ಮುದ್ದಾದ ನಟಿ ಅಮೂಲ್ಯ ಮದುವೆಯಲ್ಲಿ ಮತ್ತಷ್ಟು ಕಂಗೊಳಿಸುವಂತೆ ಮಾಡುವಲ್ಲಿ ಮೇಕಪ್ ಕಲಾವಿದ ನಟರಾಜ್ ಕೈಚಳಕವಿದೆ. ಬ್ರೈಡಲ್ ಮೇಕಪ್ ಮತ್ತು ಕೇಶವಿನ್ಯಾಸದಲ್ಲಿ ಹತ್ತು ವರ್ಷದ ಅನುಭವವಿರುವ ಇವರು ತುರುವೇಕರೆಯವರು. ಹಲವು ಸೆಲೆಬ್ರಿಟಿಗಳ ಮೊಗವನ್ನು ತಿದ್ದಿ ತೀಡಿರುವ ನಟರಾಜ್, ತಮ್ಮ ವೃತ್ತಿಯಲ್ಲಿ ಬೆಳೆದ ಆಸಕ್ತಿಯನ್ನು ವಿವರಿಸುವುದು ಹೀಗೆ...
* ಬಣ್ಣದ ನಂಟು ಬೆಳೆದಿದ್ದು ಹೇಗೆ?
ನನ್ನ ಭಾವ ಸಿನಿಮಾ ಮಂದಿಗೆ ಕೇಶವಿನ್ಯಾಸ ಮಾಡುತ್ತಿದ್ದರು. ಶಿವರಾಜ್‌ಕುಮಾರ್, ರವಿಚಂದ್ರನ್ ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೆ ಕೇಶ ವಿನ್ಯಾಸ ಮಾಡಿದ್ದಾರೆ. ಅವರಿಂದ ನನಗೂ ಈ ಕ್ಷೇತ್ರದಲ್ಲಿ ಆಸಕ್ತಿ ಬಂತು. ಐದು ವರ್ಷ ಸಿನಿಮಾದವರಿಗೆ ಮೇಕಪ್ ಮತ್ತು ಕೇಶ ವಿನ್ಯಾಸ ಮಾಡುತ್ತಿದ್ದೆ. ಬ್ರೈಡಲ್ ಮೇಕಪ್ ಬಗ್ಗೆ ತಿಳಿದುಕೊಂಡ ನಂತರ ನನ್ನ ಆಸಕ್ತಿ ಇತ್ತ ಹೊರಳಿತು. ಇಲ್ಲಿ ಸೃಜನಶೀಲತೆಗೆ ಹೆಚ್ಚು ಒತ್ತು ಇರುತ್ತದೆ.
* ಮೇಕಪ್ ಬಗ್ಗೆ ನೀವು ನೀಡುವ ವ್ಯಾಖ್ಯಾನ?
ಮೇಕಪ್ ಹಚ್ಚುವುದು ಸುಲಭದ ಕೆಲಸವಲ್ಲ. ಸಂದರ್ಭಕ್ಕೆ ತಕ್ಕಂತೆ ಬಣ್ಣ ಹಚ್ಚುವ ಕೌಶಲ ಅರಿತಿರಬೇಕು. ಮೇಕಪ್ ಕಲಾವಿದನಾದವನು ಸದಾ ಕ್ರಿಯಾಶೀಲನಾಗಿರಬೇಕು. ಪ್ರಯೋಗಕ್ಕೆ ತನ್ನನ್ನು ತಾನು ತೆರೆದುಕೊಂಡರಷ್ಟೇ ಈ ಕ್ಷೇತ್ರದಲ್ಲಿ ಹೆಚ್ಚು ಸಮಯ ಉಳಿಯಲು ಸಾಧ್ಯ. ಮೇಕಪ್ ಮಾಡಿಸಿಕೊಳ್ಳುವವರು ನಮ್ಮ ಮೇಲೆ ನಂಬಿಕೆ ಇಟ್ಟು ಮುಖ ಒಡ್ಡುತ್ತಾರೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿರುತ್ತದೆ.
* ಮೇಕಪ್ ಈಗ ಎಷ್ಟರಮಟ್ಟಿಗೆ ಪ್ರಾಮುಖ್ಯ ಪಡೆದಿದೆ?
ಈಗಂತೂ ಎಲ್ಲಾ ಸಂದರ್ಭಗಳಲ್ಲಿಯೂ ಮೇಕಪ್ ಹಚ್ಚಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಸರಳ ಸಮಾರಂಭದಲ್ಲಿಯೂ ಮೇಕಪ್ ಹಚ್ಚಿಕೊಳ್ಳದೇ ಇರಲಾರರು. ಕಚೇರಿಗೆ ಹೋಗುವುದರಿಂದ ಶಾಪಿಂಗ್‌ಗೆ ಹೋಗುವ ತನಕ ಮೇಕಪ್ ಇಲ್ಲದೇ ಹೊರಗೆ ಹೋಗುವವರು ಕಡಿಮೆ. ಹೀಗಾಗಿ ನಮ್ಮ ವೃತ್ತಿಗೆ ಬೇಡಿಕೆ ಹೆಚ್ಚುತ್ತಿದೆ.
* ಬ್ರೈಡಲ್ ಮೇಕಪ್, ಸಿನಿಮಾ ಮತ್ತು ರೂಪದರ್ಶಿಯರ ಮೇಕಪ್‌ನಲ್ಲಿ ವ್ಯತ್ಯಾಸವೇನು?
ಬ್ರೈಡಲ್ ಮೇಕಪ್‌ನಲ್ಲಿ ನಮ್ಮ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚುವುದು ಸಾಧ್ಯ. ವಧುವಿಗೆ ಯಾವ ರೀತಿಯ ಮೇಕಪ್ ಹೊಂದುತ್ತದೆ ಎಂಬುದನ್ನು ನಾವೇ ಸಲಹೆ ನೀಡಿ ಪ್ರಯೋಗ ಮಾಡುತ್ತೇವೆ. ಸಿನಿಮಾ ಕಲಾವಿದರಿಗೆ ಮೇಕಪ್ ಮಾಡುವಾಗ ನಮ್ಮ ಕೌಶಲ ತೋರಿಸಲು ಇರುವ ಅವಕಾಶ ಕಡಿಮೆ. ಪಾತ್ರ, ಸನ್ನಿವೇಶಕ್ಕೆ ತಕ್ಕಂತೆ ಮೇಕಪ್ ಮಾಡಬೇಕಾಗುತ್ತದೆ. ರೂಪದರ್ಶಿಯರ ಮೇಕಪ್ ಅವರ ಉಡುಪಿನ ಮೇಲೆ ನಿರ್ಧಾರವಾಗುತ್ತದೆ. ಕಣ್ಣಿನ ಮೇಪಕ್ ಅತಿ ಎನ್ನುವಷ್ಟರ ಮಟ್ಟಿಗೆ ಇರುತ್ತದೆ. ಹೇರ್‌ಸ್ಟೈಲ್ ಕೂಡ ವಿಭಿನ್ನವಾಗಿರುತ್ತದೆ. ಪರಿಕಲ್ಪನೆಗೆ ತಕ್ಕಂತೆ ಮೇಕಪ್ ಮಾಡಬೇಕಾಗುತ್ತದೆ
* ಯಾವ್ಯಾವ ಸೆಲೆಬ್ರಿಟಿಗಳಿಗೆ ಮೇಕಪ್ ಮಾಡಿದ್ದೀರಿ?
ಮಲಯಾಳಿ ನಟಿ ಮುಕ್ತಾ, ನಟಿ ಅಮೂಲ್ಯ, ಮಾನಸಾ ಜೋಷಿ, ಮಯೂರಿ, ತೆಲುಗಿನ ಶ್ರೇಯಾ ಶರಣ್ ಹೀಗೆ ಸಾಕಷ್ಟು ಮಂದಿಗೆ ಮಾಡಿದ್ದೇನೆ.