ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಕುಡಿಸಿದ್ದು ನಾನೇ...

ಬಿಸಿಲ ಕಾಲದ ನೀರ ನೆನಪು
Last Updated 17 ಮೇ 2017, 19:30 IST
ಅಕ್ಷರ ಗಾತ್ರ
ಮೊದಲೇ ಚಿತ್ರದುರ್ಗದಲ್ಲಿ ಬಿಸಿಲ ತಾಪ ಹೆಚ್ಚು. ನನಗೋ ಬಿಸಿಲೆಂದರೆ ಅದೇನೋ ಭಯ.  ಬೇಸಿಗೆ ಬರುತ್ತೆ ಅಂದ್ರೆ ಸಾಕು ಸೃಷ್ಟಿಯಲ್ಲಿ ಅದ್ಯಾಕೆ ಉರಿಬಿಸಿಲನ್ನ ಕರುಣಿಸಿದಿಯೋ ಭಗವಂತ ಎಂದುಕೊಳ್ಳುತ್ತಿದ್ದೆ.
 
ಶಿವ ಬೇಸಿಗೆಯಲ್ಲಿ ತನ್ನ ಮೂರನೇ ಕಣ್ಣನ್ನು ತೆರೆಯುತ್ತಾನೆ ಹಾಗಾಗಿ ಈ ಪ್ರಮಾಣದ ಉರಿಬಿಸಿಲು ಅನ್ನೋ ನನ್ನಜ್ಜಿಯ ಮಾತನ್ನು ಪ್ರಾಮಾಣಿಕವಾಗಿ ನಂಬಿ ಶಿವನಿಗೆ ಮೂರೂ ಹೊತ್ತು ಊದುಬತ್ತಿ ಹಚ್ಚೊದನ್ನ ಮರೆಯುತ್ತಿರಲಿಲ್ಲ.

ಇದೆಲ್ಲದರ ಮಧ್ಯೆ ಬೇಸಿಗೆ ರಜೆ ಬಂದ್ರೆ ಒಂದು ರೀತಿ ಸಜೆಯೇ ಆಗಿಬಿಡುತಿತ್ತು. ವರ್ಷವೆಲ್ಲಾ ದನ, ಕುರಿ ಮೇಯಿಸಿ ಒಬ್ಬಂಟಿತನ ಅನುಭವಿಸುತ್ತಿದ್ದ ನನ್ನ ಅಪ್ಪ, ಅಮ್ಮ ರಜೆಯಲ್ಲಿ ನನ್ನನ್ನೂ ಕರೆದೊಯ್ಯುತ್ತಿದ್ದರು. ಮಟ್ಟಸವಾಗಿ ತಲೆ ಕೂದಲು ಬಾಚಿ, ದಪ್ಪನೆ ಕಾಟನ್ ಟವೆಲ್ ಕೈಗಿಡುತ್ತಿದ್ದರು. ಡಬ್ಬಿಗೆ ಊಟ, ದೊಗಲೆ ಚಡ್ಡಿ, ದೊಗಲೆ ಶರ್ಟ್ ತೊಡಿಸಿ ಇಡೀ ದೇಹವನ್ನು ಬಟ್ಟೆಯಿಂದ ಪ್ಯಾಕ್ ಮಾಡಿ ಬಿಡುತ್ತಿದ್ದರು.

ಮಳೆ ಬಂದ್ರೆ ಒದ್ದೆಯಾಗಬಾರದೆಂದು ಗೋಣಿ ಚೀಲವನ್ನು ಹೆಗಲ ಮೇಲೆ ಹಾಕುತ್ತಿದ್ದರು. ಇಷ್ಟೆಲ್ಲಾ ತಯಾರಿ ನಡೆಸಿದರೂ ಬಿಸಿಲೆಂಬ ಮಹಾಶೂರನ ತಾಪ ಬಿಡುತ್ತಿರಲಿಲ್ಲ.  ಬಿಸಿಲಿಗೆ ಅಳುಕಿನಿಂದಲೇ ಅನತಿ ದೂರ ಹೋಗುತ್ತಿದ್ದ ನಾನು ಎಲ್ಲೇ ಕೆರೆ, ಬಾವಿ ಕಂಡರೂ ಅಲ್ಲಿ ಹೋಗಿ ಟವಲ್ ನೀರಲ್ಲಿ ಅದ್ದಿ ನೆನೆಸಿ ತಲೆ ಮೇಲೆ ಹಾಕಿಕೊಳ್ಳುತ್ತಿದ್ದೆ.
 
ಕೆಲವೊಮ್ಮೆ ನನ್ನ ಬಳಿ ಇದ್ದ ಮಣ ಭಾರದ ಎಲ್ಲಾ ವಸ್ತುಗಳನ್ನು ದಡದಲ್ಲಿರಿಸಿ ಹೋಗಿ ತಲೆಯಷ್ಟೇ ಕಾಣುವ ಹಾಗೆ ನೀರಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಿದ್ದೆ. ಕೆಲವೊಮ್ಮೆ ನನ್ನೊಂದಿಗೆ ನನ್ನ ಅಣ್ಣ ಇರುತ್ತಿದ್ದ. ನನ್ನ ಆ ಸ್ಥಿತಿ ಕಂಡು ತನ್ನ ಜೊತೆಗಾರರೊಂದಿಗೆ ನನ್ನನ್ನು ನೋಡಿ ನಗುತಿದ್ದ. 
 
ನನಗೆ ಈಜು ಬರುತ್ತಿರಲಿಲ್ಲ. ಆ ವಿಷಯ ನನ್ನಣ್ಣನಿಗೆ ತಿಳಿದು, ‘ಈಜು ಕಲಿಸುವ ನೆಪದಲ್ಲಿ ಅವನಿಗೆ ಮೂರು ಬಾರಿ ಮುಳುಗಿಸಿ ಹೊಟ್ಟೆ ತುಂಬಾ ನೀರು ಕುಡಿಸಿ ಕಳುಹಿಸು ಬಾ’ ಎಂದು ತನ್ನ ಸ್ನೇಹಿತನೊಬ್ಬನಿಗೆ ಹೇಳಿ ಕಳುಹಿಸಿದ್ದ.
 
ಇದನ್ನು ಅರಿಯದ ನಾನು ಸೊಂಟಕ್ಕೆ ಈಜುಬುರುಡೆ ಕಟ್ಟಿಕೊಂಡು ಬಾವಿ ಬಳಿ ಹೋಗಿದ್ದೆ. ಮೊದಲೇ ತಯಾರಿಯಲ್ಲಿದ್ದ ನನ್ನ ಅಣ್ಣನ ಸ್ನೇಹಿತ ಸೇರಿದಂತೆ ಇನ್ನಿತರ ಹುಡುಗರು ಆ ಬಾವಿಯಲ್ಲಿ ತೇಲಿ ಮುಳುಗುವ ಆಟದಲ್ಲಿ ತಲ್ಲೀನರಾಗಿದ್ದರು. ಕೆಲವರು ಮೇಲಿನಿಂದ ವಿವಿಧ ಭಂಗಿಗಳಲ್ಲಿ ಬಾವಿ ನೀರಿಗೆ ಡೈ ಹೊಡೆಯುತ್ತಿದ್ದರು. 
 
ಬಾವಿ ದಡದಲ್ಲೆ ನಿಂತಿದ್ದ ನಾನು ಅದ್ಯಾವಾಗ ಇವರ ಹಾಗೆ ಮೀನಿನಂತೆ ಈಜಲಿ ಎಂದು ಆಸೆಗಣ್ಣಲ್ಲಿ ನೋಡುತ್ತಾ ನಿಂತಿದ್ದೆ. ನನ್ನ ನೋಡಿದ ನನ್ನ ಅಣ್ಣನ ಸ್ನೇಹಿತ ಈಜು ಕಲಿಸುವ ಆಸೆ ತೋರಿಸಿ ಈಜುಬುರುಡೆ ಇಲ್ಲದೆ ಜಂಪ್ ಮಾಡು ನಾನು ನಿನಗೆ ಈಜು ಕಲಿಸುತ್ತೇನೆ ಎಂಬ ಭರವಸೆ ನೀಡಿದ. ನಾನು ಅವನ ಮಾತು ನಂಬಿ ಧೈರ್ಯ ಮಾಡಿ ಬಾವಿಯೊಳಗೆ ಹಾರಿದೆ.
 
ಹಾರಿದ ರಭಸಕ್ಕೆ ಮೇಲೆ ಬರಲಾಗದೇ ಕಣ್ಣು ಕತ್ತಲೆ ಆವರಿಸಿಬಿಟ್ಟಿತು. ಮೇಲೆ ಬರಲು ಕೈ ಕಾಲು ಆಡಿಸುತ್ತಾ ಶತಾಯಗತಾಯ ಯತ್ನಿಸುತ್ತಲೇ ಮೂಗು ಬಾಯಿ ಮೂಲಕ ಹೊಟ್ಟೆ ತುಂಬಾ ನೀರು ಕುಡಿದುಬಿಟ್ಟೆ.
 
ಇನ್ನೇನು ನನ್ನ ಕಥೆ ಮುಗೀತು ಸತ್ತೇ ಹೋದೆ ಎನ್ನುವಷ್ಟರಲ್ಲಿ ಆಪದ್ಭಾಂದವನಂತೆ ನನ್ನ ಬಳಿ ಬಂದು ನನ್ನ ಜುಟ್ಟು ಹಿಡಿದು ಮೇಲೆ ಎತ್ತಿದ.  ಬದುಕಿದಿಯಾ ಬಡಜೀವವೇ ಎಂದು ಅವನನ್ನೇ ತುಳಿದು ನಾನು ಮೇಲೆ ಬರುವ ದುಸ್ಸಾಹಸ ಮಾಡುತ್ತಾ, ಸಾಯುವವನಿಗೆ ಹುಲ್ಲು ಕಡ್ಡಿಯು ಆಸರೆಯಂತೆ, ಆ ಯತ್ನದಲ್ಲಿ ಸ್ವಲ್ಪಮಟ್ಟಿಗೆ ಬದುಕುವ ಆಸೆ ಚಿಗುರೊಡೆಯಿತು. ಬದುಕಿಸಲು ಬಂದವನು ಪುನಃ ನನ್ನ ತಲೆ ಹಿಡಿದು ನೀರೊಳಗೆ ಮುಳುಸಿದ.
 
ಆಗ ನನ್ನ ಚೀರಾಟ ಅರಚಾಟ ಹೆಚ್ಚಾಗತೊಡಗಿತು. ಮೊದಲೇ ನನ್ನ ಅಣ್ಣನೊಂದಿಗೆ ಮ್ಯಾಚ್ ಫಿಕ್ಸ್ ಮಾಡಿಕೊಂಡು ಬಂದಿದ್ದ ಅವನು ಮೂರು ಬಾರಿ ಮುಳುಗಿಸಿ ನಾಲ್ಕನೇ ಬಾರಿ ದಡ ಸೇರಿಸಿದ್ದ. ಅಷ್ಟೊತ್ತಿಗಾಗಲೇ ನಾನು ಜ್ಞಾನತಪ್ಪಿ ನನ್ನ ಕಣ್ಣು ತೇಲಣ ಮೇಲಣ ಆಗಿದ್ದವಂತೆ. ಭಯಕ್ಕೆ ಬಿದ್ದು ಅಲ್ಲಿದ್ದ ಇನ್ನಿತರರು ನನ್ನ ಹೊಟ್ಟೆ ಭಾಗ ಒತ್ತಿ ನೀರು ಹೊರತೆಗೆದು ಸ್ವಲ್ಪ ಕಾಲ ಗಾಳಿ ಬೀಸಿದ್ದಾರೆ.  
 
ಅಷ್ಟೊತ್ತಿಗಾಗಲೇ ಹುಡುಗರು ನಾನು ಸತ್ತೆ ಹೋಗಿದ್ದೇನೆಂದು ಭಾವಿಸಿ ಅಲ್ಲಿಂದ ಗಯಾಬ್ ಆಗಿದ್ದರು. ಸ್ವಲ್ಪ ಸಮಯದಲ್ಲಿ ಎಚ್ಚರಗೊಂಡ ನಾನು ಮೆಲ್ಲಗೆ ಇನ್ನೊಬ್ಬನ ಸಹಾಯದಿಂದ ಮನೆ ಸೇರಿದ್ದೆ. ಗಾಬರಿಗೊಂಡ ನನ್ನ ಅಣ್ಣ, ಅವನ ಸ್ನೇಹಿತ ಇಡೀ ರಾತ್ರಿ ಮನೆಗಳಿಗೆ ಬರದೇ ರಾತ್ರಿಯಲ್ಲಾ ಜಮೀನೊಂದರಲ್ಲಿ ಅವಿತುಕೊಂಡಿದ್ದರು. ನಾನು ವಿಚಾರವನ್ನು ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ.
 
ಮಾರನೇ ದಿನ ಇಬ್ಬರು ಮನೆಗೆ ಬಂದು ಒಂದೆರೆಡು ತಂಬಿಗೆ ನೀರು ಕುಡಿದು ತಮ್ಮಲ್ಲಿದ್ದ ಆತಂಕ ದೂರ ಮಾಡಿಕೊಂಡರು. ನನಗೆ ನೀರು ಕುಡಿಸಿದ್ದವರು ನೀರು ಕುಡಿಯುವಂಥ ಪರಿಸ್ಥಿತಿ ಕಂಡು ನನಗೆ ಒಳಗೊಳಗೆ ನಗು ಬಂದಿತ್ತು. ಈಗಲೂ ಬಿರು ಬೇಸಿಗೆ ಬಂತಂದರೆ,ಆ ಘಟನೆ ನೆನಪಿಗೆ  ಬರುತ್ತೆ.
–ಜಯಣ್ಣ ಬೆಳಗೆರೆ ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT