ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಸರಾಜು ಬಣ ಮೇಲುಗೈ

Last Updated 19 ಮೇ 2017, 5:26 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ಕಾಂಗ್ರೆಸ್‌ ವಿವಿಧ ಯುವ ಘಟಕಗಳಿಗೆ ಬುಧವಾರ ಮತದಾನ ನಡೆದಿದ್ದು, ಗುರುವಾರ ಮತ ಎಣಿಕೆ ಬಿರುಸಿನಿಂದ ನಡೆಯಿತು. ಯುವ ಕಾಂಗ್ರೆಸ್‌ ಸಮಿತಿ ಚುನಾವಣೆ ಮತ ಎಣಿಕೆ ಕಾರ್ಯ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆಯಿತು. ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜು  ಬೆಂಬಲಿಗ ಬಣ ಮೇಲುಗೈ ಸಾಧಿಸಿದ್ದು, ವಿರೋಧಿ ಬಣದ ಅಭ್ಯರ್ಥಿಗಳು ಮುಗ್ಗರಿಸಿದ್ದಾರೆ.

ಯುವ ಕಾಂಗ್ರೆಸ್‌ ಜಿಲ್ಲಾ ಘಟಕ ಅಧ್ಯಕ್ಷರಾಗಿ ಅರುಣ್‌ ಧೋತರಬಂಡಿ ಆಯ್ಕೆಯಾಗಿದ್ದಾರೆ. ಎದುರಾಳಿ ಮಾಜಿ ಶಾಸಕ ಸೈಯದ್‌ ಯಾಸೀನ್ ಅವರ ಪುತ್ರ ಸೋತಿದ್ದಾರೆ. ನಗರ ಘಟಕ ಅಧ್ಯಕ್ಷರಾಗಿ ರಂಜಿತ್‌ ಹೀರಾ, ಗ್ರಾಮೀಣ ಘಟಕ ಅಧ್ಯಕ್ಷರಾಗಿ ಅಶೋಕ, ಮಾನ್ವಿ ಘಟಕ ಅಧ್ಯಕ್ಷ ಆದಂ ಮಿರ್ಜಾ ಬೇಗ್‌ ಆಯ್ಕೆಗೊಂಡಿದ್ದಾರೆ. ದೇವದುರ್ಗ ಘಟಕದ ಅಧ್ಯಕ್ಷರಾಗಿ ಹುಸೇನ ಬಾಷಾ ಆಯ್ಕೆಯಾಗಿದ್ದು, ವಿರೋಧಿ ಬಣಕ್ಕೆ ಒಂದು ಸ್ಥಾನ ದಕ್ಕಿದೆ.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಂಪರ್ಕ ಕಲ್ಪಿಸುವ ಎರಡು ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮತ ಎಣಿಕೆ ಸಮಯದಲ್ಲೂ ಹಲವು ಬಾರಿ ಎರಡು ಬಣಗಳ ನಡುವೆ ವಾಗ್ವಾದ ನಡೆದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಮತದಾನ ಸಂದರ್ಭದಲ್ಲಿ ಎರಡು ಬಣಗಳ ನಡುವೆ ವಾಗ್ವಾದ ಕೂಡ ನಡೆದಿತ್ತು. ಪೊಲೀಸ್‌ ಬಂದೋಬಸ್ತ್‌ನಲ್ಲಿ ಚುನಾವಣೆ ನಡೆಯಿತು. ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿತ್ತು.

ವಿಜಯೋತ್ಸವ: ಯುವ ಕಾಂಗ್ರೆಸ್‌ ಜಿಲ್ಲಾ ಘಟಕ ಅಧ್ಯಕ್ಷರಾಗಿ ಆಯ್ಕೆಯಾದ ಅರುಣ ಧೋತರಬಂಡಿ ಸಂಗಡಿಗರೊಂದಿಗೆ ವಿಜಯೋತ್ಸವ ಆಚರಣೆ ಮಾಡಿದರು. ಗುಲಾಲ್‌ ಎರಚಿಕೊಂಡು ನಗರದ ಸ್ಟೇಷನ್‌ ರಸ್ತೆಯಲ್ಲಿ ಬೈಕ್‌ಗಳಲ್ಲಿ ಸಂಚರಿಸಿ ಸಂಭ್ರಮಿಸಿದರು.

ಪೊಲೀಸ್‌ ಬಂದೋಬಸ್ತ್‌: ಕಾಂಗ್ರೆಸ್‌ ಕಚೇರಿ ಹಾಗೂ ಚುನಾವಣೆ ಆಯೋಜಿಸಿದ್ದ ಕೇಂದ್ರಗಳ ಸುತ್ತಮುತ್ತ ಯುವ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಸದಸ್ಯರು ಎರಡು ದಿನಗಳಿಂದ ಬಿಡು ಬಿಟ್ಟಿರುವುದು ಕಂಡುಬಂತು. ರಾಯಚೂರು ಸ್ಟೇಷನ್‌ ರಸ್ತೆ ಪಕ್ಕದಲ್ಲೆ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಕಚೇರಿ ಇರುವುದರಿಂದ ನೆರೆದಿದ್ದ ಯುವಕರಿಂದಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಆದರೆ ಪೊಲೀಸರು ಸಕಾಲಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು. ಯಾವುದೇ ಗಲಾಟೆ ಅಥವಾ ಸಂಚಾರಕ್ಕೆ ತೊಂದರೆ ಆಗದಂತೆ ಎರಡು ದಿನಗಳಿಂದ ಮುನ್ನಚ್ಚರಿಕೆ ವಹಿಸಿದ್ದರು. ಕಾಂಗ್ರೆಸ್‌ ಕಚೇರಿಯ ಸುತ್ತಲೂ ಭಾರಿ ಬಂದೋಬಸ್ತ್‌ನ್ನು ಪೊಲೀಸರು ಏರ್ಪಡಿಸಿದ್ದರು.

ಪದಾಧಿಕಾರಿಗಳನ್ನು ಬಿಟ್ಟು ಯಾರಿಗೂ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ. ಬುಧವಾರ ಮತದಾನ ನಡೆಸಲಾಗಿತ್ತು. ಗುರುವಾರ ಮತಗಳ ಎಣಿಕೆ ಕಾರ್ಯ ನಡೆಯಿತು. ಆರಂಭದಲ್ಲಿ ನಗರ ಘಟಕದ ಮತ ಎಣಿಕೆ ಹಾಗೂ ಆನಂತರ ಜಿಲ್ಲಾ ಘಟಕದ ಪದಾಧಿಕಾರಿಗಳ ಮತ ಎಣಿಕೆ ನಡೆದು ರಾತ್ರಿ 8 ಗಂಟೆಯ ಬಳಿಕ ಫಲಿತಾಂಶ ಹೊರಬಿತ್ತು.

*

ಪದಾಧಿಕಾರಿಗಳ ಆಯ್ಕೆಗಾಗಿ ನಡೆಯುವ ಆಂತರಿಕ  ಚುನಾವಣೆ ಇದು. ಯಾವುದೇ ರೀತಿಯ ಗಲಾಟೆ ಮಾಡದಂತೆ ಸೂಚನೆಯನ್ನು ಕೊಟ್ಟಿದ್ದೇವೆ.
ರಾಮಣ್ಣ ಇರಬಗೇರಾ
ಜಿಲ್ಲಾ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT