ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ ಮನೆ ಸಾಲಕ್ಕೆ ಬ್ಯಾಂಕ್‌ಗಳ ಆದ್ಯತೆ

Last Updated 18 ಮೇ 2017, 19:30 IST
ಅಕ್ಷರ ಗಾತ್ರ
ಕೇಂದ್ರ ಸರ್ಕಾರ ‘ಎಲ್ಲರಿಗೂ ಸೂರು’ ಯೋಜನೆಗೆ ಪ್ರೋತ್ಸಾಹ ನೀಡಿರುವುದರಿಂದ ಸ್ವಂತ ಸೂರು ಹೊಂದಬೇಕು ಎನ್ನುವವರ ಕನಸಿಗೆ ರೆಕ್ಕೆ ಮೂಡಲಾರಂಭಿಸಿವೆ.
 
2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣವಾಗಲಿದೆ. ಈ ಅವಧಿಯೊಳಗೆ ದೇಶದಲ್ಲಿರುವ ಎಲ್ಲರೂ ಸೂರು ಹೊಂದಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಪಿಎಂಎವೈ’ (ಪ್ರಧಾನಮಂತ್ರಿ ಆವಾಸ್‌ ಯೋಜನೆ) ಜಾರಿಗೆ ತಂದಿದೆ.
 
ನಗರ ಪ್ರದೇಶದಲ್ಲಿ ಪಿಎಂಎವೈಯಲ್ಲಿ ₹9 ಲಕ್ಷದವರೆಗಿನ ಗೃಹ ಸಾಲಕ್ಕೆ ಶೇ 4ರ ಬಡ್ಡಿ ವಿನಾಯಿತಿ ಮತ್ತು ₹12 ಲಕ್ಷದವರೆಗಿನ ಸಾಲಕ್ಕೆ ಶೇ 3ರ ಬಡ್ಡಿ ವಿನಾಯಿತಿ ಸಿಗಲಿದೆ. ಅಂತೆಯೇ ಗ್ರಾಮೀಣ ಭಾಗದಲ್ಲಿ ₹2 ಲಕ್ಷದವರೆಗಿನ ಸಾಲಕ್ಕೆ ಶೇ 3ರ ಬಡ್ಡಿ ವಿನಾಯಿತಿ ಸಿಗಲಿದೆ. ಇದು ಹೊಸದಾಗಿ ಮನೆ ಖರೀದಿಸುವವರನ್ನು ಉತ್ತೇಜಿಸಿದೆ. 
 
ಅಗ್ಗದ ಮನೆ ಖರೀದಿಸುವವರಿಗೆ ಸರ್ಕಾರ ನೀಡಿರುವ ಉತ್ತೇಜನದ ಲಾಭ ಪಡೆದುಕೊಳ್ಳಲು ಬ್ಯಾಂಕ್‌ಗಳು ಸಹ ಕೈಗೆಟುಕುವ ಬೆಲೆಗೆ ಮನೆ ಖರೀದಿಸುವವರಿಗೆ ಸಾಲ ನೀಡಲು ಹೆಚ್ಚು ಆಸಕ್ತಿ ತೋರಿಸುತ್ತಿವೆ. ಈ ಮೂಲಕ ಬೇರೆ ವಲಯಗಳಿಂದ ತಗ್ಗಿರುವ ಸಾಲದ ಬೇಡಿಕೆ ಸರಿದೂಗಿಸಿಕೊಳ್ಳಲು ಮುಂದಾಗಿವೆ. 
 
ಬಡ್ಡಿದರ- ಎಸ್‌ಬಿಐನಿಂದ ಗರಿಷ್ಠ ಕಡಿತ: ಕಡಿಮೆ ಬೆಲೆಯ ಮನೆ ಖರೀದಿಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಗೃಹ ಸಾಲದ ಬಡ್ಡಿದರದಲ್ಲಿ ಶೇ 0.25ರಷ್ಟು ಕಡಿತ ಮಾಡಿದೆ.
 
 
‘ದೇಶದ ಅತಿದೊಡ್ಡ ಬ್ಯಾಂಕ್‌ನ ಈ ನಿರ್ಧಾರದಿಂದ ಮಹಿಳೆಯರಿಗೆ ಗೃಹ ಸಾಲದ ಬಡ್ಡಿದರ ಶೇ8.60 ರಿಂದ ಶೇ8.35ಕ್ಕೆ ಇಳಿಕೆಯಾಗಿದೆ. ಹೊಸ
ದಾಗಿ ಸಾಲ ಪಡೆಯುವವರಿಗೆ ಈ ಬಡ್ಡಿ ದರ ಅನ್ವಯವಾಗಲಿದೆ. ಗೃಹ ಸಾಲಕ್ಕೆ ಇರುವ ಅತ್ಯಂತ ಕನಿಷ್ಠ ಬಡ್ಡಿದರ ಇದಾಗಿದೆ. ಪುರುಷರಿಗೆ ಗೃಹಸಾಲದ ಬಡ್ಡಿ ದರದ ಈ ಸೀಮಿತ ಕೊಡುಗೆ ಜುಲೈ 31ರವರೆಗೆ ಮಾತ್ರ ಜಾರಿಯಲ್ಲಿ ಇರಲಿದೆ. 
 
ಅಗ್ಗದ ಮನೆ ನಿರ್ಮಾಣ ಮಾಡುವವರಿಗೆ ಆರ್ಥಿಕ ನೆರವು ನೀಡುವುದಾಗಿಯೂ ಬ್ಯಾಂಕ್‌ ತಿಳಿಸಿದೆ. ಈ ನಿರ್ಧಾರ ಸಹ ನಿರ್ಮಾಣ ಸಂಸ್ಥೆಗಳಿಗೆ ಅಗ್ಗದ ಮನೆ ನಿರ್ಮಾಣ ಮಾಡುವಂತೆ ಉತ್ತೇಜಿಸಿದೆ.
 
ರಿಯಾಯಿತಿ ದರದಲ್ಲಿ ಸಾಲ: ಅಗ್ಗದ ಮನೆಗಳ ನಿರ್ಮಾಣಕ್ಕೆ ರಿಯಾಯಿತಿ ದರದಲ್ಲಿ ಸಾಲ ನೀಡಲು ಎಸ್‌ಬಿಐ ಏಪ್ರಿಲ್‌ ತಿಂಗಳಿನಲ್ಲಿ ರಿಯಲ್ ಎಸ್ಟೇಟ್‌ ಅಭಿವೃದ್ಧಿಪಡಿಸುವವರ ಒಕ್ಕೂಟದ (ಸಿಆರ್‌ಇಡಿ) ಜತೆ ಒಪ್ಪಂದಮಾಡಿಕೊಂಡಿದೆ. ಈ ಒಪ್ಪಂದದಂತೆ ಒಕ್ಕೂಟವು ದೇಶದಾದ್ಯಂತ  ಅಗ್ಗದ ಮನೆಗಳ 375 ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
 
ಏನಿದು ಅಗ್ಗ ಮನೆ?: ನಗರ ಪ್ರದೇಶದಲ್ಲಿ ₹30 ಲಕ್ಷದವರೆಗಿನ ಮನೆಗಳು ‘ಕೈಗೆಟುಕುವ ಗೃಹ ಸಾಲ’ (Affordable Home Loan) ವ್ಯಾಪ್ತಿಗೆ ಬರಲಿವೆ ಎಂದು ಸರ್ಕಾರ ವ್ಯಾಖ್ಯಾನಿಸಿದೆ. ಅಗ್ಗದ ಮನೆ ನಿರ್ಮಾಣದ ವಿಸ್ತೀರ್ಣ ಮಿತಿ 60 ಚದರ ಮೀಟರ್‌. ತೆರಿಗೆ ವಿನಾಯಿತಿ ಮಿತಿ ಮೂರು ವರ್ಷದಿಂದ ಐದು ವರ್ಷಕ್ಕೆ ಏರಿಸಲಾಗಿದೆ.
 
ಹೆಚ್ಚು ಬೇಡಿಕೆ: ‘₹30 ಲಕ್ಷದವರೆಗಿನ ಗೃಹ ಸಾಲವು ಅಗ್ಗದ ದರದ ಮನೆಗಳ ವ್ಯಾಪ್ತಿಗೆ ಒಳಪಡಲಿದೆ.  ₹30 ಲಕ್ಷದ ಒಳಗಿನ ಮೊತ್ತದ ಗೃಹ ಸಾಲಕ್ಕೆ ಸಂಬಂಧಿಸಿದಂತೆ ಈಗಾಗಲೇ ₹2.23 ಲಕ್ಷ ಕೋಟಿ ಮೊತ್ತದಷ್ಟು ಮುಂಗಡ ಬೇಡಿಕೆ ಬಂದಿದೆ’ ಎಂದು ಎಸ್‌ಬಿಐ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಫಾರೂಖ್‌ ಷಹಾಬ್‌ ಅವರು ಹೇಳುತ್ತಾರೆ.
 
 
ಖಾಸಗಿ ಬ್ಯಾಂಕ್‌ಗಳಿಂದಲೂ ಬಡ್ಡಿದರ ಕಡಿತ: ಖಾಸಗಿ ವಲಯದಲ್ಲಿ ಐಸಿಐಸಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಗೃಹ ಸಾಲದ ಬಡ್ಡಿದರಗಳನ್ನು  ಶೇ 0.30ರಷ್ಟು ಇಳಿಸಿವೆ. ಮನೆಗಳ ಮಾರಾಟವನ್ನು ಉತ್ತೇಜಿಸಲು ₹30 ಲಕ್ಷವರೆಗಿನ ಸಾಲದ ಮೇಲಿನ ಬಡ್ಡಿ ದರ ಇಳಿಸಲಾಗಿದೆ.

ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಡಿ ಎಫ್‌ಸಿ, ಮಹಿಳೆಯರಿಗೆ ಶೇ 8.35 ಮತ್ತು ಪುರುಷರಿಗೆ ಶೇ 8.40 ಬಡ್ಡಿ ದರದಲ್ಲಿ ಸಾಲ ವಿತರಿಸಲಿವೆ. ₹30 ಲಕ್ಷದಿಂದ ₹ 75 ಲಕ್ಷವರೆಗಿನ ಗೃಹ ಸಾಲದ ಶೇ 8.50ರಷ್ಟು ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ₹ 75 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಬಡ್ಡಿ ದರ ಶೇ 8.75ದಿಂದ ಶೇ 8.55ಕ್ಕೆ ಇಳಿಯಲಿದೆ ಎಂದು ಎಚ್‌ಡಿಎಫ್‌ಸಿ ತಿಳಿಸಿದೆ.
 
ಬ್ಯಾಂಕಿಂಗ್‌ ವಲಯದಲ್ಲಿ ಠೇವಣಿಗಳ ಮೇಲಿನ ಹೆಚ್ಚುವರಿ ಬಡ್ಡಿ ದರ ಆಧರಿಸಿ  (ಎಂಸಿಎಲ್‌ಆರ್‌) ನೀಡುವ ಗೃಹ ಸಾಲಗಳ ಬಡ್ಡಿದರವೂ ಬದಲಾಗುತ್ತಿರುತ್ತವೆ. ಅದಕ್ಕೆ ಅನುಗುಣವಾಗಿ ಸಾಲದ ತಿಂಗಳ ಕಂತು ಮತ್ತು ಅವಧಿ ಬದಲಾಗುತ್ತದೆ.      
****

ಕಾರ್ಪೊರೇಟ್‌ ವಲಯಗಳಿಗೆ ಸಾಲ ನೀಡಿಕೆ ಪ್ರಮಾಣ ತಗ್ಗಿದೆ. ಇದರಿಂದ ಬ್ಯಾಂಕ್‌ಗಳು ಗೃಹ ಸಾಲ ನೀಡಿಕೆಗೆ ಹೆಚ್ಚು ಉತ್ಸಾಹ ತೋರುತ್ತಿವೆ
–ಸಿದ್ದಾರ್ಥ ಪುರೋಹಿತ್‌, ಏಂಜಲ್‌ ಬ್ರೋಕಿಂಗ್‌ ಸಂಸ್ಥೆಯ ವಿಶ್ಲೇಷಕ  

****

₹30 ಲಕ್ಷ ದೊಳಗಿನ ಗೃಹ ಸಾಲದ ಬಡ್ಡಿದರ ಕಡಿತದ ನಿರ್ಧಾರ ಉದ್ಯಮ ಮತ್ತು ದೇಶದ ಪ್ರಗತಿಗೆ ಪೂರಕವಾಗಿದೆ. ಇದರಿಂದ ಕೇಂದ್ರದ ‘ಎಲ್ಲರಿಗೂ ಸೂರು’  ಯೋಜನೆಗೆ ಮತ್ತಷ್ಟು ಬೆಂಬಲ ಸಿಗಲಿದೆ
–ರಾಜೀಬ್‌ ಡ್ಯಾಷ್‌, ಟಾಟಾ ಹೌಸಿಂಗ್‌ನ ಮಾರುಕಟ್ಟೆ ವಿಭಾಗದ  ಮುಖ್ಯಸ್ಥ        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT