ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು ಬಂದ್ ಸಂಪೂರ್ಣ ಯಶಸ್ವಿ

Last Updated 18 ಮೇ 2017, 5:34 IST
ಅಕ್ಷರ ಗಾತ್ರ

ತಿಪಟೂರು: ‘ನೊಣವಿನಕೆರೆಯಿಂದ ನಗರಕ್ಕೆ ನಿರಂತರ ನೀರು ಪೂರೈಸುವ ₹127 ಕೋಟಿ  ಅಂದಾಜು ವೆಚ್ಚದ ಯೋಜನೆ ಯಾವುದೇ ಕಾರಣಕ್ಕೂ ಕೈ ಬಿಡದೆ ತಕ್ಷಣ ಕಾಮಗಾರಿ ಆರಂಭಿಸಬೇಕು’ ಎಂದು ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಗಳು ಕರೆ ನೀಡಿದ್ದ ತಿಪಟೂರು ಬಂದ್ ಬುಧವಾರ ಸಂಪೂರ್ಣ ಯಶಸ್ವಿಯಾಯಿತು.
ಮಾಲೀಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಪ್ರೇರಣೆಯಿಂದ ಮುಚ್ಚಿದ್ದರು. ನಗರದ ಎಲ್ಲೆಡೆ ರಸ್ತೆಗಳು ಜನ, ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
ಚಿತ್ರಮಂದಿರಗಳು, ಹೋಟೆಲ್‌ಗಳು, ವಾಣಿಜ್ಯ ಸಂಕೀರ್ಣಗಳು, ಬ್ಯಾಂಕ್‌ಗಳೂ ಮುಚ್ಚಿದ್ದವು. ಸರ್ಕಾರಿ ಕಚೇರಿಗಳಲ್ಲಿ ಜನರಿರಲಿಲ್ಲ. ಆಟೊ ಸಹ ಬೀದಿಗಿಳಿಯಲಿಲ್ಲ. ಕೋಡಿ ಸರ್ಕಲ್‌ನಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಅಪಾರ ಜನ ನೆರೆದಿದ್ದರು.

ಉಪ ವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ ನಂತರ ನಗರಸಭೆ ಅಧ್ಯಕ್ಷ ಟಿ.ಎನ್. ಪ್ರಕಾಶ್ ಮಾತನಾಡಿ, ‘ನೊಣವಿನಕೆರೆ ಹಾಗೂ ಸುತ್ತಮುತ್ತಲ ರೈತರಿಗೆ ಯಾವುದೇ ರೀತಿಯ ತೊಂದರೆ, ನೀರಿನ ಅನ್ಯಾಯವಾಗದಂತೆ ನಗರಕ್ಕೆ ನೀರು ತರಲು ವ್ಯವಸ್ಥಿತವಾಗಿ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆಂದೆ ಹೆಚ್ಚುವರಿ ನೀರು ಸಂಗ್ರಹಿಸಿ ಅದನ್ನು ಮಾತ್ರ ನಗರದ ಕುಡಿಯುವ ನೀರಿನ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ. ನೊಣವಿನಕೆರೆ ಭಾಗದ ರೈತರು ಆತಂಕಕ್ಕೆ ಒಳಗಾಗದೆ ಯೋಜನೆ ಅನುಷ್ಠಾನಕ್ಕೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ನೊಣವಿನಕೆರೆ ಸುತ್ತಮುತ್ತಲ ಜನರಿಗೆ ಈ ಯೋಜನೆಯಿಂದ ಅನುಕೂಲವಾಗುತ್ತದೆ. ನಗರ ಅತಿ ವೇಗವಾಗಿ ಬೆಳೆಯುತ್ತಿದ್ದು, ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ಅಗತ್ಯವಿದೆ. ಪ್ರಸ್ತುತ ನಗರ ಸುಮಾರು 70 ಸಾವಿರ ಜನಸಂಖ್ಯೆ ಹೊಂದಿದೆ. ಮುಂದಿನ 10 ವರ್ಷಗಳಲ್ಲಿ  ಜನಸಂಖ್ಯೆ  ಹೆಚ್ಚಾಗಲಿದ್ದು, 12 ದಶಲಕ್ಷ ಲೀಟರ್ ಕುಡಿಯುವ ನೀರಿನ ಅಗತ್ಯವಿದೆ. ಈ ನೀರನ್ನು ಒದಗಿಸಲು ರಾಜ್ಯ ಸರ್ಕಾರ ನಗರಕ್ಕೆ ಸುಮಾರು ₹ 127 ಕೋಟಿ ವೆಚ್ಚದ ಯೋಜನೆ ರೂಪಿಸಿದೆ. ವ್ಯವಸಾಯಕ್ಕಾಗಿ ಬಳಸುತ್ತಿರುವ ನೀರನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ನಗರಕ್ಕೆ ಕುಡಿಯುವ ನೀರಿನ ಬಳಕೆಗಾಗಿ 0.30 ಟಿ.ಎಂ.ಸಿ ಅಡಿ ನೀರನ್ನು ಹಂಚಿಕೆ ಮಾಡಿದೆ. ಆದರೆ ಕೆಲವರು ರಾಜಕೀಯ ದುರುದ್ದೇಶ ಹಾಗೂ ಪಟ್ಟಭದ್ರ ಹಿತಾಸಕ್ತಿಯಿಂದ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಯೋಜನೆ ಕೈಬಿಡದೆ ಕಾಮಗಾರಿಯನ್ನು ಶೀಘ್ರವಾಗಿ ಕೈಗೊಳ್ಳಲು ಒತ್ತಾಯಿಸಿ ಪಕ್ಷಾತೀತವಾಗಿ ಬಂದ್ ನಡೆಸಲಾಗುತ್ತಿದೆ’ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿ.ಬಿ.ಶಶಿಧರ್ ‘ನಗರಕ್ಕೆ ಅನುಕೂಲವಾದ ಈ ಯೋಜನೆಯಿಂದ ಯಾರಿಗೂ ತೊಂದರೆ ಇಲ್ಲ. ಸರ್ಕಾರದ ವತಿಯಿಂದ ಇಂತಹ ಯೋಜನೆಗಳು ದೊರೆಯುವುದು ಕಷ್ಟ. ನಗರಕ್ಕೆ ಮಂಜೂರಾಗಿರುವ ಯೋಜನೆಯನ್ನು ಸ್ಥಗಿತಗೊಳಿಸಲು ಹೊರಟಿರುವುದು ಒಳ್ಳೆಯದಲ್ಲ. ರೈತರಿಗೆ ಯೋಜನೆಯಿಂದ ಯಾವುದೇ ಅನ್ಯಾಯವಾಗುತ್ತಿಲ್ಲ. ಕುಡಿವ ನೀರಿಗಾಗಿ ಅಲ್ಲಿನ ಜನತೆ ಸಹಕರಿಸಬೇಕು’ ಎಂದರು.

ನಗರಸಭೆ ಉಪಾಧ್ಯಕ್ಷೆ ಜಹರಾ ಜಬೀನ್, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ನಾರಾಯಣ್, ನಗರಸಭಾ ಸದಸ್ಯರಾದ ಪ್ರಸನ್ನಕುಮಾರ್, ಕೋಟೆಪ್ರಭು, ಅಬ್ದುಲ್‍ ಖಾದರ್‍, ನಾಗರಾಜು, ಟಿ.ಎಸ್.ಶಿವಪ್ರಸಾದ್, ಅನ್ನಪೂರ್ಣಮ್ಮ, ರೇಖಾ ಅನೂಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ಕಾಂಗ್ರೆಸ್
ವಕ್ತಾರ ಸದಾಶಿವಯ್ಯ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

**

ಕೆಲವರು ದಾರಿ ತಪ್ಪಿಸುತ್ತಿದ್ದಾರೆ
‘ಕೆಲವು ರಾಜಕೀಯ ವ್ಯಕ್ತಿಗಳು ದುರುದ್ದೇಶದಿಂದ ನೊಣವಿನಕೆರೆ ಸುತ್ತಲಿನ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ನೊಣವಿನಕೆರೆಯ ಹೂಳು ತೆಗೆಸಲು ₹ 13 ಕೋಟಿ
ಇದೇ ಯೋಜನೆಯಲ್ಲಿ ಮಂಜೂರು ಮಾಡಿದೆ. ನೊಣವಿನಕೆರೆಯಿಂದ ತಿಂಗಳುಗಟ್ಟಲೆ ನೀರು ಪೋಲಾಗಿ ಹರಿದು ಹೋಗುತ್ತಿರುತ್ತದೆ. ಅಂತಹ ನೀರನ್ನು ನಗರಕ್ಕೆ ಕೊಂಡೊಯ್ಯುವುದರಿಂದ ಯಾರಿಗೂ ನಷ್ಟವಿಲ್ಲ. ನೊಣವಿನಕೆರೆ ಸುತ್ತಮುತ್ತಲಿನ ಜನರು ಸುಮ್ಮನೆ ವಿರೋಧಿಸುವ ಕೆಲವರ ಮಾತು ನಂಬದೆ ಖುದ್ದಾಗಿ ಯೋಜನೆ
ವಿವರಗಳನ್ನು ಪಡೆದರೆ ಅರ್ಥವಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT