ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘನೆ: ಖಾಸಗಿ ಬಸ್‌ಗಳ ವಿರುದ್ಧ ಆಕ್ರೋಶ

Last Updated 19 ಮೇ 2017, 4:56 IST
ಅಕ್ಷರ ಗಾತ್ರ

ಹರಿಹರ: ಪರವಾನಗಿ ಇಲ್ಲದೇ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರನ್ನು  ಕರೆದೊಯ್ದು ಕೆಎಸ್ಆರ್‌ಟಿಸಿಗೆ ನಷ್ಟ ಉಂಟು ಮಾಡುತ್ತಿರುವ ಖಾಸಗಿ ಬಸ್‌ಗಳ ವಿರುದ್ಧ ಸಂಸ್ಥೆಯ ಸಿಬ್ಬಂದಿ ಗುರುವಾರ ಪ್ರತಿಭಟನೆ ನಡೆಸಿದರು.

ಬಿಎಸ್‌ಎನ್‌ಎಲ್ ಕಚೇರಿ ಎದುರು ಖಾಸಗಿ ಬಸ್‌ಗಳ ಸಂಚಾರವನ್ನು ತಡೆದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ನೌಕರರ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಕೆಎಸ್ಆರ್‌ಟಿಸಿ ಡಿಪೊ ವ್ಯವಸ್ಥಾಪಕ ಪರಮೇಶ್ವರಪ್ಪ ಮಾತನಾಡಿ, ‘ಸಾರಿಗೆ ನಿಯಮಗಳನ್ನು ಮೀರಿ ಮುಖ್ಯರಸ್ತೆಗಳಲ್ಲಿ ಹಾಗೂ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಖಾಸಗಿ ವಾಹನಗಳಿಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿದೆ.  ಅವರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ಖಾಸಗಿ ವಾಹನಗಳಿಗೆ ಸಾರಿಗೆ ಇಲಾಖೆಯು ಒಪ್ಪಂದದ ಮೇರೆಗೆ ಸೇವೆ ನೀಡಲು ಅನುಮತಿ ನೀಡಿದೆ. ಆದರೆ, ವಾಹನಗಳ ಮಾಲೀಕರು ಪರವಾನಗಿ  ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ದಾವಣಗೆರೆ ಮತ್ತು ಹರಿಹರದ ಮಾರ್ಗದಲ್ಲಿ ಪ್ರತಿ ಅರ್ಧಗಂಟೆಗೆ ಎರಡು ವಾಹನಗಳು ಪ್ರಯಾಣಿಕರನ್ನು ಸಾಗಿಸುತ್ತಿವೆ.

ಇದನ್ನು ತಡೆಯಲು ಪ್ರಾದೇಶಿಕ ಸಾರಿಗೆ ಕಚೇರಿ, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆಮನವಿ ಮಾಡಿದ್ದರೂ ಕ್ರಮ ಕೈಗೊಳ್ಳದಿರುವುದು ಬೇಸರ ಮೂಡಿಸಿದೆ’ ಎಂದು ಅವರು ಹೇಳಿದರು.

ಸಂಸ್ಥೆಯ ನೌಕರ ಎಂ.ಎನ್.ಲೋಕಪ್ಪ ಮಾತನಾಡಿ, ‘ಬಸ್ ನಿಲ್ದಾಣದ 500 ಮೀಟರ್ ಪರಿಧಿಯಲ್ಲಿ ಖಾಸಗಿ ಬಸ್‌ಗಳನ್ನು ನಿಲುಗಡೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ, ಖಾಸಗಿಬಸ್‌ಗಳ ಮಾಲೀಕರು ಅದನ್ನು ಪಾಲಿಸುತ್ತಿಲ್ಲ’ ಎಂದು ದೂರಿದರು.

ಎಐಟಿಯುಸಿ ತಾಲ್ಲೂಕು ಘಟಕದ ಕಾರ್ಯದರ್ಶಿ ಹನುಮಂತಪ್ಪ ಮಾತನಾಡಿ, ‘ನಗರದ ಕೆಎಸ್ಆರ್‌ಟಿಸಿ ಘಟಕದಲ್ಲಿ 425 ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ನಿತ್ಯ ₹ 12 ಲಕ್ಷ ಟಿಕೆಟ್ಹಣ ಸಂದಾಯವಾಗುತ್ತಿತ್ತು.

ಆದರೆ, ಖಾಸಗಿ ಬಸ್ ಹಾಗೂ ಆಪೆ ಆಟೊವಾಹನಗಳಿಂದ ಈ ಮೊತ್ತ ₹ 9 ಲಕ್ಷಕ್ಕೆ ಕುಸಿದಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ಇಲಾಖೆಗೆ ಸಂಪೂರ್ಣ ನಷ್ಟ ಆಗಲಿದೆ. ಪರವಾನಗಿ ರಹಿತ ಖಾಸಗಿ ಬಸ್‌ಗಳ ಸೇವೆಯನ್ನು ಕೂಡಲೇ ರದ್ದು ಮಾಡಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಪೊಲೀಸರು, ಒಪ್ಪಂದದ ಮೇರೆಗೆ ಸೇವೆ ನೀಡುವ ಪರವಾನಗಿ ಹೊಂದಿ, ಪ್ರಯಾಣಿಕರನ್ನು ಸಾಗಿಸುತ್ತಿದ್ದ ಮಹಾದೇವ ಬಸ್‌ ಅನ್ನು ವಶಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಕೆಎಸ್ಆರ್‌ಟಿಸಿ ನೌಕರರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಕರೇಗೌಡ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT