ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜಿಂಗ್‌ ಸಮಾವೇಶಕ್ಕೆ ಭಾರತ ಬಹಿಷ್ಕಾರ: ಚೀನಕ್ಕೆ ಎಚ್ಚರಿಕೆ ಗಂಟೆ

Last Updated 20 ಫೆಬ್ರುವರಿ 2018, 6:36 IST
ಅಕ್ಷರ ಗಾತ್ರ

ಭಾರತ ಮತ್ತು ಚೀನಾ ಮಧ್ಯೆ ಈಗ ಕಾವೇರಿದ ಮತ್ತೊಂದು ರಾಜತಾಂತ್ರಿಕ ಸಮರ ನಡೆದಿದೆ. ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಸೋಮವಾರ ಮುಕ್ತಾಯವಾದ ‘ಒನ್‌ ಬೆಲ್ಟ್‌; ಒನ್‌ ರೋಡ್‌’ (ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ನ ಬಹುಭಾಗಗಳನ್ನು ಬೆಸೆಯುವ ಆರ್ಥಿಕ ವಲಯ ಮತ್ತು ರಸ್ತೆ ನಿರ್ಮಾಣ ಯೋಜನೆ ಅಥವಾ ಒಬಿಒಆರ್‌) ಸಮಾವೇಶಕ್ಕೆ ಭಾರತದ ಬಹಿಷ್ಕಾರ ಚೀನಾದ ಕಣ್ಣು ಕೆಂಪಗಾಗಿಸಿದೆ.

ಕಳೆದ ಒಂದು ದಶಕದಲ್ಲಿ ಚೀನಾದ ವಿಷಯದಲ್ಲಿ ಭಾರತ ಇಂತಹ ಗಟ್ಟಿಯಾದ ಮತ್ತು ಗಡುಸಾದ ನಿಲುವು ತೆಗೆದುಕೊಂಡದ್ದು ಇದೇ ಮೊದಲು. ಏಕೆಂದರೆ ಆ ದೇಶ ನಮಗೆ ಮೊದಲಿನಿಂದಲೂ ಒಂದು ಸಮಸ್ಯೆಯೇ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನಮಗೆ ತೊಂದರೆ ಕೊಡುವ ಒಂದೇ ಒಂದು ಅವಕಾಶವನ್ನೂ ಅದು ಬಿಟ್ಟಿಲ್ಲ.

ಪರಮಾಣು ಪೂರೈಕೆದಾರ ದೇಶಗಳ ಗುಂಪಿನ (ಎನ್‌ಎಸ್‌ಜಿ) ಸದಸ್ಯತ್ವ  ಪಡೆಯುವ ಪ್ರಯತ್ನ ಇರಬಹುದು, ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಕುಖ್ಯಾತ ಭಯೋತ್ಪಾದಕ ಮಸೂದ್‌ ಅಜರ್‌ನ ವಿರುದ್ಧ ಕ್ರಮ ಕೈಗೊಳ್ಳುವ ವಿಶ್ವಸಂಸ್ಥೆ ನಿರ್ಣಯಕ್ಕೆ ಬೆಂಬಲದ ವಿಚಾರ ಇರಬಹುದು, ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡ ಗಡಿ ಇರಬಹುದು... ಹೀಗೆ ಎಲ್ಲದರಲ್ಲೂ ಅಡ್ಡಗಾಲು ಹಾಕುತ್ತಲೇ ಇದೆ.

ಹೀಗಿರುವಾಗ  ‘ಒನ್‌ ಬೆಲ್ಟ್‌; ಒನ್‌ ರೋಡ್‌’ ಯೋಜನೆಗೆ ಭಾರತ ಬೆಂಬಲಿಸಬೇಕು ಎಂದು ಅದು ಯಾವ ಆಧಾರದಲ್ಲಿ ಅಪೇಕ್ಷಿಸುತ್ತದೆ? ವಾಸ್ತವವಾಗಿ ಒಬಿಒಆರ್‌ ಯೋಜನೆ ಬಗ್ಗೆ ನಮ್ಮ ತಕರಾರು ಇರಲಿಕ್ಕಿಲ್ಲ. ಆದರೆ ಅದರ ಭಾಗವಾಗಿರುವ ಚೀನಾ– ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಬಗ್ಗೆ ನಮಗಿರುವ ಅನುಮಾನಗಳನ್ನು ಅದು ಪರಿಹರಿಸಲು ಮುಂದಾಗುತ್ತಿಲ್ಲ.

ಏಕೆಂದರೆ ಈ ಕಾರಿಡಾರ್‌ ನಿರ್ಮಾಣ ಆಗುತ್ತಿರುವುದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ. ಯೋಜನೆಯ ಭಾಗವಾದ ರಸ್ತೆ ಕೂಡ ಇದರ ಮೂಲಕವೇ ಹಾದುಹೋಗಲಿದೆ. ವಿವಾದಾತ್ಮಕ ಪ್ರದೇಶದಲ್ಲಿ ಅದು ಪಾಕ್‌ ಜತೆಗೂಡಿ ಯೋಜನೆ ಕೈಗೆತ್ತಿಕೊಂಡರೆ ನಾವು ಹೇಗೆ ಸುಮ್ಮನಿರಲು ಸಾಧ್ಯ?

ಈ ವಿಷಯದಲ್ಲಿ ನಮ್ಮ ನಿಲುವು ಸರಿಯಾಗಿದೆ. ಈ ಮೂಲಕವಾದರೂ ಚೀನಾ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಅಗತ್ಯ ಇತ್ತು. ಸಮಾವೇಶದಲ್ಲಿ ಪಾಕಿಸ್ತಾನ, ರಷ್ಯಾ, ಟರ್ಕಿ, ಶ್ರೀಲಂಕಾ ಒಳಗೊಂಡು 29 ದೇಶಗಳ ಮುಖ್ಯಸ್ಥರು, 130 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಆದರೆ ಭಾರತದ ಕಡೆಯಿಂದ ಕೆಲ ಚಿಂತಕರು ಪಾಲ್ಗೊಂಡಿದ್ದರೂ ಸರ್ಕಾರದ ವತಿಯಿಂದ ಯಾರೂ ಇರಲಿಲ್ಲ. ಇದರಿಂದ ಚೀನಕ್ಕೂ ಮುಜುಗರ ಆಗಿದೆ ಎನ್ನುವುದು ಸಮಾವೇಶದ ನಂತರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರೆ ನೀಡಿದ ಹೇಳಿಕೆಯೇ ಸಾಕ್ಷಿ.

‘ಎಲ್ಲ ದೇಶಗಳು  ಪರಸ್ಪರರ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆ ಗೌರವಿಸಬೇಕು’ ಎನ್ನುವ ಜಿನ್‌ಪಿಂಗ್‌ ಅವರ ಮಾತಿನ ಗುರಿ ಭಾರತ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಪಾಕ್‌ ಆಕ್ರಮಿತ ಕಾಶ್ಮೀರ ನಮ್ಮ ಅವಿಭಾಜ್ಯ ಪ್ರದೇಶ ಎಂಬುದು ನಮ್ಮ ಕಾಯಂ ನಿಲುವು. ಅದು ಇತ್ಯರ್ಥವಾಗದೆ ಪಾಕ್‌ ಆಕ್ರಮಿತ  ಕಾಶ್ಮೀರದಲ್ಲಿ ಯಾವುದೇ ಕಾರಿಡಾರ್‌, ರಸ್ತೆ ನಿರ್ಮಾಣ, ಆರ್ಥಿಕ ವಲಯ ಸ್ಥಾಪನೆಗೆ ಒಪ್ಪುವುದು ಸಾಧ್ಯವೇ ಇಲ್ಲ.

ಬಾಯಲ್ಲಿ ಹೇಳುವುದೇ ಒಂದು, ಕೃತಿಯಲ್ಲಿ ಮಾಡುವುದೇ ಇನ್ನೊಂದು. ಇದು ಚೀನಾದ ನೀತಿ. ಅದರಲ್ಲೂ ಭಾರತದ ವಿಷಯದಲ್ಲಂತೂ ಅದಕ್ಕೆ ವಿಪರೀತ ಅಸೂಯೆ. 1962ರ ಯುದ್ಧದಲ್ಲಿ ತಾನು ಸೋಲಿಸಿದ ದೇಶ ಈಗ ತನಗೆ ಸರಿಸಮವಾಗಿ ಹೆಜ್ಜೆ ಹಾಕುತ್ತಿರುವುದನ್ನು ಅರಗಿಸಿಕೊಳ್ಳಲು ಅದಕ್ಕೆ ಆಗುತ್ತಿಲ್ಲ.

ಅದನ್ನು ಅನೇಕ ಸಲ ವಿವಿಧ ವೇದಿಕೆಗಳಲ್ಲಿ ಪ್ರದರ್ಶಿಸಿದೆ. ಆದರೆ ಇದು ‘1962 ಅಲ್ಲ; 2017’ ಎಂಬುದನ್ನು ಚೀನಾ ಮರೆಯಬಾರದು. ಬದಲಾದ ವಿಶ್ವದಲ್ಲಿ ಭಾರತ ಮತ್ತು ಚೀನಾ ಗಣನೀಯ ಪ್ರಭಾವ, ಹಿತಾಸಕ್ತಿ ಹೊಂದಿವೆ.  ಹೀಗಾಗಿ ಒಂದು ದೇಶವನ್ನು ಇನ್ನೊಂದು ದೇಶ ನಿರ್ಲಕ್ಷಿಸುವ ಸ್ಥಿತಿ ಈಗಿಲ್ಲ.

ಪರಸ್ಪರ ಆರ್ಥಿಕ, ವಾಣಿಜ್ಯ ವ್ಯವಹಾರಗಳನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡು ಮುಂದೆ ಸಾಗುವುದು ಇಬ್ಬರಿಗೂ ಅನಿವಾರ್ಯ. ಆದರೆ ಅದು ಗೌರವಯುತವಾಗಿರಬೇಕು, ಸಮಾನತೆಯ ತತ್ವ ಆಧರಿಸಿರಬೇಕು. ಮುಂಬರುವ ದಿನಗಳಲ್ಲಿ ಎರಡೂ ದೇಶಗಳು ಬ್ರಿಕ್ಸ್, ಜಿ 20 ಸೇರಿದಂತೆ ಅನೇಕ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ  ಮುಖಾಮುಖಿಯಾಗಲಿವೆ. ಅಲ್ಲಿ ಈ ಕಗ್ಗಂಟಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮುಂದುವರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT