ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ– ಕಾಲುವೆ ಕಾಮಗಾರಿಗೆ ಗಡುವು

Last Updated 18 ಮೇ 2017, 20:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪದ ಕವಿಕಾ ಸೇತುವೆ 3ನೇ ಹಂತದ ಕಾಮಗಾರಿ ಮತ್ತು ನಾಯಂಡಹಳ್ಳಿ ಕೆರೆಯ ‘ಯು  ಮಾದರಿ’ ನೀರುಗಾಲುವೆ ಕಾಮಗಾರಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ಬಿಬಿಎಂಪಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮೇಯರ್‌ ಮತ್ತು ಅಧಿಕಾರಿಗಳೊಂದಿಗೆ ಗುರುವಾರ ಕಾಮಗಾರಿ ಸ್ಥಳ ಪರಿಶೀಲಿಸಿದ ಸಚಿವರು, 13 ಮೀಟರ್‌ ಅಗಲದ 3ನೇ ಹಂತದ ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಳಿಸದಿರುವುದಕ್ಕೆ ಎಂಜಿನಿಯರ್‌ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಹೇಳಿದ್ದನ್ನೇ ಎಷ್ಟು ಬಾರಿ ಹೇಳಬೇಕು. ಕಾಮಗಾರಿ ಬೇಗ ಮುಗಿಸಲು ಏನು ಸಮಸ್ಯೆ’ ಎಂದು ಸಚಿವರು, ಬೃಹತ್‌ ಮಳೆ ನೀರು ಕಾಲುವೆ ಮುಖ್ಯ ಎಂಜಿನಿಯರ್‌ ಸಿದ್ಧೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.

‘600 ಮಿ.ಮೀ ವ್ಯಾಸದ ನೀರಿನ ಕೊಳವೆ ಅಡ್ಡವಾಗಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು. ನೀರಿನ ಕೊಳವೆ ಸ್ಥಳಾಂತರಿಸಲು ಜಲಮಂಡಳಿಗೆ₹ 24.60 ಲಕ್ಷ ಪಾವತಿಸಲಾಗಿತ್ತು. ಕಳೆದ ಮಾರ್ಚ್‌ನಲ್ಲಿ ನೀರಿನ ಕೊಳವೆಯನ್ನು ಜಲಮಂಡಳಿ ಸ್ಥಳಾಂತರಿಸಿದೆ. ಈಗ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಜೂನ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣವಾಗಲಿದೆ’ ಎಂದು ಅವರು ಸಚಿವರ ಗಮನಕ್ಕೆ ತಂದರು.

ಜೋರು ಮಳೆ ಸುರಿಯುತ್ತಿದ್ದರಿಂದ ಸಚಿವರು ಬಸ್‌ನಿಂದ ಇಳಿಯಲು ಆಗದೆ, ಬಸ್‌ ಒಳಗೆ ನಿಂತುಕೊಂಡು ದೂರದಿಂದಲೇ ನಾಯಂಡಹಳ್ಳಿ ಕೆರೆ ನೀರುಗಾಲುವೆ ಕಾಮಗಾರಿ ವೀಕ್ಷಿಸಿದರು.

ಗ್ಲೋಬಲ್‌ ವಿಲೇಜ್‌ ಮತ್ತು ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜು ಹಿಂಭಾಗ ವೃಷಭಾವತಿ ನದಿಗೆ ₹ 2.82 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ವೀಕ್ಷಿಸಿ, ಪೂರ್ಣಗೊಳಿಸುವಂತೆ ಸೂಚಿಸಿದರು.

‘ಭೂಗಳ್ಳರು ನದಿ ಮತ್ತು ರಸ್ತೆ ಜಾಗ ಒತ್ತುವರಿ ಮಾಡಿಕೊಂಡಿದ್ದರು.ಸೇತುವೆ ನಿರ್ಮಾಣಕ್ಕೆ ಜಾಗ ಬಿಡಿಸುವುದು ಸವಾಲಾಗಿತ್ತು. ಒತ್ತುವರಿ ಮಾಡಿ ಕಟ್ಟಿದ್ದ ಕಟ್ಟಡ ತೆರವುಗೊಳಿಸಿ ಕಾಮಗಾರಿ ನಡೆಸಲಾಗುತ್ತಿದೆ’ ಎಂದು ಶಾಸಕ ಎಸ್‌.ಟಿ.ಸೋಮಶೇಖರ್‌  ತಿಳಿಸಿದರು.

ಮಳೆ ಸುರಿದ ಕಾರಣ ಸಚಿವರು, ದೇವೇಗೌಡ ಪೆಟ್ರೋಲ್‌ ಬಂಕ್‌–ಅಪೆಕ್ಸ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ ಹತ್ತಿರನಿರ್ಮಿಸುತ್ತಿರುವ ನೀರಗಾಲುವೆ ಕಾಮಗಾರಿ ವೀಕ್ಷಣೆ ಕೈಬಿಟ್ಟರು.

‘ಪಾಡ್‌ ಕಾರು ಪ್ರಾಯೋಗಿಕ ಯೋಜನೆ’
‘ಪಾಡ್‌ ಟ್ಯಾಕ್ಸಿ ಯೋಜನೆ ವಿರೋಧಿಸುವವರಿಗೆ ಯೋಜನೆ ಬಗ್ಗೆ ಸಂಪೂರ್ಣ ಅರಿವು ಇಲ್ಲ’ ಎಂದು ಕೆ.ಜೆ.ಜಾರ್ಜ್‌ ಪ್ರತಿಕ್ರಿಯಿಸಿದರು.

‘ನಗರ ಸಂಚಾರ ದಟ್ಟಣೆ ತಗ್ಗಿಸಲು ಪ್ರಾಯೋಗಿಕವಾಗಿ ಪಾಡ್‌ ಕಾರ್‌ ಯೋಜನೆ ಜಾರಿಗೊಳಿಸಲಾಗುತ್ತಿದೆ. ಯೋಜನೆಯ ಸಾಧಕಬಾಧಕ ನೋಡಿ ಮುಂದೆ ವಿಸ್ತರಿಸುತ್ತೇವೆ’ ಎಂದರು.

‘ಬಂಡವಾಳ ಹೂಡಲು ಮುಂದೆ ಬಂದಿರುವ ಕಂಪೆನಿಗೆ ವೈಟ್‌ಫೀಲ್ಡ್‌ನಿಂದ ಉಪನಗರ ರೈಲು ನಿಲ್ದಾಣ, ಎಂ.ಜಿ.ರಸ್ತೆ–ಲೀಲಾ ಪ್ಯಾಲೇಸ್‌–ಮಾರತ್ತಹಳ್ಳಿ ಮಾರ್ಗದಲ್ಲಿ ಪ್ರಾಯೋಗಿಕ ಯೋಜನೆ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಮೆಟ್ರೊ ರೈಲು ನಿಲ್ದಾಣಗಳನ್ನು ನಿರ್ಮಿಸಲು ಕಾರ್ಪೊರೇಟ್‌ ಸಂಸ್ಥೆಗಳು ಆಸಕ್ತಿ ತೋರಿವೆ. ಈ ವಿನೂತನ ಯೋಜನೆಯಡಿ ಸಂಸ್ಥೆಗಳು ಒಂದೊಂದು ನಿಲ್ದಾಣಕ್ಕೆ ₹ 100 ಕೋಟಿ ಬಂಡವಾಳ ಹೂಡಬೇಕು. ಬಂಡವಾಳ ಹೂಡಿದ ಸಂಸ್ಥೆಯ ಹೆಸರನ್ನು ನಿಲ್ದಾಣಕ್ಕೆ 30 ವರ್ಷ ಕಾಲ ಇಡಲಾಗುವುದು. ಕಂಪೆನಿಯ ಹೆಸರು ಬ್ರಾಂಡ್‌ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ. ಈ ಯೋಜನೆಗೆ ಎಂಬೆಸಿ, ಬಯೋಕಾನ್‌, ವಿಪ್ರೊ, ಇನ್ಫೊಸಿಸ್‌ ಕಂಪೆನಿಗಳು ಮುಂದೆ ಬಂದಿವೆ’ ಎಂದು ತಿಳಿಸಿದರು.

‘ಅಪಾರ್ಟ್‌ಮೆಂಟ್‌ಗಳು ಮತ್ತು ಕೈಗಾರಿಕೆಗಳು ತ್ಯಾಜ್ಯವನ್ನು ತಾವೇ ಸಂಸ್ಕರಣೆ ಮಾಡಿಕೊಳ್ಳುವಂತೆ ಹಸಿರು ಪೀಠ ಆದೇಶ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT