ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಬೆಲೆಯಲ್ಲಿ ಅಲ್ಪ ಇಳಿಕೆ

Last Updated 18 ಮೇ 2017, 20:12 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಯ ಕೊರತೆ, ಕಡಿಮೆ ಇಳುವರಿ ಮತ್ತು ಅಧಿಕ ಬೇಡಿಕೆಯಿಂದಾಗಿ ದುಪ್ಪಟ್ಟಾಗಿದ್ದ ತರಕಾರಿಗಳ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ. 

ರಾಜ್ಯದ ಹಲವೆಡೆ ಇತ್ತೀಚೆಗೆ ಮಳೆ ಬಿದ್ದಿದೆ. ಹಾಗಾಗಿ ಹೊಸಕೋಟೆ, ಚಿಕ್ಕಬಳ್ಳಾಪುರ, ಮಂಡ್ಯ, ಮದ್ದೂರು, ಆನೇಕಲ್‌ಗಳಲ್ಲಿ ಬೆಳೆದಿರುವ ತರಕಾರಿಗಳು ನಗರದ ಮಾರುಕಟ್ಟೆಗಳಿಗೆ ಬರುತ್ತಿವೆ. ಹಾಗಾಗಿ ಕ್ಯಾರೆಟ್‌, ಮೈಸೂರು ಬದನೆ, ಹಾಗಲಕಾಯಿ, ನವಿಲುಕೋಸು, ಬೆಂಡೆಕಾಯಿ, ದಪ್ಪ ಮೆಣಸಿನಕಾಯಿ  ಬೆಲೆಗಳು ಕಡಿಮೆ ಆಗಿವೆ.

ಬಹುತೇಕ ಕೊಳವೆ ಬಾವಿಗಳು ಬತ್ತಿರುವುದರಿಂದ ಈ ಬಾರಿ ಇಳುವರಿ ಕಡಿಮೆ ಬಂದಿತ್ತು. ನೆರೆಯ ರಾಜ್ಯಗಳ ಪ್ರದೇಶಗಳಿಂದಲೂ ತರಕಾರಿಗೆ ಅಧಿಕ ಬೇಡಿಕೆ ಬಂದಿದ್ದರಿಂದ ಕಳೆದ ತಿಂಗಳು ಬೆಲೆಗಳು ಹೆಚ್ಚಿದ್ದವು.

ಬೆಲೆ ಹೆಚ್ಚಳ: ಊಟಿ ಬೀನ್ಸ್‌ ಬೆಲೆ ಕಳೆದ ತಿಂಗಳು ₹ 100 ಇತ್ತು (ಪ್ರತಿ ಕೆ.ಜಿ.ಗೆ). ಈಗ ಅದರ ಬೆಲೆ ₹ 110 ಆಗಿದೆ. ಹಸಿಮೆಣಸಿನಕಾಯಿ ₹ 40 ಇದದ್ದು ₹ 60ಕ್ಕೆ ಹೆಚ್ಚಿದೆ. ‘ಪ್ರತಿವರ್ಷ ಹಾಸನ ಜಿಲ್ಲೆಯಿಂದ ನಗರಕ್ಕೆ ಹಸಿಮೆಣಸಿನಕಾಯಿ ಅಧಿಕ ಪ್ರಮಾಣದಲ್ಲಿ ಬರುತ್ತಿತ್ತು.  ಬರದಿಂದಾಗಿ ರೈತರು ಮೆಣಸಿನಕಾಯಿ  ಸಸಿಗಳನ್ನು ಹೆಚ್ಚು ನಾಟಿ ಮಾಡಿರಲಿಲ್ಲ. ಹಾಗಾಗಿ ಅದರ ಬೆಲೆ ಹೆಚ್ಚಾಗಿದೆ’ ಎನ್ನುತ್ತಾರೆ ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ಆರ್.ಪ್ರಶಾಂತ್‌.

‘ಬೇಸಿಗೆಯ ತಾಪದಿಂದ ಬೀನ್ಸ್‌ ಬಳ್ಳಿಯ ಹೂವುಗಳು ಮಿಡಿ ಕಟ್ಟಲಿಲ್ಲ. ಇದರಿಂದ ಇಳುವರಿ ಕಡಿಮೆ ಆಗಿದೆ. ಬೀನ್ಸ್‌ ಬೆಲೆ ಇಳಿಕೆಯಾಗಲು ಒಂದು ತಿಂಗಳಾದರೂ ಬೇಕು’ ಎಂದು ಅವರು ತಿಳಿಸಿದರು.

ಸೊಪ್ಪಿನ ಬೆಲೆ ಇಳಿಕೆ: ಕಟ್ಟೊಂದಕ್ಕೆ ಕಳೆದ ತಿಂಗಳು ₹ 20ಕ್ಕೆ ಬಿಕರಿಯಾಗುತ್ತಿದ್ದ ಪಾಲಕ್‌, ಮೆಂತೆ, ಹರಿವೆ, ಬಸಳೆ, ಪುದೀನಾ ಮತ್ತು ದಂಟು ಸೊಪ್ಪುಗಳ ಬೆಲೆ ಈಗ ಸ್ವಲ್ಪ ಇಳಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇತ್ತೀಚೆಗೆ ಮಳೆಯಾಗಿದೆ. ಹಾಗಾಗಿ ಸೊಪ್ಪುಗಳ ಇಳುವರಿ ಹೆಚ್ಚಿರುವುದರಿಂದ ₹ 15 ಮತ್ತು ₹ 10ಕ್ಕೆ ಸೊಪ್ಪಿನ ಕಟ್ಟುಗಳು ದೊರೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT