ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಲ್ಲಾಳದಲ್ಲಿ ಕೆರೆ ಕಾಯಕದ ಉತ್ಸಾಹ

Last Updated 17 ಮೇ 2017, 9:08 IST
ಅಕ್ಷರ ಗಾತ್ರ

ಶಿರಸಿ: ನಿರಂತರ ಎರಡು ವರ್ಷಗಳ ಬರಗಾಲ, ಹನಿ ನೀರಿಗೆ ಪರಿತಪಿಸಬೇಕಾದ ಮಹಿಳೆಯರ ಕಷ್ಟ ಈ ಗ್ರಾಮಸ್ಥರನ್ನು ಎಚ್ಚರಿಸಿದೆ. ಊರಿನ ಜಲಪಾತ್ರೆಯ ಪುನಶ್ಚೇತನಕ್ಕೆ ಜನರೆಲ್ಲ ಒಗ್ಗಟ್ಟಾಗಿದ್ದಾರೆ. ಜಲಮೂಲ ಸಂರಕ್ಷಣೆಯ ಪಣತೊಟ್ಟಿರುವ ತಾಲ್ಲೂಕಿನ ಉಲ್ಲಾಳದ ಜನರು ದೇಣಿಗೆ ಸಂಗ್ರಹಿಸಿ ಕೆರೆ ಹೂಳೆತ್ತುವ ಕಾಯಕ ಪ್ರಾರಂಭಿಸಿದ್ದಾರೆ.

ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಲ್ಲಾಳದಲ್ಲಿ 150 ಮನೆಗಳಿವೆ. ಈ ಬಾರಿಯ ಬೇಸಿಗೆ ಊರಿನ ಜನರು ಅಕ್ಷರಶಃ ನಲುಗುವಂತೆ ಮಾಡಿದೆ. 600ಕ್ಕೂ ಅಧಿಕ ಜನಸಂಖ್ಯೆ ಇರುವ ಇಲ್ಲಿನ ನಿವಾಸಿಗಳು ಬೊಗಸೆ ನೀರನ್ನು ಖಾಲಿ ಮಾಡಲೂ ಯೋಚಿಸಬೇಕಾದ ಸ್ಥಿತಿ ಇದೆ.

ಊರಿನ ಇಂತಹ ಗಂಭೀರ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ ಸಾರ್ವಜನಿಕರು ಪ್ರಮುಖರಾದ ಸುರೇಶ ನಾಯ್ಕ, ಎಸ್.ಜಿ.ಭಟ್ಟ, ಪರಮೇಶ್ವರ ಪೂಜಾರಿ, ಮಹಾಬಲೇಶ್ವರ ಹೆಗಡೆ, ಶ್ರೀಧರ ಹೆಗಡೆ, ಗಂಗಾಧರ ಹೆಗಡೆ, ದತ್ತಾತ್ರೇಯ ಹೆಗಡೆ, ಆನಂದ ನಾಯ್ಕ, ಗಣಪತಿ ಭಟ್ಟ ನೇತೃತ್ವದಲ್ಲಿ ನಾಲ್ಕು ಎಕರೆ ವಿಸ್ತೀರ್ಣದ ಕೆರೆ ಹೂಳೆತ್ತುವ ಕಾರ್ಯ ನಡೆಸುತ್ತಿದ್ದಾರೆ.

‘ಅಡಿಕೆ ತೋಟ ಹೊಂದಿರುವ ಕೃಷಿಕರು ಎಕರೆಗೆ ₹ 5000 ಮೊತ್ತ ನೀಡಿದ್ದಾರೆ. ಅಂದಾಜು ₹ 1.50 ಲಕ್ಷ ಸಂಗ್ರಹವಾಗಿದೆ. ಪ್ರತಿ ದಿನ ಒಂದು ಜೆಸಿಬಿ ಬಗೆದು ಹಾಕುವ ಮಣ್ಣನ್ನು ನಾಲ್ಕು ಟ್ರ್ಯಾಕ್ಟರ್‌ಗಳು ಕೆರೆಯಿಂದ ಹೊರ ಸಾಗಿಸುತ್ತಿವೆ.

ಈಗಾಗಲೇ ಒಂದು ಎಕರೆಯಲ್ಲಿ ಹೂಳು ತೆಗೆಯಲಾಗಿದೆ’ ಎನ್ನುತ್ತಾರೆ ಸ್ಥಳೀಯ ಎಸ್‌.ಜಿ. ಭಟ್ಟ. ಬಿಸಲಕೊಪ್ಪ ಗ್ರಾಮ ಪಂಚಾಯ್ತಿಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇದೇ ಕೆರೆಯ ಕಾಮಗಾರಿ ನಡೆಯುತ್ತಿದೆ. ಗ್ರಾಮಸ್ಥರು ಕೆರೆಯ ಇನ್ನೊಂದು ಬದಿಯಿಂದ ಹೂಳೆತ್ತುವ ಕಾರ್ಯ ಮಾಡುತ್ತಿದ್ದಾರೆ. 15 ದಿನಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ಉಲ್ಲಾಳದ ಕೆರೆ ಪ್ರಸಕ್ತ ಸಾಲಿನ ಬರದ ಬೇಗೆಗೆ ಸಂಪೂರ್ಣ ಬತ್ತಿ ಹೋಗಿದೆ. ಇದರಿಂದ ಜಾನುವಾರು ಕುಡಿಯುವ ನೀರಿಗೆ ಹಾಗೂ ಕೃಷಿ ಚಟುವಟಿಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಕೆರೆ ಹೂಳೆತ್ತುವುದರಿಂದ ಮುಂದಿನ ದಿನಗಳಲ್ಲಿ ಈ ಭಾಗದ ಜಲಮೂಲಗಳು ಸಂಪದ್ಭರಿತಗೊಂಡು ಅಂತರ್ಜಲ ಮಟ್ಟ ಹೆಚ್ಚಾಗಬಹುದು ಎಂಬ ನಿರೀಕ್ಷೆಯಿಂದ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದ್ದೇವೆ’ ಎಂದು ಸುರೇಶ ನಾಯ್ಕ ಹೇಳಿದರು.

*

ಉಲ್ಲಾಳ ಕೆರೆಯ ಹೂಳೆತ್ತಲು ಊರಿನ ಕೃಷಿಕರ ಮನೆಯಿಂದ ಸಂಗ್ರಹಿಸಿದ ವಂತಿಗೆ ಹಣ ₹ 1.50 ಲಕ್ಷಕ್ಕೆ ತಲುಪಿದೆ. ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ
ಎಸ್‌.ಜಿ. ಭಟ್ಟ
ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT