ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ಗ್ರಾ.ಪಂಗಳಿಗೆ ನೋಟಿಸ್‌ ಜಾರಿ

Last Updated 18 ಮೇ 2017, 5:25 IST
ಅಕ್ಷರ ಗಾತ್ರ

ಕೋಲಾರ: ‘ನರೇಗಾ ಅಡಿ ನಿಗದಿತ ಮಾನವ ದಿನಗಳನ್ನು ಸೃಜಿಸುವಲ್ಲಿ ವಿಫಲವಾಗಿರುವ ತಾಲ್ಲೂಕಿನ ಏಳು ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ನೋಟಿಸ್‌ ಜಾರಿ ಮಾಡಿದ್ದು, ಈ ಗ್ರಾ.ಪಂಗಳ ಅಭಿವೃದ್ಧಿ ಅಧಿಕಾರಿಗಳನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ (ಪ್ರಭಾರ) ಮುನಿರಾಜು ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರ 2017-–18ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ನಿಗದಿಪಡಿಸಿರುವ ಮಾನವ ದಿನಗಳನ್ನು ಸೃಜಿಸುವಲ್ಲಿ ಪಿಡಿಒಗಳು ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ತಾಲ್ಲೂಕಿನಲ್ಲಿ ಕಳೆದ ವರ್ಷ ಈ ಅವಧಿಗೆ 11,067 ಮಾನವ ದಿನ ಸೃಜಿಸಲಾಗಿತ್ತು. ಆದರೆ, ಈ ವರ್ಷ 7,957 ದಿನಗಳನ್ನು ಸೃಜಿಸಲಾಗಿದೆ. 3,110 ಮಾನವ ದಿನಗಳು ಕಡಿಮೆಯಾಗಿರುವುದು ಮತ್ತು 7 ಗ್ರಾ.ಪಂಗಳಲ್ಲಿ ಇನ್ನೂ ಮಾನವ ದಿನಗಳನ್ನು ಸೃಜಿಸದಿರುವುದು ಕರ್ತವ್ಯ ನಿರ್ಲಕ್ಷ್ಯವನ್ನು ತೋರುತ್ತದೆ ಎಂದು ಸರ್ಕಾರ ನೋಟಿಸ್ ಜಾರಿ ಮಾಡಿದೆ' ಎಂದರು.

‘ನಾನು ಅಧಿಕಾರ ವಹಿಸಿಕೊಂಡು ಮೂರು ದಿನವಷ್ಟೇ ಆಗಿದೆ. ನೋಟಿಸ್‌ ನೀವು ನನಗೆ ಕೊಟ್ಟಿರುವ ದೊಡ್ಡ ಉಡುಗೊರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಶಿಸ್ತುಕ್ರಮಕ್ಕೆ ಶಿಫಾರಸು: ‘ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಉತ್ತಮ ಸಾಧನೆ ಮಾಡಿ ಏಪ್ರಿಲ್‌ನಲ್ಲಿ ನಿರ್ಲಕ್ಷ್ಯ ತೋರಿರುವುದಕ್ಕೆ ಕಾರಣವೇನು ಎಂದು ಸರ್ಕಾರ ಕೇಳಿದೆ. ಪಿಡಿಒಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡುತ್ತೇನೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಾವ ಕ್ರಮ ಕೈಗೊಳ್ಳುತ್ತಾರೊ ಅದಕ್ಕೆ ಸಿದ್ಧವಾಗಿರಿ’ ಎಂದು ಎಚ್ಚರಿಕೆ ನೀಡಿದರು.

‘ನರೇಗಾದಡಿ ಜಾಗೃತಿ ಕಾರ್ಯಕ್ರಮ ನಡೆಸಲು ಶೇ 6ರಷ್ಟು ಹಣ ಮೀಸಲಿಡಲು ಅವಕಾಶವಿದೆ. ಕೆಲಸಕ್ಕೆ ಬೇಡಿಕೆ ಬಾರದಿದ್ದರೆ ಕನಿಷ್ಠ ಜಾಗೃತಿ ಕಾರ್ಯಕ್ರಮ ನಡೆಸಿದ್ದರೂ ಬೀಸುವ ದೊಣ್ಣೆಯಿಂದ ಪಾರಾಗಬಹುದಿತ್ತು’ ಎಂದರು.

ವೇತನ ಕಡಿತ: ‘ಕಾಮಗಾರಿ ನಡೆಸಿ ಜಾಬ್‌ ಕಾರ್ಡ್‌ದಾರರಿಗೆ ಸಕಾಲಕ್ಕೆ ಕೂಲಿ ಪಾವತಿಸದಿದ್ದಲ್ಲಿ ಸಂಬಂಧಪಟ್ಟ ಪಿಡಿಒಗಳ ವೇತನ ಕಡಿತಗೊಳಿಸಿ ಕೂಲಿ ಪಾವತಿಸುವಂತೆ ಸರ್ಕಾರ ಸೂಚಿಸಿದೆ. ಗ್ರಾ.ಪಂ ಅಧ್ಯಕ್ಷರು ಮತ್ತು ಎಂಜಿನಿಯರ್‌ಗಳ ಸಹಕಾರ ಪಡೆದು ಕೆಲಸ ಮಾಡಿದವರಿಗೆ ಸಕಾಲಕ್ಕೆ ಕೂಲಿ ಪಾವತಿಸಿ. ಜನವಾದಿ ಮಹಿಳಾ ಸಂಘಟನೆ ಸದಸ್ಯರು ಸುಮಾರು 15 ಗ್ರಾ.ಪಂಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ಪಿಡಿಒಗಳು, ‘ಗ್ರಾ.ಪಂಗಳಲ್ಲಿ ಅಧ್ಯಕ್ಷರು ಕೈಗೆ ಸಿಗುತ್ತಿಲ್ಲ. ಅವರ ಮೊಬೈಲ್‌ಗೆ ಕರೆ ಮಾಡಿದರೆ ಆಗ ಬರುತ್ತೇವೆ ಈಗ ಬರುತ್ತೇವೆ ಎಂದು ಹೇಳುತ್ತಾರೆಯೇ ಹೊರತು ಕಚೇರಿಗೆ ಬರುವುದೇ ಇಲ್ಲ. ನಾವು ಏನು ಮಾಡುವುದು’ ಎಂದು ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಒ ಮುನಿರಾಜು, ‘ಗ್ರಾ.ಪಂ ಅಧ್ಯಕ್ಷರ ಜತೆ ಸಮನ್ವಯ ಇದ್ದರೆ ಸಮಸ್ಯೆ ಬರುವುದಿಲ್ಲ. ಸರಿದೂಗಿಸಿಕೊಂಡು ಹೋಗಿ’ ಎಂದು ಸಲಹೆ ನೀಡಿದರು.

‘ಅ. 2ರೊಳಗೆ ಗ್ರಾ.ಪಂಗಳನ್ನು ಸಂಪೂರ್ಣ ಬಹಿರ್ದೆಸೆ ಮುಕ್ತ ಗ್ರಾಮಗಳಾಗಿ ಘೋಷಿಸಬೇಕು. ಈ ಹಿನ್ನೆಲೆಯಲ್ಲಿ ನಿಗದಿತ ಅವಧಿಯೊಳಗೆ ಗುರಿ ಸಾಧಿಸಿ’ ಎಂದು ಸ್ವಚ್ಛ ಭಾರತ ಅಭಿಯಾನದ ಜಿಲ್ಲಾ ಸಂಯೋಜಕ ಜಗದೀಶ್ ಸೂಚಿಸಿದರು.

**

ನರೇಗಾ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರತಿ ವಾರ 50 ವೈಯಕ್ತಿಕ ಹಾಗೂ 10 ಸಮುದಾಯ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದಾರೆ.

-ಮುನಿರಾಜು,
ತಾ.ಪಂ (ಪ್ರಭಾರ) ಕಾರ್ಯ ನಿರ್ವಹಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT