ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಪುನರಾವರ್ತಿಸುವ ಹುರುಪಿನಲ್ಲಿದೆ ವಾರ್ನರ್‌ ಪಡೆ: ಮುಯ್ಯಿ ತೀರಿಸಲು ಕಾದಿದೆ ಗಂಭೀರ್‌ ಬಳಗ

Last Updated 17 ಮೇ 2017, 14:24 IST
ಅಕ್ಷರ ಗಾತ್ರ

ಬೆಂಗಳೂರು: ಐಪಿಎಲ್‌ 10ನೇ ಆವೃತ್ತಿಯ ಎಲಿಮಿನೇಟರ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಎರಡು ಬಾರಿಯ ಚಾಂಪಿಯನ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಗಳು ಮುಖಾಮುಖಿಯಾಗಲಿದ್ದು, ಸದ್ಯ ಟಾಸ್‌ ಗೆದ್ದಿರುವ ಗಂಭೀರ್‌ ಪಡೆ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.

2016ರ ಆವೃತ್ತಿಯಲ್ಲಿಯೂ ಎಲಿಮಿನೇಟರ್‌ ಪಂದ್ಯದಲ್ಲಿ ಈ ಎರಡು ತಂಡಗಳೇ ಮುಖಾಮುಖಿಯಾಗಿದ್ದ ಕಾರಣ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಫಿರೋಜ್‌ ಷಾ ಕೋಟ್ಲಾ ಅಂಗಳದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ವಾರ್ನರ್‌ ಬಳಗ ರೈಡರ್ಸ್‌ ತಂಡವನ್ನು 22ರನ್‌ ಅಂತರದಲ್ಲಿ ಮಣಿಸಿತ್ತು. ಬಳಿಕ ಎರಡನೇ ಕ್ವಾಲಿಫೈಯರ್‌ ಹಾಗೂ ಫೈನಲ್‌ ಪಂದ್ಯಗಳಲ್ಲಿ ಕ್ರಮವಾಗಿ ಗುಜರಾತ್‌ ಲಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

ಅಂತಹದೇ ಮತ್ತೊಂದು ಸಾಧನೆ ಮಾಡುವ ಉತ್ಸಾಹದಲ್ಲಿರುವ ವಾರ್ನರ್‌ ಬಳಗಕ್ಕೆ ಅಡ್ಡಿಪಡಿಸಲು ಗಂಭೀರ್‌ ಪಡೆ ಸಜ್ಜಾಗಿದೆ. ಮೇಲ್ನೋಟಕ್ಕೆ ರೈಸರ್ಸ್‌ ಗೆಲ್ಲುವ ನೆಚ್ಚಿನ ತಂಡವಾಗಿ ಕಂಡರೂ ಉಭಯ ತಂಡಗಳು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಸಮಬಲದಿಂದ ಕೂಡಿವೆ.

ಮನೀಷ್‌–ರಾಬಿನ್‌ ಆಕರ್ಷಣೆ: ನೈಟ್‌ ರೈಡರ್ಸ್‌ ತಂಡದಲ್ಲಿರುವ ಕರ್ನಾಟಕದ ಮನೀಷ್‌ ಪಾಂಡೆ ಮತ್ತು ರಾಬಿನ್‌ ಉತ್ತಪ್ಪ ಅವರು ಎಲ್ಲರ ಆಕರ್ಷಣೆಯಾಗಿದ್ದಾರೆ. ಎಂತಹುದೇ ಪರಿಸ್ಥಿತಿಯಲ್ಲೂ ಸ್ಫೋಟಕ ಆಟ ಆಡಿ ಪಂದ್ಯದ ಚಿತ್ರಣ ಬದಲಿಸಬಲ್ಲ ಸಾಮರ್ಥ್ಯ ಹೊಂದಿರುವ ಇವರು ತವರಿನ ಅಭಿ ಮಾನಿಗಳ ಎದುರು ಮೋಡಿ ಮಾಡಲು ಕಾಯುತ್ತಿದ್ದಾರೆ.

ಯೂಸುಫ್‌ ಪಠಾಣ್‌ ಮತ್ತು ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಅವರ ಮೇಲೂ ಭರವಸೆ ಇಡಬ ಹುದಾಗಿದೆ. ಬೌಲಿಂಗ್‌ನಲ್ಲಿ ಉಮೇಶ್‌ ಯಾದವ್‌, ಕ್ರಿಸ್‌ ವೋಕ್ಸ್‌, ಗ್ರ್ಯಾಂಡ್‌ಹೋಮ್‌, ಸುನಿಲ್‌ ನಾರಾಯಣ್‌ ಮತ್ತು ಕುಲದೀಪ್‌ ಯಾದವ್‌ ಅವರು ವಿಕೆಟ್‌ ಪಡೆದರೂ ಹೆಚ್ಚು ರನ್‌ ಬಿಟ್ಟು ಕೊಡುತ್ತಿದ್ದಾರೆ.

ಚಿನ್ನಸ್ವಾಮಿ ಅಂಗಳ ಬೌಲರ್‌ಗಳ ಸ್ನೇಹಿ ಆಗಿರುವ ಕಾರಣ ಗಂಭೀರ್‌ ಪಡೆ ಬೌಲಿಂಗ್‌ನಲ್ಲಿ ಇನ್ನಷ್ಟು ಸುಧಾರಣೆ ಮಾಡಿಕೊಳ್ಳುವುದು ಅಗತ್ಯ. ಹಾಗಾದಲ್ಲಿ ಗೆಲುವು ಕಷ್ಟವಾಗಲಾರದು.

ಭುವಿ ಬಲ ರೈಸರ್ಸ್‌: ವೇಗಿ ಭುವನೇಶ್ವರ್‌ ಕುಮಾರ್‌, ಬೌಲಿಂಗ್‌ನಲ್ಲಿ ಹಾಲಿ ಚಾಂಪಿ ಯನ್ನರ ಶಕ್ತಿಯಾಗಿದ್ದಾರೆ. ಈ ಬಾರಿ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಭುವಿ (25) ಅಗ್ರಸ್ಥಾನ ಹೊಂದಿದ್ದಾರೆ. ಸಿದ್ದಾರ್ಥ್‌ ಕೌಲ್‌ ಮತ್ತು ಮಹಮ್ಮದ್‌ ಸಿರಾಜ್‌ ಅವರೂ ತಮ್ಮ ಬತ್ತಳಿಕೆ ಯಲ್ಲಿರುವ ವೇಗದ ಅಸ್ತ್ರಗಳನ್ನು ಪ್ರಯೋಗಿಸಿ ಗಂಭೀರ್‌ ಪಡೆಯ ಹೆಡೆಮುರಿಕಟ್ಟ ಬಲ್ಲರು.

ಆಫ್ಘಾನಿಸ್ಥಾನದ ಪ್ರತಿಭೆ ರಶೀದ್‌ ಖಾನ್‌ ಅವರ ಸ್ಪಿನ್‌ ಬಲವೂ ವಾರ್ನರ್‌ ಪಡೆಯ ಬೆನ್ನಿಗಿದೆ. ಆದರೆ ಫೀಲ್ಡಿಂಗ್‌ನಲ್ಲಿ ತಂಡ ಇನ್ನಷ್ಟು ಗುಣಮಟ್ಟದ ಸಾಮರ್ಥ್ಯ ತೋರುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT