ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಐಷಾರಾಮಿ

ಮರ್ಸಿಡೆಸ್‌ ಸಿಎಲ್‌ಎ 200 ಡಿ
Last Updated 17 ಮೇ 2017, 19:30 IST
ಅಕ್ಷರ ಗಾತ್ರ
ಮರ್ಸಿಡೆಸ್‌ ಬೆಂಜ್‌ ವಾಹನವೆಂದರೆ ಅರ್ಧ ಕೋಟಿ ರೂಪಾಯಿ ಇದ್ದರೆ ಮಾತ್ರ ಶೋರೂಂ ಬಳಿ ತೆರಳಬೇಕು ಎನ್ನುವ ಮಾತನ್ನು ಸುಳ್ಳು ಮಾಡುವಂತೆ ತನ್ನ ಬೆಲೆಯನ್ನು ₹40 ಲಕ್ಷಕ್ಕಿಂತ  ಕೆಳಗೆ ಇಳಿಸಿಕೊಂಡಿರುವ ಮರ್ಸಿಡೆಸ್‌ ಸಿಎಲ್‌ಎ 200 ಐಷಾರಾಮಿತನದಲ್ಲಿ ಮಾತ್ರ ಕಿಂಚಿತ್ತು ಚೌಕಾಸಿ ಮಾಡಿಕೊಂಡಿಲ್ಲ.
 
ತಂತ್ರಜ್ಞಾನ, ನಯ– ನಾಜೂಕು, ವೇಗವನ್ನು ಉಳಿಸಿಕೊಂಡು ವಾಹನದ ಗಾತ್ರ ಮತ್ತು ಬೆಲೆಯನ್ನು ಮಾತ್ರವೇ ಇಳಿಸಿಕೊಂಡಿದೆ.
ಕೆಲ ತಿಂಗಳ ಹಿಂದೆ ಇದೇ ಕಂಪೆನಿಯ ಜಿಎಲ್‌ಎ ಕಾರನ್ನು ಓಡಿಸುವ ಅವಕಾಶ ದೊರಕಿತ್ತು. ಇದೀಗ ಸಿಎಲ್‌ಎ 200ಡಿ ಅನ್ನು ಕಂಪೆನಿಯ ಕೋರಿಕೆ ಮೇಲೆ ನಗರ ಮತ್ತು ಹೆದ್ದಾರಿಯಲ್ಲಿ ಹಗಲು ರಾತ್ರಿ ಓಡಿಸಲಾಯಿತು. ಒಟ್ಟಾರೆ ಹೇಳುವುದಾದರೆ ಇದು ಆರಂಭಿಕ ಹಂತದ ಸಣ್ಣದಾದ ಐಷಾರಾಮಿ ಸೆಡಾನ್‌. 
 
ಗಾತ್ರ ಮತ್ತು ಕಾರ್ಯಕ್ಷಮತೆಯಲ್ಲಿ ಆಡಿಯ ಎ4ಗೆ ಹೋಲಿಸಬಹುದಾದರೂ ವಿನ್ಯಾಸದಲ್ಲಿ ಸಿಎಲ್‌ಎ 200ಗೆ ಹೆಚ್ಚು ಅಂಕ ನೀಡಬೇಕಾಗುತ್ತದೆ. ಬೆಣ್ಣೆಯಲ್ಲಿ ಕೂದಲು ತೆಗೆಯುವಂತಹ ಅಂಕುಡೊಂಕು, ಮುಂಭಾಗದ ಕಂಪ್ಯೂಟರ್‌ ನಿಯಂತ್ರಿತ ಎಲ್‌ಇಡಿ ಹೆಡ್‌ಲ್ಯಾಂಪ್‌, ಏರೋಡೈನಮಿಕ್‌  ವಿನ್ಯಾಸ,  ಬಿಲ್ಲಿನಂಥ ಶರೀರ, ಎದ್ದು ಕಾಣುವ ಹಿಂಭಾಗದ ಟೈಲ್‌ ಲ್ಯಾಂಪ್‌ ವಾಹನಕ್ಕೆ ಗೌರವ ಭಾವನೆಯನ್ನು ತರುತ್ತದೆ.
 
ಕಳೆದ ವರ್ಷ ವಾಹನಕ್ಕೆ ತಂದ ಕೆಲ ಬದಲಾವಣೆಗಳಲ್ಲಿ ಡೈಮಂಡ್‌ ಕಟ್‌ನಂತಹ ಗ್ರಿಲ್‌, ಭಾರತದ ರಸ್ತೆಗಳ ಹಳ್ಳ–ದಿಣ್ಣೆಗಳಲ್ಲಿ ಬಂಪರ್‌ ಬಡಿಯದಂತೆ ಮಾಡಿದ ಬದಲಾವಣೆ ಫಲ ನೀಡಿದೆ.
 
2.1 ಲೀಟರ್‌ ಎಂಜಿನ್‌ 0–100 ಕಿ.ಮೀ ಗೆ ಕೇವಲ 9.5 ಸೆಕೆಂಡ್‌ಗಳಲ್ಲೇ ಜಿಗಿಯುತ್ತದೆ. ಮೈಲೇಜ್‌ ಸಹ ಅಷ್ಟೇ ಉತ್ತಮವಾಗಿದೆ. ಏಳು ಸ್ಪೀಡ್‌ನ ಆಟೊಮ್ಯಾಟಿಕ್‌ ಗೇರ್‌ ಬಹಳ ನಯ. ಗೇರ್‌ ಬದಲಾವಣೆ ಸಂದರ್ಭದಲ್ಲಿ ವಾಹನ ಜರ್ಕ್ ಒಡೆಯುವುದೇ ಇಲ್ಲ. ಹೆದ್ದಾರಿಗಳಲ್ಲಿ ಓಡುವಾಗ ಮ್ಯಾನುವಲ್‌ ಗೇರ್‌ ಬಳಸದಿದ್ದರೆ ಲೀಟರ್‌ಗೆ 24 ಕಿ.ಮೀ ಸಹ ನೀಡುತ್ತದೆ ಎನ್ನುವುದು ಮೈಲೇಜ್‌ ಚಾರ್ಟ್‌ನಿಂದ ಪತ್ತೆಯಾಯಿತು.

 
ಹೆದ್ದಾರಿಯಲ್ಲಿ ಆಟೋ  ಮೋಡ್‌ನಲ್ಲಿ  ಓಡಿಸುತ್ತಿದ್ದರೂ ಓವರ್‌ಟೇಕ್‌ ಮಾಡಲು ಸ್ಟೇರಿಂಗ್‌ನ ಎರಡು ಬದಿಯಲ್ಲಿ ಮ್ಯಾನುವಲ್‌ ಗೇರ್‌ಗಳಿವೆ. ಇದರಿಂದ ವಾಹನ ಮುನ್ನುಗ್ಗುವಿಕೆ ಸರಾಗ. ಎಕೋ, ಕಂಫರ್ಟ್‌, ಸ್ಪೋರ್ಟ್ ಮತ್ತು ಇಂಡಿವಿಜ್ಯುವಲ್‌ ಮೋಡ್‌ ಆಯ್ಕೆ ಸ್ವಾತಂತ್ರ್ಯ ಚಾಲಕನಿಗಿದೆ. ಇದರ ಜತೆಯಲ್ಲಿ ಉನ್ನತ ಶ್ರೇಣಿಯ ವಾಹನಗಳಲ್ಲಿ ಇರುವ ರಿವರ್ಸ್‌ ಕ್ಯಾಮೆರಾ, ಆರು ಏರ್‌ಬ್ಯಾಗ್‌, ಟಚ್‌ಸ್ಕ್ರೀನ್‌, ಆ್ಯಪಲ್‌ನ ಕಾರ್‌ ಪ್ಲೇ, ಕೀ ಇಲ್ಲದೆ ಪ್ರವೇಶ, ಎಬಿಎಸ್‌, ಮ್ಯಾಪ್‌ ಸೌಲಭ್ಯವಿದೆ. ಕ್ಲೈಮೇಟ್‌ ಕಂಟ್ರೋಲ್‌, ಕಂಪ್ಯೂಟರ್‌ ನಿಯಂತ್ರಿತ ಸೀಟ್‌ ಹೊಂದಾಣಿಕೆ ಮತ್ತು ಲಗೇಜ್‌ಗೆ ಸಾಕಷ್ಟು ಸ್ಥಳಾವಕಾಶ ವಾಹನವನ್ನು ಮತ್ತಷ್ಟು ಆಪ್ಯಾಯಮಾನವಾಗಿಸುತ್ತದೆ.
 
ಬೆಂಗಳೂರು– ಮೈಸೂರು ಹೆದ್ದಾರಿಗೆ ರಾಷ್ಟ್ರೀಯ ಹೆದ್ದಾರಿ ಸ್ಥಾನ ದೊರೆತ ನಂತರ ನಿರ್ವಹಣೆ ಕಾರ್ಯ ಅಷ್ಟಕ್ಕಷ್ಟೆ. ವಾರಾಂತ್ಯದಲ್ಲಿ ಭಯಂಕರ ವಾಹನ ದಟ್ಟಣೆ ಇರುತ್ತದೆ. ಇಂತಹ ಕಠಿಣ ಸ್ಥಿತಿಯಲ್ಲೂ ಗಂಟೆಗೆ 120–140 ಕಿ.ಮೀ.ನಲ್ಲಿ ಸಾಗಲು ವಾಹನ ತಕರಾರು ಮಾಡಲಿಲ್ಲ. ಪ್ರಕಾಶಮಾನವಾದ ಹೆಡ್‌ಲೈಟ್‌ ರಾತ್ರಿ ಸಂಚಾರಕ್ಕೆ ಸಹಕಾರಿಯಾಗಿತ್ತು.
 
ತೆರೆದುಕೊಳ್ಳುವ ಮೇಲ್ಚಾವಣಿಯಿಂದ ತಂಗಾಳಿಯನ್ನು ಸವಿಯಬಹುದು. ಬೆಲೆ, ತಂತ್ರಜ್ಞಾನದ ಸಮ್ಮಿಲನವಾದ ಐಷಾರಾಮಿತನ ಹೊಂದಿರುವ ವಾಹನ, ಈ ವರ್ಗವನ್ನು ಬಯಸುವ ಗ್ರಾಹಕರಿಗೆ ಕೈಗೆಟಕುವ ಬೆಲೆಯನ್ನು ಹೊಂದಿದೆ ಎನ್ನಬಹುದು. 
****
ವೆಸ್ಪಾದ ವಿಶೇಷ ಆವೃತ್ತಿ ಬಿಡುಗಡೆ
ವೆಸ್ಪಾ ಎಲಿಗೆಂಟ್‌ ಬೈಕ್‌ನ ವಿಶೇಷ ಆವೃತ್ತಿ ಎಲಿಗೆಂಟ್ 150 ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಹೊಸ ರೂಪ ಹೊತ್ತು ಬಂದಿದೆ. ಎಸ್‌ಎಕ್ಸ್‌ಎಲ್ ಹಾಗೂ ವಿಎಕ್ಸ್‌ಎಲ್‌ ಮಾದರಿಯ ಸಾಲಿನಲ್ಲಿರುವ ಎಲಿಗೆಂಟ್ 150 ಅನ್ನು ಆಧುನಿಕ ವಿನ್ಯಾಸದೊಂದಿಗೆ ಮೇಲ್ದರ್ಜೆಗೇರಿಸಿದ್ದು, ತಾಂತ್ರಿಕವಾಗಿ ಯಾವುದೇ ಬದಲಾವಣೆ ಮಾಡಿಲ್ಲ.
 


150 ಸಿಸಿ ಎಂಜಿನ್ ಶಕ್ತಿಯಿದ್ದು, 11ಬಿಎಚ್‌ಪಿ ಟಾಪ್ ಪವರ್ ಹಾಗೂ 11.5ಎನ್‌ಎಂ ಪೀಕ್ ಟಾರ್ಕ್ ಶಕ್ತಿ ದೊರೆಯಲಿದೆ. ಬೀಜ್ ಯುನಿಕೊ ಹಾಗೂ ಪರ್ಲ್ ವೈಟ್ ಬಣ್ಣಗಳಲ್ಲಿ ಲಭ್ಯ.  ಇದರೊಂದಿಗೆ ಕ್ರೋಮ್ ಗಾರ್ಡ್‌ ಕಿಟ್, ಫ್ರಂಟ್ ಬಂಪರ್ ಗಾರ್ಡ್ ಇರಲಿದೆ. ಬೆಲೆ ₹95,077 (ಎಕ್ಸ್‌ಶೋ ರೂಂ ಪುಣೆ).
****
‘ಜಾಗ್ವಾರ್ ಎಕ್ಸ್‌ಇ ಡೀಸೆಲ್‌’ ಬುಕಿಂಗ್ ಆರಂಭ
ಆಟೊ ಎಕ್ಸ್‌ಪೊ 2016ರಲ್ಲಿ ಪರಿಚಿತಗೊಂಡಿದ್ದ ಜಾಗ್ವಾರ್ ಎಕ್ಸ್‌ಇ,   ಭಾರತೀಯ ಕಾರು ತಯಾರಕರಲ್ಲಿ, ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡದ ಏಕೈಕ ಮಾದರಿಯಾಗಿ ಉಳಿದುಕೊಂಡಿತ್ತು. ಇದೀಗ ಆ ಆಯ್ಕೆಯನ್ನು ನೀಡಲು ಕಂಪೆನಿ ಮುಂದಾಗಿದೆ.
 
 
ಅದಕ್ಕೆ ಬುಕ್ಕಿಂಗ್ ಕೂಡ ಆರಂಭವಾಗಿದೆ. 2 ಲಕ್ಷದಿಂದ ಮುಂಗಡ ಬುಕ್ಕಿಂಗ್ ಆರಂಭಗೊಳ್ಳಲಿದೆ. ಜೆಎಲ್‌ಆರ್‌ನ 2.0 ಲೀಟರ್‌ ಇಂಜಿನಿಯಂ ಡೀಸೆಲ್‌ನ ಎಂಜಿನ್, 180 ಎಚ್‌ಪಿ ಶಕ್ತಿ ಒದಗಿಸಲಿದೆ. 8 ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್‌ ಜೊತೆ ಬರಲಿರುವ ನಿರೀಕ್ಷೆಯೂ ಇದೆ.
****
ಟೊಯೊಟಾದಿಂದ ‘ಟೂರಿಂಗ್ ಸ್ಪೋರ್ಟ್
ಟೊಯೊಟಾ ತನ್ನ ಇನೊವಾ ಕ್ರಿಸ್ಟಾ ಸಾಲಿಗೆ ಹೊಸ ಟೂರಿಂಗ್ ಸ್ಪೋರ್ಟ್ಸ್‌ ಕಾರನ್ನು ಸೇರಿಸಿಕೊಂಡಿದೆ. ಈ ಟೂರಿಂಗ್ ಸ್ಪೋರ್ಟ್‌್, ವೈನ್ ರೆಡ್‌ ಶೇಡ್ ಹಾಗೂ ಬಿಳಿ ಬಣ್ಣದಲ್ಲಿ ಲಭ್ಯ. ಕಪ್ಪು ಬಣ್ಣದ ಹೆಡ್, ಟೇಲ್ ಲ್ಯಾಂಪ್‌ಗಳೊಂದಿಗೆ ಸ್ಪೋರ್ಟಿ ಲುಕ್ ಇದಕ್ಕೆ ದಕ್ಕಿದೆ. ಏಳು ಸೀಟ್‌ನ ಕಾರಾಗಿದ್ದು, ಇನೊವಾ ಕ್ರಿಸ್ಟಾ ಝಡ್ ಎಕ್ಸ್‌ನಂತೆಯೇ ಹಲವು ಸೌಲಭ್ಯಗಳನ್ನು ಪಡೆದುಕೊಂಡಿದೆ.


ಟಚ್‌ಸ್ಕ್ರೀನ್ ಇನ್ಫೊಟೇನ್ಮೆಂಟ್‌ ಸಿಸ್ಟಂ, ಆಟೊ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕ್ ಅಡ್ಜಸ್ಟ್ ಡ್ರೈವರ್ ಸೀಟ್, ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಹಾಗೂ ಕ್ರ್ಯೂಸ್ ಕಂಟ್ರೋಲ್ ಇರಲಿದೆ. ಇದಕ್ಕೆ ಜತೆಯಾಗಿ ಸ್ಟೀರಿಂಗ್ ವೀಲ್‌ನ ವಿನ್ಯಾಸ ಕೂಡ ವಿಶೇಷವಾಗಿರಲಿದೆ. ಸೀಟ್ ಹಾಗೂ ಕನ್ಸೋಲ್ ಬಾಕ್ಸ್‌ಗೆ ಕೆಂಪು ಲೈಟಿಂಗ್ ಹೊಸ ವಿನ್ಯಾಸಕ್ಕೆ ಸಾಕ್ಷಿಯಾಗಿದೆ. ಇದರ ಬೆಲೆ ₹17.79 ಲಕ್ಷದಿಂದ (ಎಕ್ಸ್‌ಶೋರೂಂ ದೆಹಲಿ ಪೆಟ್ರೋಲ್ ಮ್ಯಾನ್ಯುಯಲ್ ಅವತರಣಿಕೆ) ಆರಂಭ.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT