ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆ ವಿಳಂಬ: ವಿಧಾನಸೌಧಕ್ಕೆ ಮುತ್ತಿಗೆ

Last Updated 18 ಮೇ 2017, 5:39 IST
ಅಕ್ಷರ ಗಾತ್ರ

ಕೋಲಾರ: ‘ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಇದನ್ನು ಖಂಡಿಸಿ ಜೂನ್‌ 1ರಂದು ವಿಧಾನಸೌಧ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ’ ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಕಾರ್ಯದರ್ಶಿ ಶಿವಪ್ಪ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘದ ವತಿಯಿಂದ ಈ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಕೋಲಾರದಿಂದ ಬೆಂಗಳೂರಿನ ಪುರಭವನದವರೆಗೆ ಬೈಕ್‌ ರ್‌್್ಯಾಲಿ ನಡೆಸಲಾಗುತ್ತದೆ. ನಂತರ ಅಲ್ಲಿಂದ ವಿಧಾನಸೌಧದವರೆಗೆ ಬೃಹತ್ ಮೆರವಣಿಗೆ ನಡೆಸಿ ಮುತ್ತಿಗೆ ಹಾಕುತ್ತೇವೆ’ ಎಂದು ಹೇಳಿದರು.

‘ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬರ ಪರಿಸ್ಥಿತಿ ಇದೆ. ಬರದಿಂದ ಈ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಕೊಳವೆ ಬಾವಿಗಳಲ್ಲಿ ನೀರು ಬತ್ತಿದ್ದು, ಜನ ಹನಿ ನೀರಿಗೂ ಪರದಾಡುವ ಪರಿಸ್ಥಿತಿ’ ಎಂದರು.

‘ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಬಯಲುಸೀಮೆ ಜಿಲ್ಲೆಗಳಲ್ಲಿ ದಶಕಗಳಿಂದ ಹೋರಾಟಗಳು ನಡೆಯುತ್ತಲೇ ಇವೆ. ಆದರೆ, ಸರ್ಕಾರ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಹೀಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಉದ್ದೇಶದಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ’ ಎಂದು ಅವರು ವಿವರಿಸಿದರು.

‘ಚಿಕ್ಕಬಳ್ಳಾಪುರ ತಾಲ್ಲೂಕಿನ ಚದಲಪುರ ಗ್ರಾಮದ ಬಳಿ 169 ದಿನ ಹೋರಾಟ ನಡೆಸಿದ ಫಲವಾಗಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಒಂದು ವರ್ಷ ಕಾಲಾವಕಾಶ ಕೋರಿತ್ತು. ಆದರೆ, ಒಂದು ವರ್ಷದ ಗಡುವು ಮುಗಿದರೂ ಯಾವುದೇ ಯೋಜನೆಯನ್ನು ಪೂರ್ಣಗೊಳಿಸಿಲ್ಲ. ಸರ್ಕಾರಕ್ಕೆ ಬಯಲುಸೀಮೆ ಜಿಲ್ಲೆಯ ಜನರಿಗೆ ನೀರು ಕೊಡುವ ಇಚ್ಛಾಶಕ್ತಿ ಇಲ್ಲ’ ಎಂದು ದೂರಿದರು.

‘ನೀರಾವರಿ ತಜ್ಞರ ಸಮಿತಿ ರಚಿಸಿದ ಸರ್ಕಾರ, ಸಮಿತಿ ಸದಸ್ಯರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ. ಮೇಲುಸ್ತುವಾರಿ ಸಮಿತಿ ರಚಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಮುಖ್ಯವಾಗಿ ಮಧ್ಯ ಕರ್ನಾಟಕ ನೀರಾವರಿ ಪ್ರಾಧಿಕಾರ ರಚಿಸುವುದಾಗಿ ಹೇಳಿತ್ತು. ಆದರೆ, ಆ ಭರವಸೆಯನ್ನೂ ಈಡೇರಿಸದ ಸರ್ಕಾರ ಜನರನ್ನು ವಂಚಿಸುತ್ತದೆ’ ಎಂದು ಅವರು ಕಿಡಿಕಾರಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಸ್ವಾಮಿ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ರಾಮೇಗೌಡ, ಸದಸ್ಯರಾದ ಶ್ರೀನಿವಾಸ್, ಶಾಮಣ್ಣ, ಬೈರರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT