ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘದಲ್ಲಿ ಮತ್ತೊಂದು ಬಣ ಆರಂಭ

Last Updated 18 ಮೇ 2017, 5:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕೆಲ ಮುಖಂಡರು ತಮ್ಮ ಬಣಗಳನ್ನು ತೊರೆದು ಇದೀಗ ರೈತ ಸಂಘದ ಹೆಸರಿನಲ್ಲಿಯೇ ಜಿಲ್ಲೆಯಲ್ಲಿ ಮತ್ತೊಂದು ಸಂಘಟನೆ ರಚಿಸಿಕೊಂಡಿದ್ದಾರೆ.

‘ಬಯಲು ಸೀಮೆಗೆ ಶಾಶ್ವತ ನೀರು ತರುವುದೇ ನಮ್ಮ ಮುಖ್ಯ ಉದ್ದೇಶ. ಅದಕ್ಕಾಗಿ ಹೋರಾಟ ರೂಪಿಸಲು ವಿವಿಧ ಸಂಘಟನೆಗಳ ಸಹಕಾರ ಪಡೆಯುತ್ತೇವೆ’ ಎಂದು ಹೊಸ ಸಂಘಟನೆಯ ಮುಖಂಡ ಬಿ. ನಾರಾಯಣಸ್ವಾಮಿ ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರೈತ ಸಂಘದಲ್ಲಿ ಮೊದಲು ಬಣಗಳು ಇರಲಿಲ್ಲ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅವುಗಳನ್ನು ಮಾಡಿಕೊಂಡರು. ಇನ್ನೂ ಕೆಲವರು ಶಾಶ್ವತ ನೀರಾವರಿ ಬಿಟ್ಟು, ನೀರಾವರಿ ಹೋರಾಟವನ್ನೇ ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಈ ಹಿಂದೆ ಎಲ್ಲ ಸಂಘಟನೆಗಳು, ಸಂಘ ಸಂಸ್ಥೆಗಳು ಸೇರಿ ಬೆಂಗಳೂರಿಗೆ ಟ್ರ್ಯಾಕ್ಟರ್ ರ್‌್ಯಾಲಿ ಮಾಡಿದವು. ಹೋರಾಟ ಮುಗಿದ ಮೇಲೆ ಕೆಲವರು ಅದು ತಮ್ಮ ಹೋರಾಟ ಎಂದು ಹೇಳಿಕೊಂಡರು. ಇವತ್ತು ರೈತಸಂಘದ ಬಣಗಳು ತಮ್ಮ ತಮ್ಮ ರಾಜ್ಯ ಘಟಕದ ಅಧ್ಯಕ್ಷರನ್ನು ಬಿಂಬಿಸಲು ಕೆಲಸ ಮಾಡುತ್ತಿವೆಯೇ ವಿನಾ ಬಯಲುಸೀಮೆಗಾಗಿ ಏನು ಮಾಡುತ್ತಿಲ್ಲ’ ಎಂದು ಆರೋಪಿಸಿದರು.

‘ನಾವೀಗ ರೈತಸಂಘದ ಎರಡೂ ಬಣಗಳನ್ನು ಬಿಟ್ಟಿದ್ದೇವೆ. ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು ಹುಟ್ಟುಹಾಕಿದ ಬಣವನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಶಾಶ್ವತ ನೀರಾವರಿ ಹೋರಾಟ ಸಮಿತಿ, ಯುವಶಕ್ತಿ, ಸ್ತ್ರೀಶಕ್ತಿ ಸಂಘಟನೆಗಳು, ರೈತ ಸಂಘಟನೆಗಳು, ದಲಿತ ಸಂಘಟನೆಗಳೊಂದಿಗೆ ಸೇರಿಕೊಂಡು ನಾವು  ನೀರಾವರಿ ಹೋರಾಟ ಮಾಡುತ್ತೇವೆ. ನಮ್ಮ ಹೋರಾಟ ಬಯಲು ಸೀಮೆಯ 6 ಜಿಲ್ಲೆಗಳಿಗೆ ಮಾತ್ರ ಸೀಮಿತ. ಶೀಘ್ರದಲ್ಲಿಯೇ ಎಲ್ಲಾ ಸಂಘಟನೆ ಗಳನ್ನು ಒಗ್ಗೂಡಿಸಿ ಹೋರಾಟದ ರೂಪುರೇಷೆ ನಿರ್ಧರಿಸುತ್ತೇವೆ’ ಎಂದು ಹೇಳಿದರು.

ಇನ್ನೊಬ್ಬ ಮುಖಂಡೆ ಸುಷ್ಮಾ ಶ್ರೀನಿವಾಸ್ ಮಾತನಾಡಿ, ‘ನಾವು ಯಾವುದೇ ಬಣದ ವಿರೋಧಿಗಳಲ್ಲ. ಇಲ್ಲಿ ಎಲ್ಲರಿಗೂ ಸ್ವಾಗತವಿದೆ. ನಮ್ಮಲ್ಲಿ ರಾಜ್ಯ ಘಟಕದ ಅಧ್ಯಕ್ಷರು ಇರುವುದಿಲ್ಲ. ಇದೀಗ ರಾಜ್ಯದಲ್ಲಿ ರೈತ ಸಂಘದ ಇಬ್ಬರು ಅಧ್ಯಕ್ಷರ ಪೈಕಿ ಒಬ್ಬರು ಒಳಗೆ (ಶಾಸಕರಾಗಿದ್ದಾರೆ), ಮತ್ತೊಬ್ಬರು ಹೊರಗೆ ಇದ್ದಾರೆ. ಈ ಭಾಗದಲ್ಲಿ ರೈತರು ನೀರಿಗಾಗಿ ಎಷ್ಟೊಂದು ನೋವಿನಲ್ಲಿದ್ದಾರೆ. ಆದರೂ ಒಬ್ಬ ಅಧ್ಯಕ್ಷರೂ ಇಲ್ಲಿಗೆ ಬಂದು ಹೋರಾಟ ಮಾಡುತ್ತಿಲ್ಲ. ಅವರು ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ ಎನ್ನುವುದೇ ನಮ್ಮ ನೋವು’ ಎಂದು ತಿಳಿಸಿದರು.

‘ನಾವು ಕಾವೇರಿ, ಮಹಾದಾಯಿ ಹೋರಾಟಕ್ಕೆ ಸ್ಪಂದಿಸುತ್ತ ಬಂದಿದ್ದೇವೆ. ಆದರೆ ಬಯಲು ಸೀಮೆ ಭಾಗಕ್ಕೆ ಉಳಿದ ಭಾಗದವರು ಏನು ಮಾಡಿದ್ದಾರೆ ಎಂಬುದು ನಮ್ಮ ಪ್ರಶ್ನೆ. ನಮ್ಮದೊಂದಿಗೆ ಕೈಜೋಡಿಸುವ ಪ್ರತಿಯೊಬ್ಬರಿಗೂ ನಾವು ಸ್ವಾಗತಿಸುತ್ತೇವೆ. ಉಳಿದ ಬಣದವರು ಹೋರಾಟಗಳಿಗೆ ಸಹಕಾರ ಕೋರಿದರೆ ಖಂಡಿತ ಬೆಂಬಲ ನೀಡಲು ಸಿದ್ಧರಿದ್ದೇವೆ. ಶೀಘ್ರದಲ್ಲಿಯೇ ಸಂಘದ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯಲಿದೆ. ಬಳಿಕ ಪ್ರತಿ ತಾಲ್ಲೂಕಿನಲ್ಲಿ ಸಮಾವೇಶ ಮಾಡುತ್ತೇವೆ’ ಎಂದರು.

ಮುಖಂಡ ಎಂ.ಆರ್. ಲಕ್ಷ್ಮಿನಾರಾಯಣ ಮಾತನಾಡಿ, ‘ಶಾಶ್ವತ ನೀರಿನ ಹೋರಾಟಕ್ಕೆ ಹೊರಗಿನ ನಾಯಕತ್ವದ ಹೋರಾಟಕ್ಕಿಂತ ಇವತ್ತು ಸ್ಥಳೀಯ ನಾಯಕತ್ವದ ಹೋರಾಟ ಪ್ರಸ್ತುತವಾಗಿದೆ. ಆದ್ದರಿಂದ ಬಯಲು ಸೀಮೆ ಭಾಗದ ರೈತ ಮುಖಂಡರು, ಸಮಾನ ಮನಸ್ಕರರು ಒಂದೇ ಸೂರಿನಡಿ ಬಂದಿದ್ದೇವೆ. ಗ್ರಾಮ ಮಟ್ಟಕ್ಕೆ ಹೋರಾಟ ಒಯ್ದು ಪ್ರತಿಯೊಬ್ಬರಲ್ಲಿ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶ’ ಎಂದರು.

ಮುಖಂಡರಾದ ರಾಜಪ್ಪ, ಜಿ.ವಿ. ಲೋಕೇಶ್‌ಗೌಡ, ವೆಂಕಟರಾಮಯ್ಯ, ಟಿ.ಎನ್. ಮಂಜುನಾಥ್, ಬಿ.ವಿ. ಜಯರಾಮರೆಡ್ಡಿ, ಲಕ್ಷ್ಮಿಪತಿ, ಜೆ.ವಿ. ರಘುನಾಥ್ ರೆಡ್ಡಿ, ಮಹಾಲಕ್ಷ್ಮಮ್ಮ, ಜೆ.ಎನ್. ಮುದ್ದರಂಗಪ್ಪ, ಬಿ.ವಿ. ಶ್ರೀರಾಮರೆಡ್ಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

**

ಒಳಗೊಬ್ಬ, ಹೊರಗೊಬ್ಬ ನಾಯಕ!

‘ಸದ್ಯ ರೈತಸಂಘದಲ್ಲಿ ಒಳಗೊಬ್ಬ, ಹೊರಗೊಬ್ಬ, ಬಣಕ್ಕೊಬ್ಬ ಈ ರೀತಿ ನಾಯಕರಿದ್ದಾರೆ. ಆದರೆ ಈ ಬಯಲು ಸೀಮೆಯ ಸಮಸ್ಯೆಗಳನ್ನು ಬಗೆಹರಿಸಲು ಯಾವೊಬ್ಬ ನಾಯಕನು ಮುಂದೆ ಬರುತ್ತಿಲ್ಲ. ಈ ಭಾಗಕ್ಕೆ ಅವರ ಕೊಡುಗೆ ಏನು? ರೈತಸಂಘವನ್ನು ನಾವು ಮೊದಲು ಹುಟ್ಟುಹಾಕಿ ಬೆಳಗಾವಿ, ಮಂಡ್ಯ, ಮೈಸೂರು ಭಾಗಕ್ಕೆ ಹೋಗಿ ಹೋರಾಟ ಮಾಡಿ ಬಂದಿದ್ದೇವೆ. ಆದರೆ ಆ ಭಾಗದ ಯಾವುದೇ ಬಣದ ನಾಯಕರು ಬಯಲು ಸೀಮೆಯ ಕುರಿತು ಕಾಳಜಿ ತೋರುತ್ತಿಲ್ಲ’ ಎಂದು ನಾರಾಯಣಸ್ವಾಮಿ ಆರೋಪಿಸಿದರು.

‘ಇವತ್ತು ವಿಧಾನಸೌಧದೊಳಗೆ ಹೋಗಿ ಕುಳಿತಿರುವ ನಾಯಕ (ಶಾಸಕ ಕೆ.ಎಸ್.ಪುಟ್ಟಣಯ್ಯ) ಕೂಡ ಮುಖ್ಯಮಂತ್ರಿ ಅವರ ಬಳಿ ಬಯಲು ಸೀಮೆ ಭಾಗದ ಸಮಸ್ಯೆ ಕುರಿತು ಒಂದೇ ಒಂದು ದಿನವೂ ಪ್ರಶ್ನಿಸಿಲ್ಲ. ಹೊರಗೆ ಇರುವ ನಾಯಕರು (ಕೋಡಿಹಳ್ಳಿ ಚಂದ್ರಶೇಖರ್) ಉತ್ಸವ ಮೂರ್ತಿಗಳಂತಾಗಿದ್ದಾರೆ. ವರ್ಷಕ್ಕೋ ಆರು ತಿಂಗಳಿಗೋ ಜಿಲ್ಲೆಯಲ್ಲಿ ಕಾಣಿಸಿಕೊಂಡು ರಾಜಕೀಯವಾಗಿ ಮುಂದುವರಿಯಲು ಹವಣಿಸುತ್ತಿದ್ದಾರೆ’ ಎಂದು ದೂರಿದರು.

**

ರೈತ ಸಂಘದ ರಾಜ್ಯ ಘಟಕ ಅಧ್ಯಕ್ಷರು ತಮ್ಮ ಸ್ವಾರ್ಥಕ್ಕಾಗಿ ಸಂಘಟನೆ ಬಳಸಿಕೊಳ್ಳುತ್ತಿದ್ದಾರೆ. ಈ ಭಾಗದ ಸಮಸ್ಯೆಗಳತ್ತ ಯಾವುದೇ ರೀತಿಯಲ್ಲೂ ಗಮನ ಹರಿಸುತ್ತಿಲ್ಲ.
-ಬಿ.ನಾರಾಯಣಸ್ವಾಮಿ,
ರೈತಸಂಘದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT