ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊರ ಗುತ್ತಿಗೆ ನೌಕರರಿಗೂ ಭವಿಷ್ಯ ನಿಧಿ ಸೌಲಭ್ಯ ಕಲ್ಪಿಸಿ’

Last Updated 19 ಮೇ 2017, 5:40 IST
ಅಕ್ಷರ ಗಾತ್ರ

ಬೀದರ್‌: ‘ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಭವಿಷ್ಯ ನಿಧಿ ಸೌಲಭ್ಯ ಕಲ್ಪಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ. ಎಚ್‌.ಆರ್‌. ಮಹಾದೇವ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಭವಿಷ್ಯ ನಿಧಿ ಯೋಜನೆ ಕುರಿತ ಸಭೆಯಲ್ಲಿ ಅವರು ಮಾತನಾಡಿ, ‘ಕಾರ್ಮಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಭವಿಷ್ಯ ನಿಧಿ ಯೋಜನೆ ರೂಪಿಸಿದೆ.

ಈ ಸೌಲಭ್ಯ ಆಯಾ ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೂ ಒದಗಿಸಲು ಮುತುವರ್ಜಿ ವಹಿಸಬೇಕು’ ಎಂದು ಹೇಳಿದರು.
‘ಕಾರ್ಮಿಕರಿಗೆ ಭವಿಷ್ಯ ನಿಧಿ ಸೌಲಭ್ಯ ಕಲ್ಪಿಸಲು ನಿರ್ಲಕ್ಷ್ಯ ತೋರುವ ಅಧಿಕಾರಿಗೆ ₹ 25,000 ದಂಡ ಮತ್ತು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಇದಕ್ಕೆ ಅವಕಾಶ ಕೊಡದೆ ಜವಾಬ್ದಾರಿಯಿಂದ ಕೆಲಸ ನಿರ್ವಹಿ ಸಬೇಕು. ತಾಂತ್ರಿಕ ಸಮಸ್ಯೆ ಎದುರಾದರೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಕಲಬುರ್ಗಿ ವಲಯದ ಭವಿಷ್ಯ ನಿಧಿ ಆಯುಕ್ತ ಬಿ.ಆಂಡ್ರ್ಯೂ ಪ್ರಭು ಮಾತನಾಡಿ, ‘ಎಲ್ಲ ಇಲಾಖೆ ಅಧಿಕಾರಿಗಳು ತಮ್ಮ ಅಧೀನದಲ್ಲಿ ಕೆಲಸ ನಿರ್ವಹಿಸುವ ಹೊರ ಗುತ್ತಿಗೆ ಮತ್ತು ದಿನಗೂಲಿ ನೌಕರರಿಗೆ ಕಡ್ಡಾಯವಾಗಿ ಭವಿಷ್ಯ ನಿಧಿ ಯೋಜನೆಯಡಿ ನೋಂದಾಯಿಸಲು ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

ಯೋಜನೆಯಡಿ ನೋಂದಣಿಯಾದ ಕಾರ್ಮಿಕರಿಗೆ ಸಂಬಳದಲ್ಲಿ ಶೇ12 ರಷ್ಟು ಕಡಿತಗೊಳಿಸಿ ನಂತರದ ದಿನಗಳಲ್ಲಿ ಆ ಹಣವನ್ನು ಬಡ್ಡಿ ಹಾಗೂ ಸರ್ಕಾರದ ಸಹಾಯಧನ ದೊಂದಿಗೆ ಹಿಂದಿರುಗಿಸಲಾಗುತ್ತದೆ ಎಂದು ಹೇಳಿದರು.

ಕಟ್ಟಡ ಕಾರ್ಮಿಕರು ಸೇರಿದಂತೆ ಖಾಸಗಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಅಸಂಘಟಿತ ಕಾರ್ಮಿಕರು ಭವಿಷ್ಯ ನಿಧಿ ಸೌಲಭ್ಯ ಪಡೆಯಬಹುದು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ವಾಹನ ಚಾಲಕರು, ‘ಡಿ’ ದರ್ಜೆ ನೌಕಕರು ಸೇರಿದಂತೆ ಅರೆ ಸರ್ಕಾರಿ ನೌಕರರು ಈ ಯೋಜನೆಯ ಸೌಲಭ್ಯ ಪಡೆಯಬಹುದು. ನೋಂದಣಿ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಈ ಹಿಂದಿನ ಕಠಿಣ ನಿಯಮಗಳನ್ನು ರದ್ದುಪಡಿಸಿ ಸರಳ ನಿಯಮಗಳನ್ನು ಮಾಡಲಾಗಿದೆ ಎಂದರು.

‘ಯೋಜನೆಯಡಿ ನೋಂದಣಿ ಯಾದ ಕಾರ್ಮಿಕರಿಗೆ ಸಾಲ ಸೌಲಭ್ಯ ಒದಗಿಸಲಾಗುವುದು. ಮನೆ ಖರೀದಿ, ಕಟ್ಟಡ ನಿರ್ಮಾಣ ಅಥವಾ ವಾಹನ ಖರೀದಿಗೆ ಸಾಲ ಪಡೆಯಲು ಅವಕಾಶ ಇರುತ್ತದೆ. ಕಾರ್ಮಿಕರಿಗೆ ಹೆಚ್ಚು ಸಹಕಾರಿಯಾದ ಈ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕಿದೆ‘ ಎಂದು ತಿಳಿಸಿದರು.

‘ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರೇ ಹೆಚ್ಚಾಗಿ ಭವಿಷ್ಯ ನಿಧಿ ಸೌಲಭ್ಯದಿಂದ ವಂಚಿತ ರಾಗಿರುವುದು ಕಂಡು ಬಂದಿದೆ. ಎಲ್ಲ ರೀತಿಯ ಅಸಂಘಟಿತ ಕಾರ್ಮಿಕರನ್ನು ಭವಿಷ್ಯ ನಿಧಿ ಯೋಜನೆಗೆ ಒಳಪಡಿಸಲು ಸರ್ಕಾರ ಮುಂದಾಗಿದ್ದು, ಕಾರ್ಮಿಕರ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಜೂನ್‌ 30ರ ವರೆಗೆ ಅಭಿಯಾನ ನಡೆಯಲಿದೆ’ ಎಂದು ಹೇಳಿದರು.   ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೊದ್ದೇಶ ಸಹಕಾರ ಸಂಘದ ಕಾರ್ಯದರ್ಶಿ ಎಂ.ಎಸ್. ಕಟಗಿ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT