ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ನಿಮಿಷದ ನಿರ್ಧಾರ...

Last Updated 17 ಮೇ 2017, 19:30 IST
ಅಕ್ಷರ ಗಾತ್ರ
ರೇಷ್ಮಾ ಸೌಜಾನಿ
‘ಯಾವ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಭದ್ರತೆ ಮತ್ತು ಶಿಕ್ಷಣ ಸಮರ್ಪಕವಾಗಿ ದೊರೆಯುತ್ತದೆಯೋ ಆ ದೇಶ ಪರಿಪೂರ್ಣವಾಗಿ ಅಭಿವೃದ್ಧಿ ಹೊಂದಿದ ದೇಶವಾಗಿರುತ್ತದೆ’ ಎಂದು ರೇಷ್ಮಾ ಸೌಜಾನಿ ಅವರು ತಮ್ಮ Women Who Work: Rewriting the Rules for Success ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕ ಟ್ರಂಪ್ ಈ ಪುಸ್ತಕವನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 
ಅಮೆರಿಕದಲ್ಲಿ ನೆಲೆಸಿರುವ ರೇಷ್ಮಾ, ಕಾನೂನು ತಜ್ಞೆಯಾಗಿ ಗುರುತಿಸಿಕೊಂಡಿದ್ದಾರೆ. ನ್ಯೂಯಾರ್ಕ್‌ ಸಿಟಿಯಲ್ಲಿ ವಕೀಲೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಜತೆಯಲ್ಲೇ ‘ಗರ್ಲ್ಸ್ ವು ಕೋಡ್’ ಎಂಬ ಲಾಭರಹಿತ ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತಿದ್ದಾರೆ. 
 
ಈ ಸಂಸ್ಥೆ ಸ್ಥಾಪನೆಯ ಹಿಂದೆ ಒಂದು  ಕಥೆ ಇದೆ. ‘ಅಪ್ಪ ಅಮ್ಮ ಉಗಾಂಡ ದೇಶದಲ್ಲಿ ಹೆಣ್ಣು ಮಕ್ಕಳು ಅನುಭವಿಸಿದ ಸಂಕಷ್ಟಗಳನ್ನು ನಾನು ಚಿಕ್ಕವಳಿದ್ದಾಗ ನನ್ನ ಬಳಿ ಹೇಳುತ್ತಿದ್ದರು. ಅಂದು ಕೇಳಿದ ಕಥನಗಳೇ ಇಂದಿನ ‘ಗರ್ಲ್ಸ್ ವು ಕೋಡ್’ ಸಂಸ್ಥೆ ಸ್ಥಾಪನೆಗೆ ಸ್ಫೂರ್ತಿ’ ಎಂದು ಸೌಜಾನಿ ಹೇಳುತ್ತಾರೆ.
 
ಇವರ ಕುಟುಂಬ 60ರ ದಶಕದಲ್ಲಿ ಭಾರತದಿಂದ ಉಗಾಂಡ ದೇಶಕ್ಕೆ ವಲಸೆ ಹೋಗಿತ್ತು. 1970ರಲ್ಲಿ ಉಗಾಂಡ ಅಧ್ಯಕ್ಷ ಇದಿ ಅಮೀನ್ ಅವರ ದುರಾಡಳಿತಕ್ಕೆ ಬೇಸತ್ತು 1970ರಲ್ಲಿ ಅಮೆರಿಕಕ್ಕೆ ವಲಸೆ ಬಂದರು. ಅಲ್ಲಿಯೇ ಹುಟ್ಟಿದ ಸೌಜಾನಿ ರಾಜಕೀಯ ಮತ್ತು ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ವಕೀಲೆಯಾದರೂ ಪ್ರವೃತ್ತಿಯಲ್ಲಿ ಹೋರಾಟಗಾರ್ತಿ.
 
ಕೇವಲ 6 ವರ್ಷಗಳ ಹಿಂದೆ ‘ಗರ್ಲ್ಸ್ ವು ಕೋಡ್’ ಸಂಸ್ಥೆಯನ್ನು ಸ್ಥಾಪನೆ ಮಾಡಲಾಯಿತು. ಆರಂಭದಲ್ಲಿ ಕೇವಲ 12 ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ನೆರವು ನೀಡಲಾಗಿತ್ತು. ಆದರೆ ಇಂದು 40 ಸಾವಿರ ವಿದ್ಯಾರ್ಥಿನಿಯರು ನೆರವು ಪಡೆದಿದ್ದಾರೆ ಎಂದು ಸೌಜಾನಿ ಹೇಳುತ್ತಾರೆ. ಅಮೆರಿಕದ ಪ್ರತಿಷ್ಠಿತ ಕಾರ್ಪೊರೇಟ್ ಕಂಪೆನಿಗಳು ಸಾಕಷ್ಟು ದೇಣಿಗೆ ನೀಡುತ್ತಿವೆ. ಮುಂದಿನ ದಿನಗಳಲ್ಲಿ ಭಾರತದ ಹೆಣ್ಣು ಮಕ್ಕಳಿಗೂ ನೆರವು ನೀಡುವ ಸಂಸ್ಥೆಯೊಂದನ್ನು ಸ್ಥಾಪಿಸುವ ಗುರಿ ಇದೆ ಎಂದು ಅವರು ಹೇಳುತ್ತಾರೆ. reshmasaujani.com/
****
ಅಗ್ನೀಶ್ವರ್ ಜಯಪ್ರಕಾಶ್ 
ಮಾಜಿ ಈಜುಪಟು ಅಗ್ನೀಶ್ವರ್ ಜಯಪ್ರಕಾಶ್ ಅವರ ಸಾಧನೆಯ ಕಥೆ ಇದು. ಅಂತರರಾಷ್ಟ್ರೀಯ ಈಜು ಟೂರ್ನಿಗಳಲ್ಲಿ ಭಾಗವಹಿಸಿ ಭಾರತಕ್ಕೆ ಸಾಕಷ್ಟು ಪದಕಗಳನ್ನು ಗೆದ್ದು ಕೊಟ್ಟಿದ್ದಾರೆ. ಇಂದು ಅಗ್ನಿ ಗ್ರೂಪ್ ಕಂಪೆನಿ ಹಾಗೂ ಇಗ್ನೈಟ್ ಇಂಡಿಯಾ ಎಂಬ ಶಿಕ್ಷಣದ ಸ್ಟಾರ್ಟ್ಅಪ್ ಸ್ಥಾಪಿಸಿ, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡುತ್ತಿದ್ದಾರೆ.

ಅಗ್ನೀಶ್ವರ್ ಜಯಪ್ರಕಾಶ್ ತಮಿಳುನಾಡಿನವರು. ಅವರ ತಂದೆ ಚೆನ್ನೈನಲ್ಲಿ ಜೆರಾಕ್ಸ್ ಅಂಗಡಿ ಇಟ್ಟುಕೊಂಡು ಉಪಜೀವನ ನಡೆಸುತ್ತಿದ್ದರು. ಅಗ್ನೀಶ್ವರ್ ಅವರಿಗೆ ಬಾಲ್ಯದಲ್ಲಿ ಶ್ವಾಸಕೋಶ ತೊಂದರೆ ಕಾಣಿಸಿಕೊಂಡಿತ್ತು. ಹಾಗಾಗಿ ವೈದ್ಯರು ಸ್ವಿಮ್ಮಿಂಗ್ ಮಾಡಿಸುವಂತೆ ಸೂಚಿಸಿದ್ದರು. ಮೂರು ವರ್ಷದವನಿದ್ದಾಗ ಈಜು ಕಲಿತ ಅಗ್ನೀಶ್ವರ್, ಮುಂದೆ ಭಾರತದ ಖ್ಯಾತ ಈಜುಪಟುವಾಗಿ ಗುರುತಿಸಿಕೊಂಡರು.

ಈಜು ಕ್ರೀಡೆಗೆ ಗುಡ್ ಬೈ ಹೇಳಿದ ಬಳಿಕ ಲಾಭದ ಅಪೇಕ್ಷೆಯಿಲ್ಲದೆ ಅಗ್ನಿ ಗ್ರೂಪ್ ಸ್ಥಾಪನೆ ಮಾಡಿದರು. ಅದರ ಮೂಲಕ ಬಡಮಕ್ಕಳ ಶಿಕ್ಷಣಕ್ಕೆ ಹಣಕಾಸು ನೆರವು, ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ, ನಿರುದ್ಯೋಗಿಗಳಿಗೆ ಸಾಲ ಸೌಲಭ್ಯ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಭೂಕಂಪ, ಪ್ರವಾಹ ಸಂದರ್ಭಗಳಲ್ಲೂ ಕಾರ್ಯಾಚರಣೆಗೆ ಇಳಿದು ಹಲವರ ಪ್ರಾಣವನ್ನು ರಕ್ಷಿಸಿದ್ದಾರೆ.

ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪನೆ ಮಾಡಿರುವ ಇವರು, ಬಡ ಮಕ್ಕಳಿಗೆ ವಸತಿ ಸಹಿತ ಗುಣಮಟ್ಟದ ಶಿಕ್ಷಣ ಕೊಡಿಸುತ್ತಿದ್ದಾರೆ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಸ್ಫೂರ್ತಿ ಪಡೆದು ಇಗ್ನೈಟ್ ಇಂಡಿಯಾ ಎಂಬ ಸ್ಟಾರ್ಟ್ಅಪ್ ಆರಂಭಿಸಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ, ಹೊಸತನ್ನು ಆವಿಷ್ಕರಿಸುವ ವಿದ್ಯಾರ್ಥಿಗಳಿಗೆ, ಪ್ರಯೋಗಾಲಯ, ಸಂಪನ್ಮೂಲಗಳ ನೆರವು ನೀಡುತ್ತಿದ್ದಾರೆ. ದೇಶದ ಯುವಶಕ್ತಿಯನ್ನು ಸದೃಢಗೊಳಿಸಿ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡಬೇಕು ಎಂಬ ಕನಸು ಅಗ್ನೀಶ್ವರ್ ಅವರದು. agnishwarjayaprakash.wordpress.com
****
ಲಿಲ್ಲಿ ಸಿಂಗ್
ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮೂಲದ 28ರ ಹರೆಯದ ಲಿಲ್ಲಿ ಸಿಂಗ್ ಅವರ ಸಾಧನೆಯ ಕಥೆ ಇದು. ಮನಃಶಾಸ್ತ್ರದಲ್ಲಿ ಪದವಿ ಪಡೆದಿರುವ ಲಿಲ್ಲಿ ಸಿಂಗ್ ಸಾಮಾಜಿಕ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದು ಅವರು ವಿಶ್ವದಾದ್ಯಂತ ‘ಸೂಪರ್ ವುಮನ್’ ಎಂದೇ ಜನಪ್ರಿಯರಾಗಿದ್ದಾರೆ.

ಲಿಲ್ಲಿ ಅವರಿಗೆ ವಿದ್ಯಾರ್ಥಿ ದೆಸೆಯಿಂದಲೇ ಬಡವರು, ಅನಾಥರು, ದೌರ್ಜನ್ಯಕ್ಕೆ ತುತ್ತಾದವರ ಮೇಲೆ ವಿಶೇಷ ಕಾಳಜಿ! ಅವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕೌಟುಂಬಿಕ ದೌರ್ಜನ್ಯ ಅಥವಾ ಸಾಮಾಜಿಕ ಕಾರಣಗಳಿಗಾಗಿ ಖಿನ್ನತೆಯಿಂದ ಬಳಲುತ್ತಿರುವ ಮಹಿಳೆಯರು ಮತ್ತು ದುರ್ಬಲ ಮನಸ್ಸಿನ ಮಕ್ಕಳ ಮಾನಸಿಕ ಚಿಕಿತ್ಸೆಗಾಗಿ ‘ಸೂಪರ್ ವುಮನ್’ ಎಂಬ ಯೂಟ್ಯೂಬ್ ಚಾನೆಲ್ ಅನ್ನು 2010ರಲ್ಲಿ ಆರಂಭಿಸಿದರು.

ಅಲ್ಲಿ ಕಾಮಿಕ್ ವಿಡಿಯೊ ಹಾಗೂ ಆಡಿಯೊಗಳ ಮೂಲಕ ನೊಂದ ಮಹಿಳೆಯರಿಗೆ ಚಿಕಿತ್ಸೆ (ಆಪ್ತ ಸಮಾಲೋಚನೆ) ಹಾಗೂ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಈ ಸೂಪರ್ ವುಮನ್ ಚಾನೆಲ್‌ಗೆ ಒಂದು ಕೋಟಿ ಜನ ಚಂದಾದಾರರಾಗಿದ್ದು ಸುಮಾರು 15 ಕೋಟಿ ಜನರು ವಿಡಿಯೊಗಳನ್ನು ವೀಕ್ಷಣೆ ಮಾಡಿದ್ದಾರೆ. ಆ ಮೂಲಕ ಕಳೆದ ಏಳು ವರ್ಷಗಳಲ್ಲಿ 75 ಲಕ್ಷ ರೂಪಾಯಿ ವರಮಾನ ಪಡೆದಿದ್ದಾರೆ. 

ಇತ್ತೀಚೆಗೆ How to Be a Bawse - A Guide to Conquering Life ಎಂಬ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಮಹಿಳೆಯರು ಸ್ವಾವಲಂಬಿಯಾಗಿ ಬದುಕುವುದು ಹೇಗೆ ಎಂಬುದಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ. ಸಿನಿಮಾ ಮತ್ತು ಫ್ಯಾಷನ್ ಲೋಕದಲ್ಲೂ ಲಿಲ್ಲಿ ಕೆಲಸ ಮಾಡಿದ್ದಾರೆ. ಎರಡು ಹಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಮಹಿಳಾ ಪ್ರಧಾನ ಚಿತ್ರವನ್ನು ನಿರ್ಮಾಣ ಮಾಡಿ ಆಸ್ಕರ್ ಪ್ರಶಸ್ತಿ ಪಡೆಯುವ ಗುರಿಯನ್ನು ಅವರು ಹೊಂದಿದ್ದಾರೆ. ಭಾರತ ಸೇರಿದಂತೆ ಆಫ್ರಿಕಾ, ಮಧ್ಯಪ್ರಾಚ್ಯ ದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಅತಿ ಕಿರಿಯ ವಯಸ್ಸಿಗೆ ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಲಿಲ್ಲಿ ಇಂದಿನ ಯುವಪೀಳಿಗೆಗೆ ಮಾದರಿಯಾಗಿದ್ದಾರೆ.  www.youtube.com/user/IISuperwomanII

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT