ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಚ್ಚರ್ ನೋಡಿ

Last Updated 17 ಮೇ 2017, 19:30 IST
ಅಕ್ಷರ ಗಾತ್ರ
‘ಓಂಕಾರ ನಾದಾನುಸಂಧಾನಮೌ ಗಾನಮೇ ಶಂಕರಾಭರಣಮು ಶಂಕರ ಗಳ ನಿಗಳಮು...’
ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಕಂಠಸಿರಿಯಲ್ಲಿ ಎಲ್ಲಿಯೇ ಕೇಳಿದರೂ ಅಪಾರ ಜನಸಾಗರದ ಮುಂದೆ ಕೂತು ಹಾಡುತ್ತಿರುವ ಜೆ.ವಿ.ಸೋಮಯಾಜುಲು ಅವರ ಚಿತ್ರ ಪಕ್ಕನೇ ಕಣ್ಮುಂದೆ ಬರುತ್ತದೆ. 
 
ಅಷ್ಟರ ಮಟ್ಟಿಗೆ ಹಾಡಿನ ಶಾರೀರ ಮತ್ತು ನಟನ ಶರೀರ ಎರಡೂ ಹೊಂದಿಕೊಂಡಿವೆ. ಅದು ತೆಲುಗಿನ ‘ಶಂಕರಾಭರಣಂ’ ಸಿನಿಮಾದ ಹಾಡು. ಭಾರತೀಯ ಚಿತ್ರರಂಗದಲ್ಲಿ ಸಂಗೀತ ಪ್ರಧಾನ ಚಿತ್ರಗಳ ಇತಿಹಾಸದಲ್ಲಿಯೇ ಬಹಳ ಮಹತ್ವದ ಸ್ಥಾನ ಗಳಿಸಿರುವ ಚಿತ್ರ ತೆಲುಗು ಭಾಷೆಯ ‘ಶಂಕರಾಭರಣಂ’. 1980ರ ಆರಂಭದಲ್ಲಿ ಬಿಡುಗಡೆಯಾದ ಈ ಚಿತ್ರದ ನಿರ್ದೇಶಕರು, ಇತ್ತೀಚೆಗೆ ದಾದಾ ಸಾಹೇಬ ಪ್ರಶಸ್ತಿ ಪುರಸ್ಕಾರ ಪಡೆದಿರುವ ಕೆ. ವಿಶ್ವನಾಥ್‌.
 
‘ಶಂಕರಾಭರಣಂ’ ಚಿತ್ರಕ್ಕೆ ಸಿಕ್ಕ ಗೆಲುವೂ ಅಮೋಘವಾದದ್ದು. ಈ ಚಿತ್ರ ಬಿಡುಗಡೆಯಾಗಿದ್ದು ಒಂದೇ ಚಿತ್ರಮಂದಿರದಲ್ಲಿ. ಆರಂಭದಲ್ಲಿ ಸಿನಿಮಾ ನೋಡಲು ಜನರೇ ಬರಲಿಲ್ಲವಂತೆ. ಕೊನೆಗೆ ಅದರ ಹಾಡುಗಳು, ಕಥನಕ್ಕೆ ಮೊರೆಹೋಗಿ ಗುಂಪು ಗುಂಪಾಗಿ ಬರತೊಡಗಿದ ಜನರು ಈ ಸಿನಿಮಾವನ್ನು 216 ದಿನ ಓಡಿಸಿದರು.
 
ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವವರು ಕೆ.ವಿ. ಮಹದೇವನ್‌. ಅವರ ಸಂಯೋಜನೆಯ ಪ್ರತೀ ಹಾಡೂ ಕಾಡುವ ಗುಣವನ್ನು ಹೊಂದಿವೆ. ಗಾಯಕ ಎಸ್‌.ಬಿ. ಬಾಲಸುಬ್ರಹ್ಮಣ್ಯಂ ಅವರಿಗೂ ವೃತ್ತಿಬದುಕಿನಲ್ಲಿ ದೊಡ್ಡ ತಿರುವು ನೀಡಿದ ಚಿತ್ರ ಇದು. 
 
ಈ ಚಿತ್ರದಲ್ಲಿ ಜನಪ್ರಿಯ ಕರ್ನಾಟಕ ಸಂಗೀತಗಾರ ಶಂಕರಶಾಸ್ತ್ರಿಗಳ ಪಾತ್ರದಲ್ಲಿ ನಟಿಸಿರುವ ಜೆ.ವಿ. ಸೋಮಯಾಜುಲು ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದವರು.
 
ಸಂಪ್ರದಾಯ ಮತ್ತು ಮಾನವೀಯತೆಯ ಸಂಘರ್ಷ, ಆಧುನಿಕ  ಸಂಗೀತ ಮತ್ತು ಶಾಸ್ತ್ರೀಯ ಸಂಗೀತದ ನಡುವಿನ ಸಂಘರ್ಷ, ಉದಾರತೆ ಮತ್ತು ಸಂಕುಚಿತ ಮನಸ್ಥಿತಿಗಳ ನಡುವಿನ ಸಂಘರ್ಷ ಹೀಗೆ ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇರುವ ಹಲವು ನೆಲೆಗಳ ಸಂಘರ್ಷಗಳನ್ನು ಹೆಣೆದು ‘ಶಂಕರಾಭರಣಂ’ ಎಂಬ ಸಂಗೀತಮಾಲೆಯನ್ನು ಕಟ್ಟಿದ್ದಾರೆ ವಿಶ್ವನಾಥ್‌. 
 
ವಿಧುರ ಶಂಕರ ಶಾಸ್ತ್ರಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಎಂದರೆ ಅಪಾರ ಭಕ್ತಿ. ಅವರಿಗೆ ಒಬ್ಬಳು ಮಗಳೂ ಇದ್ದಾಳೆ. ಅವರ ಗಾಯನದ ಪರಮಭಕ್ತೆ ತುಳಸಿ. ಸಂಗೀತವೆಂದರೆ ಅವಳೊಳಗಿನ ನೃತ್ಯಗಾರ್ತಿ ಜಾಗೃತಳಾಗಿಬಿಡುತ್ತಾಳೆ.
 
ಶಂಕರ ಶಾಸ್ತ್ರಿಗಳನ್ನು ದೇವರ ಸ್ಥಾನದಲ್ಲಿ ಕಾಣುವ ಅವಳು ವೇಶ್ಯೆಯೊಬ್ಬಳ ಪುತ್ರಿ. ಈ ಕಳಂಕವೇ ಅವಳನ್ನು ಸಂಗೀತದಿಂದ ದೂರವಿರಿಸುತ್ತದೆ, ಅಲ್ಲದೇ ಮೈಮಾರಿಕೊಳ್ಳುವ ವೇಶ್ಯಾಕೂಪಕ್ಕೂ ತಳ್ಳಲು ಯತ್ನಿಸುತ್ತದೆ. ಆದರೆ ಅಲ್ಲಿಂದ ತಪ್ಪಿಸಿಕೊಂಡು ತಮ್ಮ ಸನ್ನಿಧಿಗೆ ಬರುವ ತುಳಸಿಯನ್ನು ಶಂಕರಶಾಸ್ತ್ರಿಗಳು ಸಂತೈಸಿ ಜತೆಗಿರಿಸಿಕೊಳ್ಳುತ್ತಾರೆ. ಅದರಿಂದ ಸಾಂಪ್ರದಾಯವಾದಿಗಳ ಕೆಂಗಣ್ಣಿಗೂ ಗುರಿಯಾಗುತ್ತಾರೆ. 
 
ಹಾಡಿನಿಂದಷ್ಟೇ ಅಲ್ಲ, ಗಟ್ಟಿಯಾದ ಕಥೆಯಿಂದಲೂ ‘ಶಂಕರಾಭರಣಂ’ ಗಮನಸೆಳೆಯುತ್ತದೆ. ತುಳಸಿಯಾಗಿ ಮಂಜು ಭಾರ್ಗವಿ, ಚಂದ್ರಮೋಹನ್, ಶಂಕರಶಾಸ್ತ್ರಿ ಪುತ್ರಿಯಾಗಿ ರಾಜ್ಯಲಕ್ಷ್ಮಿ, ಅಲ್ಲು ರಾಮಲಿಂಗಯ್ಯ ಅವರ ಅಭಿನಯವೂ ಗಮನಾರ್ಹವಾಗಿದೆ.
 
ಎಷ್ಟೇ ಆಧುನಿಕ ಸಂವೇದನೆಗಳು ಬಂದರೂ, ಒಮ್ಮೆ ಮಂಕಾದಂತೆ ಕಂಡರೂ ಪರಂಪರೆಯ ಸತ್ವದ ಶಕ್ತಿಯಿಂದ ಹರಿಯುತ್ತಿರುವ ಸಂಗೀತದ ತೊರೆ ತಲತಲಾಂತರಗಳನ್ನು ದಾಟಿ ಮುಂದೆ ಸಾಗುತ್ತಲೇ ಇರುತ್ತದೆ ಎಂಬ ಆಶಾವಾದದೊಂದಿಗೆ ಈ ಚಿತ್ರ ಕೊನೆಯಾಗುತ್ತದೆ.
 
ಹಾಗೆಯೇ ಎಲ್ಲ ಜಾತಿ, ಧರ್ಮ, ಅಂತಸ್ತುಗಳನ್ನು ಮೀರುವ ಶಕ್ತಿಯನ್ನೂ ಸಂಗೀತ ಕೊಡುತ್ತದೆ ಎಂಬುದನ್ನೂ ಈ ಸಿನಿಮಾ ಧ್ವನಿಸುತ್ತದೆ. ಯೂಟ್ಯೂಬ್‌ನಲ್ಲಿ ಶಂಕರಾಭರಣಂ ಸಿನಿಮಾವನ್ನು goo.gl/4m4Zol ಕೊಂಡಿ ಬಳಸಿ ನೋಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT