ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟಿನ ಮಂತ್ರ ಪಠಿಸಿದ ಮುಖಂಡರು

Last Updated 19 ಮೇ 2017, 5:19 IST
ಅಕ್ಷರ ಗಾತ್ರ

ತುಮಕೂರು: ಸಿದ್ದಗಂಗಾಮಠದಲ್ಲಿ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರ ದರ್ಶನ ಪಡೆಯುವ ಮೂಲಕ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ಮುಖಂಡರು ಬರ ಅಧ್ಯಯನ ಪ್ರವಾಸ ಪ್ರಾರಂಭಿಸಿದರು.

ನಗರದ ಮರಳೂರು ದಿಣ್ಣೆ ಬಡಾವಣೆಯ ದಲಿತರ ಕಾಲೊನಿಯಲ್ಲಿ ಬಿಜೆಪಿ ಜಿಲ್ಲಾ ಘಟಕ ಆಯೋಜಿಸಿದ್ದ ‘ಶೋಷಿತರ ಕಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯ ಸರ್ಕಾರ ದೇಶದಲ್ಲಿಯೇ ನಂಬರ್ 1 ಭ್ರಷ್ಟ ಸರ್ಕಾರ’ ಎಂದು  ಯಡಿಯೂರಪ್ಪ   ಹರಿಹಾಯ್ದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ.  ನಾಲ್ಕು ವರ್ಷದಲ್ಲಿ 6,524 ಕೊಲೆ ಪ್ರಕರಣ ನಡೆದಿವೆ. ಈ ವರ್ಷ 1200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದಿನ 3 ಮೂರು ವರ್ಷದಲ್ಲಿ ನಾಲ್ಕು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಬರ ಆವರಿಸಿದ್ದರೂ ಬರ ಎಲ್ಲಿದೆ ಎಂದು ಮುಖ್ಯಮಂತ್ರಿ ಪ್ರಶ್ನಿಸುತ್ತಾರೆ? ಇದ್ಯಾವುದೂ ತಮಗೆ ಗೊತ್ತೇ ಇಲ್ಲದಂತೆ ಮುಖ್ಯಮಂತ್ರಿ ಅಸಡ್ಡೆಯಿಂದ ವರ್ತಿಸುತ್ತಿದ್ದಾರೆ’ ಎಂದು ಸಿಡಿಮಿಡಿ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ನೀಡಿದ ಪರಿಹಾರ ಮೊತ್ತವನ್ನು ಸರಿಯಾದ ಫಲಾನುಭವಿಗಳಿಗೆ ದೊರಕಿಸುವ ವ್ಯವಸ್ಥೆ ಮಾಡಿಲ್ಲ. ಕೇಂದ್ರ ಸರ್ಕಾರವು ಪೂರೈಸಿದ ಅಕ್ಕಿ, ಗೋಧಿಯನ್ನೂ  ಸಮರ್ಪಕವಾಗಿ ವಿತರಿಸುತ್ತಿಲ್ಲ. ರಾಜಧಾನಿ ಬೆಂಗಳೂರು ಪಕ್ಕದ ತುಮಕೂರಿನ ಈ ದಲಿತ ಕಾಲೊನಿಗೆ ಇನ್ನೂ ಮೂಲಸೌಕರ್ಯ ಕಲ್ಪಿಸಿಲ್ಲ. ನಿವೇಶನ ಹಕ್ಕು ಪತ್ರಗಳನ್ನು ಕೊಟ್ಟಿಲ್ಲ’ ಎಂದು ಆರೋಪಿಸಿದರು.

‘ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹೇಮಾವತಿ ನದಿಯಿಂದ ಜಿಲ್ಲೆಯ100 ಕೆರೆ ತುಂಬಿಸಲು 10 ಟಿಎಂಸಿ ಅಡಿ ನೀರು ನೀಡಿತ್ತು. ಆದರೆ, ತುಮಕೂರು ನಗರಕ್ಕೇ ನೀರಿಲ್ಲ. ಶಾಸಕರು, ಮುಖ್ಯಮಂತ್ರಿಗೆ ಇದೆಲ್ಲ ಕಾಣುವುದಿಲ್ಲವೇ? ಇಂತಹ ಸರ್ಕಾರ ಇದ್ದರೂ ಅಷ್ಟೇ, ಇಲ್ಲದೇ ಇದ್ದರೂ ಅಷ್ಟೇ ಎಂದು ಸಿಡಿಮಿಡಿ’ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ,‘ ನಮ್ಮಲ್ಲಿ ಸಣ್ಣಪುಟ್ಟ ಗೊಂದಲಗಳಿವೆ. ನಮಗೆ ಹೇಳುವವರು ಕೇಳುವವರು ಇದ್ದಾರೆ. ಸರಿಪಡಿಸಿಕೊಳ್ಳುತ್ತೇವೆ’ ಎಂದರು.

‘ಮುಂದಿನ ಚುನಾವಣೆ ನೇತೃತ್ವವನ್ನು ಯಡಿಯೂರಪ್ಪ ಅವರೇ ವಹಿಸುತ್ತಾರೆ. ಮುಂದಿನ ಮುಖ್ಯಮಂತ್ರಿಯೂ ಯಡಿಯೂರಪ್ಪ ಅವರೇ ಆಗುತ್ತಾರೆ. 2013ರಲ್ಲಿ ಬಿಜೆಪಿ ಮತ್ತು ಕೆಜೆಪಿ ಎಂದು ಎರಡು ಪಕ್ಷಗಳಾಗಿದ್ದರಿಂದ ಸಿದ್ದರಾಮಯ್ಯ ಅವರಿಗೆ ಆಕಸ್ಮಿಕವಾಗಿ ಮುಖ್ಯಮಂತ್ರಿ ಪಟ್ಟ ಸಿಕ್ಕಿತು’ ಎಂದು ಹೇಳಿದರು.

ಕೇಂದ್ರ ರಸಗೊಬ್ಬರ, ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರ ಸಚಿವ ಅನಂತಕುಮಾರ್‌ ಮಾತನಾಡಿ, ‘ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು, ಜೆಡಿಎಸ್‌ನಲ್ಲಿ ಇಕ್ಕಟ್ಟು ಇದೆ. ಬಿಜೆಪಿಯಲ್ಲಿ ಮಾತ್ರವೇ ಒಗ್ಗಟು ಇರುವುದು’ ಎಂದರು.

‘ದೇಶದ 15 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕರ್ನಾಟಕವೂ ಸಹ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮುಕ್ತವಾಗಲಿದೆ’ ಎಂದು ಹೇಳಿದರು.

ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ‘ ನರೇಂದ್ರ ಮೋದಿ ಮೂರೇ ವರ್ಷದಲ್ಲಿ  ಬದಲಾವಣೆ ತಂದಿದ್ದಾರೆ.  ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಸ್ಟ್ ಪಾಸ್ ಸರ್ಕಾರವಾಗಿದೆ’ ಎಂದು ಹೇಳಿದರು.

ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ,‘ ದಲಿತ ಕಾಲೊನಿಗಳಿಗೂ ಮೂಲಸೌಕರ್ಯ ಕಲ್ಪಿಸಿಲ್ಲ. ಕೇಂದ್ರ ಸರ್ಕಾರ ದೊರಕಿಸಿದ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವು ನುಂಗಿ ನೀರು ಕುಡಿದಿದೆ ’ ಎಂದು ಆರೋಪಿಸಿದರು.

ಸಂಸದ ಬಿ.ಶ್ರೀರಾಮುಲು, ಮುಖಂಡರಾದ ಗೋವಿಂದ ಕಾರಜೋಳ ಮಾತನಾಡಿದರು.

ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್, ಮುಖಂಡರಾದ ಆರ್. ಅಶೋಕ್, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಬಿ.ಸೋಮಶೇಖರ್, ಎಸ್. ಶಿವಣ್ಣ, ಶಾಸಕ ಸಿ.ಟಿ.ರವಿ, ಕಟ್ಟಾ ಸುಬ್ರಮಣ್ಯ ನಾಯ್ಡು, ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಶಿವಕುಮಾರ್ ಉದಾಸಿ, ಶಾಸಕ  ಬಿ.ಸುರೇಶಗೌಡ, ವಿಶ್ವನಾಥ್, ಬಿಜೆಪಿ ಅಭಿವೃದ್ಧಿ ಪ್ರಕೋಷ್ಠಕದ ಜಿ.ಎಸ್. ಬಸವರಾಜ್, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಜ್ಯೋತಿ ಗಣೇಶ್, ಮುಖಂಡ ಡಾ.ಎಂ.ಆರ್. ಹುಲಿನಾಯ್ಕರ್  ವೇದಿಕೆಯಲ್ಲಿದ್ದರು.

ಮುಖಂಡರ ಸಂಚಾರ
ಮರಳೂರು ದಿಣ್ಣೆ ದಲಿತ ಕಾಲೊನಿಯಲ್ಲಿ ಬಿಜೆಪಿ ಮುಖಂಡರು ಸಂಚರಿಸಿದರು. ನಿವಾಸಿಗಳು ತಮ್ಮ ಸಮಸ್ಯೆ ಹೇಳಿಕೊಂಡರು. ಅಲ್ಲದೇ, ಕಾಲೊನಿ ನಿವಾಸಿ ಮತ್ತು ಬಿಜೆಪಿ ಕಾರ್ಯಕರ್ತರಾದ ಹನುಮಂತಪ್ಪ ಅವರ ಮನೆಯಲ್ಲಿ ತಟ್ಟೆ ಇಡ್ಲಿಗಳನ್ನು ಸವಿದರು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಜ್ಯೋತಿ ಗಣೇಶ್ ಅವರು ಕುಡಿಯುವ ನೀರು ಪೂರೈಕೆಗೆ ನೀಡಿರುವ 2 ಟ್ಯಾಂಕರ್‌ಗಳನ್ನು ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್, ಜಗದೀಶ್ ಶೆಟ್ಟರ್ ಅವರು ಉದ್ಘಾಟಿಸಿದರು.

ಅಳಲು ತೋಡಿಕೊಂಡ ಜನರು
ಗುಬ್ಬಿ-ಸಿ.ಎಸ್. ಪುರ ರಸ್ತೆಗೆ ಅಂಟಿಕೊಂಡ ತೋಟಸಾಗರ ಸಮೀಪದ ಅಡಿಕೆ ತೋಟಕ್ಕೆ ಬಿಜೆಪಿ ತಂಡ ಭೇಟಿ ನೀಡಿತು. ರೈತ ಶಿವಲಿಂಗಯ್ಯ ನಮಗೆ ಯಾವುದೇ ಪರಿಹಾರ ಬಂದಿಲ್ಲ ಎಂದು ಜನರು ಅಳಲು ತೋಡಿಕೊಂಡರು.

ತೆಂಗು-ಅಡಿಕೆ ಪೂರ್ಣ ನಾಶವಾಗಿದೆ.  ಮುಖ್ಯಮಂತ್ರಿ, ಕೃಷಿ ಸಚಿವರಿಗೆ ಕಣ್ಣಿದ್ರೆ  ಇಲ್ಲಿಗೆ ಬಂದು ನೋಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ 200ಕಡೆ ‘ಜನೌಷಧಿ’ ಕೇಂದ್ರ
‘ಈಗಾಗಲೇ ರಾಜ್ಯಕ್ಕೆ ಬೇಡಿಕೆ ಇರುವ ರಸಗೊಬ್ಬರಕ್ಕಿಂತ 1 ಲಕ್ಷ ಟನ್ ರಸಗೊಬ್ಬರವನ್ನು ಹೆಚ್ಚುವರಿಯಾಗಿ ಕಳುಹಿಸಲಾಗಿದೆ. ರಾಜ್ಯದ 200 ಕಡೆ ‘ಜನೌಷಧಿ’ ಕೇಂದ್ರಗಳನ್ನು ತೆರೆಯಲು ಕೇಂದ್ರ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದರು.

₹ 100 ಬೆಲೆಯ ಬ್ರಾಂಡೆಡ್ ಔಷಧಿ 30ಕ್ಕೆ ಸಿಗಲಿದೆ. ಎಚ್ಐವಿ, ಶ್ವಾಸಕೋಶ ಸಮಸ್ಯೆ, ಕಿಡ್ನಿ ಸಮಸ್ಯೆ ಹೊಂದಿರುವ ರೋಗಿಗಳಿಗೆ ಇದರಿಂದ ಅನುಕೂಲವಾಗಲಿದೆ. ಗುಬ್ಬಿಯಲ್ಲೂ ಒಂದು ಕೇಂದ್ರ ತೆರೆಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT