ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್ ನಟಿ ರೀಮಾ ಲಾಗೂ ನಿಧನ

Last Updated 18 ಮೇ 2017, 19:03 IST
ಅಕ್ಷರ ಗಾತ್ರ

ಮುಂಬೈ: ತಾಯ್ತನಕ್ಕೊಂದು ಮಾದರಿ ಎನ್ನುವ ರೀತಿಯಲ್ಲಿ ಬಾಲಿವುಡ್‌ ಚಲನಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ನಟಿ ರೀಮಾ ಲಾಗೂ (59) ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ಸದಾ ಹಸನ್ಮುಖಿಯಾಗಿ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದ ರೀಮಾ ಅವರು, ಕಣ್ಣುಗಳಲ್ಲೇ ಭಾವಸೂಚಿಸುವ ನಟನಾ ಕೌಶಲ ಹೊಂದಿದ್ದರು.

‘ಹಮ್‌ ಆಪ್‌ ಕೆ ಹೈ ಕೌನ್‌..!’ ಮತ್ತು ‘ಕಲ್‌ ಹೋ ನಾ ಹೋ’ ಹಾಗೂ ‘ಮೈನೆ ಪ್ಯಾರ್‌ ಕಿಯಾ’ ಚಲನಚಿತ್ರಗಳಲ್ಲಿ ಮಮತೆಯ ತಾಯಿಯಾಗಿ ಕಾಣಿಸಿಕೊಂಡಿದ್ದರು.

‘ಮಧ್ಯರಾತ್ರಿ ಎದೆನೋವು ಕಾಣಿಸಿಕೊಂಡಿದ್ದರಿಂದ ಇಲ್ಲಿನ ಧೀರುಭಾಯಿ ಅಂಬಾನಿ ಆಸ್ಪತ್ರೆಗೆ ರೀಮಾ ಅವರನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬೆಳಗಿನ ಜಾವ 3.15ಕ್ಕೆ ನಿಧನರಾದರು’ ಎಂದು ಅವರ ಅಳಿಯ ವಿನಯ್‌ ವೈಕುಲ್‌ ತಿಳಿಸಿದ್ದಾರೆ.

ನಟ ಸಲ್ಮಾನ್‌ ಖಾನ್‌ ಜತೆ ‘ಮೈನೆ ಪ್ಯಾರ್‌ ಕಿಯಾ’ ದಲ್ಲಿ  ತಾಯಿ ಪಾತ್ರದಲ್ಲಿ ನಟಿಸಿದ್ದು ರೀಮಾ ಅವರಿಗೆ ಹೆಚ್ಚು ಖ್ಯಾತಿಯನ್ನು ತಂದು ಕೊಟ್ಟಿತ್ತು.

‘ಖಯಾಮತ್‌ ಸೇ ಖಯಾಮತ್‌ ತಕ್‌’, ‘ಆಶಿಖಿ’, ‘ಸಾಜನ್‌’,  ‘ವಾಸ್ತವ್‌’, ‘ಕುಚ್‌ ಕುಚ್‌ ಹೋತಾ ಹೈ’ ಮತ್ತು ‘ಹಮ್‌ ಸಾಥ್‌ ಸಾಥ್‌ ಹೈ’ ಮುಂತಾದ ಚಿತ್ರಗಳಲ್ಲೂ ತಾಯಿಯ ಪಾತ್ರದಲ್ಲೇ ಅವರು ಕಾಣಿಸಿಕೊಂಡಿದ್ದರು.

ಮರಾಠಿ ರಂಗಭೂಮಿಯಿಂದ ವೃತ್ತಿ ಆರಂಭಿಸಿದ್ದ ರೀಮಾ ಅವರು, ಚಲನಚಿತ್ರ ಮತ್ತು ಕಿರುತೆರೆಯಲ್ಲೂ ನಟಿಸಿದ್ದರು.

ಸುಮಾರು ಮೂರು ದಶಕಗಳ ಕಾಲ ನಟನಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಅವರು,  ಶಾರೂಖ್‌ ಖಾನ್‌,  ಅಮೀರ್‌ ಖಾನ್‌, ಅಕ್ಷಯ್‌ ಕುಮಾರ್‌ ಸೇರಿದಂತೆ ಬಹುತೇಕ ಎಲ್ಲ ಖ್ಯಾತನಾಮರ ಜತೆ ತಾಯಿಯ ಪಾತ್ರದಲ್ಲೇ ಕಾಣಿಸಿಕೊಂಡಿದ್ದರು.

ಹೆಚ್ಚು ಖ್ಯಾತಿ ತಂದುಕೊಟ್ಟಿದ್ದ ‘ಖಯಾಮತ್‌ ಸೇ ಖಯಾಮತ್‌ ತಕ್‌’ ಚಿತ್ರದಲ್ಲಿ ಜೂಹಿ ಚಾವ್ಲಾ ಅವರ ತಾಯಿ ಪಾತ್ರದಲ್ಲಿ ನಟಿಸಿದ್ದಾಗ ರೀಮಾ ಅವರಿಗೆ ಕೇವಲ 30 ವರ್ಷ.

ರೀಮಾ ಅವರ ತಾಯಿ ಮಂದಾಕಿನಿ ಭಡ್ಭಾಡೆ ಅವರೂ ನಟಿಯಾಗಿದ್ದರು. ರೀಮಾ ಮೂಲ ನಾಮ ಗುರಿಂದರ್‌ ಭಡ್ಭಾಡೆ. ನಟ ವಿವೇಕ್‌ ಲಾಗೂ ಅವರನ್ನು ಮದುವೆಯಾದ ಬಳಿಕ ಹೆಸರು ಬದಲಾಯಿತು. ಎರಡು ವರ್ಷಗಳ ಬಳಿಕ ದಂಪತಿ ಪ್ರತ್ಯೇಕವಾದರು. ರೀಮಾ ಅವರ ಪುತ್ರಿ ಮೃನ್ಮಯೀ ಕೂಡ ನಟಿ.

‘ಖಂದಾನ್‌’, ‘ದೊ ಔರ್‌ ದೊ ಪಾಂಚ್‌’, ‘ತು ತು ಮೈ ಮೈ’ ಮತ್ತು ‘ಶ್ರೀಮಾನ್‌ ಶ್ರೀಮತಿ’ ಟಿ.ವಿ ಧಾರವಾಹಿಗಳಲ್ಲೂ ಅವರು ನಟಿಸಿದ್ದರು.
ಸ್ಟಾರ್‌ ಪ್ಲಸ್‌ನಲ್ಲಿ ಪ್ರಸಾರವಾಗುತ್ತಿದ್ದ ‘ನಾಮಕರಣ’ ಅವರು ನಟಿಸಿದ್ದ ಕೊನೆಯ ಧಾರವಾಹಿಯಾಗಿತ್ತು. ಹಲವಾರು ಮರಾಠಿ ಚಲನಚಿತ್ರ ಮತ್ತು ಧಾರವಾಹಿಗಳಲ್ಲಿ ಅವರು ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT