ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮತೋಲನದ ನಡೆ–ನುಡಿ

ಅಕ್ಷರ ಗಾತ್ರ

ಅದು, ರಂಗಕರ್ಮಿಯಾಗಿದ್ದ ದಿವಂಗತ ಅಶೋಕ ಬಾದರದಿನ್ನಿ ಅವರ ಸ್ಮರಣೆಯ ಸಮಾರಂಭ. ನಾನು ಹಾಗೂ ಮತ್ತಿಬ್ಬರು ಧಾರ್ಮಿಕ ನೇತಾರರು ಭಾಗವಹಿಸಿದ್ದೆವು. ಅವರೊಟ್ಟಿಗೆ ಉಭಯ ಕುಶಲೋಪರಿ. ಅವರಲ್ಲಿ ಒಬ್ಬ ಧಾರ್ಮಿಕ ನಾಯಕರು ಸಮಕಾಲೀನ ಸಂದರ್ಭದ ರಾಜಕೀಯ ಬೆಳವಣಿಗೆಯ ಬಗ್ಗೆ ಪ್ರಸ್ತಾಪಿಸುತ್ತ- ‘ಇಬ್ಬರು ನಾಯಕರ ನಡುವೆ ಭಿನ್ನಾಭಿಪ್ರಾಯ ಮಿತಿಮೀರುತ್ತಿದೆ. ಬೀದಿಯ ರಂಪವಾಗಿ ಮಾರ್ಪಟ್ಟಿದೆ. ಇಬ್ಬರನ್ನೂ ಸೇರಿಸಬೇಕಾಗಿದೆ. ನೀವು ಒಬ್ಬ ನಾಯಕರನ್ನು ಕರೆದುಕೊಂಡು ಬನ್ನಿರಿ; ನಾನೊಬ್ಬ ನಾಯಕರನ್ನು ಕರೆದುಕೊಂಡು ಬರುತ್ತೇನೆ. ಇಬ್ಬರನ್ನೂ ಒಂದಾಗಿಸೋಣ’ ಎಂದು ಅಭಿಪ್ರಾಯಪಟ್ಟರು. ನಾನಾಗ ಯಾವ ಅಭಿಪ್ರಾಯವನ್ನೂ ವ್ಯಕ್ತಪಡಿಸಲಾರದೆ, ‘ವಿಚಾರಿಸೋಣ’ ಎಂದಷ್ಟೇ ಹೇಳಿದೆ.

ಬಹುತೇಕ ಎಲ್ಲ ಪಕ್ಷಗಳಲ್ಲೂ ಭಿನ್ನಾಭಿಪ್ರಾಯ. ಪಕ್ಷ ಸಂಘಟನೆ ಮಾಡುವುದಾಗಲಿ, ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳುವುದಾಗಲಿ ಜವಾಬ್ದಾರಿಯುತವಾದದ್ದು.  ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು  ಸಹಜ. ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಆಗಾಗ ಪ್ರಸ್ತಾಪ ಆಗುತ್ತಿರುತ್ತದೆ.

ಬಹುತೇಕ ಸರ್ವಪಕ್ಷಗಳಲ್ಲೂ ಕುಟುಂಬ ರಾಜಕಾರಣ ನಡೆಯುತ್ತಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕೆಲ ಮುಖಂಡರು ತಮ್ಮ ಮಕ್ಕಳನ್ನು ರಾಜಕಾರಣಕ್ಕೆ ಇಳಿಸುತ್ತಿದ್ದಾರೆ. ಕೆಲವರು ಪ್ರವೇಶ ಕೊಡಿಸಿದ್ದಾರೆ. ಯಾವುದೇ ಪಕ್ಷದಲ್ಲಾದರೂ ಎಲ್ಲ ಸಮುದಾಯದವರು ಇರುತ್ತಾರೆ. ಪಕ್ಷಕ್ಕಾಗಿ ದುಡಿಯುತ್ತ ಬಂದವರು ಹಾಗೂ ಪಕ್ಷದೊಂದಿಗೆ ಗುರುತಿಸಿಕೊಂಡು ಬಂದವರು ತಮಗೆ ಅವಕಾಶ ಬೇಕೆಂದು ಬಯಸುತ್ತಾರೆ.  ತಾವು ಕೊನೆಯಪಕ್ಷ ಎರಡನೇ ಇಲ್ಲವೇ ಮೂರನೇ ಸಾಲಿನ ಮುಖಂಡರಾಗಿರಬೇಕೆಂದು ಇಚ್ಛಿಸುತ್ತಾರೆ. ಪಕ್ಷದ ಹೈಕಮಾಂಡ್‌ಗಳು ಪಕ್ಷಪಾತ ಧೋರಣೆಗೆ ಅವಕಾಶ ನೀಡಬಾರದು.

ಸ್ವಜನಪಕ್ಷಪಾತವೆಂಬುದು ರಾಜಕಾರಣದ ಒಂದು ಪಿಡುಗು. ಪಕ್ಷಗಳಲ್ಲಿ ಸ್ವಜನಪಕ್ಷಪಾತ ಇನ್ನಿಲ್ಲದ ತಲ್ಲಣವನ್ನು ಸೃಷ್ಟಿಸುತ್ತದೆ. ನೈತಿಕತೆಯನ್ನು ಪ್ರಶ್ನಿಸುತ್ತದೆ. ತನ್ನ ಆಪ್ತರು ಅಥವಾ ರಕ್ತವನ್ನು ಹಂಚಿಕೊಂಡು ಹುಟ್ಟಿದವರಿಗೆ ಪ್ರಮುಖ ಸ್ಥಾನ ಸಿಗಬೇಕೆಂದು ಬಯಸುವುದು ಸ್ವಾರ್ಥ ರಾಜಕಾರಣ ಎನಿಸಿಕೊಳ್ಳುತ್ತದೆ. ಇಂಥ ಅನಾರೋಗ್ಯಕರ ಬೆಳವಣಿಗೆಯು ಪಕ್ಷದಲ್ಲಿ ಅಶಿಸ್ತು, ಅರಾಜಕತೆ ಮತ್ತು ಅಂತರವನ್ನು ಸೃಷ್ಟಿಸುತ್ತದೆ.

ಇಂಥ ಬೆಳವಣಿಗೆಯಿಂದ ಪಕ್ಷದೊಳಗಿನ ಇತರೆ ಪ್ರತಿಭೆಗಳು ಅವಕಾಶ ವಂಚಿತವಾಗುತ್ತವೆ. ಪ್ರತಿಭಾವಂತರ ಕೈಯಲ್ಲಿ ಪಕ್ಷದ ಹೊಣೆಗಾರಿಕೆ ಸಿಕ್ಕರೆ ಅವರು ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಮತ್ತೊಬ್ಬರ ಪ್ರತಿಭೆಯನ್ನು ನೋಡಿ ಅಸೂಯೆ ಪಡಬಾರದಷ್ಟೇ. ಅನನುಭವಿಗಳ ಕೈಯಲ್ಲಿ ಪಕ್ಷದ ಅಧಿಕಾರವನ್ನು ಕೊಟ್ಟರೆ ಪಕ್ಷದ ವರ್ಚಸ್ಸು ಇಲ್ಲವಾಗುತ್ತದೆ. 

ಬಸವಣ್ಣನವರು 12ನೇ ಶತಮಾನದ ಸಂದರ್ಭದಲ್ಲಿ ತಾನು ಬೆಳೆಯುವುದರೊಟ್ಟಿಗೆ ಇತರೆ ಶರಣರೂ ಮುಂದೆ ಬರುವಂತೆ ನೋಡಿಕೊಂಡರು. ತಾನೊಬ್ಬನೇ ಬೆಳೆಯಬೇಕು,ತನ್ನವರಷ್ಟೇ ಬೆಳೆಯಬೇಕೆಂದು ಭಾವಿಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು. ಪ್ರತಿಯೊಬ್ಬ ರಾಜಕಾರಣಿಗೂ ಈ ಬಗ್ಗೆ ಅರಿವು ಇರಬೇಕಾಗುತ್ತದೆ.

ಅಧಿಕಾರ ಬರುವವರೆಗೂ ಶಿಸ್ತಿನ ಪಕ್ಷ ಅನಿಸಿಕೊಂಡು, ಅಧಿಕಾರ ಬಂದ ಬಳಿಕ ಅಧಿಕಾರಕ್ಕಾಗಿ ಕಚ್ಚಾಡಿದ ಈ ಪಕ್ಷದಲ್ಲೂ ಶಿಸ್ತು ಇಲ್ಲ ಎಂಬುದು ಜಗಜ್ಜಾಹೀರಾಯಿತು. ‘ಆಂತರಿಕ ಕಚ್ಚಾಟ’ವು ರಾಜಕಾರಣದ ಮತ್ತೊಂದು ರೋಗ. ಪರಸ್ಪರ ಕಚ್ಚಾಡಿ ಅಧಿಕಾರವನ್ನು ಕಳಕೊಂಡ ಅನುಭವ ತಮ್ಮ ಮುಂದೆ ಇದ್ದಾಗ್ಯೂ ಅದರಿಂದ ಪಾಠ ಕಲಿತಂತೆ ಕಾಣುವುದಿಲ್ಲ. ಕಾಲೆಳೆಯುವ ಪ್ರವೃತ್ತಿಯು ರಾಜಕಾರಣದ ಇನ್ನೊಂದು ಕಾಯಿಲೆ. ತಮ್ಮೊಳಗಿನ ಭಿನ್ನಾಭಿಪ್ರಾಯವನ್ನು ಮೊದಲು ತಹಬಂದಿಗೆ ತರುವ ಪ್ರಯತ್ನಕ್ಕೆ ಪ್ರಥಮ ಆದ್ಯತೆ ಕೊಡಬೇಕು. ಸರ್ವಪಕ್ಷದ ಮುಖಂಡರು ತಮ್ಮೊಳಗಿನ ತುಮುಲವನ್ನು ತಣಿಸಿಕೊಳ್ಳಲಾರದೆ ಮತ್ತೊಂದು ಪಕ್ಷದತ್ತ ಬೆರಳು ಮಾಡಿ ತೋರಿಸುತ್ತಾರೆ. ಇಂಥ ವಿದ್ಯಮಾನವನ್ನು ನೋಡಿ ಜನ ನಗುತ್ತಾರೆ.

ಆಂತರಿಕ ಬೇಗುದಿಗೆ ಕಾರಣ ಹುಡುಕುವ ಕಾಲವಿದು. ಇನ್ನೊಬ್ಬರ ಮೇಲೆ ಗೂಬೆ ಕೂಡ್ರಿಸುವ ಬದಲು ಬೇಗುದಿಗೆ ಕಾರಣವನ್ನು ಹುಡುಕಬೇಕಾಗುತ್ತದೆ. ಅನ್ಯಪಕ್ಷಗಳತ್ತ ಜಿಗಿಯಲು ತುದಿಗಾಲಲ್ಲಿ ನಿಂತಿರುವವರನ್ನು ಉಳಿಸಿಕೊಳ್ಳಬೇಕಾಗುತ್ತದೆ. ಪಕ್ಷದ ಮುಖಂಡರ ಮುಂದಿರುವ ಸವಾಲೆಂದರೆ ಅತೃಪ್ತಿಯ ನಿವಾರಣೆ. ಪಕ್ಷದಲ್ಲಿ ಎದ್ದಿರುವ ಅತೃಪ್ತಿಯನ್ನು ಶಮನಗೊಳಿಸುವುದು ಹೆಚ್ಚು ಪ್ರಸ್ತುತ. ಈ ಪ್ರಕ್ರಿಯೆಗೆ ಹೆಚ್ಚು ಒತ್ತುಕೊಡುವುದು ಸೂಕ್ತ. ಅತೃಪ್ತಿಯನ್ನು ಹಾಗೇ ಬಿಟ್ಟರೆ ಅದು ಮತ್ತಷ್ಟು ಅರಾಜಕತೆಗೆ ಅವಕಾಶ ಮಾಡಿಕೊಡುವುದು ನಿಶ್ಚಿತ. ಎಲ್ಲ ಪಕ್ಷದಲ್ಲೂ ಪ್ರಬುದ್ಧರು ಇದ್ದಾರೆ; ಅಪ್ರಬುದ್ಧರು ಇದ್ದಾರೆ.  ಪೂರ್ಣ ಪ್ರಬುದ್ಧರ ಪಕ್ಷ ಯಾವುದೂ ಇಲ್ಲ.

ಉತ್ತರ ಪ್ರದೇಶದಲ್ಲಿ ಉಂಟಾದ ರಾಜಕೀಯ ಬೆಳವಣಿಗೆಯಿಂದಾಗಿ ರಾಷ್ಟ್ರದ ಇತರೆ ಭಾಗದಲ್ಲಿರುವ ಕೆಲಧಾರ್ಮಿಕರು, ತಾವೂ ಹಾಗೆ ಆಗಬಹುದೆಂದು ಕನಸು ಕಾಣಲು ಮುಂದಾಗಿರಬಹುದು. ಒಂದೊಂದು ರಾಜ್ಯದ ಸ್ಥಿತಿಗತಿಯೂ ಬೇರೆಬೇರೆ. ಅಲ್ಲಿನ ವಿದ್ಯಮಾನದ ಜತೆಯಲ್ಲಿ ರಾಜ್ಯದ ವಿದ್ಯಮಾನವನ್ನು ಹೋಲಿಸು ವಂತಿಲ್ಲ. ಇಲ್ಲಿಯ ಪರಿಸ್ಥಿತಿಯೇ ಬೇರೆ. ಇಲ್ಲಿನ ಜನರು ಧಾರ್ಮಿಕರನ್ನು ಧಾರ್ಮಿಕರಾಗಿ ನೋಡುತ್ತಾರೆ. ಅಲ್ಲಿ ಮುಖ್ಯಮಂತ್ರಿ ಆಗಿರುವವರು 4–5 ಬಾರಿ ಸಂಸದರಾಗಿ ರಾಜಕಾರಣದ ಅನುಭವ ಪಡೆದವರಾಗಿದ್ದಾರೆ. ಅವರು ರಾಜಕೀಯ ಪಕ್ಷವೊಂದರ ಸಂಗಡ ಅಧಿಕೃತವಾಗಿ ಗುರುತಿಸಿಕೊಳ್ಳುತ್ತ ಬಂದಿದ್ದು, ಅವರನ್ನು ಆ ದೃಷ್ಟಿ ಯಿಂದಲೇ ನೋಡುತ್ತ ಬರಲಾಗಿದೆ. ತಾವೊಬ್ಬ ರಾಜಕಾರಣಿ ಎಂದು ಗುರುತಿಸಿಕೊಳ್ಳುತ್ತ ಬಂದಿರುವುದ ರಿಂದ ಪಕ್ಷವು ಅವರಿಗೆ ಆ ಜವಾಬ್ದಾರಿಯನ್ನು ನೀಡಿದೆ. ಅವರು ಹೇಗೆ ನಡೆದುಕೊಳ್ಳುತ್ತಾರೆ, ಎಂಥ ಆಡಳಿತ ನೀಡುತ್ತಾರೆ ಎಂಬುದನ್ನು ಕಾಲ ನಿರ್ಧರಿಸುತ್ತದೆ.

ಬಸವಣ್ಣ, ಗಾಂಧೀಜಿ, ಲೋಹಿಯಾ, ಜಯಪ್ರಕಾಶ್ ಮತ್ತು ಅಂಬೇಡ್ಕರರು ರಾಜಕಾರಣಿ ಆಗಿದ್ದರು. ಬಸವಣ್ಣನವರು ತಮಗಿರುವ ಅಧಿಕಾರವನ್ನು ಬಳಸಿ ಕೊಂಡು ಕಾಯಕಪ್ರಧಾನ ಸಮಾಜವನ್ನು ಕಟ್ಟಿದರು. ಸಾಮಾಜಿಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಬಸವಣ್ಣನವರು ಇಡೀ ವಿಶ್ವಕ್ಕೆ ಆದರ್ಶ. ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಗಾಂಧೀಜಿ, ಆಳುವವರನ್ನು ಗುರುತಿಸಿ ಗದ್ದುಗೆಗೆ ಕೂರಿಸಿದರೇ ಹೊರತು ಅವರೇ ರಾಜರಾಗಲಿಲ್ಲ. ಅಂಬೇಡ್ಕರರು ಒಬ್ಬ ವಿಚಾರವಾದಿ. ಹೋರಾಟಗಾರ. ಲೋಹಿಯಾ ಕೂಡಾ ಒಬ್ಬ ಪ್ರಬುದ್ಧ ರಾಜಕಾರಣಿ. ಜಯಪ್ರಕಾಶ್ ನಾರಾಯಣ್ ಅವರು ರಾಜಕೀಯ ಧ್ರುವೀಕರಣಗೊಳಿಸಿ ಆದರ್ಶ ವ್ಯಕ್ತಿ ಎನಿಸಿಕೊಂಡರು. ಇವರು ಎಲ್ಲ ಪಕ್ಷಗಳಿಗೂ ಮಾದರಿ. ಇವರ ತತ್ವ-ಸಿದ್ಧಾಂತಗಳನ್ನು ಅನುಸರಿಸುವುದಾದರೆ ಯಾರು ಬೇಕಾದರೂ ರಾಜಕೀಯ ಪ್ರವೇಶಿಸಬಹುದು. ಅದರಂತೆ ನಡೆದುಕೊಳ್ಳದಿದ್ದರೆ, ರಾಜಕಾರಣದಿಂದ ದೂರ ಇರುವುದೇ ಗೌರವ.

ಒಮ್ಮೊಮ್ಮೆ ಕೆಲವರ ಸಲಹೆ ಮುಖ್ಯ. ಎಲ್ಲ ಸಂದರ್ಭದಲ್ಲೂ ಸ್ವಂತ ಚಿಂತನೆಯ ಮುಖಾಂತರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಯತ್ನ ನನ್ನದು. ನನ್ನ ಅರಿವು ನನಗೆ ಹೀಗೆ ಮಾರ್ಗ ತೋರಿತು- ನಮ್ಮದು ಪಕ್ಷಾತೀತ ಹಾಗು ಜಾತ್ಯತೀತ ನಿಲುವು. ರಾಜಕಾರಣವನ್ನು ಮಠದಲ್ಲಿ ಹೊಗಿಸಿಕೊಂಡರೆ, ಮಠದ ಉನ್ನತಿಗೆ ಮಾರಕ. ಧಾರ್ಮಿಕ ಭಾವನೆಗೆ ಕಂಟಕ. ಒಂದು ಪಕ್ಷದ ಸಂಗಡ ಗುರುತಿಸಿಕೊಳ್ಳಲು ಮುಂದಾದಲ್ಲಿ, ಉಳಿದ ಪಕ್ಷಗಳ ದ್ವೇಷಕ್ಕೆ ಒಳಗಾಗಬೇಕಾಗುತ್ತದೆ. ಧಾರ್ಮಿಕ ಪ್ರತಿನಿಧಿಗಳಾಗಿ ಸರ್ವ ಜನಾಂಗಗಳನ್ನು ಸಂಗಡ ಕರೆದುಕೊಂಡು ಹೋಗಬೇಕಾಗುತ್ತದೆ. ರಾಜಕೀಯ ಪ್ರತಿನಿಧಿಗಳಾಗಿ, ಧರ್ಮಪ್ರತಿನಿಧಿಗಳಾಗದಿದ್ದರೆ ಘನತೆಗೆ ಚ್ಯುತಿ. ಈ ಅರಿವಿನಿಂದಾಗಿ ನಾನು ರಾಜಕಾರಣವನ್ನು ಮಠದೊಳಗೆ ಸೇರಿಸಲು ಇಚ್ಛಿಸಲಿಲ್ಲ. ಶ್ರೀಮಠಕ್ಕೆ ಎಲ್ಲ ಪಕ್ಷದವರೂ ಬರುತ್ತಾರೆ. ಎಲ್ಲ ಪಕ್ಷದಲ್ಲೂ ಶ್ರೀಮಠದ ಭಕ್ತರು ಇದ್ದಾರೆ. ಒಬ್ಬ ಧಾರ್ಮಿಕನಾಗಿ ಸಮತೋಲನ ಕಾಪಾಡಿಕೊಂಡು ಹೋಗಬೇಕಾಗುತ್ತದೆ. ಸಮತೋಲನದ ನಡೆ- ಸಮತೋಲನದ ನುಡಿ. ಅದು ಪ್ರಬುದ್ಧ ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT