ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾತ್ರಿ’ ಹಣ ಪಡೆಯಲು ಪರದಾಟ

Last Updated 19 ಮೇ 2017, 5:34 IST
ಅಕ್ಷರ ಗಾತ್ರ

ರಾಯಚೂರು: ತಾಲ್ಲೂಕಿನ ಯರಗೇರಾ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ (ಪಿಕೆಜಿಬಿ) ಶಾಖೆಯಲ್ಲಿ ಸಮರ್ಪಕವಾಗಿ ನಗದು ಹಂಚಿಕೆ ಮಾಡದ ಕಾರಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿದ ಕಾರ್ಮಿಕರು ಪರದಾಡಿದ ಪ್ರಸಂಗ ಗುರುವಾರ ನಡೆಯಿತು.

ಯರಗೇರಾದ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಜನರು ಹಣಕ್ಕಾಗಿ ಬ್ಯಾಂಕ್‌ ಎದುರು ಜಮಾಯಿಸಿದ್ದರು. ಉದ್ಯೋಗ ಖಾತ್ರಿ ಹಣ ಸಿಗದ ಕಾರಣ ಕೂಲಿ ಕಾರ್ಮಿಕರು ತಾಪತ್ರಯ ಅನುಭವಿಸಿದರು. ಕೂಲಿಗಳ ನೆರವಿಗೆ ಬಂದ ಗ್ರಾಮ ಪಂಚಾಯಿತಿ ಸದಸ್ಯರು ಬ್ಯಾಂಕ್‌ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಆದರೂ ಹಣಕ್ಕಾಗಿ ಕಾದು ನಿಲ್ಲುವುದು ತಪ್ಪಲಿಲ್ಲ.

‘ಎರಡು ದಿನಗಳಿಂದ ಬ್ಯಾಂಕ್‌ಗೆ ಬರುತ್ತಿದ್ದೇನೆ. ಬಂದಾಗೊಮ್ಮೆ ಬಿಸಿಲಿನಲ್ಲಿ ಸರದಿ ನಿಲ್ಲಿಸುತ್ತಿದ್ದಾರೆ. ಉದ್ಯೋಗ ಖಾತ್ರಿಯಲ್ಲಿ ಜಮಾ ಮಾಡಿರುವ ಹಣ ಕೊಡುತ್ತಿಲ್ಲ. ನಿಂತು ನಿಂತು ಸುಸ್ತಾಗಿದೆ. ಬ್ಯಾಂಕ್‌ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಯರಗೇರಾದ ಕಾರ್ಮಿಕ ಬಂಗಾರೆಪ್ಪ ಅವರು ಅಳಲು ತೋಡಿಕೊಂಡರು.

‘ಕೂಲಿ ಮಾಡಿದ ಹಣ ಬಹಳ ಇರುವುದಿಲ್ಲ. ಸಾವಿರ ಲೆಕ್ಕದ ರೊಕ್ಕ ಕೊಡಲಿಕ್ಕೆ ನಿಂತುಕೊಳ್ಳುವ ಪರಿಸ್ಥಿತಿ ಇದೆ. ನಮ್ಮೂರಿನ 50 ಜನರು ಸರದಿಯಲ್ಲಿ ನಿಂತುಕೊಂಡಿದ್ದೇವೆ’ ಎಂದರು.

ಈ ಕುರಿತು ಪಿಕೆಜಿಬಿ ಪ್ರಧಾನ ಕಚೇರಿ ಚೀಫ್‌ ಮ್ಯಾನೇಜರ್‌ ರವೀಂದ್ರ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿ ‘ಎರಡು ದಿನಗಳಿಂದ ಬ್ಯಾಂಕ್‌ ಶಾಖೆಯಲ್ಲಿ ನಗದು ಹಣದ ಸಮಸ್ಯೆ ಇತ್ತು. ಗುರುವಾರ ಸಮಸ್ಯೆ ಪರಿಹಾರವಾಗಿದೆ ಎಂದು ಬ್ಯಾಂಕ್‌ ಶಾಖೆಯ ಮ್ಯಾನೇಜರ್‌ ಹೇಳುತ್ತಿದ್ದಾರೆ.

ಸಮಸ್ಯೆ ಉಂಟಾಗಿದ್ದು ನಿಜ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಪಡೆದುಕೊಳ್ಳುವುದಕ್ಕೆ ಬರುವವರನ್ನು ಕಾಯಿಸಬೇಡಿ ಎಂದು ಸೂಚನೆ ನೀಡಿದ್ದೇನೆ’ ಎಂದರು.
‘ಜಿಲ್ಲೆಯ ಒಟ್ಟಾರೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಶಾಖೆಗಳಲ್ಲಿ ಹಣದ ಸಮಸ್ಯೆ ಆಗಾಗ ಕಾಣಿಸಿಕೊಳ್ಳುತ್ತದೆ.

ಕೆನರಾ ಬ್ಯಾಂಕ್‌, ಆರ್‌ಆರ್‌ಬಿಯಿಂದ ಸಾಕಷ್ಟು ಹಣ ಪೂರೈಕೆಯಾಗುತ್ತಿದೆ. ಆದರೂ ಸಮಸ್ಯೆ ಬಂದಾಗೊಮ್ಮೆ ಬೇರೆ ಬೇರೆ ಬ್ಯಾಂಕ್‌ಗಳಿಂದ ಹಣ ಪಡೆದುಕೊಂಡು ತಕ್ಷಣ ಒದಗಿಸುತ್ತಿದ್ದೇವೆ. ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ’ ಎಂದು ತಿಳಿಸಿದರು.

ಎಟಿಎಂನಲ್ಲೂ ಹಣವಿಲ್ಲ!
ರಾಯಚೂರು ನಗರದ ಅನೇಕ ಎಟಿಎಂಗಳಲ್ಲಿ ತಾಂತ್ರಿಕ ತೊಂದರೆ ಫಲಕ ಹಾಕಲಾಗಿತ್ತು. ಬ್ಯಾಂಕ್‌ ಶಾಖೆಗಳಲ್ಲಿ ಸರದಿ ನಿಲ್ಲುವುದಕ್ಕೆ ಮನಸ್ಸು ಮಾಡದ ಜನರು ಎಟಿಎಂಗಳಲ್ಲಿ ಹಣ ಪಡೆಯಲು ಧಾವಿಸುತ್ತಿದ್ದರು. ಅದರಲ್ಲೂ ಹಣವಿಲ್ಲದೆ ಸಂಕಷ್ಟ ಅನುಭವಿಸಿದರು. ಕೆಲವು ಎಟಿಎಂ ಕೇಂದ್ರಗಳಿಗೆ ಅರ್ಧ ಷಟರ್‌ ಎಳೆಯಲಾಗಿತ್ತು.

*

ಬ್ಯಾಂಕ್‌ನಲ್ಲಿ ಸಿಬ್ಬಂದಿ ಬಹಳ ಕಡಿಮೆ ಇದ್ದಾರೆ. ಸಂಜೆವರೆಗೂ ಕಾಯುವಂತೆ ಹೇಳುತ್ತಾರೆ. ಎರಡು ದಿನಗಳಿಂದ ಯರಗೇರಾಗೆ ಬಂದು ಹೋಗುತ್ತಿದ್ದೇವೆ. ಹಣ ಕೊಡುತ್ತಿಲ್ಲ.
ಜಯರಾಜ
ಗ್ರಾಮ ಪಂಚಾಯಿತಿ ಸದಸ್ಯ ಹಿಡಕನೂರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT