ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ

Last Updated 17 ಮೇ 2017, 7:14 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಅವಳಿ ನಗರದಲ್ಲಿ ಸರಗಳ್ಳತನ ಪ್ರಕರಣಗಳು ಮತ್ತೆ ಮರುಕಳಿಸುತ್ತಿವೆ. ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬರುತ್ತಿರುವ ಕಳ್ಳರು ಮಹಾನಗರದಲ್ಲಿ ನಾಲ್ಕು ದಿನಗಳಲ್ಲಿ ಏಳು ಕಡೆ ಸರಗಳ್ಳತನ ಮಾಡಿದ್ದಾರೆ.

ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಎರಡು ಹಾಗೂ ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿ ಎರಡು ಸರಗಳ್ಳತನ ಪ್ರಕರಣ ನಡೆದಿವೆ. ಕಾಟನ್‌ ಮಾರುಕಟ್ಟೆಯ ಉತ್ತರ ಸಂಚಾರ ಠಾಣೆ ಸಮೀಪದ ಮಾರುತಿ ದೇವಸ್ಥಾನಕ್ಕೆ ತೆರಳಿ ಮನೆಗೆ ವಾಪಸ್ಸಾಗುತ್ತಿದ್ದ ದೇಶಪಾಂಡೆನಗರ ಮಾನ್ವಿ ರಸ್ತೆ ನಿವಾಸಿ ಶಾರದಾ ಪುರಾಣಿಕ್‌ ಅವರ  ₹1 ಲಕ್ಷ ಮೌಲ್ಯದ ಚಿನ್ನದ ಸರವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಅದೇ ದಿನ 20 ನಿಮಿಷಗಳ ಬಳಿಕ ಕುಂಭಕೋಣಂ ಪ್ಲಾಟ್‌ನಲ್ಲಿ ಪುಷ್ಪಾ ಭಾಗವತ್‌ ಅವರ ₹60 ಸಾವಿರ ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದಾರೆ.

ಗದಗ ರಸ್ತೆಯ ಸಿದ್ಧಾರ್ಥ ಕಾಲೊನಿ ನಿವಾಸಿ ಮಂಜುಳಾ ತೇರದಾಳ ಎಂಬುವವರು ವಾಸವಿನಗರ ಕಲ್ಯಾಣ ಮಂಟಪ ಎದುರು ಭಾನುವಾರ ಮಧ್ಯಾಹ್ನ 1.15ರ ಸುಮಾರಿಗೆ ರಸ್ತೆಯಲ್ಲಿ ಬೈಕ್‌ ಸವಾರರಿಬ್ಬರು ₹4 ಲಕ್ಷ ಮೌಲ್ಯದ ಚಿನ್ನದ ನೆಕ್ಲೆಸ್‌ ಮತ್ತು ಸರ ದೋಚಿದ್ದಾರೆ.

ಅಪೂರ್ವನಗರದಲ್ಲಿ ಸೋಮವಾರ ರಾತ್ರಿ ಗೀತಾ ಈಶ್ವರ ಭೂತೆ ಅವರ ಬಳಿ 15 ಗ್ರಾಂ ತೂಕದ ಚಿನ್ನದ ಸರ ಅಪಹರಿಸಿದ್ದಾರೆ. ಮಂಗಳವಾರ ರಾತ್ರಿಯಷ್ಟೇ ಉಪನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಟನ್‌ ಮಾರುಕಟ್ಟೆಯ ಲಕ್ಷ್ಮಿ ವೇ ಬ್ರಿಜ್‌ ಬಳಿ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದಾರೆ. ಸರಣಿ ಸರಗಳ್ಳತನ ಪ್ರಕರಣಗಳು ಮಹಿಳೆಯರು ಮತ್ತು ಪೊಲೀಸರ ನಿದ್ದೆಗೆಡಿಸಿವೆ.

ಒಂಟಿ ಮಹಿಳೆಯರೇ ಟಾರ್ಗೆಟ್: ರಸ್ತೆಯಲ್ಲಿ ರಾತ್ರಿ ಹೊತ್ತು ಒಂಟಿಯಾಗಿ ಓಡಾಡುವ ಮಹಿಳೆಯರನ್ನೇ ಸರಗಳ್ಳರು ಗುರಿಯಾಗಿಸಿಕೊಂಡಿದ್ದಾರೆ. ನಾಲ್ಕು ಪ್ರಕರಣಗಳು ರಾತ್ರಿ ಹೊತ್ತಿನಲ್ಲೇ ನಡೆದಿವೆ. ನಗರದಲ್ಲಿ ನಡೆದ ಐದು ಸರಗಳ್ಳತನ ಪ್ರಕರಣಗಳಲ್ಲೂ ಇಬ್ಬರೇ ಆರೋಪಿಗಳು ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

‘ಅವಳಿ ನಗರದಲ್ಲಿ ಸರಗಳ್ಳತನ ಪ್ರಕರಣ ನಡೆಯುತ್ತಿವೆ. ಅವುಗಳಿಗೆ ಕಡಿವಾಣ ಹಾಕುವ ಸಲುವಾಗಿ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿರ್ಜನ ಪ್ರದೇಶಗಳಲ್ಲಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದು, ಅನುಮಾನಾಸ್ಪದವಾಗಿ ತಿರುಗಾಡುವ ದ್ವಿಚಕ್ರ ವಾಹನ ಸವಾರರನ್ನು ವಿಚಾರಣೆ ಮಾಡಲಾಗುತ್ತಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಪೊಲೀಸ್‌ ಕಮಿಷನರ್‌ ಪಾಂಡುರಂಗ ರಾಣೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಿಳೆಯರು ಒಂಟಿಯಾಗಿ ಹೊರಗಡೆ ಓಡಾಡಬಾರದು. ಒಂದು ವೇಳೆ ಹೋದರೂ ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಹೋಗಬೇಕು. ಆಭರಣಗಳ ಪ್ರದರ್ಶನ ಮಾಡಬಾರದು. ದ್ವಿಚಕ್ರ ವಾಹನದಲ್ಲಿ ಅನುಮಾನಾಸ್ಪದವಾಗಿ ಓಡಾಡುವವರ ಬಗ್ಗೆ ಕೂಡಲೇ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು’ ಎಂದು ಅವರು ತಿಳಿಸಿದರು.

*

ಸರಗಳ್ಳರ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ದ್ವಿಚಕ್ರ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ
ಪಾಂಡುರಂಗ ರಾಣೆ
ಪೊಲೀಸ್‌ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT