೇಲೆಲ್ಲ ಕಪ್ಪನೆಯ ಬಲೆ ಕಾಣತೊಡಗುತ್ತದೆ. ಇನ್ನೂ ತಳ ಅಂತಸ್ತಿನ ಪಾಡು ಕೇಳುವಂತಿಲ್ಲ. ವಾಹನ ಗಳ ನಿಲುಗಡೆಗೆ ಮೀಸಲಾದ ಈ ಜಾಗ  ಹೇಗೆಂದರೆ ಹಾಗೆ ಬಳಸಿಕೊಳ್ಳ ಲಾಗುತ್ತಿದೆ.

ಒಂದು ಮೂಲೆಯಲ್ಲಿ ಬ್ಯಾಲೆಟ್‌ ಡಬ್ಬಗಳ ರಾಶಿ ಹಾಕಲಾಗಿದ್ದು, ಅಲ್ಲೆಲ್ಲ ಕಸ ಚೆಲ್ಲಾಡಿದೆ. ಒಂದೆರಡು ಕೆಟ್ಟು ನಿಂತ ಹಳೆಯ ಕಾರುಗಳನ್ನು ಇಲ್ಲಿಯೇ ನಿಲ್ಲಿಸಲಾಗಿದೆ. ಇಲ್ಲಿಯೇ ಒಂದು ಮೂಲೆ ಯಲ್ಲಿ ಮುರಿದ ಖುರ್ಚಿ ಬಿಸಾಡ ಲಾಗಿದೆ.

ಎಚ್ಚೆತ್ತುಕೊಳ್ಳದ ಸಿಬ್ಬಂದಿ: ತಳಮ ಹಡಿಯಲ್ಲಿರುವ ದಾಖಲೆಗಳ ಕೊಠಡಿಗೆ ಕೆಲವು ತಿಂಗಳ ಹಿಂದೆ ಬೆಂಕಿ ಬಿದ್ದು ಅಲ್ಲಿನ ದಾಖಲೆಗಳೆಲ್ಲ ಸುಟ್ಟು ಹೋಗಿ ದ್ದವು. ಅದಾಗಿ ಎಷ್ಟೋ ದಿನಗಳಾಗಿ ದ್ದರೂ ಇಂದಿಗೂ ಈ ಕೊಠಡಿಯನ್ನು ಶುಚಿಗೊಳಿಸುವ ಕಾರ್ಯ ಆಗಿಲ್ಲ. ಅರೆಬರೆ ಬೆಂದ ದಾಖಲೆ ಪತ್ರಗಳು ಹಾಗೆಯೇ ಬಿದ್ದಿವೆ.

ಅಗ್ನಿ ಅವಘಡದಿಂದ ಇಡೀ ತಳ ಮಹಡಿಯ ಮೇಲ್ಬಾಗ ಪೂರ್ತಿ ಕಪ್ಪಾಗಿದೆ. ಅದನ್ನು ತೊಳೆದು ಸುಣ್ಣ–ಬಣ್ಣ ಹೊಡೆಸುವ ಕಾರ್ಯ ನಡೆದಿಲ್ಲ. ಹೀಗಾಗಿ ನೆಲ ಅಂತಸ್ತು ಭೂತದ ಬಂಗಲೆ ಯಂತೆ ಗೋಚರಿಸತೊಡಗಿದೆ.

ತಿಂದು ಬಿಸಾಡಿದ ಊಟದ ಎಲೆಗಳು, ಚೆಲ್ಲಿದ ಅನ್ನ, ಗುಡಿಸಿ ಬಿಸಾಡಿದ ಕಸ... ಹೀಗೆ ಎಲ್ಲವನ್ನೂ ಕಿಟಕಿಗಳ ಪಕ್ಕವೇ ಸುರಿಯಲಾಗುತ್ತಿದೆ.

ಭವನದ ಸುತ್ತ ಪಾರ್ಥೇನಿಯಂ ಕಳೆ ಮಂಡಿ ಎತ್ತರಕ್ಕೆ ಬೆಳೆದು ನಿಂತಿದ್ದರೂ ಅದನ್ನು ಕೀಳುವವರಿಲ್ಲ. ಹೂವಿನ ಗಿಡಗಳನ್ನು ಕಾಣುವುದು ದೂರದ ಮಾತೇ ಸರಿ. ತಳ ಮಹಡಿಯಲ್ಲಿ ಪಾರ್ಕಿಂಗ್‌ಗೆಂದು ಜಾಗ ಬಿಟ್ಟಿದ್ದರೂ ಹೇಗೆಂದರೆ ಹಾಗೆ ವಾಹನ ನಿಲ್ಲಿಸ ಲಾಗುತ್ತಿದೆ. ಪ್ರವೇಶ ದ್ವಾರದ ಮುಂದೆಯೇ ನಾಲ್ಕಾರು ಬೈಕ್ ಅಡ್ಡಲಾಗಿ ನಿಲ್ಲಿಸಿದರೂ ಕೇಳುವವರು ಇಲ್ಲದಾಗಿದೆ.

ಇಷ್ಟೆಲ್ಲ ಅವ್ಯವಸ್ಥೆ ಇರುವ ಮಿನಿ ವಿಧಾನಸೌಧದಲ್ಲಿ ಮೊದಲು ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಸರ್ಕಾರಿ ಕಚೇರಿ ಎಂದರೆ ದೇವಸ್ಥಾನಕ್ಕೆ ಬಂದಷ್ಟೇ ಖುಷಿ ಆಗುವಂತಿರಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

**

ಪ್ರತ್ಯೇಕ ಅನುದಾನವಿಲ್ಲ

‘ಮಿನಿ ವಿಧಾನಸೌಧ ಲೋಕೋ ಪಯೋಗಿ ಇಲಾಖೆಯ ಉಸ್ತುವಾರಿ ಯಲ್ಲಿ ನಿರ್ಮಿಸಿದ್ದು, ಅದರ ನಿರ್ವಹಣೆಯಲ್ಲಿಯೇ ಕಟ್ಟಡವಿದೆ. ಆದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ. ಕಟ್ಟಡದ ನಿರ್ವಹಣೆಗೆಂದು ಪ್ರತ್ಯೇಕವಾದ ಅನುದಾನ ಇಲ್ಲದಿರುವ ಕಾರಣ ಶುಚಿತ್ವ ಕಾಯ್ದುಕೊಳ್ಳುವುದು ಸವಾಲಾಗಿದೆ’ ಎನ್ನುತ್ತಾರೆ ಉಪ ವಿಭಾಗಾಧಿಕಾರಿ ರಾಜೇಂದ್ರ  ಪ್ರಸಾದ್

**

ಭದ್ರತೆಗೆ ಯಾರೂ ಇಲ್ಲ!

ಇಷ್ಟು ದೊಡ್ಡ ಕಟ್ಟಡದ ಭದ್ರತೆಯ ಸಲುವಾಗಿ ಯಾವೊಬ್ಬ ಸಿಬ್ಬಂದಿಯನ್ನೂ ಈವರೆಗೆ ನೇಮಿಸಿಕೊಂಡಿಲ್ಲ.

ಸಿಸಿಟಿವಿಗಳನ್ನು ಅಳವಡಿಸಿಕೊಳ್ಳುವುದು ದೂರದ ಮಾತು. ತಾಲ್ಲೂಕು ಪಂಚಾಯಿತಿ, ಕಂದಾಯ ಇಲಾಖೆಯ ನಡುವೆ ಈ ವಿಷಯದಲ್ಲಿ ಸಾಮರಸ್ಯ ಮೂಡಿಲ್ಲ. ಹೀಗಾಗಿ ಎಲ್ಲರೂ ತಮ್ಮ ತಮ್ಮ ಕಚೇರಿಗಳನ್ನಷ್ಟೇ ಸ್ವಚ್ಛವಾಗಿಟ್ಟು ಕೊಂಡಿದ್ದು, ಉಳಿದ ಜಾಗ ಪಾಳು ಬಿದ್ದಂತೆ ಆಗುತ್ತಿದೆ.

‘ಮಿನಿ ವಿಧಾನಸೌಧ ಯಾರಿಗೆ ಎಷ್ಟು ಸೇರಿದ್ದು ಎಂಬ ವಿಷಯದಲ್ಲಿಯೇ ಗೊಂದಲ ಇದ್ದು, ಈ ಬಗ್ಗೆ ನಿರ್ದಿಷ್ಟ ದಾಖಲೆಗಳು ಇಲ್ಲ. ಕನಿಷ್ಠ ಸರ್ಕಾರದಿಂದ ಅನುದಾನ ಸಿಗುವವರೆಗೆ ಇಲ್ಲಿರುವ ಎಲ್ಲ ಇಲಾಖೆ, ವಿಭಾಗಗಳು ನಿರ್ವಹಣೆಯ ವೆಚ್ಚ ಹಾಕಿ ಅದಕ್ಕೆಂದು ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಆಗ ಮಾತ್ರ ಇಡೀ ಕಟ್ಟಡವನ್ನು ಶುಚಿಯಾಗಿ ಇಟ್ಟುಕೊಳ್ಳಲು ಸಾಧ್ಯ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ,ಎಂ. ಮಹದೇವಯ್ಯ.

**

ಅಗ್ನಿ ಅನಾಹುತಕ್ಕೀಡಾದ ಸ್ಥಳದ ನವೀಕರಣಕ್ಕೆ ₹16 ಲಕ್ಷ ಮೊತ್ತದ ಪ್ರಸ್ತಾವ ಸಲ್ಲಿಸಲಾಗಿದೆ. ನಿರ್ವಹಣೆಗೆ ಪ್ರತ್ಯೇಕ ಅನುದಾನ ಇಲ್ಲದಿರುವ ಸಮಸ್ಯೆಗೆ ಕಾರಣ
-ರಾಜೇಂದ್ರ ಪ್ರಸಾದ್‌,
ಉಪ ವಿಭಾಗಾಧಿಕಾರಿ

**

ಮಿನಿ ವಿಧಾನಸೌಧದ ಕಟ್ಟಡ ನಿರ್ವಹಣೆಯು ಇಲ್ಲಿರುವ ಎಲ್ಲ ಇಲಾಖೆಗಳಿಗೂ ಸೇರಿದ್ದಾಗಿದೆ. ಅದಕ್ಕೆ ತಗುಲುವ ವೆಚ್ಚದಲ್ಲಿ ನಾವು ಒಂದು ಪಾಲು ಭರಿಸಲು ಸಿದ್ಧರಿದ್ದೇವೆ.
-ಡಿ.ಎಂ. ಮಹದೇವಯ್ಯ
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT