ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಘಟಕಗಳು ಅಪ್ರಯೋಜಕ

Last Updated 19 ಮೇ 2017, 5:06 IST
ಅಕ್ಷರ ಗಾತ್ರ

ಭದ್ರಾವತಿ: ತಾಲ್ಲೂಕಿನಲ್ಲಿ ಹಲವೆಡೆ ಆರಂಭಿಸಿರುವ ಶುದ್ಧ ಕುಡಿಯುವ ನೀರಿನ  ಘಟಕಗಳು  ಅಪ್ರಯೋಜಕ ವಾಗಿವೆ  ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ  ಕೆ. ಮಂಜುನಾಥ ದೂರಿದರು.

ಗುರುವಾರ ತಾಲ್ಲೂಕು ಪಂಚಾಯ್ತಿ  ಸಾಮಾನ್ಯ ಸಭೆಯಲ್ಲಿ  ಮಾತನಾಡಿದ ಅವರು, ‘ನಾಣ್ಯ ಹಾಕಿ ನೀರು ಪಡೆಯಬಹುದು ಎಂಬ ಮಾತು ಸುಳ್ಳಾಗಿದೆ. ಬದಲಿಗೆ  ತಿಂಗಳ ಕಾರ್ಡ್ ಪಡೆದು ನೀರು ತುಂಬಿಸಿಕೊಳ್ಳಿ  ಎನ್ನಲಾಗಿದೆ. ಈ ಬಗ್ಗೆ ಸಮರ್ಪಕವಾದ ಮಾಹಿತಿ ನೀಡಿ’  ಎಂದು ಒತ್ತಾಯಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮೇಗೌಡ  ಘಟಕದಲ್ಲಿ ವಿತರಣಾ ವ್ಯವಸ್ಥೆ ಒಂದೇ ರೀತಿಯಲ್ಲಿ ಇಲ್ಲ. ಒಂದೊಂದು ಕಡೆ ಒಂದೊಂದು ರೀತಿ ಇದೆ ಎಂದರು. ಅಧಿಕಾರಿ ನಾರಪ್ಪ ಪ್ರತಿಕ್ರಿಯಿಸಿ, ಗುತ್ತಿಗೆ ಪಡೆದ ಕಂಪೆನಿಗಳು ಕಾರ್ಡ್ ವ್ಯವಸ್ಥೆ ಮಾಡಿದ್ದು ನಿಗದಿತ ಮೊತ್ತಕ್ಕೆ ಅದನ್ನು ಪಡೆದವರು ನೀರು ಪಡೆಯಲು ಅವಕಾಶವಿದೆ. ನಾಣ್ಯ ಹಾಕುವ ವ್ಯವಸ್ಥೆ ಇಲ್ಲ ಎಂದು ಹೇಳಿದರು.

ಕೊಟ್ಟಿಗೆ ಕಟ್ಟಿದರೂ ನೆರವಿಲ್ಲ: ಕೊಟ್ಟಿಗೆ ಕಟ್ಟಲು ಕೇಂದ್ರದ ನೆರವಿದೆ. ಅದನ್ನು ಯಾವುದೇ ಕಾರಣಕ್ಕೂ ತಡ ಮಾಡುವಂತಿಲ್ಲ. ಆದರೆ  ನಗದು ಮಂಜೂರಾಗಿಲ್ಲ ಎಂದು ಸದಸ್ಯ ಪ್ರೇಮಕುಮಾರ್ ಸಭೆಯ ಗಮನ ಸೆಳೆದರು. ಶಿಥಿಲ ಕಟ್ಟಡ ತೆರವು ಮಾಡಿ: ಪಂಚಾಯ್ತಿ ವ್ಯಾಪ್ತಿಯಲ್ಲಿ ಅಂಗನವಾಡಿ, ಕೃಷಿ ಇಲಾಖೆ ಹಾಗೂ ಇನ್ನಿತರೆ ಸರ್ಕಾರಿ ಕಟ್ಟಡಗಳು ಹಾಳಾಗಿದ್ದು, ಉಪಯೋಗಕ್ಕೆ ಬಾರದೆ ಅನೈತಿಕ ಚಟುವಟಿಕೆಯ ತಾಣವಾಗಿದೆ ಎಂದು ಸದಸ್ಯರು ದೂರಿದರು.

ಕಾಗೇಕೊಡಮಗ್ಗೆ, ಕೂಡ್ಲಿಗೆರೆ, ನಿಂಬೆಗೊಂದಿ, ಅಂತರಗಂಗೆ ವ್ಯಾಪ್ತಿಯಲ್ಲಿ ಗುರುತು ಮಾಡಿರುವ ಇಂತಹ ಕಟ್ಟಡವನ್ನು ನೆಲಸಮ ಮಾಡಲು ಅಂದಾಜು ಪಟ್ಟಿ ಸಿದ್ಧಪಡಿಸಿ , ಕ್ರಮ ಕೈಗೊಳಲು ಎಂದು  ತೀರ್ಮಾನ ತೆಗೆದುಕೊಳ್ಳಲಾಯಿತು.

ಕುಡಿಯುವ ನೀರು ವಿತರಣೆಗೆ ಅಗತ್ಯ  ವ್ಯವಸ್ಥೆ ಮಾಡಿದ್ದರೂ ವಿದ್ಯುತ್ ಸಂಪರ್ಕ ಕೊರತೆಯಿಂದ ಕೆಲವೆಡೆ ಸಮಸ್ಯೆಯಾಗಿದೆ ಎಂದು ಸದಸ್ಯರು ತಿಳಿಸಿದರು. ಮೆಸ್ಕಾಂ ಎಂಜಿನಿಯರ್ ‘ಹೊನ್ನೇಗುಡ್ಡ, ಕೂಡ್ಲಿಗೆರೆ ನೀರು ವಿತರಣಾ ಕೇಂದ್ರದಿಂದ ಬಾಕಿ ₹ 69 ಲಕ್ಷ ಬರಬೇಕಿದೆ. ಆದರೂ ವಿತರಣೆ ನಡೆದಿದೆ.

ಸೀತಾರಾಮಪುರ, ವೀರಾಪುರ ತಿಲಕನಗರ, ಕೊಮಾರನಹಳ್ಳಿ ವ್ಯಾಪ್ತಿಯಲ್ಲಿ ಪಂಚಾಯ್ತಿ ಹಣ ಪಾವತಿ ಮಾಡದೇ ಇರುವ ಕಾರಣ ಕೆಲಸ ನಡೆದಿಲ್ಲ’ ಎಂದು ಸ್ಪಷ್ಟನೆ ನೀಡಿದರು. ಸಭೆಯಲ್ಲಿ  ವಿವಿಧ ಇಲಾಖೆಯ ಅಧಿಕಾರಿಗಳಾದ ಡಾ. ಗುಡದಪ್ಪಕಸಬಿ, ನಾಗರಾಜ್, ರಘುನಾಥ, ಟಿ. ಶಂಕರಪ್ಪ, ರಾಘವೇಂದ್ರ, ಅಣ್ಣಪ್ಪ, ನವೀನ್  ಪ್ರಗತಿಯ ವಿವರವನ್ನು ಸಭೆಗೆ ತಿಳಿಸಿದರು.

‘ಎಂಟು ಸಾವಿರ  ಕೊಡಿ’

‘ನಾನು ಪಂಚಾಯ್ತಿ ಅಧ್ಯಕ್ಷನಾಗಿದ್ದಾಗ ಮಾಡಿಸಿದ ಕೆಲಸಕ್ಕೆ ಬಾಕಿ ₹ 8 ಸಾವಿರ ಕೊಡಬೇಕು’ ಎಂದು ಸದಸ್ಯ ಎಂ.ಜಿ. ದಿನೇಶ ಪಟ್ಟು ಹಿಡಿದರು. ನೀರು ಸರಬರಾಜು ಇಲಾಖೆ ಅಧಿಕಾರಿ ನಾರಪ್ಪ  ಇಲಾಖೆ ವರದಿ  ವಿವರ ನೀಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ದಿನೇಶ ‘ಆದ್ರಿಹಳ್ಳಿ ಪ್ರಕಾಶ್ ಪೈಪ್‌ಲೈನ್ ಕೆಲಸ ಮಾಡಿದ್ದು, ಇನ್ನು ಹಣ ಪಾವತಿಯಾಗಿಲ್ಲ. ಪಾಪ ಬಡವ ಪ್ರಕಾಶನಿಗೆ ಹಣ ಕೊಡಿ, ಇಲ್ಲ ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ಪತ್ರ ಬರೆಯುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT