ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ವೈರಿಗಳ ಏಟು– ಎದಿರೇಟು!

Last Updated 17 ಮೇ 2017, 8:56 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಗ್ರಾಮೀಣ ಶಾಸಕ ಬಿಜೆಪಿಯ ಸಂಜಯ ಪಾಟೀಲ ಹಾಗೂ ಈ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಅವರ ರಾಜಕೀಯ ವೈರತ್ವದ ಭಾಷಣಕ್ಕೆ ಮತ್ತು ಏಟು–ಎದಿರೇಟು ನೀಡುವುದಕ್ಕೆ  ವಿಟಿಯು ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಕಾರ್ಯಾಗಾರದ ವೇದಿಕೆ ಸಾಕ್ಷಿಯಾಯಿತು.

ಹೆಬ್ಬಾಳಕರ ಕಾಂಗ್ರೆಸ್‌ ಪಕ್ಷದ ಕುರಿತು ಮಾತನಾಡಿದರು. ಇದಕ್ಕೆ ತಿರುಗೇಟು ಎನ್ನುವಂತೆ ಸಂಜಯ ಪಾಟೀಲ ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಪ್ರಸ್ತಾಪಿಸಿದರು.
‘ವಿಟಿಯು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಕ್ಷೇತ್ರದಲ್ಲಿ ಇನ್ನೊಂದು ಕಾರ್ಯಕ್ರಮಕ್ಕೆ ಹೋಗುವುದಕ್ಕಾಗಿ ಇಲ್ಲಿಂದ ತೆರಳುತ್ತಿದ್ದೇನೆ’ ಎಂದ ಲಕ್ಷ್ಮಿ ಮಾತಿಗೆ ಕ್ಷೇತ್ರದ ಶಾಸಕ ಸಂಜಯ, ‘ಕೆಲವರು 24 ಗಂಟೆ ರಾಜಕೀಯವನ್ನೇ ಮಾತನಾಡುತ್ತಾರೆ.

ಬಾತ್‌ ರೂಂ ಚೆನ್ನಾಗಿದೆ ಎಂದು ಇಡೀ ದಿನ ಅಲ್ಲಿಯೇ ಇರಲಾಗುತ್ತದೆಯೇ? ಎಂದು ಪರೋಕ್ಷವಾಗಿ ಛೇಡಿಸಿದರು. ಶಾಸಕರು ಮಾತು ಶುರು ಮಾಡುತ್ತಿದ್ದಂತೆಯೇ ಲಕ್ಷ್ಮಿ ಹೆಬ್ಬಾಳಕರ ನಿರ್ಗಮಿಸಿದ್ದರು! ಇದನ್ನು ಪ್ರಸ್ತಾಪಿಸಿದ ಸಂಜಯ,  ‘ಲಕ್ಷ್ಮಿ ಅಕ್ಕ ಭಾಷಣ ಮುಗಿಸಿ ಹೊರಡಬಾರದಿತ್ತು. ಇರಬೇಕಿತ್ತು’ ಎಂದೂ ಟಾಂಗ್‌ ನೀಡಿದರು. ಇದು ನೆರೆದಿದ್ದವರ ಮನರಂಜನೆಗೂ ಕಾರಣವಾಯಿತು.

ಇದಕ್ಕೂ ಮುನ್ನ ಮಾತನಾಡಿದ ಲಕ್ಷ್ಮಿ, ‘ದೇಶಕ್ಕೆ ಕಾಂಗ್ರೆಸ್‌ ಅಪಾರ ಕೊಡುಗೆ ನೀಡಿದೆ. ಕಾಂಗ್ರೆಸ್‌ಗೆ ಶಕ್ತಿ ತುಂಬಿದವರಲ್ಲಿ ಮಹಿಳೆಯರ ಪಾಲು ಅಧಿಕವಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಪುರುಷರಷ್ಟೇ ಮಹಿಳೆಯರೂ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ’ ಎಂದರು.

‘ಜೋರಾಗಿ ಮಾತನಾಡಿದರೆ ಗಯ್ಯಾಳಿ, ಜೋರು ಬಾಯಿ ಎನ್ನುತ್ತಾರೆ. ಹೀಗೆ ಹೇಳುವವರು ಮಹಿಳೆಯರೇ ಎನ್ನುವುದು ವಿಷಾದದ ಸಂಗತಿ. ಕಿತ್ತೂರು ರಾಣಿ ಚನ್ನಮ್ಮ ಹುಟ್ಟಿದ ಈ ಜಿಲ್ಲೆಯಲ್ಲಿ ಮಹಿಳೆಗೆ ಇನ್ನಷ್ಟು ರಾಜಕೀಯ ಪ್ರಾತಿನಿಧ್ಯ ದೊರೆಯಬೇಕಾಗಿದೆ’ ಎಂದು ಹೇಳಿದರು.

‘ಸಾಲ ತೀರಿಸಲಾಗದೆ ಸಾವಿರಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇದೆಯೇ? ಮಕ್ಕಳನ್ನು ಸಾಕಬೇಕು.

ಅವರಿಗೆ ಒಳ್ಳೆಯ ಭವಿಷ್ಯ ದೊರೆಯುವಂತೆ ಮಾಡಬೇಕು ಎಂದು  ಕೂಲಿ ಮಾಡಿಕೊಂಡಾದರೂ ಛಲದಿಂದ ಬದುಕುತ್ತಾಳೆ. ಇಂಥ ಮಹಿಳೆಯರು ಮಾದರಿಯಾಗಬೇಕು’ ಎಂದು ತಿಳಿಸಿದರು.

ನಂತರ ಮಾತನಾಡಿದ ಸಂಜಯ ಪಾಟೀಲ, ‘ನಾನು ಮಾತನಾಡುವ ಉದ್ದೇಶವಿರಲಿಲ್ಲ. ಆದರೆ, ನನಗಿಂತ ಮುಂಚೆ ಮಾತನಾಡಿದವರು ರಾಜಕೀಯ ಪ್ರಸ್ತಾಪಿಸಿದರು. ಹೀಗಾಗಿ, ಒಂದಷ್ಟು ಹೇಳಬೇಕಾಗಿದೆ. ಹಿಂದೆ ಜನರು ಪತ್ರ ಬರೆಯುತ್ತಿದ್ದರು. ಈಗ ಕಾಲ ಬದಲಾಗಿದೆ.

ಮೊಬೈಲ್‌ ಬಂದಿದೆ. ಜನರು ಪತ್ರದಿಂದ, ಮೊಬೈಲ್‌ಗೆ ಬದಲಾಗಿದ್ದಾರೆ. ಏನು ಬೇಕು, ಯಾರು ಬೇಕು ಎನ್ನುವುದನ್ನು ಜನರು ಆಯ್ಕೆ ಮಾಡಿಕೊಳ್ಳುತ್ತಾರೆ ಬಿಡಿ’ ಎಂದಾಗ ಸಭಾಂಗಣದಲ್ಲಿ ನಗೆಯ ಅಲೆ ಮೂಡಿತು.

‘ಜನಪ್ರತಿನಿಧಿ ಆಗಲು ಹಣೆಯಲ್ಲಿ ಬರೆದಿರಬೇಕು. ಕೆಲವರು ಹೋದಲ್ಲೆಲ್ಲಾ ರಾಜಕೀಯ ಮಾತನಾಡುತ್ತಾರೆ. ನಾನು ಗ್ರಾಮೀಣ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕ. ತಮ್ಮ ಕಷ್ಟಕ್ಕೆ ಸ್ಪಂದಿಸುವವರಿಗೆ ಜನ ಬೆಂಬಲ ನೀಡುತ್ತಾರೆ.

ಕೆಲವರು ನಕಾರಾತ್ಮಕವಾಗಿಯೇ ಯೋಚಿಸುತ್ತಾರೆ ಹಾಗೂ ಮಾತನಾಡುತ್ತಾರೆ. ನಾನು ಆಶಾವಾದಿ. ಒಳ್ಳೆಯದರ ಬಗ್ಗೆ ಚಿಂತಿಸುತ್ತೇನೆ’ ಎಂದು ಪರೋಕ್ಷವಾಗಿ ಲಕ್ಷ್ಮಿಗೆ ತಿರುಗೇಟು ನೀಡಿದರು. ನಾಯಕರಿಬ್ಬರ ರಾಜಕೀಯ ಮೇಲಾಟ ಆಯೋಜಕರ ಇರುಸು –ಮುರುಸಿಗೆ ಕಾರಣವಾಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT