ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾಲಮನ್ನಾ

Last Updated 17 ಮೇ 2017, 6:51 IST
ಅಕ್ಷರ ಗಾತ್ರ

ಸೈದಾಪುರ (ಯಾದಗಿರಿ ಜಿಲ್ಲೆ): ‘ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಗಳಿಸಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿನ ರೈತರ ಸಂಪೂರ್ಣ ಸಾಲಮನ್ನಾ ಮಾಡಲಾಗುವುದು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಹೇಳಿದರು.

‘ಸಮೀಪದ ಸೈದಾಪುರ ಗ್ರಾಮದಲ್ಲಿ ಮಂಗಳವಾರ ಗುರುಮಠಕಲ್ ಕ್ಷೇತ್ರದಲ್ಲಿ ‘ಜೆಡಿಎಸ್ ನಡಿಗೆ ಬದಲಾವಣೆ ಕಡೆಗೆ’ ಪಾದಯಾತ್ರೆ ಸಮಾರೋಪ ಸಮಾರಂಭ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ನೀವು ಶಕ್ತಿ ನೀಡಿರುವ ಈ ರಾಜ್ಯದ ನಾಯಕರಿಗೆ ರೈತರ ಆತ್ಮಹತ್ಯೆ ಕಾಣುತ್ತಿಲ್ಲ. ರೈತರ ಆತ್ಮಹತ್ಯೆಗೆ ಪರಿಹಾರ ನೀಡುವುದಿರಲಿ ಕನಿಷ್ಠ ರೈತರ ಕುಟುಂಬಗಳಿಗೆ ಸಾಂತ್ವನ ಕೂಡ ಹೇಳದೇ ರೈತ ವಿರೋಧಿ ನಿಲುವು ಪ್ರದರ್ಶಿಸಿದ್ದಾರೆ’ ಎಂದು ಹರಿಹಾಯ್ದರು.

‘ನನ್ನ ಅಲ್ಪ ಆಡಳಿತಾವಧಿಯಲ್ಲಿ ಗ್ರಾಮವಾಸ್ತವ್ಯದ ಮೂಲಕ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದೆ. ಹೈದರಾಬಾದ್‌ ಕರ್ನಾಟಕ ಭಾಗದ ಹುಮನಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಮುಸ್ಲಿಂ ರೈತನ ಮನೆಯಲ್ಲಿ ವಾಸ್ತವ್ಯ ಹೂಡಿದ್ದೆ.

ಆಗ ರೈತರ ಸಂಕಷ್ಟ ಕಂಡು ಅಚಲ ನಿರ್ಧಾರದಿಂದ ಸಾಲಮನ್ನಾ ಘೋಷಿಸಿದೆ. ಆತ್ಮಹತ್ಯೆ ಕೈಬಿಡುವಂತೆ ರೈತರಿಗೆ ಮನೋಸ್ಥೈರ್ಯ ತುಂಬಿದೆ. ಆದರೆ, ಇಂದು ರೈತರ ಬಗ್ಗೆ ಸರ್ಕಾರ ನಡೆದುಕೊಳ್ಳುವ ರೀತಿ ನಾಚಿಕೆಪಡುವಂತಾಗಿದೆ’ ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.

‘₹ 1.80 ಲಕ್ಷ ಕೋಟಿ ಬಜೆಟ್‌ ಮಂಡಿಸಿರುವ ಸರ್ಕಾರಕ್ಕೆ ಕೇವಲ ₹55 ಸಾವಿರ ಕೋಟಿ ರೈತರ ಬೆಳೆಸಾಲ ಮನ್ನಾ ಮಾಡಲು ಆಗುತ್ತಿಲ್ಲವೇ?’ ಎಂದು ಪ್ರಶ್ನಿದರು.
‘ಈಗಾಗಲೇ ರಾಜ್ಯದಲ್ಲಿ 1,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ರೈತರ ಕುಟುಂಬಗಳು ಬೀದಿಪಾಲಾಗಿದ್ದರೂ, ರೈತರ ಕುಟುಂಬಗಳಿಗೆ ಸರ್ಕಾರ ರಕ್ಷಣೆ ನೀಡುವ ಕೆಲಸ ಮಾಡಿಲ್ಲ. ಇನ್ನು ಕೇಂದ್ರ ಸರ್ಕಾರ ಕೈಗಾರಿಕೆಗಳಿಗೆ ತೆರಿಗೆ ವಿನಾಯಿತಿಗೆ ₹10 ಲಕ್ಷ ಕೋಟಿ ನೀಡಿದೆ.

ಆದರೆ, ರೈತರ ಸಾಲಮನ್ನಾಕ್ಕೆ ಹಣ ಇಲ್ಲ ಎಂದು ಹೇಳುತ್ತಿದೆ ಎಂದ ಅವರು, ಅಂತಹ ಜಾಯಮಾನ ನಮ್ಮ ಪಕ್ಷದಲ್ಲಿ ಇಲ್ಲ. ರೈತರ ಕಣ್ಣೀರಿಗೆ ಮಿಡಿದಿದ್ದೇವೆ. ರೈತರು, ರೈತ ಮಕ್ಕಳು ಉಳಿಯಬೇಕು ಎಂಬ ಅಚಲ ನಿಲುವು ನಮ್ಮದು’ ಎಂದರು.

ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ನಾಗನಗೌಡ ಕಂದಕೂರ ಮಾತನಾಡಿ,‘ಸುದೀರ್ಘ ಅವಧಿ ಗುರುಮಠಕಲ್ ಮತಕ್ಷೇತ್ರ ಆಳಿದ ಜನಪ್ರತಿನಿಧಿ ಖರ್ಗೆ ಮತಕ್ಷೇತ್ರದಲ್ಲಿ ನಿಜಾಮ ಸಂಸ್ಕೃತಿ ಸ್ಥಾಪಿಸಿದ್ದಾರೆ. ಪ್ರಶ್ನಿಸುವವರ ಮೇಲೆ ಪೊಲೀಸರಿಂದ ರೌಡಿಪಟ್ಟ ಕಟ್ಟಿ ಮುಗಿಸಿದ್ದಾರೆ. ನನ್ನ ವಿರುದ್ಧ 20 ಪ್ರಕರಣಗಳನ್ನು ಹಾಕಿಸಿ ರೌಡಿಪಟ್ಟಿಯಲ್ಲಿ ಹೆಸರು ನೋಂದಾಯಿಸಿದರು.

ಜನರ ಆಶೀರ್ವಾದ ಸಿಕ್ಕಿದ್ದರಿಂದ ಆ ಪ್ರಕರಣಗಳಿಂದ ಖುಲಾಸೆ ಆಗಿ ಬಂದೆ. ಈಗ ನನ್ನ ಮಗ ಶರಣಗೌಡನ ಮೇಲೆ ಪ್ರಕರಣ ದಾಖಲಿಸಿ ರೌಡಿಪಟ್ಟಿಗೆ ಸೇರಿಸಲು ಖರ್ಗೆ ಸಾಹೇಬ್ರು ಕಸರತ್ತು ನಡೆಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜೆಡಿಎಸ್‌ ಪಕ್ಷದಲ್ಲಿ ನಿಷ್ಠರಾದವರಿಗೆ ಆದ್ಯತೆ ಸಿಗಬೇಕು. ‘ಬಿ’ ಫಾರಂ ಹುಡುಕಿಕೊಂಡು ಬಂದವರ ಬಗ್ಗೆ ಎಚ್ಚರದಿಂದಿರಬೇಕು. ಹಿರಿಯ ಕಾರ್ಯಕರ್ತರಿಗೆ ಮನ್ನಣೆ ಸಿಗುವಂತಾಗಬೇಕು’ ಎಂದು ಕುಮಾರಸ್ವಾಮಿ ಅವರಿಗೆ ಕಿವಿಮಾತು ಹೇಳಿದರು.

ಮುಖಂಡರಾದ ವೆಂಕಟರಾಮ ನಾಗನಗೌಡ, ಬಂಡೆಪ್ಪ ಕಾಶೆಂಪೂರ, ಫಾರುಖ್ ಮಾತನಾಡಿದರು. ಇದಕ್ಕೂ ಮೊದಲು 18 ದಿನಗಳ ಕಾಲ ಪಾದಯಾತ್ರೆ ಸಾರಥ್ಯ ವಹಿಸಿದ್ದ ಜೆಡಿಎಸ್‌ ರಾಜ್ಯ ಯುವ ಘಟಕ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಓಟಿಗಾಗಿ ಭರವಸೆ ನೀಡುತ್ತಿಲ್ಲ’

‘ರಾಷ್ಟ್ರೀಯ ಪಕ್ಷಗಳಿಂದ ರೈತರ ಸಾಲಮನ್ನಾ ಮಾಡಲು ಆಗುತ್ತಿಲ್ಲ. ಪ್ರಾದೇಶಿಕ ಪಕ್ಷ ಜೆಡಿಎಸ್‌ನಿಂದ ಸಾಲಮನ್ನಾ ಸಾಧ್ಯವೇ? ಓಟಿಗಾಗಿ ಈ ರೀತಿ ಆಮಿಷ ಒಡ್ಡಲಾಗುತ್ತಿದೆ ಎಂಬ ಅನುಮಾನ ಬೇಡ. 20 ತಿಂಗಳ ಅವಧಿಯಲ್ಲಿ ಬಡವರಿಗಾಗಿ, ರೈತರಿಗಾಗಿ ದುಡಿದಿದ್ದೇನೆ. ಹಲವು ಜನೋಪಕಾರಿ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಮಾತುತಪ್ಪಿ ಅಧಿಕಾರ ಹಿಡಿಯುವ ಯಾವುದೇ ಆಸೆ ನನಗಿಲ್ಲ’ ಎಂದು ಎಚ್.ಡಿ.ಕುಮಾರ ಸ್ವಾಮಿ ಹೇಳಿದರು.

‘ಗುರುಮಠಕಲ್‌ ಮತಕ್ಷೇತ್ರ ವ್ಯಾಪ್ತಿಯಲ್ಲಿ 236 ಕೆರೆಗಳಿಗೆ. ನೀವು 35 ವರ್ಷ ಅಧಿಕಾರ ನೀಡಿರುವ ಜನಪ್ರತಿನಿಧಿಗಳು ಇದುವರೆಗೂ ಕೆರೆ–ಕಟ್ಟೆಗಳನ್ನು ತುಂಬಿಸಿಲ್ಲ. ಮುಂದಿನ ಚುನಾವಣೆಯಲ್ಲಿ ನಾಗನಗೌಡರನ್ನು ಗೆಲ್ಲಿಸಿ ಕಳುಹಿಸಿ ಒಂದು ವರ್ಷದಲ್ಲಿ ಕೆರೆ–ಕಟ್ಟೆ ತುಂಬಿಸುವ ಯೋಜನೆ ಜಾರಿಗಳಿಸಿ ಮತಕ್ಷೇತ್ರಕ್ಕೆ ಕಾಲಿಡುತ್ತೇನೆ. ಅಲ್ಲಿವರೆಗೂ ಇತ್ತ ಹೆಜ್ಜೆ ಹಾಕುವುದಿಲ್ಲ’ ಎಂದು ಆಶ್ವಾಸನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT