ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಮೊದಲ ಮಾತು

Last Updated 17 ಮೇ 2017, 19:30 IST
ಅಕ್ಷರ ಗಾತ್ರ
ಮೊನ್ನೆಯಷ್ಟೇ ಬುದ್ಧಜಯಂತಿ ಮುಗಿದಿದೆ. ಬುದ್ಧ – ಎಂದಕೂಡಲೇ ಹಲವು ಭಾವಗಳು ಹುಟ್ಟುವುದು ಸಹಜ. ಪ್ರಶಾಂತ ಮುಖ, ಧ್ಯಾನಮುದ್ರೆ; ಸುತ್ತಲೂ ಕುಳಿತ ಭಿಕ್ಷುಗಳು; ರಾತ್ರಿ ಮನೆ–ಮಡದಿ–ಮಗನನ್ನು ತೊರೆದ ಸಿದ್ಧಾರ್ಥ,‘ಸಾವಿಲ್ಲದ ಮನೆಯಿಂದ ಸಾಸಿವೆ ತಾ’ ಎಂದು ಹೇಳಿದ ಪ್ರಸಂಗ;

ಅಂಗುಲೀಮಾಲನ ಕಥೆ, ಮಧ್ಯಮಮಾರ್ಗ, ಹುಣ್ಣಿಮೆ, ಜಾತಕಕಥೆಗಳು, ಝೆನ್‌–ಕಥೆಗಳು, ಅಜಂತಗುಹೆಗಳು, ‘ಬುದ್ಧನ ಮುಸುಕಿನಲ್ಲಿರುವವ’ ಎಂದು ಶಂಕರಾಚಾರ್ಯರನ್ನು ಕರೆದದ್ದು, ಅಂಬೇಡ್ಕರ್‌ – ಹೀಗೆ ಎಷ್ಟೊಂದು ವಿವರಗಳು ಭಾವ–ಬುದ್ಧಿಗಳ ಭಿತ್ತಿಯಲ್ಲಿ ಮೂಡಿಕೊಳ್ಳುತ್ತವೆ! ಭಾರತದ ದರ್ಶನಕ್ಷೇತ್ರದಲ್ಲಿ ಬುದ್ಧನಷ್ಟು ಪ್ರಭಾವ ಬೀರಿದವರು ಕಡಿಮೆ; ಇಲ್ಲವೆಂದರೂ ತಪ್ಪಾಗದೆನ್ನಿ! 
 
ಬುದ್ಧ ಎಂದ ಕೂಡಲೇ ಸ್ಫುರಿಸುವ ಇನ್ನೊಂದು ಬಹುಮುಖ್ಯವಾದ ಭಾವ ಎಂದರೆ ಅದು ‘ದುಃಖ’. ಹೌದು, ಬುದ್ಧ ಹೇಳಿದ ಮೊದಲನೆಯ ಸತ್ಯವೇ ‘ದುಃಖ’. ಬುದ್ಧ ನೀಡಿದ ಮೊದಲ ಮತ್ತು ಮುಖ್ಯ ಉಪದೇಶವನ್ನು ‘ಆರ್ಯಸತ್ಯ’ ಎಂದು ಕರೆಯುತ್ತಾರೆ. ಆರ್ಯಸತ್ಯಗಳು ನಾಲ್ಕು ಎನ್ನುವ ಎಣಿಕೆಯಿದೆ. ಈ ನಾಲ್ಕರಲ್ಲಿ ಮೊದಲನೆಯದೇ ‘ದುಃಖ’. ಹೀಗೆಂದರೆ ಏನು? ನಮ್ಮ ಬದುಕು ಹುಟ್ಟಿನಿಂದ ಕೊನೆಯ ತನಕ ದುಃಖಮಯವಾಗಿದೆ; ಅಷ್ಟೇಕೆ, ಇಡಿಯ ಪ್ರಪಂಚವೇ ದುಃಖಮಯವಾಗಿದೆ. ಇದು ಈ ಮಾತಿನ ತಾತ್ಪರ್ಯ. 
 
ದುಃಖ ನಮಗೇನೂ ಹೊಸದಲ್ಲ; ಹುಟ್ಟಿನಿಂದಲೂ ಒಂದಲ್ಲ ಒಂದು ಕಾರಣದಿಂದಲೂ ರೀತಿಯಿಂದಲೂ ಅದನ್ನು ನಾವೆಲ್ಲರೂ ಅನುಭವಿಸಿರುತ್ತೇವೆ. ಹೀಗಿರುವಾಗ ದುಃಖದ ಬಗ್ಗೆ ಹೇಳಲು ಬುದ್ಧನಂಥ ಬುದ್ಧನೇ ಬೇಕೆ – ಎಂಬ ಪ್ರಶ್ನೆ ನಮ್ಮಲ್ಲಿ ಏಳಬಹುದು.
 
ಹೌದು, ನಾವೆಲ್ಲರೂ ದುಃಖವನ್ನು ಅನುಭವಿಸುತ್ತಿದ್ದೇವೆ; ದಿಟವೇ. ಆದರೆ ಎಂದಾದರೂ ‘ದುಃಖ’ದ ಮೂಲವನ್ನು ಹುಡುಕಲು ಪ್ರಯತ್ನಿಸಿದ್ದೇವೆಯೆ? ನಾವು ‘ಸುಖ’ ಎಂದು ಕೆಲವೊಂದನ್ನು ಪಟ್ಟಿ ಮಾಡಿಕೊಂಡಿದ್ದೇವೆ; ಆ ಪಟ್ಟಿಯ ಪ್ರಕಾರ ಅವನ್ನು ಒಂದೊಂದಾಗಿ, ಕೆಲವೊಮ್ಮೆ ಹಲವನ್ನಾಗಿ, ಪಡೆಯುವುದೇ ಜೀವನದ ಗುರಿಯನ್ನಾಗಿಸಿಕೊಂಡು ಮುನ್ನುಗ್ಗುತ್ತಿರುತ್ತೇವೆ. ಪಟ್ಟಿಯಲ್ಲಿರುವ ವಸ್ತುಗಳು ನಮ್ಮ ಕಪಾಟನ್ನು ಸೇರುತ್ತಹೋದಂತೆಲ್ಲ ಸುಖ ನಮ್ಮದಾಯಿತು ಎಂದುಕೊಳ್ಳುತ್ತೇವೆ.
 
ನಮ್ಮನ್ನು ಸೇರಿದ ವಸ್ತುಗಳು ನಮ್ಮಿಂದ ಅಗಲಿದಾಗ ಅದನ್ನೇ ದುಃಖ ಎಂದುಕೊಳ್ಳುತ್ತೇವೆ. ಹೀಗೆ ಸುಖ–ದುಃಖಗಳ ನಮ್ಮ ಅರ್ಥ ಬಹಳ ಸಂಕುಚಿತವಾಗಿರುತ್ತದೆ; ವೈಯಕ್ತಿಕತೆಯನ್ನು ಮೀರಿ ಅರ್ಥೈಸಲು ಸೋತಿರುತ್ತೇವೆ. ನಾವು ಯಾವುದನ್ನು ಸುಖವೆಂದೂ ದುಃಖವೆಂದೂ ತಿಳಿದುಕೊಂಡಿರುತ್ತೇವೆಯೋ ಆ ಮಾನದಂಡದಿಂದಲೇ ಪ್ರಪಂಚದ ಬಗ್ಗೆ ನಮ್ಮ ಎಲ್ಲ ಚಿಂತನೆಗಳೂ ರೂಪುಗೊಳ್ಳುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಬುದ್ಧ ಹೇಳಿದ ‘ದುಃಖ’ವನ್ನು ನೋಡಬೇಕಾಗುತ್ತದೆ.
 
ಬುದ್ಧ ಹೇಳಿದ ಆರ್ಯಸತ್ಯಗಳಲ್ಲಿ ಮೊದಲನೆಯದ್ದೇ ‘ದುಃಖ’. ಆರ್ಯಸತ್ಯ – ಎಂದರೆ ಶ್ರೇಷ್ಠವಾದ ಸತ್ಯ. ಶ್ರೇಷ್ಠ ಏಕೆಂದರೆ ಇದು ಎಲ್ಲರಿಗೂ ಸಲ್ಲುವಂಥದ್ದು. ಬಹುಜನರಿಗೆ ಯಾವುದು ಹಿತಕಾರಿಯಾದುದೋ ಅದೇ ಶ್ರೇಷ್ಠವಾದುದು. ‘ದುಃಖ’ – ಇದು ಎಲ್ಲರಿಗೂ ಬೇಕಾದ ಸತ್ಯ ಹೇಗಾಗುತ್ತದೆ? ಇದಕ್ಕೆ ಉತ್ತರ – ‘ಸಿದ್ಧಾರ್ಥ’ನಾಗಿದ್ದವನು ‘ಬುದ್ಧ’ನಾದುದ್ದರಲ್ಲೇ ಇದೆ. 
 
ರಾಜಕುಮಾರನಾಗಿದ್ದವನು ಸಿದ್ಧಾರ್ಥ. ದುಃಖದ ಅನುಭವವೇ ಆಗದಂತೆ ಅವನನ್ನು ಅರಮನೆಯ ಸುಖದಲ್ಲಿ ಬೆಳೆಸುತ್ತಿದ್ದರಂತೆ. ಅವನಿಗೆ ನೋವು–ದುಃಖಗಳ ಸ್ಪರ್ಶವಾದರೆ ಅವನು ಜಗತ್ತಿನ ಎಲ್ಲ ಅಂಟುಗಳಿಂದಲೂ ವಿಮುಖನಾಗಿಬಿಡುತ್ತಾನೆ ಎಂಬ ಅಂಜಿಕೆಯಿತ್ತು ಅವನ ಹೆತ್ತವರಲ್ಲಿ.
 
ಸುಖವನ್ನಾದರೂ ಮುಚ್ಚಿಡಬಹುದು; ಆದರೆ ದುಃಖವನ್ನು ಮುಚ್ಚಿಡಲು ಸಾಧ್ಯವಿಲ್ಲ. ಒಂದು ದಿನ ಅರಮನೆಯಿಂದ ಹೊರಗೆ ಹೊರಟ ಸಿದ್ಧಾರ್ಥ. ನರಳುತ್ತಿದ್ದವರನ್ನು ದಾರಿಯುದ್ದಕ್ಕೂ ಕಂಡ. ದಿಟ, ಅವನೇ ದುಃಖವನ್ನು ಅನುಭವಿಸಲಿಲ್ಲ; ಅದನ್ನು ನೋಡಿದ ಅಷ್ಟೆ. ಅದೇ ಸಾಕಾಯಿತು ಅವನ ಜಿಜ್ಞಾಸೆಗೆ; ತಪಸ್ಸಿಗೆ; ವೈರಾಗ್ಯಕ್ಕೆ.
 
ಚಿನ್ನದ ಅರಮನೆಯಲ್ಲೇ ಇದ್ದರೂ, ಸದಾ ಮೃಷ್ಟಾನ್ನವನ್ನೇ ಮೆಲ್ಲುತ್ತಿದ್ದರೂ ಯಾರೂ ದುಃಖದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ತಿಳಿವಳಿಕೆ ಅವನಲ್ಲಿ ಮೂಡಿತು. ದುಃಖದ ಮೂಲವನ್ನು ಹುಡುಕುತ್ತ ಮನೆಯಿಂದ ಹೊರಟುಬಿಟ್ಟ. ಹಲವು ವರ್ಷಗಳು ತಪಸ್ಸು ಮಾಡಿದ. ಸಿದ್ಧಾರ್ಥ ಅರಿವನ್ನು ಪಡೆದು ಬುದ್ಧನಾದ. ಜಗತ್ತು ಎನ್ನುವುದೇ ದುಃಖಮಯವಾದುದು – ಇದೇ ಅವನ ಅರಿವಿನ ಮೊದಲ ಮಾತಾಯಿತು. –ಹಾರಿತಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT