ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಖರ ಬಿಸಿಲಿಗೆ ಬಸವಳಿದ ಕುರಿಗಾಹಿಗಳು

Last Updated 18 ಮೇ 2017, 8:19 IST
ಅಕ್ಷರ ಗಾತ್ರ

ಕುಕನೂರು: ‘ಸಂಜೆ ಹೊತ್ತಿಗೆ ಕುರಿಗಳು ಹೊಟ್ತುಂಬಾ ಮೇಯ್ದು, ನೀರು ಕುಡಿದು ಹಟ್ಟಿ ಸೇರ್ತಿದ್ವಪಾ. ಆದ್ರ ಈ ವರ್ಷ ಎಷ್ಟು ಅಲೆದರೂ ಅಡವಿಯಾಗ ಹಸಿರನ್ನದಿಲ್ಲ. ಕುಡಿಯಾಕ ನೀರು ಸಿಕ್ತಿಲ್ಲ. ನಮ್ಮ ಗೋಳು ಯಾಕ್ ಕೇಳ್ತೀರಿ. ಕೇಳ್ಯಾರ ಏನ್ ಮಾಡಂಗದಿರಿ. ನಮ್ಮ ಪರಿಸ್ಥಿತಿ ಆ ದೇವರಿಗೆ ಪ್ರೀತಿ ಆದಂಗಾಗೈತಿ..... ಈಗಂತೂ ಕುರಿ ಸಾಕೋದು ಕಷ್ಟ-ಕರವಾಗೈತಿ... ಇದು ಬಿಸಿಲಿನಿಂದ ಬಸವಳಿದ ಕುರಿಗಾಹಿ ಬಸಪ್ಪನ ಸಂಕಟದ ನುಡಿ.

ಇದು ಮುಂಗಾರು ಮತ್ತು ಹಿಂಗಾರು ಮಳೆಯ ಕೊರೆತೆಯಿಂದಾಗಿ ಪ್ರಸಕ್ತ ಸಾಲಿನಲ್ಲಿ ಹೈನುಗಾರಿಕೆ,ಆಡು ಮತ್ತು ಕುರಿ ಸಾಕಾಣಿಕೆಗಳ ಮೇಲೆ ಬೀರಿದ ಭೀಕರ ಬರಗಾಲದ ಘೋರ ಪರಿಣಾಮ. ಮಳೆರಾಯ ಮುನಿಸಿಕೊಂಡಿದ್ದರಿಂದ ಕುರಿಗಾಹಿಗಳ ಬದುಕು ಹೈರಾಣವಾಗಿದೆ.

ಒಣ ಬೇಸಾಯ ಪ್ರದೇಶವಾಗಿದ್ದು, ಉಪಜೀವನಕ್ಕಾಗಿ ಕುರುಬರು ತಾಲ್ಲೂಕಿನಲ್ಲಿ ಕುರಿ ಸಾಕಾಣಿಕೆ ಮಾಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತದೆ. ಪಶುವೈದ್ಯಕೀಯ ಇಲಾಖೆಯ 12ನೇ ಜಾನುವಾರು ಗಣತಿ ಪ್ರಕಾರ ತಾಲ್ಲೂಕಿನಲ್ಲಿ  1 ಲಕ್ಷ 15 ಸಾವಿರ ಕುರಿಗಳು ಹಾಗೂ 32 ಸಾವಿರ ಆಡುಗಳು ಇವೆ.

ಕುರಿಸಾಕಾಣಿಕೆಯನ್ನೇ ನಂಬಿ ಬದುಕಿರುವ ಕುರಿಗಾಹಿಗಳು, ಕುರಿಗಳ ಆಹಾರಕ್ಕಾಗಿ ಕಾಡು-ಮೇಡು ಎನ್ನದೇ ದಿಕ್ಕು-ದೆಸೆಯಿಲ್ಲದೇ ಅಲೆದಾಡುತ್ತಿರುವ ದೃಶ್ಯ ಈಗ ಕಣ್ಣಿಗೆ ಕಾಣುವುದು ಸಾಮಾನ್ಯ. ಕುರಿಗಳ ಹಿಂಡನ್ನು ಮೇಯಿಸಲು 5 ರಿಂದ 6 ಕಿ.ಮೀ ಅಲೆದಾಡಿದರೂ ಕುರಿಗಳದ್ದು ಖಾಲಿ ಹೊಟ್ಟೆ. ಕುರಿಗಾಹಿಯ ಕೈಯಲ್ಲಿ ಒಣ ರೊಟ್ಟಿ. ಈಗ ನಮ್ಮ ಬದುಕು ಮೂರಾಬಟ್ಟಿ ಅಂತಾಗಿದೆ ಎನ್ನುತ್ತಾರೆ ಕುರಿಗಾಹಿ ರಾಮಣ್ಣ.

ರೈತ ವರ್ಗ ಹಿಂದೇಟು: ರೈತರು ಜಮೀನುಗಳಿಗೆ ಗೊಬ್ಬರದ ನಿಮಿತ್ತ ಕುರಿ ಹಟ್ಟಿಗಳನ್ನು ಹಾಕಿಸುತ್ತಾರೆ. ಒಂದು ದಿನಕ್ಕೆ 100 ಕುರಿಗಳಿಗೆ 10 ಸೇರು ಜೋಳ, ₹150 ರಂತೆ ಹಣ ನೀಡುತ್ತಿದ್ದರು. ಆದರೆ ಈ ವರ್ಷ ಬೆಳೆ ಇಲ್ಲದ ಕಾರಣ, ಜೋಳ ಸೇರಿದಂತೆ ಇತರೆ ಯಾವ ಧಾನ್ಯಗಳು ರೈತರ ಕೈಸೇರಿಲ್ಲ. ಅಲ್ಲದೇ ಕುರಿಗಳಿಗೆ ಮೇಯಲು ಏನೂ ಇಲ್ಲದ ಕಾರಣ ಗೊಬ್ಬರ ಸಿಗದು ಎಂಬ ಕಾರಣದಿಂದ ರೈತರು ಕುರಿ ಹಟ್ಟಿ ಹಾಕಿಸಲು ಹಿಂದೇಟು ಹಾಕುತ್ತಿದ್ದಾರೆ.

ಬಿಸಿಲಿಗೆ ರೋಗ ಭೀತಿ: ಜಿಲ್ಲೆಯಲ್ಲಿ ಬಿಸಿಲು ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದ್ದು, ವೈದ್ಯರ ಸಲಹೆಯನುಸಾರ ಕುರಿಗೆ ದಿನವೊಂದಕ್ಕೆ 10 ರಿಂದ 15 ಲೀಟರ್‌ ನೀರು ಬೇಕಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪೂರ್ಣ ಪ್ರಮಾಣದ ನೀರು ದೊರಕುತ್ತಿಲ್ಲ. ಹಲವಾರು ಕುರಿಗಳಿಗೆ ಕಾರಣಾಂತರಗಳಿಂದ ರೋಗ ಹೆಚ್ಚಾಗುತ್ತಿದ್ದು, ಪಿಪಿಆರ್, ಈಟಿ, ಎಚ್‍ಎಸ್ ಎಂಬ ಸಾಂಕ್ರಾಮಿಕ ರೋಗಗಳು ಹರಡಿ, ಕುರಿಗಳ ಬಲಿ ಪಡೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಜಾನುವಾರುಗಳಿಗೆ ಇರುವ ಗೋಶಾಲೆಯ ಹಾಗೆ, ಕುರಿಗಳಿಗೂ ಆಸರೆ ಕಲ್ಪಿಸಿದರೆ ಅನುಕೂಲ ಆಗುತ್ತದೆ.  ಉಣ್ಣೆ ಆದಾಯದ ಮೂಲಗಳಾಗಿರುವ ಕುರಿಗಳ  ಬಗ್ಗೆ ಸರ್ಕಾರ ಗಮನ ಹರಿಸಬೇಕಾಗಿದೆ ಎಂಬುದು ಸಂಕಷ್ಟದಲ್ಲಿರುವ ಕುರಿಗಾಹಿಗಳ ಒಡಲಾಳದ ಮಾತು.

**

ಈ ವರ್ಷದ ಪರಿಸ್ಥಿತಿಯನ್ನು ನಾವು ಎಂದೂ ಕಂಡಿದ್ದಿಲ್ಲ. ತುತ್ತು ಅನ್ನಕ್ಕೂ ಬರ ಬಂದಿದೆ. ಸಾಕಿರುವ ಕುರಿಗಳ ಜೋಪಾನ ಮಾಡುವುದು ಕಷ್ಟಕರವಾಗಿದೆ.
–ಹನುಮಪ್ಪ ಬಾಲಪ್ಪ, ಕುರಿಗಾಹಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT