ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು–ರಾಯದುರ್ಗ ಮಾರ್ಗ:ಶೀಘ್ರ ಶಿಲಾನ್ಯಾಸ

Last Updated 18 ಮೇ 2017, 5:41 IST
ಅಕ್ಷರ ಗಾತ್ರ

ತುಮಕೂರು: ಬಹು ನಿರೀಕ್ಷಿತ ತುಮಕೂರು–ರಾಯದುರ್ಗ ರೈಲ್ವೆ ಮಾರ್ಗಕ್ಕೆ ಜುಲೈ ತಿಂಗಳ ಕೊನೆಯಲ್ಲಿ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಪ್ರಕಟಿಸಿದರು.

ತುಮಕೂರು– ರಾಯದುರ್ಗ, ತುಮಕೂರು– ದಾವಣಗೆರೆ ರೈಲು ಮಾರ್ಗಗಳ ಪ್ರಗತಿ ಬಗ್ಗೆ ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದರು. ಚಿತ್ರದುರ್ಗ ಸಂಸದ ಬಿ.ಎನ್‌.ಚಂದ್ರಪ್ಪ ಇದ್ದರು.

‘ತುಮಕೂರು– ರಾಯದುರ್ಗ ಯೋಜನೆಯ ಆಂಧ್ರ ಭಾಗದಲ್ಲಿ ಕಾಮಗಾರಿ ಮುಗಿದು ರೈಲು ಸಹ ಸಂಚರಿಸುತ್ತಿದೆ. ಆದರೆ ರಾಜ್ಯದ ಭಾಗದಲ್ಲಿ ಕಾಮಗಾರಿಯೇ ಆರಂಭಗೊಂಡಿಲ್ಲ. ಹಳಿ ನಿರ್ಮಿಸಲು ಬೇಕಾದ ಭೂಮಿಯನ್ನು ಸ್ವಾಧೀನಮಾಡಿಕೊಂಡಿಲ್ಲ. ಈ ಬಗ್ಗೆ ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ’ ಎಂದು ಬೇಸರ ಮಾಡಿಕೊಂಡರು.

‘ಭೂ ಸ್ವಾಧೀನ ಅಧಿಕಾರಿಗಳು ಎರಡು–ಮೂರು ತಿಂಗಳ ಕಾಲ ಉಳಿಯುತ್ತಿಲ್ಲ. ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಭೂಸ್ವಾಧೀನ ಕೆಲಸಕ್ಕೆ ಹಿನ್ನಡೆಯಾಗುತ್ತಿದೆ. ಇದು ಯೋಜನೆ ಜಾರಿ ವಿಳಂಬ ಆಗಲು ಕಾರಣವಾಗುತ್ತಿದೆ’ ಎಂದು ಹೇಳಿದರು.

‘ಈಗಿರುವ ಭೂಸ್ವಾಧೀನ ಅಧಿಕಾರಿ ಭಾಸ್ಕರ್‌ ನಾಲ್ಕು ತಿಂಗಳಲ್ಲೇ ವರ್ಗಾವಣೆ ಪಡೆದಿದ್ದಾರೆ. ಅಧಿಕಾರಿಯನ್ನು ವರ್ಗಾವಣೆ ಮಾಡದಂತೆ ಜಿಲ್ಲಾಧಿಕಾರಿಯವರು ಮುಖ್ಯಮಂತ್ರಿಗೆ ಪತ್ರ ಬರೆಯಬೇಕು. ನಾನೂ ಸಹ ಮುಖ್ಯಮಂತ್ರಿ ಬಳಿ ಮಾತನಾಡುತ್ತೇನೆ. ಕೆಲಸ ಮಾಡಲು ಇಷ್ಟ ಇಲ್ಲದಿದ್ದರೆ  ಏತಕ್ಕಾಗಿ ಇಲ್ಲಿಗೆ ಬರಬೇಕಾಗಿತ್ತು’ ಎಂದು ಪ್ರಶ್ನಿಸಿದರು. 

ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಮಾತನಾಡಿ, ‘ಯೋಜನೆಯ ಸಾಮಾಜಿಕ ಪರಿಣಾಮಗಳ ಅಧ್ಯಯನ ಮುಗಿದಿದೆ. ರಾಜ್ಯದಲ್ಲಿ ಸಾಮಾಜಿಕ ಪರಿಣಾಮಗಳ ಅಧ್ಯಯನ ಮುಗಿಸಿರುವ ಮೊದಲ ಯೋಜನೆ ಇದಾಗಿದೆ.  ಆದರೆ ಕೆಲವು ಕಡೆಗಳಲ್ಲಿ ಹಳೆಯ ಭೂಸ್ವಾಧೀನ ಕಾಯ್ದೆಯಡಿ ಅಧಿಸೂಚನೆ ಹೊರಡಿಸಲಾಗಿತ್ತು. ಮತ್ತೆ ಕೆಲವು ಕಡೆಗಳಲ್ಲಿ ಹೊಸ ಭೂಸ್ವಾಧೀನ ಕಾಯ್ದೆಯಡಿ ಅಧಿಸೂಚನೆ ಹೊರಡಿಸಲಾಗಿತ್ತು. ಹೀಗಾಗಿ ಕೆಲವು ರೈತರು ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. ಇದು ವಿಳಂಬ ಆಗಲು ಕಾರಣ’ ಎಂದು ವಿವರಣೆ ನೀಡಿದರು.

‘ಈ ಮೊದಲು ಸ್ವಾಧೀನಪಡಿಸಿಕೊಂಡಿದ್ದ ಭೂಮಿಯಲ್ಲಿದ್ದ ಮರಗಳಿಗೆ ಮಾರುಕಟ್ಟೆ ದರಕ್ಕಿಂತ ಎರಡುಪಟ್ಟು ಪರಿಹಾರ   ನಿಗದಿ ಮಾಡಲಾಗಿತ್ತು. ಆದರೆ ಈಚೆಗೆ ಸರ್ಕಾರದಿಂದ ಹೊಸ ಸುತ್ತೋಲೆ ಬಂದಿದ್ದು, ಮರಗಳಿಗೆ ಕೇವಲ ಮಾರುಕಟ್ಟೆಯ ದರದ ಪರಿಹಾರ ನೀಡಬೇಕು. ದುಪ್ಪಟ್ಟು ಪರಿಹಾರ ನೀಡಬಾರದು ಎಂದು ತಿಳಿಸಲಾಗಿದೆ. ಈಗ ಮತ್ತೊಮ್ಮೆ ಪರಿಹಾರ ಲೆಕ್ಕ ಹಾಕಬೇಕಾಗಿದೆ’ ಎಂದು ಹೇಳಿದರು.

‘ತುಮಕೂರಿನಿಂದ ಅಹೋಬಲ ಅಗ್ರಹಾರದವರೆಗೆ (0–23 ಕಿಲೋ ಮೀಟರ್‌  ಭೂಸ್ವಾಧೀನ ಮುಗಿದಿದೆ. ಆರು ಮಂದಿ ಹೊಸ ಭೂಸ್ವಾಧೀನ ಮಸೂದೆಯಡಿ ಪರಿಹಾರ ಕೊಟ್ಟರೆ ಭೂಮಿ ಕೊಡುವುದಾಗಿ ಹೇಳಿದ್ದಾರೆ. ಜುಲೈ ತಿಂಗಳ ಕೊನೆಯಲ್ಲಿ 0–23 ಕಿಲೋ ಮೀಟರ್‌ವರೆಗಿನ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸುತ್ತೇವೆ’  ಎಂದು ಜಿಲ್ಲಾಧಿಕಾರಿ ವಾಗ್ದಾನ ಮಾಡಿದರು.

‘ಮಧುಗಿರಿಯಲ್ಲಿ ರೈಲು ನಿಲ್ದಾಣ ನಿರ್ಮಿಸಲು ಬೇಕಾಗಿರುವ ಭೂಮಿ ಸ್ವಾಧೀನವಾಗಿದೆ. ಅಲ್ಲಿ ನಿರ್ಮಾಣ ಕಾಮಗಾರಿ ಆರಂಭಿಸಬಹುದು. ಪಾವಗಡ ತಾಲ್ಲೂಕಿನಲ್ಲಿ ಬೇಕಾದ ಭೂಮಿಗೆ ಅಧಿಸೂಚನೆ ಹೊರಡಿಸಲಾಗಿದೆ’ ಎಂದು ಹೇಳಿದರು.

ದಾವಣಗೆರೆ–ತುಮಕೂರು ಮಾರ್ಗ: ದಾವಣಗೆರೆ–ತುಮಕೂರು ಮಾರ್ಗಕ್ಕೆ ಒಟ್ಟಾರೆ 2135 ಎಕರೆ ಭೂಮಿ ಬೇಕಾಗಿದೆ. ಆದರೆ ಈವರೆಗೂ 109 ಎಕರೆಗೆ ಮಾತ್ರ 4 (1) ಅಧಿಸೂಚನೆ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

‘ತುಮಕೂರಿನಲ್ಲಿ 796 ಎಕರೆ, ಚಿತ್ರದುರ್ಗ ಜಿಲ್ಲೆಯಲ್ಲಿ 1075   ಹಾಗೂ ದಾವಣಗೆರೆ ಜಿಲ್ಲೆಯಲ್ಲಿ 263 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ತುಮಕೂರು ಜಿಲ್ಲೆಯಲ್ಲಿ  58 ಕಿಲೋ ಮೀಟರ್‌, ಚಿತ್ರದುರ್ಗದಲ್ಲಿ 101  ಹಾಗೂ ದಾವಣಗೆರೆಯಲ್ಲಿ 31 ಕಿ.ಮೀ ರೈಲು ಮಾರ್ಗ ಹಾದು ಹೋಗಲಿದೆ’ ಎಂದು ಅಧಿಕಾರಿಗಳು ಹೇಳಿದರು.

‘ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಳ್ಳಲು ಸಾಮಾಜಿಕ ಪರಿಣಾಮಗಳ ಅಧ್ಯಯನ ನಡೆಯಬೇಕಾಗಿದೆ. ಅಧ್ಯಯನ ನಡೆಸಲು ರೈತರು ಬಿಡುತ್ತಿಲ್ಲ. ಹೀಗಾಗಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿದೆ’ ಎಂದು ಮೋಹನ್‌ರಾಜ್‌ ಮಾಹಿತಿ ನೀಡಿದರು.

‘ದಾವಣಗೆರೆ ಯೋಜನೆಯ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಶೇ 50:50 ಪರಿಹಾರ ಹಣ ನೀಡಬೇಕು. ಆದರೆ ಕೇಂದ್ರ ಸರ್ಕಾರ ತನ್ನ ಪಾಲು ನೀಡಲು ಹಿಂದು–ಮುಂದು ನೋಡುತ್ತಿದೆ’ ಎಂದು ಮುದ್ದಹನುಮೇಗೌಡ ಹೇಳಿದರು. 

‘ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲೂ  ಭೂಸ್ವಾಧೀನಕ್ಕೆ ಅಧಿಸೂಚನೆ ಪ್ರಕ್ರಿಯೆ ನಡೆಯುತ್ತಿದೆ. ರೈಲು ಮಾರ್ಗದ ಸರ್ವೇ ಕೆಲಸ ನಡೆಯುತ್ತಿದೆ’ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಶ್ರೀರಂಗಯ್ಯ ತಿಳಿಸಿದರು.

ಡಿನೋಟಿಫಿಕೇಶನ್‌ಗೆ ಪತ್ರ: ‘ಊರುಕೆರೆ ಬಳಿ 177 ಎಕರೆಯಲ್ಲಿ ರೈಲ್ವೆ ಜಂಕ್ಷನ್‌ ನಿರ್ಮಿಸಲು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ ರೈಲ್ವೆ ಇಲಾಖೆಯು 24 ಎಕರೆ ಭೂಮಿ ಸಾಕು. ಉಳಿದ ಭೂಮಿಯನ್ನು ಡಿನೋಟಿಫಿಕೇಶನ್‌ ಮಾಡುವಂತೆ ಪತ್ರ ಬರೆದಿದೆ. ಇದರ ಹಿಂದೆ ಕೆಲವರು ಪಿತೂರಿ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಡಿನೋಟಿಫಿಕೇಶನ್‌ ಮಾಡದಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಬೇಕು’ ಎಂದು ಮುದ್ದಹನುಮೇಗೌಡ ಅವರು ತುಮಕೂರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಭೂಮಿ ಬೇಡ ಎಂದು ಅಧಿಕಾರಿಗಳು ಹೇಳುತ್ತಿರುವುದು ಅನುಮಾನ ಮೂಡಿಸಿದೆ ಎಂದು ಸಂಸದರು ಹೇಳಿದರು.

**

ತಿಮ್ಮರಾಜನಹಳ್ಳಿ ಬಳಿ ಗೂಡ್ಸ್‌ ಶೆಡ್‌
ತಿಮ್ಮರಾಜನಹಳ್ಳಿಯಲ್ಲಿ ರೈಲ್ವೆ ಗೂಡ್ಸ್‌ ಶೆಡ್‌  ನಿರ್ಮಿಸಬೇಕು. ಇದಕ್ಕಾಗಿ 100 ಎಕರೆ ಸರ್ಕಾರಿ ಜಾಗ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಅಲ್ಲಿಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ರೈಲ್ವೆ ಎಂದು ಅಧಿಕಾರಿಗಳು ಹೇಳಿದರು.

**

ಮಡಕಶಿರಾ ಮಾದರಿ
ಆಂಧ್ರಪ್ರದೇಶದ ಮಡಕಶಿರಾದಲ್ಲಿ ಭೂಸ್ವಾಧೀನಕ್ಕೆ ಮುನ್ನವೇ ರೈತರಿಂದ ಒಪ್ಪಿಗೆ ಪಡೆದು ರೈಲ್ವೆ ಕಾಮಗಾರಿಗೆ ಅವಕಾಶ ಮಾಡಿಕೊಡಲಾಗಿದೆ. ಅದೇ ಮಾದರಿಯಲ್ಲಿ ಇಲ್ಲೂ ರೈತರ ಒಪ್ಪಿಗೆ ಪಡೆದು ಕಾಮಗಾರಿ ನಡೆಸಬಹುದು. ಈ ಬಗ್ಗೆ ಅಧ್ಯಯನ ನಡೆಸಲು ಮಡಕಶಿರಾಗೆ ಅಧಿಕಾರಿಗಳ ತಂಡ ಕಳುಹಿಸಿಕೊಡುವಂತೆ ಸಂಸದರಾದ ಚಂದ್ರಪ್ಪ, ಮುದ್ದಹನುಮೇಗೌಡ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT