ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ಆರ್ಭಟಕ್ಕೆ ಕೊಚ್ಚಿ ಹೋದ ಕಾರು

Last Updated 17 ಮೇ 2017, 7:08 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ತಾಲ್ಲೂಕಿನಾದ್ಯಂತ ಸೋಮವಾರ ಬೆಳಗಿನ ಜಾವ ಸುರಿದ ಗುಡುಗು, ಸಿಡಿಲು ಮಿಶ್ರಿತ ಭಾರೀ ಮಳೆಗೆ ಕೆರೆ, ಒಡ್ಡು ವಾರಿಗಳು ತುಂಬಿ ಹರಿದರೆ, ಅಂಗಡಿ, ಮನೆಗಳಿಗೆ ನೀರು ನುಗ್ಗಿ, ಸಾಕಷ್ಟು ಹಾನಿಯೂ ಸಂಭವಿಸಿದೆ.

ಪಟ್ಟಣದ ತಾಳಿಕೋಟೆ ಬೈಪಾಸ್ ರಸ್ತೆಯ ನಾಗಠಾಣ ಸಾಮಿಲ್ ಬಳಿ ಹೊಲದಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದರಿಂದ ಅಲ್ಲಿದ್ದ ಸಾಮಿಲ್, ಗ್ಯಾರೇಜ್‌ಗೆ ತೊಂದರೆ ಆಗಿದ್ದು ಸಾಮಿಲ್‌ನ ಕಟ್ಟಿಗೆ ದಿಮ್ಮಿಗಳು ನೀರಲ್ಲಿ ತೇಲಾಡಿವೆ.

ಗ್ಯಾರೇಜಿಗೆ ರಿಪೇರಿಗೆ ಬಂದಿದ್ದ ವಾಹನ ಗಳು ನೀರಲ್ಲಿ ನಿಂತಿವೆ. ಪಟ್ಟಣದ ಬಹುತೇಕ ತಗ್ಗು ಪ್ರದೇಶದಲ್ಲಿದ್ದ ಅಂಗಡಿ, ಮನೆಗಳೊಳಕ್ಕೆ ನೀರು ಹೊಕ್ಕು ಹಾನಿ ಸಂಭವಿಸಿದೆ.
ಕಿತ್ತೂರು ಚನ್ನಮ್ಮನ ವೃತ್ತದ ಬಳಿ ಮಳೆ ನೀರು ನಿಂತು ಹುಡ್ಕೋ ಬಡಾವಣೆಗೆ ಹೋಗುವ ಜನತೆ ಪರದಾಡುವಂತಾ ಯಿತು. ಅಲ್ಲಿ ನಿಂತ ಕೆಸರು ನೀರು ತೆಗೆ ಯಲು ಪುರಸಭೆಯ ಜೆಸಿಬಿ ಹಾಗೂ ಟ್ರ್ಯಾಕ್ಟರ್‌ ಬಳಸಿ ರಸ್ತೆ ಸ್ವಚ್ಛಗೊಳಿಸುವ ಕೆಲಸ ನಡೆಯಿತು.

ಕೆಲವು ಅಂಗಡಿಗಳಿಗೆ ನುಗ್ಗಿದ ನೀರು ಖಾಲಿ ಮಾಡಲು ಅಗ್ನಿಶಾಮಕ ದಳದ ತಂಡ ಸಹ ತನ್ನ ನೀರೆತ್ತುವ ಮೋಟಾರ್ ಅಳವಡಿಸಿ ಅಂಗಡಿಗಳಲ್ಲಿನ ನೀರು ಹೊರಹಾಕಲು ಕೆಲಸ ಮಾಡಿತು. ವಿವಿಧ ಬಡಾವಣೆಗಳ ಹಲವು ಮನೆಗಳಲ್ಲಿ ಚರಂಡಿ ನೀರು ಹೊಕ್ಕು ಸಾರ್ವಜನಿಕರು ತೊಂದರೆಗೀಡಾಗಿದ್ದಾರೆ. ಒಳಚರಂಡಿ ಕಾಮಗಾರಿ ನಡೆದಿದ್ದು ಅಲ್ಲಲ್ಲಿ ರಸ್ತೆ ಮೇಲೆ ಕೆಸರಿನ ಗದ್ದೆ ನಿರ್ಮಾಣಗೊಂಡು ಸಂಚಾರ ಸಮಸ್ಯೆ ಉಂಟಾಗಿದೆ.

ತಾಲ್ಲೂಕಿನ ತಂಗಡಗಿಯಲ್ಲಿ ಹೆಚ್ಚಿನ ರಭಸದ ಮಳೆ ಆಗಿದ್ದು ಸಾಮಿಲ್‌ಗಳಲ್ಲಿನ ಮರದ ದಿಮ್ಮಿಗಳು ನೀರುಪಾಲಾಗಿವೆ. ಕೆಲವೆಡೆ ಮೇಲ್ಛಾವಣಿಗೆ ಹೊದಿಸಿದ್ದ ತಗಡು ಹಾರಿಹೋಗಿವೆ. ತಗ್ಗುಪ್ರದೇಶ ಗಳಲ್ಲಿ ನೀರು ನಿಂತು ತೊಂದರೆ ಆಗಿದೆ.

ಅವಧಿಗೂ ಮುನ್ನವೇ ಪ್ರಾರಂಭ ಗೊಂಡಿರುವ ಕೃತಿಕಾ ಮುಂಗಾರು ಮಳೆ ಮೊದಲ ದಿನವೇ ತನ್ನ ರೌದ್ರಾವತಾರ ಪ್ರದರ್ಶಿಸಿದ್ದು ‘ಮಗ ಉಂಡರೆ ಕೇಡಲ್ಲ, ಮಳೆ ಬಂದರೆ ನಷ್ಟವಿಲ್ಲ’ ಎಂಬ ರೈತರ ಗಾದೆ ಮಾತಿನಂತೆ ಈ  ಮಳೆ ರೈತರಿಗೆ ಅನುಕೂಲ ಕಲ್ಪಿಸದಿದ್ದರೂ ಮಳೆಯಿಂದ ಹಸಿಯಾಗಿರುವ ಜಮೀನುಗಳಲ್ಲಿ ಹರ ಗುವ, ಕಸ, ಕಳೆ ತೆಗೆದು ಬಿತ್ತನೆಗೆ ತಯಾರಿ ನಡೆಸುವ ಚಟುವಟಿಕೆಗಳಿಗೆ ನಾಂದಿ ಹಾಡಿದೆ.

ಭರ್ಜರಿ ಮಳೆ
ತಾಳಿಕೋಟೆ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಭಾನುವಾರ ರಾತ್ರಿ ಭರ್ಜರಿ ಮಳೆಯಾಗಿದೆ. ಪಟ್ಟಣದಲ್ಲಿ ಒಂದೆಡೆ ರಸ್ತೆ ಸುಧಾರಣೆ ನಡೆದಿವೆ. ಇನ್ನೂ ಸುಧಾರಣೆ ಯಾಗದ ರಸ್ತೆಗಳಲ್ಲಿ ರಾತ್ರಿ ಸುರಿದ ಮಳೆಯಿಂದ ಗುಂಡಿ ನಿರ್ಮಾಣವಾಗಿ ದ್ದವು. ಅಂಬಾಭವಾನಿ ಮಂದಿರದಿಂದ ಸಮುದಾಯ ಆರೋಗ್ಯ ಕೇಂದ್ರದ ಹಿಂದೆ ಬಸ್‌ ನಿಲ್ದಾಣದ ರಸ್ತೆಯಲ್ಲಿ ಆಳದ ಗುಂಡಿಗಳಲ್ಲಿ ನೀರು ನಿಂತು ಕೆರೆಯನ್ನು ನೆನಪಿಸಿದವು.

ಸೋಮವಾರ ಇಡೀ ದಿನ ಮೋಡ ಕವಿದ ವಾತಾವರಣವಿದ್ದು ಬೇಸಿಗೆ ಮರೆಸಿ ತಂಪಿನ ಮಳೆಗಾಲದ ದಿನ ನೆನಪಿಸಿತು. ಪಟ್ಟಣ ಸೇರಿದಂತೆ ಪೀರಾಪುರ, ಬಂಡೆಪ್ಪನ ಸಾಲವಾಡಗಿ ನಾಗೂರ, ಕಲ್ಲದೇವಚನಳ್ಳಿ ಮೊದಲಾದ ಗ್ರಾಮಗಳಲ್ಲಿ ಉತ್ತಮ ಮಳೆಯಿಂದ ಜಮೀನು ಗಳಲ್ಲಿ ನೀರು ಹರಿದಾಡಿ ಒಡ್ಡುವಾರಿ ಗಳಲ್ಲಿ ನೀರು ನಿಂತ ದೃಶ್ಯ ಸಾಮಾನ್ಯ ವಾಗಿತ್ತು.

ನೆಲಕ್ಕುರುಳಿದ ರಸಬಾಳೆ
ಆಲಮಟ್ಟಿ(ನಿಡಗುಂದಿ): ಸೋಮವಾರ ನಸುಕಿನ ಜಾವ ಸುರಿದ ಭಾರಿ, ಗಾಳಿ ಗುಡುಗು ಸಮೇತ ಮಳೆಗೆ ಆಲಮಟ್ಟಿಯ ಪೆಟ್ರೋಲ್‌ ಪಂಪ್ ಬಳಿ ಎರಡು ಎಕರೆ ವಿಸ್ತಾರದಲ್ಲಿ ಬೆಳೆದಿದ್ದ ಕಟಾವಿಗೆ ಬಂದಿದ್ದ ರಸಬಾಳೆ ಗಿಡಗಳು ನೆಲಕಚ್ಚಿವೆ.

ಆಲಮಟ್ಟಿ ಪೆಟ್ರೋಲ್ ಪಂಪ್‌ನಿಂದ ನಿಡಗುಂದಿಗೆ ಹಾದುಹೋಗುವ ಮಾರ್ಗ ಮಧ್ಯದ ಶ್ರೀಕಾಂತ ರುದ್ರಪ್ಪ ಕಲಾದಗಿ ಅವರಿಗೆ ಸೇರಿದ ಸುಮಾರು ಆರು ಎಕರೆ ಪ್ರದೇಶದಲ್ಲಿದ್ದ ಬಾಳೆಯ ತೋಟದಲ್ಲಿ ಎರಡು ಎಕರೆ ಪ್ರದೇಶದ ರಸಬಾಳೆ ಗಿಡಗಳು ನೆಲಕ್ಕುರುಳಿವೆ.

ಸೋಮವಾರ ನಸುಕಿನ ಜಾವ ನಾಲ್ಕು ಗಂಟೆ ಸುಮಾರು ಭಾರಿ ಪ್ರಮಾಣ ದಲ್ಲಿ ಬೀಸಿದ ಗಾಳಿ, ಗುಡುಗು ಮಳೆಗೆ ಗಾತ್ರದಲ್ಲಿ ಎತ್ತರವಿರುವ ರಸಬಾಳೆ ಗಿಡಗಳು ಬಿದ್ದಿವೆ.
ನೀರಿನ ಕೊರತೆ, ಕಾಡುವ ಬರದ ನಡುವೆಯೂ ಮಧ್ಯೆದಲ್ಲಿಯೂ ಕಷ್ಟಪಟ್ಟು ಬೆಳೆದ ಪರಿಣಾಮ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತನಿಗೆ ಇದರಿಂದ ಹಾನಿ ಸಂಭವಿಸಿದೆ. 

ವಿಜಯಪುರ ಜಿಲ್ಲೆಯಲ್ಲಿ ಕಳೆದ ವರ್ಷ ಶ್ರೀಕಾಂತ ಒಬ್ಬರೇ ನಂಜನ ಗೂಡಿನ ರಸಬಾಳೆ ಬೆಳೆದು ಉತ್ತಮ ಇಳುವರಿ ಪಡೆದಿದ್ದರು. ಈ ಬಾರಿಯೂ ಉತ್ತಮ ಇಳುವರಿಯ ನಿರ್ಲಕ್ಷ್ಯಕ್ಕೆ ಮಳೆರಾಯ ತಣ್ಣೀರೆರೆಚಿದ್ದಾನೆ.

ಇನ್ನುಳಿದ ನಾಲ್ಕು ಎಕರೆ ಪ್ರದೇಶ ದಲ್ಲಿ ಜವಾರಿ ಬಾಳೆಹಣ್ಣು ಗಿಡಗಳಿಗೆ ಹೆಚ್ಚಿಗೆ ಹಾನಿ ಸಂಭವಿಸಿಲ್ಲ. ಕೇವಲ ರಸಬಾಳೆಗಳು ಮಾತ್ರ ನೆಲಕ್ಕುರುಳಿವೆ. ರಸಬಾಳೆ ಗಾತ್ರದಲ್ಲಿ ಸುಮಾರು ಆರ ರಿಂದ ಏಳು ಅಡಿ ಎತ್ತರದಲ್ಲಿರುವು ದರಿಂದ ಈ ಹಾನಿ ಸಂಭವಿಸಿದೆ.

ಅಲ್ಲದೇ ಅವರ ಜಮೀನಿನಲ್ಲಿಯೇ ಇದ್ದ ಬೇವಿನ ಮರವೂ ನೆಲಕಂಡಿದೆ. ರಸಬಾಳೆಗಳು ಬಾಳೆ ಗೊನೆಬಿಟ್ಟಿದ್ದು, ಮೇ ಅಂತ್ಯಕ್ಕೆ ಮಾರುಕಟ್ಟೆಗೆ  ಕಳುಹಿಸಬೇಕು ಎಂಬ ನಿರೀಕ್ಷೆಯಲ್ಲಿದ್ದ ರೈತ ಶ್ರೀಕಾಂತ, ಚಿಂತಾಕ್ರಾಂತರಾಗಿ ದ್ದಾರೆ.

ಪರಿಹಾರಕ್ಕೆ ಆಗ್ರಹ: ಎರಡು ಎಕರೆ ಪ್ರದೇಶದಲ್ಲಿ ಬೆಳೆದ ರಸಬಾಳೆ ಗಿಡ ಗಳಿಂದ ಆರ್ಥಿಕ ನಷ್ಟ ಸಂಭವಿಸಿದ್ದು ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಶ್ರೀಕಾಂತ ಆಗ್ರಹಿಸಿದ್ದಾರೆ.

ಕೊಚ್ಚಿಹೋದ ತಾತ್ಕಾಲಿಕ ಸೇತುವೆ

ಮೈಲೇಶ್ವರ (ತಾಳಿಕೋಟೆ): ಗ್ರಾಮದ ಪಕ್ಕದಲ್ಲಿ ಇರುವ ಹಳ್ಳಕ್ಕೆ ಅಡ್ಡಲಾಗಿ ಮನಗೂಳಿ–ದೇವಾಪುರ ರಾಜ್ಯ ಹೆದ್ದಾರಿ 61 ನಿರ್ಮಾಣದ ಹಿನ್ನೆಲೆ ಯಲ್ಲಿ ನಿರ್ಮಿಸಿರುವ ತಾತ್ಕಾಲಿಕ ಮಣ್ಣಿನ ಸೇತುವೆ ಭಾನುವಾರ ಸುರಿದ ಮಳೆಯಿಂದಾಗಿ ಕುಸಿದಿದ್ದು, ಸೇತುವೆ ಮೇಲೆ ಹೋಗುತ್ತಿದ್ದ ಮಾರುತಿ 800 ಕಾರು ಪ್ರವಾಹದ ನೀರಿನಲ್ಲಿ ಕೊಚ್ಚಿ ಕೊಂಡು ಹೋದ ಘಟನೆ ಸೋಮ ವಾರ ನಸುಕಿನ ಜಾವ ನಡೆದಿದೆ, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಳ್ಳಕ್ಕೆ ಬಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಅದರ ಜೊತೆ ಸೇತುವೆ ನಿರ್ಮಾಣಕ್ಕೆ ಬಳಸಲಾಗಿದ್ದ ಪ್ಲೈವುಡ್‌ಗಳು ಹರಿದು ಬಂದು ನೀರು ಹೋಗುವುದಕ್ಕೆ ಅಡ್ಡಲಾಗಿದ್ದರಿಂದ ಸಂಗ್ರಹಗೊಂಡ ನೀರು ಹೆಚ್ಚಾಗಿ ಸೇತುವೆ ಕುಸಿತ ಉಂಟಾಗಿದೆ ಎನ್ನಲಾಗಿದೆ.

ಇದೇ ವೇಳೆ ಅಲ್ಲಿಗೆ ಹುಣಸಗಿ ಯಿಂದ ತಾಳಿಕೋಟೆ ಕಡೆಗೆ ಬರುತ್ತಿದ್ದ ಮಾರುತಿ 800 ಕಾರು ಸೇತುವೆ ಮೇಲೆ ಬರುತ್ತಿದ್ದಂತೆ ಕುಸಿಯತೊಡ ಗಿದೆ. ತಕ್ಷಣ ಸೇತುವೆ ಕುಸಿಯುವು ದನ್ನು ಕಂಡ ಚಾಲಕ ಕಾರಿನಲ್ಲಿದ್ದವ ರೆನ್ನೆಲ್ಲ  ಇಳಿಸಿ ಕಾರನ್ನು ಮುಂದೆ ಸಾಗಿಸಲು ಪ್ರಯತ್ನಿಸುತ್ತಿರುವಾಗಲೇ ಸೇತುವೆ ದೀಢೀರ್ ಕುಸಿತ ಕಂಡು ಅದರ ಪ್ರವಾಹಕ್ಕೆ ಸುಮಾರು ಐದುನೂರು ಅಡಿಗೂ ದೂರ ಕೊಚ್ಚಿಕೊಂಡು ಹೋಗಿದೆ.

ಸೇತುವೆ ಕುಸಿತ ಕಂಡಿದ್ದರಿಂದ ತಾಳಿಕೋಟೆ-ವಿಜಯಪುರದಿಂದ ಹೈದ್ರಾಬಾದ್, ಯಾದಗಿರಿ, ರಾಯಚೂರ, ಲಿಂಗಸೂರ ಕಡೆಗೆ ಹೋಗುವ ಪ್ರಯಾಣಿಕರಿಗೂ ಹಾಗೂ ವಾಹನಗಳು ಪರದಾಟ ನಡೆಸು ವಂತಾಯಿತು.

ವಿಷಯ ತಿಳಿದು ಸ್ಥಳಕ್ಕೆ ಬಂದ ಮನಗೂಳಿ–ದೇವಾಪುರ ರಾಜ್ಯ ಹೆದ್ದಾರಿ ಕಾಮಗಾರಿ ನಿರ್ವಹಿ ಸುತ್ತಿರುವ ಮೇ.ಸದ್ಬವ್ ಎಂಜಿನಿಯ ರಿಂಗ್ ಕಂಪೆನಿಯವರು ಮಧ್ಯಾಹ್ನದ ಹೊತ್ತಿಗೆ ನೂತನ ಸೇತುವೆ ಮೇಲೆ ತಾತ್ಕಾಲಿಕವಾಗಿ ವಾಹನ ಚಲಿಸುವಂತೆ ಮಾಡಿ ಪ್ರಯಾಣಿಕರಿಗೆ ಅನಕೂಲ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT