ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಧವ್‌ ಸದ್ಯಕ್ಕೆ ನಿರಾಳ

ಪಾಕ್‌ ವಾದ ಒಪ್ಪದ ಅಂತರರಾಷ್ಟ್ರೀಯ ನ್ಯಾಯಾಲಯ
Last Updated 18 ಮೇ 2017, 19:30 IST
ಅಕ್ಷರ ಗಾತ್ರ

ಹೇಗ್‌ : ನೌಕಾಪಡೆ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆಗೆ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತಡೆ ನೀಡಿದೆ. ಈ ಮೂಲಕ ಪ್ರಕರಣದಲ್ಲಿ, ರಾಜತಾಂತ್ರಿಕವಾಗಿ ಭಾರತಕ್ಕೆ ಬಹುದೊಡ್ಡ ಗೆಲುವು ದೊರೆತಿದೆ.

‘ಪ್ರಕರಣದ ಅಂತಿಮ ತೀರ್ಪು ಪ್ರಕಟವಾಗುವ ತನಕ ಅವರಿಗೆ ವಿಧಿಸಿ ರುವ ಮರಣ ದಂಡನೆ ಜಾರಿ ಆಗದಂತೆ ಎಲ್ಲ ಕ್ರಮಗಳನ್ನೂ ಪಾಕಿಸ್ತಾನ ಕೈಗೊಳ್ಳಬೇಕು’ ಎಂದು ಐಸಿಜೆ ಅಧ್ಯಕ್ಷ ರಾನಿ ಅಬ್ರಹಾಂ ಸೂಚಿಸಿದ್ದಾರೆ.

ಈಗ ನೀಡಿರುವ ಆದೇಶ ಜಾರಿಗೊಳಿಸಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆಯೂ ಪಾಕಿಸ್ತಾನಕ್ಕೆ ನಿರ್ದೇಶಿಸಲಾಗಿದೆ. ವಿಯೆನ್ನಾ ಒಪ್ಪಂದದ ಪ್ರಕಾರ ಜಾಧವ್‌ ಅವರಿಗೆ ಪಾಕಿಸ್ತಾನದಲ್ಲಿರುವ ಭಾರತದ ಕಾನ್ಸಲ್‌ ಕಚೇರಿಯ ನೆರವು ಪಡೆಯಲು ಅವಕಾಶ ನೀಡಬೇಕಿತ್ತು ಎಂದು ಭಾರತ ವಾದಿಸಿತ್ತು. ಈ ವಾದವನ್ನು ಐಸಿಜೆ ಎತ್ತಿ ಹಿಡಿದಿದೆ.

1977ರಲ್ಲಿ ಎರಡೂ ದೇಶಗಳು ವಿಯೆನ್ನಾ ಒಪ್ಪಂದಕ್ಕೆ ಸಹಿ ಮಾಡಿವೆ. ಹಾಗಾಗಿ ಒಪ್ಪಂದದ ಷರತ್ತು ಅನ್ವಯ ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಐಸಿಜೆ ಅಭಿಪ್ರಾಯಪಟ್ಟಿದೆ.

* 11 ನ್ಯಾಯಮೂರ್ತಿಗಳ ಪೀಠದಿಂದ ಅವಿರೋಧ ಆದೇಶ
* ಎರಡೂ ಕಡೆಯ ವಾದ ಆಲಿಸಿದ ಮೂರು ದಿನಗಳ ಬಳಿಕ ಆದೇಶ ಪ್ರಕಟ
* ಇದೇ 9ರಂದು ಮರಣ ದಂಡನೆಗೆ ಐಸಿಜೆ ತಾತ್ಕಾಲಿಕ ತಡೆ ಕೊಟ್ಟಿತ್ತು

ಭಾರತದ ವಾದ

* ಮರಣ ದಂಡನೆಯನ್ನು ತಕ್ಷಣವೇ ಅಮಾನತು ಮಾಡಬೇಕು
* ಅಂತರರಾಷ್ಟ್ರೀಯ ಕಾನೂನು ಮತ್ತು ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿ ಮರಣ ದಂಡನೆ ನೀಡಲಾಗಿದೆ
* ಸೇನಾ ನ್ಯಾಯಾಲಯದ ಆದೇಶ ಜಾರಿ ಮಾಡದಂತೆ ತಡೆ ಮತ್ತು ಪಾಕಿಸ್ತಾನದಲ್ಲಿರುವ ಕಾನೂನು ಪ್ರಕಾರವೇ ಸೇನಾ ನ್ಯಾಯಾಲಯದ ಆದೇಶ ರದ್ದುಪಡಿಸಲು ಸೂಚಿಸುವುದು
* ಆದೇಶವನ್ನು ಪಾಕಿಸ್ತಾನ ರದ್ದು ಮಾಡದಿದ್ದರೆ, ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದೆ ಎಂಬ ನೆಲೆಯಲ್ಲಿ ಐಸಿಜೆಯೇ ರದ್ದು ಮಾಡುವುದು

ಐಸಿಜೆ ಮನ್ನಣೆ

* ಪ್ರಕರಣದಲ್ಲಿ ತನಗೆ ವ್ಯಾಪ್ತಿ ಇದೆಯೇ ಎಂಬುದನ್ನು ಮೊದಲಿಗೆ ಐಸಿಜೆ ಪರಿಶೀಲನೆಗೆ ಒಳಪಡಿಸಿತು. ಜಾಧವ್‌ ಬಂಧನ ಮತ್ತು ವಶದಲ್ಲಿ ಇರಿಸಿಕೊಂಡ ಬಗ್ಗೆ ಕಾನ್ಸಲ್‌ಗೆ ಮಾಹಿತಿ ನೀಡಿಲ್ಲ ಎಂಬುದು ವಿಯೆನ್ನಾ ಒಪ್ಪಂದದ ಅಡಿ ಬರುತ್ತದೆ. ಹಾಗಾಗಿ ಇದು ತನ್ನ ವ್ಯಾಪ್ತಿಯಲ್ಲಿರುವ ಪ್ರಕರಣ ಎಂಬ ನಿರ್ಧಾರ
* ಕಾನ್ಸಲ್‌ ಕಚೇರಿಯ ನೆರವು ಪಡೆಯುವ ಹಕ್ಕು ವಿದೇಶದ ಬಂಧಿತ ಪ್ರಜೆಗೆ ಇದೆ. ಆದರೆ ಜಾಧವ್‌ಗೆ ಈ ಹಕ್ಕನ್ನು ನೀಡಲಾಗಿಲ್ಲ.
* ಭಾರತ ಪ್ರತಿಪಾದಿಸಿದ ಹಕ್ಕುಗಳು ಮತ್ತು ಅದರ ಕೋರಿಕೆಗಳು ಪರಸ್ಪರ ಪೂರಕವಾಗಿವೆ
* ಮರಣ ದಂಡನೆ ವಿಧಿಸಲಾಗಿರುವುದರಿಂದ ಅದನ್ನು ಯಾವಾಗ ಬೇಕಾದರೂ ಜಾರಿ ಮಾಡಬಹುದು ಎಂಬ ಭಾರತದ ಆತಂಕ ಸಮರ್ಥನೀಯವೇ ಆಗಿದೆ

ಐಸಿಜೆಗೆ ಅಧಿಕಾರವೇ ಇಲ್ಲ: ಪಾಕ್‌

ಇಸ್ಲಾಮಾಬಾದ್‌ (ಪಿಟಿಐ): ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರಗಳಲ್ಲಿ ಮಧ್ಯಪ್ರವೇಶಕ್ಕೆ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಅಧಿಕಾರ ಇದೆ ಎಂಬುದನ್ನು ಒಪ್ಪುವುದಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದೆ. 
ಈ ವಿಚಾರವನ್ನು ಐಸಿಜೆಗೆ ತಿಳಿಸಲಾಗಿದೆ ಎಂದೂ ಆ ದೇಶ ಹೇಳಿದೆ.
ಜಾಧವ್‌ ಪ್ರಕರಣದಲ್ಲಿ ಐಸಿಜೆಗೆ ದೂರು ನೀಡುವ ಮೂಲಕ ಭಾರತವು ತನ್ನ ‘ನಿಜ’ ಮುಖವನ್ನು ಅಡಗಿಸಿಡಲು ಪ್ರಯತ್ನಿಸುತ್ತಿದೆ ಎಂದು ವಕ್ತಾರರಾದ ನಫೀಜ್‌ ಜಕರಿಯಾ ಹೇಳಿದ್ದಾರೆ. ಜಾಧವ್‌ ವಿಚಾರದಲ್ಲಿ ಮಧ್ಯಪ್ರವೇಶಕ್ಕೆ ಐಸಿಜೆಗೆ ಅಧಿಕಾರ ಇಲ್ಲ ಎಂದು ಸೋಮವಾರ ನಡೆದ ವಿಚಾರಣೆಯಲ್ಲಿ ಪಾಕಿಸ್ತಾನ ಪ್ರತಿಪಾದಿಸಿತ್ತು. ಆದರೆ ಇದು ತನ್ನ ವ್ಯಾಪ್ತಿಯಲ್ಲಿಯೇ ಇರುವ ವಿಚಾರ ಎಂಬುದನ್ನು ಐಸಿಜೆ ಸ್ಪಷ್ಟಪಡಿಸಿದೆ.

* ಇದೊಂದು ಸಂಕೀರ್ಣ ಪ್ರಕರಣ. ನಾವು ಶ್ರಮವಹಿಸಿ ಕೆಲಸ ಮಾಡಿದ್ದೇವೆ. ನಮ್ಮ ವಾದ ಸ್ವೀಕೃತವಾಗಿದೆ ಎಂಬುದು ಮೇಲ್ನೋಟಕ್ಕೇ ಕಾಣಿಸಿತ್ತು. ನಮಗೆ ಇನ್ನಷ್ಟು ಚೈತನ್ಯ, ಧೈರ್ಯ ಬಂದಿದೆ.
-ಹರೀಶ್‌ ಸಾಳ್ವೆ ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT